ಮಂಗಳವಾರ, ಜನವರಿ 21, 2020
20 °C

ವಚನ ಸಾಹಿತ್ಯದಲ್ಲಿ ಹೆಚ್ಚಿನ ಮೌಲ್ಯಗಳು: ಎ.ಜಿ. ಮುಳವಾಡಮಠ ಅಭಿಮತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಕಾನೂನಿಗಿಂತಲೂ ಹೆಚ್ಚಿನ ಮಾನವೀಯ ಮೌಲ್ಯಗಳು ಬಸವಾದಿ ಶರಣರು ರಚಿಸಿರುವ ವಚನ ಸಾಹಿತ್ಯದಲ್ಲಿವೆ’ ಎಂದು ವಕೀಲರ ಸಂಘ ಬೆಳಗಾವಿ ಘಟಕದ ಅಧ್ಯಕ್ಷ ಎ.ಜಿ. ಮುಳವಾಡಮಠ ಹೇಳಿದರು.

ಡಾ.ಬಿ.ಆರ್. ಅಂಬೇಡ್ಕರ್‌ ಅವರ ಮಹಾಪರಿನಿರ್ವಾಣ ದಿನದ ಅಂಗವಾಗಿ ಬಸವ ಭೀಮ ಸೇನೆ ವತಿಯಿಂದ ಭಾನುವಾರ ಆಯೋಜಿಸಿದ್ದ ‘ಬಸವ, ಭೀಮ ಸಂತತಿ ಐಕ್ಯತಾ ಸಮಾವೇಶ’ ಹಾಗೂ ‘ಬಸವ ಭೀಮ ಪ್ರಶಸ್ತಿಗಳ ಪ್ರದಾನ ಸಮಾರಂಭ’ದಲ್ಲಿ ‘ಬೆಸ್ಟ್ ಬ್ಯಾರಿಸ್ಟರ್ ಡಾ.ಬಾಬಾಸಾಹೇಬ ಅಂಬೇಡ್ಕರ್‌’ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

‘ಶರಣರು ಕಟ್ಟಿಕೊಟ್ಟಿರುವ ವಚನ ಸಾಹಿತ್ಯ ವಿಶ್ವದ ಮೇರು ಸಾಹಿತ್ಯ. ಬಸವಣ್ಣನವರ ನೇತೃತ್ವದಲ್ಲಿ ನಡೆದ ಚಳವಳಿಯು ಸಮಾಜಕ್ಕೆ ಹೊಸ ದಿಕ್ಕು ತೋರಿಸಿದೆ. ಸಾಮಾಜಿಕ ಅಸಮಾನತೆ ನಿವಾರಣೆಗೆ ಅವರು ತೋರಿದ ಮಾರ್ಗವೇ ದಾರಿದೀಪವಾಗಿದೆ’ ಎಂದರು.

‘ಕಾನೂನಿನ ಪುಸ್ತಕಗಳಲ್ಲಿ ಅಪರಾಧಗಳಿಗೆ ಶಿಕ್ಷೆ ನೀಡುವ ವಿವರಣೆ ಇದೆ. ಆದರೆ, ವಚನ ಸಾಹಿತ್ಯದಲ್ಲಿ ಅಪರಾಧರಹಿತ ಸಮಾಜ ನಿರ್ಮಾಣದ  ಪ್ರಸ್ತಾಪವಿದೆ. ಕಳ ಬೇಡ, ಕೊಲ ಬೇಡ ಎಂದು ಬೋಧಿಸುವ ಮೂಲಕ ಬಸವಣ್ಣ ಅಪರಾಧರಹಿತ ಸಮಾಜ ನಿರ್ಮಾಣಕ್ಕೆ ನಾಂದಿ ಹಾಡಿದ್ದಾರೆ. ಇಂದು ನಾವು ಬಸವ, ಅಂಬೇಡ್ಕರ್ ಮಾರ್ಗದಲ್ಲಿ ಸಾಗಿ ನವ ಸಮಾಜ ನಿರ್ಮಾಣ ಮಾಡಬೇಕು’ ಎಂದು ತಿಳಿಸಿದರು.

ಬಸವ ಭೀಮ ಸೇನೆ ಅಧ್ಯಕ್ಷ ಆರ್.ಎಸ್. ದರ್ಗೆ, ‘ಬಸವಾದಿ ಶರಣರು ಕಟ್ಟಿಕೊಟ್ಟಿರುವ ವಚನ ಸಾಹಿತ್ಯವು ವಿಶ್ವದ ಪ್ರಪ್ರಥಮ ಸಂವಿಧಾನ. ಬಸವಾದಿ ಶರಣರ ಆಶಯಗಳನ್ನೇ ಒಳಗೊಂಡಿರುವ ಸಂವಿಧಾನವು ಶ್ರೇಷ್ಠ ಸಂವಿಧಾನವಾಗಿದೆ. ಬಸವ– ಅಂಬೇಡ್ಕರ್‌ ಅವರನ್ನು ಸಮೀರಣಗೊಳಿಸುವ ಮೂಲಕ ಹೊಸ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕಾಗಿದೆ’ ಎಂದು ಅಭಿ‍ಪ್ರಾಯಪಟ್ಟರು.

ವಕೀಲರಾದ ಅಶೋಕ ಕಲ್ಯಾಣಶೆಟ್ಟಿ ಮತ್ತು ಬಸವರಾಜ ರೊಟ್ಟಿ ಮಾತನಾಡಿದರು.

ಎಸ್.ಜಿ. ಸಿದ್ನಾಳ, ಶಿವಾನಂದ ಲೋಲೆನವರ ಮತ್ತು ಪ್ರಭು ಬೆಣ್ಣಿ ಅವರಿಗೆ ‘ಬಸವ ಚೇತನ’, ಸಿ.ಆರ್. ಗಡಾದ ಅವರಿಗೆ ‘ಚೇತನ ಚನ್ನಬಸವಣ್ಣ’, ಶಿವಾನಂದ ಮಬ್ರೂಮಕರ ಮತ್ತು ಫಕೀರಪ್ಪ ಬೆಟಗೇರಿಗೆ ‘ಬಸವ ಚೇತನ ಸಮಗಾರ ಹರಳಯ್ಯ’, ಪಡೆಪ್ಪ ಬೋಗೂರ ಮತ್ತು ಚಂದ್ರಪ್ಪ ಕುಂದರಗಿ ಅವರಿಗೆ ‘ಬಸವ ಚೇತನ ಒಕ್ಕಲಿಗ ಮುದ್ದಣ್ಣ’, ಡಾ.ವಿ.ಎಂ. ಪಟ್ಟಣ ಅವರಿಗೆ ‘ಬಸವ ಚೇತನ ವೈದ್ಯ ಸಂಗಣ್ಣ’, ಎಂ.ಬಿ. ಹೊಸಳ್ಳಿ ಅವರಿಗೆ ‘ಬಸವ ಚೇತನ ನಗೆ ಮಾರಿ ತಂದೆ’, ಅಕ್ಕಮಹಾದೇವಿ ತೆಗ್ಗಿ, ಮಾಲಿನಿ ಪಾಲಾಕ್ಷ ಮತ್ತು ಭಾಗ್ಯಶ್ರೀ ಕೋಟಿ ಅವರಿಗೆ ‘ಮಹಾತಾಯಿ ಗಂಗಾಂಬಿಕೆ’, ಭಾನುಮತಿ ಮಾಯಪ್ಪ ಮಾವರಕರ ದಂಪತಿಗೆ ‘ಭಿಷ್ಠಾದೇವಿ ಡೋಹರ ಕಕ್ಕಯ್ಯ ಆದರ್ಶ ದಂಪತಿಗಳು’, ಡಾ.ಅಬ್ದುಲ್‌ ರಜಾಕ್‌ ನದಾಫ ಅವರಿಗೆ ‘ಬಸವ ಸೌಹಾರ್ದ’, ಗಂಗಾರಾಮ ತಳವಾರಗೆ ‘ಬಸವ ಚೇತನ ಅಂಬಿಗರ ಚೌಡಯ್ಯ’, ಅಣ್ಣಸಾಹೇಬ ಹಂಚಿನಮನಿ ಮತ್ತು ಯಲ್ಲಪ್ಪ ಹುದಲಿಗೆ ‘ಬಸವ ಚೇತನ ಮಾದಾರ ಚನ್ನಯ್ಯ’, ವೇಣುಧ್ವನಿಯ ನಿಲಯ ನಿರ್ದೇಶಕಿ ಸುನೀತಾ ದೇಸಾಯಿ ಅವರಿಗೆ ‘ನಿರ್ಭಯ ಗೌರಿ: ಗೌರಿ ನಮ್ಮ ಮಗಳು’, ಮಲ್ಲೇಶ ಚೌಗುಲೆ, ಕರೆಪ್ಪ ಗುಡೇನ್ನವರ ಮತ್ತು ರಮೇಶ ರಾಯಪ್ಪಗೋಳ ಅವರಿಗೆ ‘ಭೀಮ ಚೇತನ’, ವಕೀಲರಾದ ಅಶೋಕ ಕಲ್ಯಾಣಶೆಟ್ಟಿ ಮತ್ತು ಬಸವರಾಜ ರೊಟ್ಟಿ ಅವರಿಗೆ ‘ಬೆಸ್ಟ್‌ ಬ್ಯಾರಿಸ್ಟರ್ ಡಾ.ಬಾಬಾಸಾಹೇಬ ಅಂಬೇಡ್ಕರ್‌’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಮುಖಂಡರಾದ ಚನ್ನಬಸಪ್ಪ ಬಾಗೇವಾಡಿ, ಕೆ.ಡಿ. ಮಂತ್ರೇಶಿ, ಲಕ್ಷ್ಮಣ ಲಗಮಪ್ಪಗೋಳ, ಸುರೇಶ ಉಗಾರೆ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು