ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ಕ ಇವತ್ತು ಒಂದು ಪೆಗ್‌ ಹೆಚ್ಚು ಕುಡಿಯಬೇಕಾಗುತ್ತದೆ.. ಸಂಜಯ್ ಪಾಟೀಲ ವ್ಯಂಗ್ಯ

ಸಚಿವೆ ಲಕ್ಷ್ಮಿ ಹೆಬ್ಬಾಳಕರಗೆ ಬಿಜೆಪಿ ನಾಯಕ ಸಂಜಯ್ ಪಾಟೀಲ ಪರೋಕ್ಷ ಟಾಂಗ್
Published 13 ಏಪ್ರಿಲ್ 2024, 12:56 IST
Last Updated 13 ಏಪ್ರಿಲ್ 2024, 12:56 IST
ಅಕ್ಷರ ಗಾತ್ರ

ಬೆಳಗಾವಿ: ‘ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿಗೆ ಸಿಕ್ಕ ಬೆಂಬಲ ನೋಡಿದರೆ ‘ಅಕ್ಕ’ ನಿದ್ದೆಗೆಡುತ್ತಾರೆ. ಅವರಿಂದು ನಿದ್ದೆ ಮಾತ್ರೆ ತೆಗೆದುಕೊಳ್ಳಬೇಕು ಇಲ್ಲವೇ ಒಂದು ‘ಪೆಗ್‌’ ಹೆಚ್ಚುವರಿ ಕುಡಿಯಬೇಕು’ ಎಂದು ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಉಸ್ತುವಾರಿ ಸಂಜಯ ಪಾಟೀಲ ಅವರು, ಸಚಿವೆ ಲಕ್ಷ್ಮಿ ಹೆಬ್ಬಾಳಕರ ಹೆಸರು ಹೇಳದೇ ಮೂದಲಿಸಿದರು.

ಸಮೀಪದ ಹಿಂಡಲಗಾದಲ್ಲಿ ಶನಿವಾರ ನಡೆದ ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ‘ಅಕ್ಕನ ಕ್ಷೇತ್ರದಲ್ಲಿಯೇ ಬಿಜೆಪಿ ಸಮಾವೇಶದಲ್ಲಿ ಅಪಾರ ಸಂಖ್ಯೆಯ ಮಹಿಳೆಯರು ಸೇರಿದ್ದಾರೆ. ಅಕ್ಕ ನಿದ್ದೆಗೆಡುವುದು ಗ್ಯಾರಂಟಿ’ ಎಂದರು.

‘ಬೆಳಗಾವಿಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸೋತರೆ ₹2,000 ಬಂದ್‌ ಮಾಡುತ್ತೇನೆ, ಉಚಿತ ವಿದ್ಯುತ್‌, ಉಚಿತ ಬಸ್‌ ಪ್ರಯಾಣ ಎಲ್ಲ ಬಂದ್‌ ಮಾಡುತ್ತೇನೆ ಎಂದು ಸಚಿವೆ ಮಹಿಳೆಯರಿಗೆ ಬೆದರಿಕೆ ಹಾಕುತ್ತಿದ್ದಾರೆ. ಇವರೇನು ಇವರಪ್ಪನ ಮನೆಯ ಹಣ ಕೊಡುತ್ತಿಲ್ಲ. ನಿಮ್ಮದೇ ಹಣವನ್ನು ತೆರಿಗೆ ರೂಪದಲ್ಲಿ ಪಡೆದು ನಿಮಗೇ ಕೊಡುತ್ತಿದ್ದಾರೆ. ಯಾರೂ ಇಂಥ ಧಮ್ಕಿಗೆ ಹೆದರಬೇಡಿ’ ಎಂದರು.

‘ನೀವೆಲ್ಲ ಜೀಜಾಮಾತೆಯ ಕುಡಿಗಳು. ಜೀಜಾಮಾತೆ ಇದ್ದ ಕಾರಣಕ್ಕೆ ಶಿವಾಜಿ ಮಹಾರಾಜ ಸೃಷ್ಟಿಯಾದ. ಹಿಂದೂ ಸಾಮ್ರಾಜ್ಯ ಉಳಿಸಿದ. ಇಂಥ ಇತಿಹಾಸ ಇರುವ ನೀವು ಒಬ್ಬ ಸಚಿವೆಗೆ ಹೆದರಬೇಕಿಲ್ಲ. ಈ ಸಚಿವೆಯ ಆಟ ಮುಗಿದಿದೆ. ಇವರ ತಲವಾರು ಹರಿತವಾಗಿ ಉಳಿದಿಲ್ಲ, ಕುಕ್ಕರ್‌ನಲ್ಲಿ ಸೀಟಿ ಇಲ್ಲ, ಇವರ ಮಾತಿಗೆ ಬೆಲೆ ಉಳಿದಿಲ್ಲ’ ಎಂದೂ ಟೀಕಿಸಿದರು.

ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಮಾತನಾಡಿ, ‘ಈ ಚುನಾವಣೆ ಮುಗಿದ ಬಳಿಕ ಎಲ್ಲ ಗ್ಯಾರಂಟಿಗಳೂ ಬಂದ್‌ ಆಗುತ್ತವೆ. ಆಗ ರಾಜ್ಯದಲ್ಲಿ ಮತ್ತೆ ಡಬಲ್‌ ಎಂಜಿನ್‌ ಸರ್ಕಾರ ಬರುತ್ತದೆ’ ಎಂದರು.

‘ಚುನಾವಣೆ ಮುಗಿಯುವರೆಗೆ ಯಾರ ವಿರುದ್ಧವೂ ಮಾತನಾಡುವುದಿಲ್ಲ ಎಂದು ನಾನು ನನ್ನ ತಮ್ಮ ಬಾಲಚಂದ್ರ ಜಾರಕಿಹೊಳಿಗೆ ಮಾತು ಕೊಟ್ಟಿದ್ದೇನೆ. ಯಾರಿಗೋ ಹೆದರಿ ಮಾತು ನಿಲ್ಲಿಸಿಲ್ಲ. ಆದರೆ, ನಾನು ಹೆದರಿಬಿಟ್ಟಿದ್ದೇನೆ ಎಂದು ‘ಅವರು’ ಭ್ರಮೆಯಲ್ಲಿದ್ದಾರೆ. ಚುನಾವಣೆ ಬಳಿಕ ನಾನು ಯಾರೆಂದು ತೋರಿಸುತ್ತೇನೆ’ ಎಂದರು.

ಅಭ್ಯರ್ಥಿ ಜಗದೀಶ ಶೆಟ್ಟರ್‌ ಸೇರಿದಂತೆ ಹಲವು ಮುಖಂಡರು ವೇದಿಕೆ ಮೇಲಿದ್ದರು.

ಮಹಿಳಾ ಕುಲಕ್ಕೆ ಬಿಜೆಪಿಯಿಂದ ಅವಮಾನ: ಲಕ್ಷ್ಮಿ ಹೆಬ್ಬಾಳಕರ

‘ಸಂಜಯ ಪಾಟೀಲ ಅವರು ನನ್ನ ಬಗ್ಗೆ ಕೀಳಾದ ಪದ ಬಳಸಿ, ನೀಚತನದಿಂದ ಆರೋಪ ಮಾಡಿದ್ದಾರೆ. ರಾಜ್ಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಗೆ ಸಚಿವೆಯಾಗಿ ನಾನೇ ಇವರಿಂದ ಇಂಥ ಅವಮಾನ ಎದುರಿಸಬೇಕಾಗಿದೆ. ಮಹಿಳಾ ಕುಲಕ್ಕೆ ಬಿಜೆಪಿ ನೀಡುವ ಗೌರವ ಇದೇನಾ’ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳಕರ ವಿಡಿಯೊ ಹೇಳಿಕೆ ಮೂಲಕ ತಿರುಗೇಟು ನೀಡಿದ್ದಾರೆ.

‘ಬರೀ ಬಾಯಿ ಮಾತಿನಲ್ಲಿ ರಾಮರಾಮ ಎಂದರೆ ಸಾಲುವುದಿಲ್ಲ. ಭೇಟಿ ಬಚಾವೊ– ಭೇಟಿ ಪಢಾವೊ ಎಂದರೆ ಮುಗಿಯುವುದಿಲ್ಲ. ಮಹಿಳೆಗೆ ಗೌರವ ಕೊಡುವುದು ಹಿಂದೂ ಸಂಸ್ಕೃತಿ. ಬಿಜೆಪಿಯ ಮಾಜಿ ಶಾಸಕರೂ ಆದ ಸಂಜಯ ಪಾಟೀಲ ಇಡೀ ರಾಜ್ಯದ ಮಹಿಳೆಯರಿಗೆ ಅವಮಾನ ಮಾಡಿದ್ದಾರೆ’ ಎಂದು ಟೀಕಿಸಿದ್ದಾರೆ.

‘ಅಚ್ಚರಿಯೆಂದರೆ; ಸಂಜಯ ಅವರು ಅವಮಾನಕರವಾಗಿ ಮಾತನಾಡಿದ್ದಕ್ಕೆ ವೇದಿಕೆ ಮೇಲಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌, ಸಂಸದೆ ಮಂಗಲಾ ಅಂಗಡಿ ಕೂಡ ನಕ್ಕಿದ್ದಾರೆ. ಇದೇ ಬಿಜೆಪಿ ಅಜೆಂಡ ಎಂದು ಒ‍ಪ್ಪಿಕೊಂಡಿದ್ದಾರೆ. ಯಾರಾದರೂ ಒಬ್ಬರು ಪ್ರಜ್ಞಾವಂತರಂತೆ ವರ್ತಿಸಿ ಅವರ ಮಾತಿಗೆ ಕಡಿವಾಣ ಹಾಕಿದ್ದರೆ ಒಪ್ಪಿಕೊಳ್ಳಬಹುದಿತ್ತು’ ಎಂದೂ ಹೇಳಿದ್ದಾರೆ.

‘ರಾಜ್ಯದ ಮಹಿಳೆಯರು ನಾಳೆಯಿಂದಲೇ ಈ ಹೇಳಿಕೆ ವಿರುದ್ಧ, ಬಿಜೆಪಿ ವಿರುದ್ಧ ಖಂಡನೆ ಮಾಡಬೇಕು’ ಎಂದೂ ಅವರು ಕರೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT