ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ: ಸೋಲು–ಗೆಲುವಿನ ಲೆಕ್ಕಾಚಾರ ಶುರು

ನೀರಸ ಮತದಾನದಿಂದ ಯಾರಿಗೆ ಲಾಭ ಎನ್ನುವ ಚರ್ಚೆ
Last Updated 4 ಸೆಪ್ಟೆಂಬರ್ 2021, 9:44 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಮಹಾನಗರಪಾಲಿಕೆ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ರಾಜಕೀಯ ಪಕ್ಷಗಳ ಚಿಹ್ನೆಯಿಂದ ಅಭ್ಯರ್ಥಿಗಳು ಸ್ಪರ್ಧಿಸಿದ್ದರಾದರೂ ಮತದಾನ ಪ್ರಮಾಣದಲ್ಲಿ ಗಣನೀಯ ಏರಿಕೆಯೇನೂ ಕಂಡುಬಂದಿಲ್ಲ. ಇದು, ಅಭ್ಯರ್ಥಿಗಳಲ್ಲಿ ಅದರಲ್ಲೂ ವಿಶೇಷವಾಗಿ ಗರಿಷ್ಠ ವಾರ್ಡ್‌ಗಳಲ್ಲಿ ಸ್ಪರ್ಧಿಸಿರುವ ಬಿಜೆಪಿಯವರ ಆತಂಕಕ್ಕೆ ಕಾರಣವಾಗಿದೆ. ಸೋಲು–ಗೆಲುವಿನ ಲೆಕ್ಕಾಚಾರ ಆರಂಭವಾಗಿದೆ.

ಜಿಲ್ಲಾಡಳಿತ ನೀಡಿರುವ ಮಾಹಿತಿ ಪ್ರಕಾರ ಇಲ್ಲಿ ಶೇ 50.42ರಷ್ಟು ಮಾತ್ರವೇ ಮತದಾನವಾಗಿದೆ. ಅಂದರೆ, ಬಹಳಷ್ಟು ಮಂದಿ ಚುನಾವಣಾ ಪ್ರಕ್ರಿಯೆಯಲ್ಲಿ ದೂರ ಉಳಿದಿದ್ದಾರೆ. ಇದು, ರಾಜಕೀಯ ಪಕ್ಷದವರ ಲೆಕ್ಕಾಚಾರಗಳು ತಲೆಕೆಳಗಾಗುವಂತೆ ಮಾಡಿದೆ.

ಕೋವಿಡ್ ಸಾಂಕ್ರಾಮಿಕದ ಭೀತಿ, ತರಾತರಿಯಲ್ಲಿ ಚುನಾವಣೆ ನಡೆದಿರುವುದು, ಮಹಾರಾಷ್ಟ್ರ ಸೇರಿದಂತೆ ವಿವಿಧೆಡೆ ಇರುವ ಮತದಾರರು ಬಾರದಿರುವುದು, ಅಲ್ಲಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರುಗಳು ಬಿಟ್ಟು ಹೋಗಿರುವುದು ಮತ್ತು ಮತಗಟ್ಟೆಗಳು ಅದಲು–ಬದಲಾಗಿರುವುದು ಮತದಾನ ಪ್ರಮಾಣದಲ್ಲಿ ಸಮಾಧಾನಕರ ಏರಿಕೆ ಕಾಣದಿರುವುದಕ್ಕೆ ಕಾರಣ. ಅಲ್ಲದೇ, ಈ ಚುನಾವಣೆಯಲ್ಲಿ ಅಧಿಕಾರಿಗಳು ‘ಸ್ವೀಪ್’ (ವ್ಯವಸ್ಥಿತ ಮತದಾರರ ಶಿಕ್ಷಣ ಹಾಗೂ ಚುನಾವಣೆಯಲ್ಲಿ ಪಾಲ್ಗೊಳ್ಳುವಿಕೆ) ಚಟುವಟಿಕೆಗಳನ್ನು ನಡೆಸಿ ಜಾಗೃತಿ ಮೂಡಿಸದಿರುವುದು ಕೂಡ ವ್ಯತಿರಿಕ್ತ ಪರಿಣಾಮ ಬೀರಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಮತ್ತೊಮ್ಮೆ ಸಾಬೀತು: ಮತದಾರರಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಿತ್ತಾದರೂ, ಮತ ಚಲಾಯಿಸಿದವರಲ್ಲಿ ಪುರುಷರ ಪ್ರಮಾಣ ಜಾಸ್ತಿಯಾಗಿದೆ. 4,30,825 ಮತದಾರರ ಪೈಕಿ 2,17,231 ಮಂದಿ ಹಕ್ಕು ಚಲಾಯಿಸಿದ್ದಾರೆ. ಇವರಲ್ಲಿ 1,13,738 ಪುರುಷರು ಹಾಗೂ 1,03,493 ಮಹಿಳೆಯರು ಇದ್ದಾರೆ. 58 ವಾರ್ಡ್‌ಗಳಿದ್ದು ಬಹುತೇಕ ಕಡೆಗಳಲ್ಲಿ ಸರಾಸರಿ ಶೇ 40ರಷ್ಟು ಮತದಾನವಾಗಿದೆ. ಅತಿ ಹೆಚ್ಚು ಅಂದರೆ 48ನೇ ವಾರ್ಡ್‌ನಲ್ಲಿ ಶೇ 70.46 ಆಗಿದೆ. 26ನೇ ವಾರ್ಡ್‌ನಲ್ಲಿ ಅತಿ ಕಡಿಮೆ ಅಂದರೆ ಶೇ 23.89ರಷ್ಟಾಗಿದೆ. ನಗರ ಪ್ರದೇಶದಲ್ಲಿ ಮತದಾನಕ್ಕೆ ಹೆಚ್ಚಿನ ಪ್ರತಿಕ್ರಿಯೆ ವ್ಯಕ್ತವಾಗದಿರುವುದು ಈ ಚುನಾವಣೆಯಲ್ಲೂ ಸಾಬೀತಾಗಿದೆ.

ಬಿಜೆಪಿ, ಕಾಂಗ್ರೆಸ್ ಪಕ್ಷಗಳ ಅಭ್ಯರ್ಥಿಗಳನ್ನು ಬಂಡಾಯ ಅಭ್ಯರ್ಥಿಗಳು ಕಾಡಿದ್ದಾರೆ. ಇದು ರಾಜಕೀಯ ಪಕ್ಷವಲ್ಲದ ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್‌)ಗೂ ತಟ್ಟಿದೆ. ಆ ಸಮಿತಿಯ ಬೆಂಬಲಿಗರು ಕೂಡ ಸ್ವತಂತ್ರವಾಗಿ ಸ್ಪರ್ಧಿಸಿ ತೊಡೆ ತಟ್ಟಿದ್ದಾರೆ. ಹಿಂದೆಲ್ಲಾ ಭಾಷೆಗಳ ಆಧಾರದ ಮೇಲೆ ನಡೆಯುತ್ತಿದ್ದ ಚುನಾವಣೆಯ ಸ್ವರೂಪ ಈ ಬಾರಿ ಬದಲಾಗಿದೆ. ಇದರಿಂದ ಯಾರಿಗೆ ಒಳಿತಾಗಲಿದೆ ಎನ್ನುವುದು ಕುತೂಹಲ ಮೂಡಿಸಿದೆ. ಯಾವ ವಾರ್ಡ್‌ನಲ್ಲಿ ಯಾರಿಗೆ ಯಾವ ರೀತಿಯ ಪ್ರತಿಕ್ರಿಯೆ ಸಿಕ್ಕಿದೆ ಎಂಬ ಲೆಕ್ಕಾಚಾರದಲ್ಲಿ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ತೊಡಗಿದ್ದಾರೆ.

ಪಕ್ಷಗಳ ಸ್ಥಿತಿ ಏನು?: 385 ಅಭ್ಯರ್ಥಿಗಳು ಕಣದಲ್ಲಿದ್ದರು. ಮತದಾರರು ಯಾವ ಪಕ್ಷದವರಿಗೆ ಮಣೆ ಹಾಕಿದ್ದಾರೆ, ಯಾವ ಅಭ್ಯರ್ಥಿಯು ಗೆಲ್ಲಬಹುದು, ಪಕ್ಷಗಳ ವಿರುದ್ಧ ಸ್ಪರ್ಧಿಸಿ ಉಚ್ಚಾಟನೆಗೊಂಡಿರುವವರ ಭವಿಷ್ಯವೇನು, ಪ್ರಮುಖ ಅಭ್ಯರ್ಥಿಗಳಿಗೆ ಸಿಕ್ಕಿರುವ ಬೆಂಬಲವೆಷ್ಟು, ಯಾವ ಪಕ್ಷವು ಬಹು ದೊಡ್ಡ ಪಕ್ಷವಾಗಿ ಹೊರಹೊಮ್ಮಬಹುದು, ಅತಂತ್ರ ಸ್ಥಿತಿ ನಿರ್ಮಾಣವಾದರೆ ರಾಜಕೀಯ ಪಕ್ಷಗಳ ನಡೆ ಹೇಗಿರಲಿದೆ? ಎಂಬಿತ್ಯಾದಿ ಚರ್ಚೆಗಳು ನಗರದಾದ್ಯಂತ ನಡೆಯುತ್ತಿವೆ. ಎಲ್ಲ ಚರ್ಚೆ–ಲೆಕ್ಕಾಚಾರಗಳಿಗೂ ಸೆ.6ರಂದು ಉತ್ತರ ದೊರೆಯಲಿದೆ.

ಮತದಾನ ಪ್ರಮಾಣ

ವಾರ್ಡ್‌ ಸಂಖ್ಯೆ;ಶೇಕಡ

1;56.62

2;59.87

3;56.86

4;54.02

5;51.71

6;49.65

7;57.59

8;61.04

9;51.87

10;53.01

11;44.84

12;42.98

13;54.21

14;57.66

15;49.40

16;49.29

17;35.34

18;56.07

19;51.58

20;54.10

21;49.70

22;55.37

23;53.47

24;51.66

25;43.44

26;23.89

27;62.23

28;49.09

29;42.26

30;43.33

31;36.89

32;38.50

33;39.24

34;52.69

35;40.91

36;47.68

37;53.15

38;58.26

39;57.03

40;58.41

41;46.59

42;35.95

43;40.07

44;47.65

45;50.78

46;53.61

47;65.24

48;70.46

49;54.09

50;44.42

51;61.50

52;52.64

53;46.36

54;37.91

55;67.09

56;59.71

57;52.34

58;59.53

ಒಟ್ಟು;50.42

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT