ಸೋಮವಾರ, ಅಕ್ಟೋಬರ್ 18, 2021
23 °C
ಹಾಲಸಿದ್ಧನಾಥ ಸಕ್ಕರೆ ಕಾರ್ಖಾನೆ ಕಬ್ಬು ನುರಿಸುವ ಹಂಗಾಮಿಗೆ ಚಾಲನೆ

ಕೃಷ್ಣಾ ನದಿಗೂ ಜೀವನದಿ ಎನ್ನಬೇಕು: ಅಲ್ಲಮಪ್ರಭು ಸ್ವಾಮೀಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಿಪ್ಪಾಣಿ: ‘ಮಂಡ್ಯ ಜಿಲ್ಲೆಗೆ ಸಕ್ಕರೆ ಜಿಲ್ಲೆ ಎನ್ನುತ್ತಾರೆ. ಆದರೆ ಬೆಳಗಾವಿ ಜಿಲ್ಲೆಯಲ್ಲಿ ಅತಿ ಹೆಚ್ಚು ಸಕ್ಕರೆ ಕಾರ್ಖಾನೆಗಳು ಇರುವುದರಿಂದ ಬೆಳಗಾವಿಯು ನಿಜವಾದ ಸಕ್ಕರೆ ಜಿಲ್ಲೆಯಾಗಿದೆ. ಕಾವೇರಿ ನದಿಗೆ ಜೀವನದಿ ಎಂದು ಕರೆಯುವಂತೆ ನಮ್ಮ ಭಾಗದ ಕೃಷ್ಣಾ ನದಿಗೂ ಜೀವನದಿ ಎಂದು ಕರೆಯಬೇಕು’ ಎಂದು ಚಿಂಚಣಿಯ ಸಿದ್ಧಸಂಸ್ಥಾನ ಮಠದ ಅಲ್ಲಮಪ್ರಭು ಸ್ವಾಮೀಜಿ ಅಭಿಪ್ರಾಯಪಟ್ಟರು.

ಸ್ಥಳೀಯ ಶ್ರೀ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಯ 2021-22ನೇ ಸಾಲಿನ ಕಬ್ಬು ನುರಿಸುವ ಹಂಗಾಮಿಗೆ ಚಾಲನೆ ನೀಡಿ ನಂತರ ಜರುಗಿದ ಕಾರ್ಯಕ್ರಮದಲ್ಲಿ ಮಾತನಾಡಿದರು. ‘ಈ ಕಾರ್ಖಾನೆಯನ್ನು ಜೊಲ್ಲೆ ದಂಪತಿ, ಚಂದ್ರಕಾಂತ ಕೋಠಿವಾಲೆ ಹಾಗೂ ಅವರ ತಂಡವು ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ. ಕಾರ್ಮಿಕರಿಗೆ ಶೇ.10ರಷ್ಟು ವೇತನ ಹೆಚ್ಚಳ ಮಾಡಿದ್ದಾರೆ’ ಎಂದರು.

ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ ‘ರೈತರ ಮತ್ತು ಕಾರ್ಮಿಕರ ಹಿತದೃಷ್ಟಿಯಿಂದ ಸಂಕಷ್ಟ ಎದುರಿಸುತ್ತಿದ್ದ ಕಾರ್ಖಾನೆಯ ಜವಾಬ್ದಾರಿಯನ್ನು ಹೊತ್ತಿಕೊಂಡಿದ್ದೇವೆ. ಕಳೆದ 3 ವರ್ಷಗಳಿಂದ ಆರ್ಥಿಕ ಹಾನಿ ತೋರಿಸುತ್ತಿದ್ದ ಕಾರ್ಖಾನೆಯಲ್ಲಿ ಕಳೆದ ವರ್ಷ ₹ 24 ಕೋಟಿಯಷ್ಟು ನಷ್ಟ ಕಡಿಮೆಯಾಗಿದೆ. ಇದು ಕಾರ್ಖಾನೆಯು ಅಭಿವೃದ್ಧಿಯತ್ತ ದಾಪುಗಾಲು ಇಡುತ್ತಿರುವ ಸಂಕೇತವಾಗಿದೆ. ಆದಾಗ್ಯೂ ಕಾರ್ಖಾನೆಯ ಆರ್ಥಿಕ ಪರಿಸ್ಥಿತಿ ಇನ್ನೂ ಬಹಳಷ್ಟು ಸುಧಾರಿಸಬೇಕಿದ್ದು ಅದಕ್ಕಾಗಿ ಪ್ರಯತ್ನಿಸಲಾಗುತ್ತಿದೆ. ಕೆಲ ಸದಸ್ಯರು ಕಾರ್ಖಾನೆಗೆ ಕಬ್ಬು ಕಳುಹಿಸದಿರುವುದು  ಗಮನಕ್ಕೆ ಬಂದಿದೆ. ಅದಕ್ಕಾಗಿ ಇತರ ಕಾರ್ಖಾನೆಯಂತೆ ಕ್ರಮ ವಹಿಸಲಾಗುವುದು’ ಎಂದರು.

ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ, ಹಾಲಸಿದ್ಧನಾತ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಪ್ರಥಮ ಸ್ಥಾನಕ್ಕೆ ತರುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುತ್ತಿದೆ ಎಂದರು. ಕಾರ್ಖಾನೆಯ ಕಾರ್ಯಾಧ್ಯಕ್ಷ ಚಂದ್ರಕಾಂತ ಕೋಠಿವಾಲೆ ಮಾತನಾಡಿ, ಅಣ್ಣಾಸಾಹೇಬ ಜೊಲ್ಲೆಯವರು ಅಪಾರ ಬದಲಾವಣೆಗಳನ್ನು ತಂದಿದ್ದಾರೆ. ಕಾರ್ಖಾನೆಯ ಸಂಕಷ್ಟದ ಸಂದರ್ಭದಲ್ಲಿ ಧೈರ್ಯದಿಂದ ನಿರ್ಧಾರ ತೆಗೆದುಕೊಂಡು ಸಹಕಾರ ಮಾಡಿದ್ದು ಶ್ಲಾಘನೀಯ ಎಂದರು.

ವ್ಯವಸ್ಥಾಪಕ ನಿರ್ದೇಶಕ ಶಿವ ಕುಲಕರ್ಣಿ ಮಾತನಾಡಿದರು. ಕಾರ್ಮಿಕರ ನೇತಾರ ಅನೀಲ ಶಿಂಧೆ ಮಾತನಾಡಿ, 2017ರಲ್ಲಿ ಕಾರ್ಖಾನೆಗೆ ಬೀಗ ಜಡೆಯುವ ಸಂದರ್ಭದಲ್ಲಿ ಅದರ ಜವಾಬ್ದಾರಿಯನ್ನು ಜೊಲ್ಲೆ ದಂಪತಿ ತಮ್ಮ ಹೆಗಲ ಮೇಲೆ ತೆಗೆದುಕೊಂಡ ಪರಿಣಾಮ ಕಾರ್ಮಿಕರಲ್ಲಿ ಉತ್ಸಾಹ ಬಂದಿದೆ ಎಂದರು.

ರಾಜ್ಯ ಸೌಹಾರ್ದ ಸಂಘದ ಕಾರ್ಯಾಧ್ಯಕ್ಷ ವಿಶ್ವನಾಥ ಕಮತೆ, ಸಂಚಾಲಕ ಅಪ್ಪಾಸಾಹೇಬ ಜೊಲ್ಲೆ, ರಾಮಗೊಂಡಾ ಪಾಟೀಲ, ಸಮಿತ ಸಾಸನೆ, ಸುಕುಮಾರ ಪಾಟೀಲ ಬುಧಿಹಾಳಕರ, ಮ್ಹಾಳಪ್ಪಾ ಪಿಸೂತ್ರೆ, ರಾಜಾರಾಮ ಖೋತ, ಪ್ರತಾಪ ಮೇತ್ರಾಣಿ, ಕಲ್ಲಪ್ಪಾ ನಾಯಿಕ, ಉಜ್ವಲಾ ಶಿಂಧೆ, ಮನಿಷಾ ರಾಂಗೋಳೆ, ನಗರಸಭೆ ಅಧ್ಯಕ್ಷ ಜಯವಂತ ಭಾಟಲೆ ಮತ್ತು ಸದಸ್ಯರು, ಸಂಜಯ ಮೊಳವಾಡೆ, ರಾವಸಾಹೇಬ ಪಾಟೀಲ, ಮೊದಲಾದವರು ಸದಸ್ಯರು, ಕಾರ್ಮಿಕರು, ಉಪಸ್ಥಿತರಿದ್ದರು. ಸಂಚಾಲಕ ಆರ್.ವೈ. ಪಾಟೀಲ ಸ್ವಾಗತಿಸಿದರು. ಎಂಜಿನಿಯರ್ ನವೀನ ಬಾಡಕರ ನಿರೂಪಿಸಿದರು. ಉಪಕಾರ್ಯಾಧ್ಯಕ್ಷ ಮಲಗೊಂಡಾ ಪಾಟೀಲ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು