ಸೋಮವಾರ, ಅಕ್ಟೋಬರ್ 18, 2021
24 °C

ಬಡಾಲ ಅಂಕಲಗಿ ದುರಂತ: ಶಿಥಿಲ ಮನೆಗಳ ವೀಕ್ಷಣೆಗೆ ಒಲ್ಲೆ ಎಂದ ಗೋವಿಂದ ಕಾರಜೋಳ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani Photo

ಬೆಳಗಾವಿ: ತಾಲ್ಲೂಕಿನ ಬಡಾಲ ಅಂಕಲಗಿಯಲ್ಲಿ ಮನೆಯ ಗೋಡೆ ಕುಸಿದು 7 ಮಂದಿ ಮೃತಪಟ್ಟ ಸ್ಥಳಕ್ಕೆ ಭೇಟಿ ನೀಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರು, ಶಿಥಿಲಗೊಂಡಿರುವ ಮನೆಗಳನ್ನು ವೀಕ್ಷಿಸುವಂತೆ ಗ್ರಾಮಸ್ಥರು ಮಾಡಿಕೊಂಡ ಮನವಿಗೆ ಒಪ್ಪಲಿಲ್ಲ.

ಮೃತರ ಕುಟುಂಬದವರಿಗೆ ಪರಿಹಾರ ಧನದ ಚೆಕ್ ವಿತರಿಸಿ ಮರಳುತ್ತಿದ್ದ ಅವರನ್ನು ಗ್ರಾಮದ ಕೆಲವು ಯುವಕರು ಮತ್ತು ಮುಖಂಡರು ಎದುರಾದರು. ‘ನಮ್ಮೂರಲ್ಲಿ ಮತ್ತಷ್ಟು ಮನೆಗಳು ಮಳೆಯಿಂದಾಗಿ ಶಿಥಿಲಗೊಂಡಿವೆ. ಇತ್ತೀಚೆಗೆ ಜೋರು ಮಳೆ ಆಗುತ್ತಿದ್ದು, ಅವುಗಳೂ ಬೀಳುವ ಹಂತದಲ್ಲಿವೆ. ನೀವು ಬಂದು ವೀಕ್ಷಿಸಬೇಕು. ಜನರಿಗೆ ನೆರವಾಗಬೇಕು’ ಎಂದು ಮನವಿ ಸಲ್ಲಿಸಿ ಆಹ್ವಾನಿಸಿದರು. ಕೆಲವೇ ಮನೆಗಳನ್ನಾರೂ ವೀಕ್ಷಿಸುವಂತೆ ಕೋರಿದರು.

ಪ್ರತಿಕ್ರಿಯಿಸಿದ ಸಚಿವರು, ‘ಒಂದು ಮನೆ ನೋಡಿದರೆ ಬೇರೆಯವರು ಬೇಸರ ಮಾಡಿಕೊಳ್ಳುತ್ತಾರೆ. ಎಲ್ಲೆಲ್ಲಿ ಮನೆಗಳು ಶಿಥಿಲಾವಸ್ಥೆಗೆ ತಲುಪಿವೆ ಎಂಬ ಬಗ್ಗೆ ಸಮೀಕ್ಷೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಅವರು ಬಂದು ನೋಡುತ್ತಾರೆ. ಪರ್ಯಾಯ ವ್ಯವಸ್ಥೆಗೆ ಕ್ರಮ ವಹಿಸುತ್ತಾರೆ. ದುರಸ್ತಿಗೂ ಅನುಕೂಲ ಕಲ್ಪಿಸುತ್ತಾರೆ’ ಎಂದು ಭರವಸೆ ನೀಡಿದರು.

‘ಸ್ಮಶಾನಕ್ಕೆ ಸಮರ್ಪಕ ಜಾಗ ಒದಗಿಸಬೇಕು. ಕೆರೆಯ ಜಾಗವನ್ನಾದರೂ ಕೊಡಿಸಬೇಕು’ ಎಂಬ ಸ್ಥಳೀಯರ ಒತ್ತಾಯಕ್ಕೆ, ‘ಹಾಗೆಲ್ಲ ಕೆರೆಯ ಜಾಗ ಕೊಡಲಾಗುವುದಿಲ್ಲ. ಅದಕ್ಕೆ ಸುಪ್ರೀಂ ಕೋರ್ಟ್‌ ಆದೇಶ ಅಡ್ಡಿಯಾಗುತ್ತದೆ. ಹೀಗಾಗಿ, ಗ್ರಾಮದಲ್ಲಿ ಯಾರಾದರೂ ಒಂದು ಎಕರೆ ಜಮೀನು ಕೊಡಲು ಸಿದ್ಧವಿದ್ದರೆ ತಿಳಿಸಿರಿ. ಕೂಡಲೇ ಖರೀದಿಸಿ, ಸ್ಮಶಾನ ಅಭಿವೃದ್ಧಿಪಡಿಸಿಕೊಡುವುದಕ್ಕೆ ಸಿದ್ಧವಿದ್ದೇವೆ’ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ಜಿ.ಪಂ. ಸಿಇಒ ಎಚ್‌.ವಿ. ದರ್ಶನ್, ಉಪ ವಿಭಾಗಾಧಿಕಾರಿ ರವೀಂದ್ರ ಕರಲಿಂಗಣ್ಣವರ, ಗ್ರಾಮದ ಮುಖಂಡರೂ ಆಗಿರುವ  ಡಿಸಿಸಿ ಬ್ಯಾಂಕ್ ನಿರ್ದೇಶಕ ರಾಜೇಂದ್ರ ಅಂಕಲಗಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು