ಶನಿವಾರ, 25 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಕ್ಷ್ಮಿ ಹೆಬ್ಬಾಳಕರ ಪಂಚಮಸಾಲಿ ಸಮುದಾಯಕ್ಕೆ ಸೇರಿದವರಲ್ಲ- ನಿರಾಣಿ ತಿರುಗೇಟು

Published 8 ಏಪ್ರಿಲ್ 2024, 9:21 IST
Last Updated 8 ಏಪ್ರಿಲ್ 2024, 9:21 IST
ಅಕ್ಷರ ಗಾತ್ರ

ಬೆಳಗಾವಿ: ‘ಸಚಿವೆ ಲಕ್ಷ್ಮಿ ಹೆಬ್ಬಾಳಕರ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಸೇರಿದವರಲ್ಲ. ಅವರು ಲಿಂಗಾಯತ ಬಣಜಿಗ ಸಮುದಾಯದವರು. ಕಿತ್ತೂರು ರಾಣಿ ಚನ್ನಮ್ಮನೊಂದಿಗೆ ಹೋಲಿಕೆ ಮಾಡಿಕೊಳ್ಳುವ ಅಧಿಕಾರ ನನಗೂ ಇಲ್ಲ, ಅವರಿಗೂ ಇಲ್ಲ’ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಮುರುಗೇಶ ನಿರಾಣಿ ತಿರುಗೇಟು ನೀಡಿದರು.

‘ನಾನು ರಾಣಿ ಚನ್ನಮ್ಮನ ವಂಶಸ್ಥಳು. ನನ್ನ ಮೈಯಲ್ಲಿ ಪಂಚಮಸಾಲಿ ರಕ್ತ ಹರಿಯುತ್ತಿದೆ’ ಎಂಬ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಹೇಳಿಕೆಗೆ, ಇಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಅವರು ಹೀಗೆ ಪ್ರತಿಕ್ರಿಯಿಸಿದರು.

‘ಬ್ರಿಟಿಷರ ವಿರುದ್ಧ ಹೋರಾಡಿದ ವೀರಮಹಿಳೆ ರಾಣಿ ಚನ್ನಮ್ಮ. ಈಗಷ್ಟೇ ಮಂತ್ರಿ ಆಗಿದ್ದೇನೆ ಎನ್ನುವ ಕಾರಣಕ್ಕೆ ಲಕ್ಷ್ಮಿ ಹೆಬ್ಬಾಳಕರ ಜೋರಾಗಿ ಮಾತನಾಡಬಾರದು. ಮದುವೆ ಆಗುವ ಮುನ್ನ, ಅವರು ಪಂಚಮಸಾಲಿ ಸಮುದಾಯಕ್ಕೆ ಸೇರಿದ್ದರು. ನಂತರ ಬಣಜಿಗ ಸಮುದಾಯದ ರವೀಂದ್ರ ಹೆಬ್ಬಾಳಕರ ‌ಅವರೊಂದಿಗೆ ವಿವಾಹವಾದರು. ಹಿಂದೂ ಪರಂಪರೆಯಂತೆ ಹೆಣ್ಣು ಮಕ್ಕಳು ಪತಿಯ ಜಾತಿಗೆ ಸೇರುತ್ತಾರೆ. ಹಾಗಾಗಿ ಮದುವೆಯಾದ ನಂತರ ಲಕ್ಷ್ಮಿ ಬಣಜಿಗ ಸಮಾಜದವರಾಗಿದ್ದಾರೆ. ನನ್ನ ಮೈಯಲ್ಲಿ ಪಂಚಮಸಾಲಿ ರಕ್ತ ಹರಿಯುತ್ತಿದೆ ಎನ್ನುವುದು ಸೂಕ್ತವಲ್ಲ’ ಎಂದರು.

‘ಬೆಳಗಾವಿ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಸಹ ಬಣಜಿಗ ಸಮುದಾಯದವರು. ಈ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಪಂಚಮಸಾಲಿ ಸಮುದಾಯದ ಮತಗಳನ್ನು ಸೆಳೆಯಲು ಲಕ್ಷ್ಮಿ ಅಪ್ಪಟ ಸುಳ್ಳು ಹೇಳುತ್ತಿದ್ದಾರೆ. ಮೃಣಾಲ್‌ ‌ಪಂಚಮಸಾಲಿ ‌ಆಗಲು ಸಾಧ್ಯವೇ ಇಲ್ಲ’ ಎಂದು ಸವಾಲು ಹಾಕಿದರು.

‘ಪಂಚಮಸಾಲಿ ಸಮುದಾಯಕ್ಕೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಪ್ರವರ್ಗ ‘2ಎ’ ಮೀಸಲಾತಿ ಕೊಡಿಸಿದರೆ, ಬೆಳಗಾವಿಯಿಂದ ಕುಂದಾ ತಂದು ನಿಮ್ಮನ್ನು ಸನ್ಮಾನಿಸುವೆ ಎಂದು ಲಕ್ಷ್ಮಿ ಹೇಳಿದ್ದರು. ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದರೆ ಮೂರೇ ತಿಂಗಳಲ್ಲಿ ಮೀಸಲಾತಿ ಕೊಡಿಸುವೆ. ನಾನು ಮೀಸಲಾತಿ ಕೊಡಿಸಿದರೆ, ಚಿನ್ನದ ಬಳೆ ಕೊಟ್ಟು ಸನ್ಮಾನಿಸಬೇಕು ಎಂದಿದ್ದರು. ಈಗ ನಿಮ್ಮ ಸರ್ಕಾರವೂ ಬಂದಿದೆ. ಮಂತ್ರಿಯೂ ಆಗಿದ್ದೀರಿ. ಆದರೂ, ಮೀಸಲಾತಿ ನೀಡುತ್ತಿಲ್ಲವೇಕೆ’ ಎಂದು ಪ್ರಶ್ನಿಸಿದರು.

‘ನಮ್ಮ ಸರ್ಕಾರ ಪಂಚಮಸಾಲಿ ಸಮುದಾಯಕ್ಕೆ ಅನ್ಯಾಯ ಮಾಡದೆ, ‘2ಡಿ’ ಮೀಸಲಾತಿ ಘೋಷಿಸಿತ್ತು. ಸಚಿವೆ ಹೆಬ್ಬಾಳಕರ ನಿಜವಾಗಿಯೂ ಪಂಚಮಸಾಲಿ ‌ಸಮುದಾಯದವರಾಗಿದ್ದರೆ, ‘2ಎ’ ಮೀಸಲಾತಿ ಕೊಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹೇಳುತ್ತಿದ್ದರು’ ಎಂದ ನಿರಾಣಿ, ‘ಈಗ ಹೆಬ್ಬಾಳಕರ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಮೀಸಲಾತಿ ಸಿಕ್ಕ ಬಳಿಕವೇ ಸಂಪುಟ ಸೇರಬೇಕು. ನಮ್ಮ ಸಮಾಜಕ್ಕೆ ಮೀಸಲಾತಿ ಸಿಕ್ಕರೆ, ಹೆಬ್ಬಾಳಕರ ಅವರಿಗೆ 1 ಕೆ.ಜಿ ಚಿನ್ನಾಭರಣ ನೀಡಿ ಸನ್ಮಾನಿಸುತ್ತೇವೆ. ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಭೇಟಿಯಾಗಿ, ಅವರಿಗೆ ಇದಕ್ಕಿಂತ ಹೆಚ್ಚಿನ ಸ್ಥಾನಮಾನ ನೀಡುವಂತೆ ಒತ್ತಾಯಿಸುತ್ತೇವೆ’ ಎಂದು ಹೇಳಿದರು.

‘ನಮ್ಮ ಮೀಸಲಾತಿ ಹೋರಾಟ ಕಳೆದ 25 ವರ್ಷಗಳಿಂದ ನಡೆಯುತ್ತಿದೆ. ಆದರೆ, ಹೆಬ್ಬಾಳಕರ ಮೂರ್ನಾಲ್ಕು ವರ್ಷಗಳಿಂದ ಹೋರಾಟದಲ್ಲಿ ಭಾಗವಹಿಸುತ್ತಿದ್ದಾರೆ’ ಎಂದರು.

‘ಜಗದೀಶ ಶೆಟ್ಟರ್ ಹೊರಗಿನವರು’ ಎಂಬ ಹೆಬ್ಬಾಳಕರ ಹೇಳಿಕೆಗೆ ತಿರುಗೇಟು ನೀಡಿದ ನಿರಾಣಿ, ‘ಅಮ್ಮಾ ನೀವೇ ಬೆಳಗಾವಿಯವರಲ್ಲ. ಖಾನಾಪುರ ತಾಲ್ಲೂಕಿನ ಹಟ್ಟಿಹೊಳಿಯವರು. ಇದು ಕೆನರಾ ಲೋಕಸಭೆ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಆದರೆ, ಬೆಳಗಾವಿ ಗ್ರಾಮೀಣ ಕ್ಷೇತ್ರಕ್ಕೆ ಬಂದು ಶಾಸಕಿಯಾಗಿದ್ದಾರೆ. ಇದನ್ನು ಬೆಳಗಾವಿ ಜನರು ನಿಮ್ಮನ್ನು ‌ಪ್ರಶ್ನಿಸಿಲ್ಲ. ಇಂದಿರಾ ಗಾಂಧಿ, ಸೋನಿಯಾ ಗಾಂಧಿ, ಸಿದ್ದರಾಮಯ್ಯ ಬೇರೆ ಬೇರೆ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದಾರೆ. ಶೆಟ್ಟರ್ ಬೆಳಗಾವಿ ‌ಅಷ್ಟೇ ಅಲ್ಲ; ಭಾರತದಲ್ಲಿ ಎಲ್ಲಿ ಬೇಕಾದರೂ ಸ್ಪರ್ಧೆ ಮಾಡುವ ಹಕ್ಕು ಹೊಂದಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT