ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಳಗಾವಿ | ಕೃಷಿ ಪರಿಕರ ನಿಯಮ ಬಾಹಿರ ಮಾರಾಟ; ₹2.75 ಕೋಟಿ ಮೌಲ್ಯದ ವಸ್ತು ಜಪ್ತಿ

ಕೃಷಿ ಇಲಾಖೆ ಜಾಗೃತ ಕೋಶದಿಂದ ದಾಳಿ
Published 7 ಜೂನ್ 2024, 6:29 IST
Last Updated 7 ಜೂನ್ 2024, 6:29 IST
ಅಕ್ಷರ ಗಾತ್ರ

ಬೆಳಗಾವಿ: ಮುಂಗಾರು ಚುರುಕುಗೊಂಡಿದ್ದರಿಂದ ಈಗ ರೈತರು ಬಿತ್ತನೆಗೆ ಅಣಿಯಾಗಿದ್ದಾರೆ. ಬಿತ್ತನೆ ಬೀಜ, ರಸಗೊಬ್ಬರ ಮತ್ತು ಕೀಟನಾಶಕದ ಮಾರಾಟವೂ ಜೋರಾಗಿದೆ. ಇದೇ ಹೊತ್ತಿನಲ್ಲಿ ಕೆಲವರು ನಿಯಮ ಬಾಹಿರವಾದ ಉತ್ಪನ್ನಗಳನ್ನು ಮಾರಾಟ ಮಾಡಿ, ರೈತರಿಗೆ ವಂಚಿಸುತ್ತಿರುವ ಆರೋಪವೂ ಕೇಳಿಬರುತ್ತಿವೆ.

ಹಾಗಾಗಿ ಬೆಳಗಾವಿ ವಿಭಾಗದಲ್ಲಿ ಅನುಮತಿ ಪಡೆಯದೆ, ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕಗಳ ಮಾರಾಟ ಮತ್ತು ದಾಸ್ತಾನು ಮಾಡುವವರ ವಿರುದ್ಧ ಕೃಷಿ ಇಲಾಖೆ (ಸಚಿವಾಲಯ ವಿಭಾಗ) ಜಾಗೃತ ಕೋಶದವರು ಕಾರ್ಯಾಚರಣೆ ಚುರುಕುಗೊಳಿಸಿದ್ದಾರೆ.

ಕಳೆದ 14 ತಿಂಗಳಲ್ಲಿ ಕೃಷಿ ಪರಿಕರ ಮಾರಾಟ ಕೇಂದ್ರ ಮತ್ತು ಗೋದಾಮುಗಳ ಮೇಲೆ 92 ದಾಳಿ ನಡೆದಿದ್ದು, ₹2.75 ಕೋಟಿ ಮೌಲ್ಯದ ವಸ್ತು ಜಪ್ತಿ ಮಾಡಲಾಗಿದೆ.

ಹೊರರಾಜ್ಯದ ಉತ್ಪನ್ನಗಳು: ತೆಲಂಗಾಣ, ಆಂಧ್ರಪ್ರದೇಶ, ಗುಜರಾತ್‌, ಮಹಾರಾಷ್ಟ್ರದಿಂದ ನಿಯಮ ಬಾಹಿರವಾಗಿ ಬರುತ್ತಿರುವ ಉತ್ಪನ್ನಗಳನ್ನು ಸ್ಥಳೀಯ ಏಜೆಂಟರ ಮೂಲಕ ರೈತರಿಗೆ ಮಾರಾಟ ಮಾಡಿ ವಂಚಿಸಲಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ಇಂಥ ಉತ್ಪನ್ನ ಬಳಸಿ, ರೈತರು ಆರ್ಥಿಕ ನಷ್ಟ ಅನುಭವಿಸಿದ ಉದಾಹರಣೆಗಳೂ ಇವೆ. ಈ ಪ್ರಕರಣ ಮರುಕಳಿಸದಂತೆ ನಿಗಾ ವಹಿಸಲಾಗುತ್ತಿದೆ.

ಯಾರ ಮೇಲೆ ದಾಳಿ?: ‘ಕೆಲವು ಮಾರಾಟಗಾರರು ಅನುಮತಿ ಪಡೆಯದೆ ಕೃಷಿ ಪರಿಕರ ಮಾರುತ್ತಿದ್ದಾರೆ. ಅನಧಿಕೃತವಾದ ಕೀಟನಾಶಕ ಮಾರುವವರಿದ್ದಾರೆ. ಕೆಲವರು ಒಂದು ಉತ್ಪನ್ನಕ್ಕಷ್ಟೇ ಅನುಮತಿ ಪಡೆದು, ಹೆಚ್ಚಿನ ಉತ್ಪನ್ನ ಮಾರುತ್ತಾರೆ. ಬಳಕೆ ವಿಧಾನವನ್ನು ಕನ್ನಡದಲ್ಲಿ ತಿಳಿಸದೆ ಕೀಟನಾಶಕ, ರಸಗೊಬ್ಬರ ಮಾರುವವರಿದ್ದಾರೆ. ಇಂಥವರ ದಾಳಿ ಮಾಡುತ್ತಿದ್ದೇವೆ. ಆ ಮಾದರಿಗಳನ್ನು ಸಂಗ್ರಹಿಸಿ, ಪ್ರಯೋಗಾಲಯಕ್ಕೆ ಕಳುಹಿಸುತ್ತೇವೆ. ತಪ್ಪೆಸಗಿದವರ ವಿರುದ್ಧ ಜೆಎಂಎಫ್‌ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುತ್ತಿದ್ದೇವೆ’ ಎಂದು ಜಾಗೃತ ಕೋಶದ ಬೆಳಗಾವಿ ವಿಭಾಗದ ಸಹಾಯಕ ನಿರ್ದೇಶಕ ಮಹಾಂತೇಶ ಕಿಣಗಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರಸಕ್ತ ಸಾಲಿನ ಮುಂಗಾರು ಹಂಗಾಮು ಈಗಷ್ಟೇ ಚುರುಕು ಪಡೆದಿದೆ. ಆದರೆ, ರೈತರು ಮೋಸಕ್ಕೆ ಒಳಗಾಗುವುದನ್ನು ತಪ್ಪಿಸಿನಿಂದಲೇ ಈಗಿನಿಂದಲೇ ಜಾಗೃತಿ ಮೂಡಿಸುತ್ತಿದ್ದೇವೆ’ ಎಂದರು.

ಎಲ್ಲೆಲ್ಲಿ ಎಷ್ಟೆಷ್ಟು ಪ್ರಕರಣ?: ಜಾಗೃತ ಕೋಶದ ಬೆಳಗಾವಿ ವಿಭಾಗ ಏಳು ಜಿಲ್ಲೆಗಳ (ಬೆಳಗಾವಿ, ಬಾಗಲಕೋಟೆ, ವಿಜಯಪುರ, ಗದಗ, ಹಾವೇರಿ, ಉತ್ತರ ಕನ್ನಡ ಮತ್ತು ಧಾರವಾಡ) ವ್ಯಾಪ್ತಿ ಹೊಂದಿದೆ.

ಈ ಪೈಕಿ 2023ರ ಏಪ್ರಿಲ್‌ 1ರಿಂದ 2024ರ ಮಾರ್ಚ್‌ 31ರವರೆಗೆ 85 ದಾಳಿ ನಡೆದಿವೆ. ಈ ಪೈಕಿ ವಿಜಯಪುರ ಜಿಲ್ಲೆಯಲ್ಲಿ 18, ಹಾವೇರಿಯಲ್ಲಿ 17, ಧಾರವಾಡ, ಬೆಳಗಾವಿಯಲ್ಲಿ ತಲಾ 14, ಬಾಗಲಕೋಟೆಯಲ್ಲಿ 13, ಗದುಗಿನಲ್ಲಿ 8, ಉತ್ತರ ಕನ್ನಡದಲ್ಲಿ ಒಂದು ದಾಳಿಯಾಗಿದೆ. 6 ದಾಳಿಗಳಲ್ಲಿ ₹25.4 ಲಕ್ಷ ಮೌಲ್ಯದ ಬಿತ್ತನೆ ಬೀಜ, 29 ದಾಳಿಗಳಲ್ಲಿ ₹65.3 ಲಕ್ಷ ಮೌಲ್ಯದ ರಸಗೊಬ್ಬರ, 50 ದಾಳಿಗಳಲ್ಲಿ ₹1.67 ಕೋಟಿ ಮೌಲ್ಯದ ಕೀಟನಾಶಕ ವಶಕ್ಕೆ ಪಡೆಯಲಾಗಿದೆ.

2024ರ ಏಪ್ರಿಲ್‌ 1ರಿಂದ ಜೂನ್‌ 5ರವರೆಗೆ ವಿಜಯಪುರ, ಬಾಗಲಕೋಟೆ, ಧಾರವಾಡದಲ್ಲಿ ತಲಾ 2, ಹಾವೇರಿಯಲ್ಲಿ 1 ಸೇರಿದಂತೆ ಏಳು ದಾಳಿ ನಡೆದಿದ್ದು, ₹17.1 ಲಕ್ಷ ಮೌಲ್ಯದ ಬಿತ್ತನೆ ಬೀಜ ಮತ್ತು ಕೀಟನಾಶಕ ವಶಪಡಿಸಿಕೊಳ್ಳಲಾಗಿದೆ.

ಏನು ಮಾಡಬೇಕು?

‘ರೈತರು ಯಾವುದೇ ಕೃಷಿ ಪರಿಕರ ಖರೀದಿಸಿದರೂ ಕಡ್ಡಾಯವಾಗಿ ರಸೀದಿ ಪಡೆಯಬೇಕು. ಬಿತ್ತನೆ ಬೀಜಗಳ ಪ್ಯಾಕೆಟ್‌ ಒಂದಿಷ್ಟು ಕಾಳು ತೆಗೆದಿರಿಸಬೇಕು. ಭೂಮಿಯ ತೇವಾಂಶ ಸರಿಯಾಗಿರುವುದನ್ನು ಖಾತ್ರಿಪಡಿಸಿಕೊಂಡೇ ಬಿತ್ತನೆ ಮಾಡಬೇಕು’ ಎಂದು ಅಧಿಕಾರಿಗಳು ಹೇಳುತ್ತಾರೆ.

ಬಿತ್ತನೆ ಬೀಜ ರಸಗೊಬ್ಬರ ಕೀಟನಾಶಕ ಖರೀದಿಸುವಾಗ ರೈತರು ಎಚ್ಚರ ವಹಿಸಬೇಕು. ಅಧಿಕೃತ ಮಾರಾಟಗಾರರಿಂದಲೇ ಕೃಷಿ ‍ಪರಿಕರ ಖರೀದಿಸಬೇಕು
–ರಾಜಶೇಖರ ಬಿಜಾಪುರ, ಜಂಟಿನಿರ್ದೇಶಕ ಜಾಗೃತ ಕೋಶ ಕೃಷಿ ಇಲಾಖೆ ಬೆಳಗಾವಿ ವಿಭಾಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT