ಶನಿವಾರ, ಫೆಬ್ರವರಿ 4, 2023
28 °C

ಸೆಲ್ಫಿ ತೆಗೆದುಕೊಳ್ಳುವಾಗ ನೀರಿಗೆ ಬಿದ್ದು ನಾಲ್ವರು ವಿದ್ಯಾರ್ಥಿನಿಯರ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ತಾಲ್ಲೂಕಿನ ಗಡಿಗೆ ಹೊಂದಿಕೊಂಡ, ಮಹಾರಾಷ್ಟ್ರದ ಕಿತವಾಡ ಫಾಲ್ಸ್‌ನಲ್ಲಿ ಶನಿವಾರ ಸೆಲ್ಫಿ ತೆಗೆದುಕೊಳ್ಳಲು ಹೋದ ನಾಲ್ವರು ಕಾಲೇಜು ವಿದ್ಯಾರ್ಥಿನಿಯರು ಆಯತಪ್ಪಿ ನೀರಿಗೆ ಬಿದ್ದು ಅಸುನೀಗಿದ್ದಾರೆ.

ಬೆಳಗಾವಿಯ ಉಜ್ವಲ ನಗರ ಆಸೀಯಾ ಮುಜಾವರ್ (17), ಅನಗೋಳದ ಕುದ್‌ಶೀಯಾ ಹಾಸನ್ ಪಟೇಲ್ (20), ಝಟ್‌ಪಟ್ ಕಾಲೊನಿಯ ರುಕ್ಕಶಾರ್ ಭಿಸ್ತಿ (20) ಹಾಗೂ ತಸ್ಮಿಯಾ (20) ಮೃತಪಟ್ಟವರು.

ಇವರೆಲ್ಲರೂ ಬೆಳಗಾವಿಯ ಕಾಮತ ಗಲ್ಲಿಯ ಮದರಸಾದಲ್ಲಿ ಇದ್ದುಕೊಂಡು ಓದುತ್ತಿದ್ದರು.

ಇದೇ ಮದರಸಾದ 40 ಯುವತಿಯರು ಬೆಳಗಾವಿಯಿಂದ ಕಿತವಾಡ ಫಾಲ್ಸ್‌ಗೆ ಶನಿವಾರ ಬೆಳಿಗ್ಗೆ ಬಸ್ ಮೂಲಕ ಪ್ರವಾಸಕ್ಕೆ ತೆರಳಿದ್ದರು.

ಹಲವರು ಸೇರಿಕೊಂಡು ನೀರಿನ ಅಂಚಿಗೆ ನಿಂತು ಗುಂಪು ಸೆಲ್ಫಿ ತಗೆದುಕೊಳ್ಳುವ ವೇಳೆ ಕಾಲು ಜಾರಿ ಐವರು ಯುವತಿಯರು ನೀರಿಗೆ ಬಿದ್ದರು. ನೀರಿಗೆ ಬಿದ್ದವರು ಹಾಗೂ ಮೇಲೆ ನಿಂತವರಿಗೆ ಯಾರಿಗೂ ಈಜು ಬಾರದ ಕಾರಣ ರಕ್ಷಣೆ ಸಾಧ್ಯವಾಗಲಿಲ್ಲ.

ಐವರಲ್ಲಿ ನಾಲ್ವರು ಸ್ಥಳದಲ್ಲೇ ಕೊನೆಯುಸಿರೆಳೆದರು. ಒಬ್ಬ ಯುವತಿಯನ್ನು ನೀರಿನಿಂದ ಮೇಲೆತ್ತಲಾಗಿದ್ದು ಅವರ ಸ್ಥಿತಿಯೂ ಚಿಂತಾಜನಕವಾಗಿದೆ ಎಂದು ಜಿಲ್ಲಾಸ್ಪತ್ರೆಯ ಮೂಲಗಳು ತಿಳಿಸಿವೆ.

ಕುಟುಂಬಸ್ಥರ ಕಣ್ಣೀರು

ಸಾವಿಗೀಡಾದ ನಾಲ್ವರು ಯುವತಿಯರ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು.

ಮೃತ ವಿದ್ಯಾರ್ಥಿನಿಯರ ತಾಯಿ, ಅಕ್ಕಂದಿರು, ತಮ್ಮ, ತಂದೆ, ಗೆಳತಿಯರು ಕಣ್ಣೀರು ಸುರಿಸಿದರು. ತಮ್ಮ ಮಗಳು ಶವವಾಗಿದ್ದಾಳೆ ಎಂದು ಕೇಳಿ ಮಹಿಳೆಯರಿಬ್ಬರು ಕುಸಿದುಬಿದ್ದರು.

ಅವಘಡದ ವಿಷಯ ತಿಳಿದ ತಕ್ಷಣ ಮೃತಪಟ್ಟವರ ಪಾಲಕರು, ಸಂಬಂಧಿಕರು, ಸಾರ್ವಜನಿಕರು ಅಪಾರ ಸಂಖ್ಯೆಯಲ್ಲಿ ಸೇರಿದರು.

ಸ್ಥಳದಲ್ಲಿ ಹೆಚ್ಚು ಜನ  ಜಮಾವಣೆಗೊಂಡ ಕಾರಣ ಮುಂಜಾಗ್ರತಾ ಕ್ರಮವಾಗಿ ಒಂದು ಡಿ.ಆರ್. ತುಕಡಿ ಸೇರಿದಂತೆ 50ಕ್ಕೂ ಅಧಿಕ ಪೊಲೀಸರನ್ನು ಆಸ್ಪತ್ರೆ ಮುಂದೆ ನಿಯೋಜನೆ ಮಾಡಲಾಗಿದೆ. 

ಡಿಸಿಪಿ ರವೀಂದ್ರ ಗಡಾದಿ, ಬಿಮ್ಸ್ ಆಸ್ಪತ್ರೆ ಸರ್ಜನ್ ಅಣ್ಣಾಸಾಹೇಬ್ ಪಾಟೀಲ ಸ್ಥಳದಲ್ಲಿದ್ದು ಪರಿಸ್ಥಿತಿ ನಿಭಾಯಿಸಲು ಮುಂದಾದರು. ಬಿಮ್ಸ್ ಆಸ್ಪತ್ರೆಯಲ್ಲಿ ನಾಲ್ವರ  ಮರಣೋತ್ತರ ಪರೀಕ್ಷೆಗೆ ಸಿದ್ಧತೆ ನಡೆದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು