ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರೈತರಿಗೆ ತಾಳಲಾಗದ ಬ್ಯಾಂಕ್‌ ಒತ್ತಡ; ರಾಜ್ಯ ರೈತ ಸಂಘದ ಪ್ರಕಾಶ ನಾಯಕ್ ಆರೋಪ

Published 24 ಜನವರಿ 2024, 15:34 IST
Last Updated 24 ಜನವರಿ 2024, 15:34 IST
ಅಕ್ಷರ ಗಾತ್ರ

ಸವದತ್ತಿ: ರಾಷ್ಟ್ರೀಕೃತ ಮತ್ತು ಖಾಸಗಿ ಬ್ಯಾಂಕುಗಳು ರೈತರಿಗೆ ನೀಡುವ ಕಿರುಕುಳ ಕುರಿತು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಮನವಿ ಆಧರಿಸಿ ಬುಧವಾರ ತಹಶೀಲ್ದಾರ್ ಎಂ.ಎನ್. ಹೆಗ್ಗನ್ನವರ ಅವರ ನೇತೃತ್ವದಲ್ಲಿ ಬ್ಯಾಂಕ್ ಸಿಬ್ಬಂದಿಯೊಂದಿಗೆ ಸಭೆ ನಡೆಸಿ ಚರ್ಚಿಸಲಾಯಿತು.

ಸಂಘದ ಪ್ರಮುಖ ಪ್ರಕಾಶ ನಾಯಕ್ ಮಾತನಾಡಿ, ‘ನೆರೆ ಹಾವಳಿ, ಕೋವಿಡ್ ಮತ್ತು ಬರದಿಂದ ಕಂಗಾಲಾದ ರೈತನಿಗೆ ಬ್ಯಾಂಕಿನ ಕಿರುಕುಳ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕೋವಿಡ್ ಕಾರಣದಿಂದ ಆರ್‌ಬಿಐ ಹೊರಡಿಸಿದ ಮಾರ್ಗಸೂಚಿಯಂತೆ ಸಾಲ ಮರು ಪಾವತಿಗೆ ರೈತರಿಗೆ ಒತ್ತಡ ಹೇರಬಾರದು. ಆದರೆ ಬ್ಯಾಂಕ್ ಸಿಬ್ಬಂದಿ ಶೋಷಣೆ ನಡೆಸಿದೆ. ಬೆಳೆದ ಬೆಳೆಗೆ ಬೆಂಬಲ ಬೆಲೆ ಇಲ್ಲ. ಸರ್ಕಾರದ ಸಹಾಯಧನ ಸಂದಾಯವಾಗುವ ಖಾತೆಗಳನ್ನು ಸ್ಥಗಿತಗೊಳಿಸಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ರೈತರಿಗೆ ಧೈರ್ಯ ತಂಬುವ ಬದಲು ಶೋಷಿಸಿ ಆತ್ಮಹತ್ಯೆಗೆ ಪ್ರೇರೇಪಿಸುತ್ತಿದೆ’ ಎಂದರು.

‘ಕುಮಾರಸ್ವಾಮಿ ಅವಧಿಯಲ್ಲಿ ಮನ್ನಾ ಮಾಡಿದ ರೈತರ ಸಾಲದ ಕುರಿತು ಇದುವರೆಗೂ ತಿಳುವಳಿಕೆ ನೋಟಿಸ್ ಸಹ ನಮಗೆ ನೀಡಿಲ್ಲ. ಜಾಮೀನುದಾರರ ಖಾತೆ ಸ್ಥಗಿತಗೊಳಿಸಿ ಹಿಂಸಿಸುತ್ತಿದ್ದಾರೆ. ರೈತರನ್ನು ಹೀಯಾಳಿಸುವ ಸಿಬ್ಬಂದಿ ಸ್ಥಗಿತಗೊಂಡ ಖಾತೆಯ ಬಗ್ಗೆ ಮಾಹಿತಿ ನೀಡುತ್ತಿಲ್ಲ. ನಿಗದಿತ ಆದಾಯ ರೈತನಿಗಿದ್ದಿದ್ದರೆ ಸಾಲ ಬಾಕಿ ಉಳಿಸಿಕೊಳ್ಳುತ್ತಿರಲಿಲ್ಲ. ರೈತ ಅನುಭವಿಸುವ ಸಮಸ್ಯೆ ಕುರಿತು ಮೇಲಧಿಕಾರಿಗಳಿಗೆ ಮಾಹಿತಿ ನೀಡಿ, ನಿಯಮ ಸಡಿಲಿಕೆಗೆ ಮನವೊಲಿಸಲು ಪ್ರಯತ್ನಿಸಬೇಕು’ ಎಂದು ಬ್ಯಾಂಕ್ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.

ರಾಜ್ಯ ಕಾರ್ಯಾಧ್ಯಕ್ಷ ಬಸವರಾಜ ಬಿಜ್ಜೂರು ಮಾತನಾಡಿ, ‘ಕಳೆದ ನಾಲ್ಕೈದು ವರ್ಷಗಳಿಂದ ನೆರೆ, ಬರದಿಂದ ಹೀನಾಯ ಸ್ಥಿತಿ ಅನುಭವಿಸಿದ್ದೇವೆ. ಸರ್ಕಾರವೇ ಘೋಷಿಸಿದ ಪರಿಹಾರ ಧನ ಹಾಗೂ ಗೃಹಲಕ್ಷ್ಮಿ, ಅನ್ನಭಾಗ್ಯ, ಪಿ.ಎಂ ಫಸಲ್ ಭೀಮಾ ಸಬ್ಸಿಡಿ ಯೋಜನೆಗಳ ಸಹಾಯಧನ ಜಮೆಯಾಗುವ ಖಾತೆಗಳನ್ನು ಬ್ಯಾಂಕುಗಳು ನಿಷ್ಕ್ರಿಯಗೊಳಿಸಿ ಕಿರುಕುಳ ನೀಡುತ್ತಿವೆ. ಅದರಲ್ಲೂ ರಾಷ್ಟ್ರೀಕೃತ ಮತ್ತು ಖಾಸಗಿ ಬ್ಯಾಂಕುಗಳು ಸಾಲ ಮರು ವಸೂಲಾತಿ, ಖಾತೆ ಸ್ಥಗಿತದಿಂದ ರೈತರ ಬದುಕು ಬೀದಿಗೆ ಬಂದಿದೆ’ ಎಂದು ದೂರಿದರು.

ವಕೀಲರ ಸಂಘದ ಅಧ್ಯಕ್ಷ ಎಂ.ಎನ್. ಮುತ್ತಿನ ಮಾತನಾಡಿ, ‘ಬ್ಯಾಂಕುಗಳಲ್ಲಿ ಸಾಲದ ಕುರಿತು ಪೂರ್ಣ ಮಾಹಿತಿ ನೀಡದೇ ರೈತರಿಂದ ಹೆಚ್ಚುವರಿ ಹಣ ವಸೂಲಾತಿ ನಡೆದಿದೆ. ಸಾಲ ಹಾಗೂ ಬ್ಯಾಂಕ್ ಸೌಲಭ್ಯ ಕುರಿತು ಜನಜಾಗೃತಿ ಮೂಡಿಸುವ ಕಾರ್ಯಕ್ರಮ ಆಯೋಜಿಸಬೇಕು’ ಎಂದರು.

ತಹಶೀಲ್ದಾರ್ ಎಂ.ಎನ್. ಹೆಗ್ಗನ್ನವರ ಮಾತನಾಡಿ, ‘ಸಮಸ್ಯೆ ಎದುರಿಸುತ್ತಿರುವ ರೈತರೊಂದಿಗೆ ಸಮಯೋಚಿತವಾಗಿ ವರ್ತಿಸಿ, ತಾಳ್ಮೆಯಿಂದ ಸಮಸ್ಯೆ ಪರಿಹರಿಸಿ ಕೊಡಬೇಕು. ರೈತ ಮತ್ತು ಗ್ರಾಹಕರಿಗೆ ಸಮರ್ಪಕ ಮಾಹಿತಿ ಹಾಗೂ ತಿಳಿವಳಿಕೆ ನೀಡಿ. ಸರ್ಕಾರಿ ಪರಿಹಾರ ಮತ್ತು ಯೋಜನೆಗಳ ಸಹಾಯಧನವನ್ನು ವಿಳಂಬ ಮಾಡದೇ ಅವರಿಗೆ ಪಾವತಿಸಿ. ಸಧ್ಯಕ್ಕೆ ನಿಲ್ಲಿಸಿದ ಖಾತೆಗಳನ್ನು ಶೀಘ್ರವೇ ಆರಂಭಿಸಬೇಕೆಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಸುರೇಶ ಸಂಪಗಾವಿ, ಕಿಸಾನ ನಂದಿ, ಗಂಗಮ್ಮ ವಿಭೂತಿ, ಶೋಭಾ ಪಾಟೀಲ, ಶಿವಲಿಂಗಪ್ಪ ಬಿರಾದಾರ ಪಾಟೀಲ, ಮಹಾಂತೇಶ ಮುತವಾಡ, ಸಿದ್ದಪ್ಪ ಚಂದರಗಿ, ಸುರೇಶ ಅಂಗಡಿ, ವಸಂತಗೌಡ ಪಾಟೀಲ, ಜೆ.ವಿ ಅಗಡಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT