ಗುರುವಾರ , ಮೇ 26, 2022
26 °C

ಬೆಳಗಾವಿ: ರಾಜೀನಾಮೆಗೆ ಮುಂದಾಗಿದ್ದ ಬಸವರಾಜ ಹೊರಟ್ಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಮತಾಂತರ ನಿಷೇಧ ಮಸೂದೆ ಒಪ್ಪಿಗೆ ಪಡೆಯಲು ವಿಧಾನಪರಿಷತ್ತಿನಲ್ಲಿ ಶುಕ್ರವಾರ ನಡೆದ ಬೃಹನ್ನಾಟಕದಿಂದ ಮನನೊಂದ ಬಸವರಾಜ ಹೊರಟ್ಟಿ ಅವರು ಸಭಾಪತಿ ಹುದ್ದೆಗೆ ರಾಜೀನಾಮೆ ಕೊಡಲು ಮುಂದಾಗಿದ್ದರು.

ಮಸೂದೆಗೆ  ಹೇಗಾದರೂ ಅನುಮೋದನೆ ಪಡೆಯಲೇಬೇಕೆಂಬ ಹಟಕ್ಕೆ ಬಿದ್ದಿದ್ದ ಆಡಳಿತಾರೂಢ ಬಿಜೆಪಿ,  ಕಲಾಪವನ್ನು ವಿಳಂಬ ಮಾಡುವ ಮೂಲಕ ಸಂಖ್ಯಾಬಲ ಕ್ರೋಡೀಕರಣಕ್ಕೆ ಮುಂದಾಗಿತ್ತು. ಇದನ್ನು ಅರಿತ ಕಾಂಗ್ರೆಸ್ ಸದಸ್ಯರು ಸಭಾಪತಿ ಕೊಠಡಿಗೆ ತೆರಳಿ ವಾಗ್ವಾದ ನಡೆಸಿದ್ದರು. ಬಳಿಕ ಕಲಾಪ ಆರಂಭವಾದಾಗ, ಕಾಂಗ್ರೆಸ್ ಸದಸ್ಯರು ಸಭಾಪತಿಯವರ ಧೋರಣೆಯನ್ನು ಪ್ರಶ್ನಿಸಿದ್ದರು. 

ಸುದೀರ್ಘ ಅವಧಿ ಪರಿಷತ್ತಿನ ಸದಸ್ಯರಾಗಿ ಕಾರ್ಯನಿರ್ವಹಿಸಿರುವ ಹೊರಟ್ಟಿಯವರಿಗೆ ಇದು ಮುಜುಗರ ತಂದಿತ್ತು. ' ನಾನು ಪ್ರಮಾಣ ಮಾಡಿ ಹೇಳುವೆ, ಇದರಲ್ಲಿ ನನ್ನ ತಪ್ಪಿಲ್ಲ. ಆಡಳಿತ ಪಕ್ಷದವರು ವಿಳಂಬವಾಗುತ್ತದೆ ಎಂಬುದನ್ನು ವಿರೋಧ ಪಕ್ಷದ ಗಮನಕ್ಕೆ ತಂದಿರುವುದಾಗಿ ನನಗೆ ತಿಳಿಸಿದ್ದರು. ಈ ಕಾರಣಕ್ಕೆ ತಡವಾಯಿತು' ಎಂದು ಹೊರಟ್ಟಿ ಸಮಜಾಯಿಷಿ ನೀಡಿದರು.ಅದನ್ನು ವಿರೋಧ ಪಕ್ಷಗಳಾದ ಕಾಂಗ್ರೆಸ್‌, ಜೆಡಿಎಸ್ ಸದಸ್ಯರು ಒಪ್ಪಿರಲಿಲ್ಲ.

ಬಳಿಕ ಕಲಾಪವನ್ನು ಐದು ನಿಮಿಷ ಮುಂದೂಡಿದ್ದ ಸಭಾಪತಿ, ಮುನಿಸಿನಿಂದಲೇ ಹೊರನಡೆದಿದ್ದರು.
ಅದಾದ ತರುವಾಯ ಸಭಾಪತಿ ಹುದ್ದೆಗೆ ರಾಜೀನಾಮೆ ಕೊಡುವ ನಿರ್ಧಾರಕ್ಕೆ ಹೊರಟ್ಟಿ ಬಂದಿದ್ದರಲ್ಲದೇ, ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ತಿಳಿಸಿದ್ದರು.

ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಿದ ಬಳಿಕ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಜೆಡಿಎಸ್, ಕಾಂಗ್ರೆಸ್ ನಾಯಕರು ಮನವೊಲಿಸಿದ ನಂತರ ರಾಜೀನಾಮೆ ನಿರ್ಧಾರದಿಂದ ಹೊರಟ್ಟಿ ಹಿಂದೆ ಸರಿದರು ಎಂದು ಮೂಲಗಳು ತಿಳಿಸಿವೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು