ಚಿಕ್ಕೋಡಿ: ‘ಕನ್ನಡ-ಕನ್ನಡಿಗ-ಕರ್ನಾಟಕ’ ಎಂಬ ಧ್ಯೇಯವಾಕ್ಯವನ್ನೇ ಉಸಿರಾಗಿಸಿಕೊಂಡಿದ್ದ ತಾಲ್ಲೂಕಿನ ಚಿಂಚಣಿಯ ಸಿದ್ಧಸಂಸ್ಥಾನ ಮಠದ ಅಲ್ಲಮಪ್ರಭು ಸ್ವಾಮೀಜಿ ಅಗಲಿಕೆಯಿಂದ ಗಡಿಭಾಗದಲ್ಲಿ ಶೋಕ ಮಡುಗಟ್ಟಿದೆ. ‘ಬೆಳಕಿನ ಹಬ್ಬ’ದ ಹಬ್ಬದ ಸಂಭ್ರಮದಲ್ಲಿದ್ದ ಗಡಿನಾಡಿನ ಜನರಿಗೆ ಶ್ರೀಗಳ ಸಾವಿನ ಸುದ್ದಿ ಕೇಳಿ ಬರಸಿಡಿಲು ಬಡಿದಂತಾಗಿದೆ.
ಚಿಂಚಣಿಯಲ್ಲಿ ಭಾನುವಾರ ನೀರವ ಮೌನ ಆವರಿಸಿತ್ತು. ಶ್ರೀಗಳ ಅಂತಿಮ ದರ್ಶನ ಪಡೆಯಲು ಬೆಳಿಗ್ಗೆಯಿಂದಲೇ ಭಕ್ತರು ಮಠದತ್ತ ಧಾವಿಸಿದರು. ಮಧ್ಯಾಹ್ನ 1.30ಕ್ಕೆ ಪಾರ್ಥಿವ ಶರೀರವನ್ನು ಮಠಕ್ಕೆ ತರುತ್ತಿದ್ದಂತೆ, ಭಕ್ತಗಣ ರೋದಿಸುತ್ತಿದ್ದ ದೃಶ್ಯ ಮನ ಕಲಕುವಂತಿತ್ತು.
ಮಠದ ಪ್ರಾಂಗಣದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಶ್ರೀಶೈಲದ ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಗದುಗಿನ ತೋಂಟದ ಸಿದ್ಧರಾಮ ಸ್ವಾಮೀಜಿ, ನಿಡಸೋಸಿಯ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ, ನಾಗನೂರು ರುದ್ರಾಕ್ಷಿಮಠದ ಡಾ.ಅಲ್ಲಮಪ್ರಭು ಸ್ವಾಮೀಜಿ, ಹುಕ್ಕೇರಿಯ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಬೈಲೂರಿನ ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ, ಕನೇರಿ ಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ, ಚಿಕ್ಕೋಡಿಯ ಸಂಪಾದನಾ ಸ್ವಾಮೀಜಿ, ಯರನಾಳದ ಬ್ರಹ್ಮಾನಂದ ಸ್ವಾಮೀಜಿ, ನಂದಿಕುರಳಿಯ ವೀರಭದ್ರೇಶ್ವರ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರು, ಸಂಸದ ಅಣ್ಣಾಸಾಹೇಬ ಜೊಲ್ಲೆ, ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ, ನಿರ್ದೇಶಕ ಮಹಾಂತೇಶ ಕವಟಗಿಮಠ, ಜಗದೀಶ ಕವಟಗಿಮಠ, ಚಂದ್ರಕಾಂತ ಕೋಠಿವಾಲೆ ಮತ್ತಿತರರು ಶ್ರೀಗಳಿಗೆ ಅಂತಿಮ ನಮನ ಸಲ್ಲಿಸಿದರು.
ಬಳಿಕ ಧಾರ್ಮಿಕ ವಿಧಿ–ವಿಧಾನ ಕೈಗೊಂಡು ಊರಲ್ಲಿ ಅಂತಿಮ ಯಾತ್ರೆ ನಡೆಸಲಾಯಿತು. ಗ್ರಾಮಸ್ಥರು ಸ್ವಯಂ ಪ್ರೇರಣೆಯಿಂದ ಅಂಗಡಿ–ಮುಂಗಟ್ಟುಗಳನ್ನು ಮುಚ್ಚಿ, ಶ್ರೀಗಳಿಗೆ ಗೌರವ ಸಲ್ಲಿಸಿದರು. ಡಿವೈಎಸ್ಪಿ ಗೋಪಾಲಕೃಷ್ಣ ಗೌಡರ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.
ಕನ್ನಡದ ಕಾಯಕ ಯೋಗಿ:
ಬಸವ ಕಾಯಕದೊಂದಿಗೆ ಕನ್ನಡದ ದೀಕ್ಷೆ ತೊಟ್ಟು, ಗಡಿನೆಲದಲ್ಲಿ ಕನ್ನಡ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಅಲ್ಲಮಪ್ರಭು ರಚನಾತ್ಮಕ ಕಾರ್ಯಕ್ರಮ ಹಮ್ಮಿಕೊಳ್ಳುತ್ತ ಬಂದಿದ್ದರು.
1994ರಲ್ಲಿ ಮಠದ ಪೀಠಾಧಿಪತಿಯಾಗಿ ಅಧಿಕಾರ ವಹಿಸಿಕೊಂಡ ಅವರು, ಧರ್ಮ ಪ್ರಸಾರದೊಂದಿಗೆ ಕನ್ನಡ ನಾಡು–ನುಡಿ, ಸಾಹಿತ್ಯ, ಸಂಸ್ಕೃತಿ ರಕ್ಷಣೆಗೂ ಕಂಕಣಬದ್ಧರಾಗಿದ್ದರು. ಪ್ರತಿವರ್ಷ ನ.2ರಂದು ಕರ್ನಾಟಕ ರಾಜ್ಯೋತ್ಸವ ಅರ್ಥಪೂರ್ಣವಾಗಿ ಆಚರಿಸುತ್ತಿದ್ದರು. ನಾಡಿನ ಹಲವು ವಿದ್ವಾಂಸರು, ಸಾಹಿತಿಗಳು, ಕಲಾವಿದರನ್ನು ಗಡಿನಾಡಿಗೆ ಕರೆತಂದು ಜನರಲ್ಲಿ ಕನ್ನಡದ ಬಗ್ಗೆ ಅಭಿಮಾನ ಮೂಡಿಸಿದ್ದರು. 51 ಮೌಲಿಕ ಕೃತಿಗಳನ್ನು ಪ್ರಕಟಿಸಿ, ಕನ್ನಡ-ಮರಾಠಿ ಸಾಹಿತ್ಯಿಕ ಕೊಡು–ಕೊಳ್ಳುವಿಕೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದರು. ನಾಥ ಸಂಪ್ರದಾಯ, ಕೊಲ್ಹಾಪುರದ ಮಹಾಲಕ್ಷ್ಮಿ ಸೇರಿದಂತೆ ಹಲವು ವಿಷಯಗಳ ಮರಾಠಿ ಕೃತಿಗಳನ್ನು ಅನುವಾದಿಸಿ, ಕನ್ನಡ ಸಾರಸ್ವತ ಲೋಕ ಶ್ರೀಮಂತಗೊಳಿಸಿದ್ದರು.
ಕನ್ನಡ ಮತ್ತು ಕರ್ನಾಟಕಕ್ಕೆ ಸಂಬಂಧಿಸಿದ ಹಲವು ಮಹತ್ವದ ದಾಖಲೆಗಳನ್ನು ಸಂಗ್ರಹಿಸಿದ್ದರು. ನಾಡು–ನುಡಿ, ಸಾಹಿತ್ಯ ಮತ್ತು ಸಂಸ್ಕೃತಿ ಪ್ರತಿಬಿಂಬಿಸುವ ‘ಸಿರಿಗನ್ನಡ ತೇರು’ ನಿರ್ಮಿಸಿ ನಾಡಿಗೆ ಮಾದರಿಯಾಗಿದ್ದರು. ಚಿಂಚಣಿಯಲ್ಲಿ ಬಸವ ಪುರಾಣವನ್ನು ಏರ್ಪಡಿಸುವ ಮೂಲಕ ಗಡಿನಾಡಿನಲ್ಲಿ ಧರ್ಮ ಜಾಗೃತಿ ಮೂಡಿಸಿದ್ದರು.
ಪರಿಸರಪ್ರಿಯರಾಗಿದ್ದ ಅಲ್ಲಮಪ್ರಭು ಸ್ವಾಮೀಜಿ, ಬೋನ್ಸಾಯ್ ಗಿಡಗಳನ್ನು ಬೆಳೆಯುವ ಕಲೆ ಕರಗತ ಮಾಡಿಕೊಂಡಿದ್ದರು. ಮಠದ ಆವರಣದಲ್ಲಿ ನೂರಾರು ಬೋನ್ಸಾಯ್ ಗಿಡಗಳನ್ನು ಬೆಳೆಸಿದ್ದರು. ಮಠದ ಜಮೀನಿನಲ್ಲಿ ಸಾವಿರಾರು ಸಸಿ ನೆಟ್ಟು ಬೆಳೆಸಿದ್ದಾರೆ. ದೇಶ–ವಿದೇಶಗಳ ಕರೆನ್ಸಿ ಸಂಗ್ರಹಿಸುವ ಹವ್ಯಾಸ ಅವರದ್ದಾಗಿತ್ತು. ಚುಕ್ಕಿ ಚಿತ್ರಗಳನ್ನು ಬಿಡಿಸುವ ಕಲೆ ಅವರಿಗೆ ಒಲಿದಿತ್ತು.
ಅಲ್ಲಮಪ್ರಭು ಸ್ವಾಮೀಜಿ ಚಿಂಚಣಿ ಮಠವನ್ನು ಕನ್ನಡದ ಮಠವನ್ನಾಗಿ ಪರಿವರ್ತಿಸಿದ್ದರು. ಕನ್ನಡ, ಮರಾಠಿ ಸಂಸ್ಕೃತಿ ಬೆಸೆದ ಅವರು, ಈ ಭಾಗದಲ್ಲಿ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ಕೊಟ್ಟಿದ್ದರು. ಜನಪ್ರತಿನಿಧಿಗಳ ಮೇಲೆ ಒತ್ತಡ ತಂದು, ರೈತರಿಗಾಗಿ ನೀರಾವರಿ ವ್ಯವಸ್ಥೆ ಮಾಡಿಸಿದ್ದರು. ಇಂದು ಅವರು ನಮ್ಮ ಮಧ್ಯೆ ಇಲ್ಲದಿರುವುದು ವಿಷಾದ ಸಂಗತಿ-ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ, ನಿಡಸೋಸಿ
ಯುವ ಮಠಾಧೀಶರಾಗಿ ಚಿಂಚಣಿ ಮಠಕ್ಕೆ ಬಂದು, ಮೂರು ದಶಕಗಳಿಂದ ತಮ್ಮ ಜವಾಬ್ದಾರಿ ಸಮರ್ಥವಾಗಿ ನಿಭಾಯಿಸಿದ್ದರು. ಕ್ರಿಯಾಶೀಲ ಜಂಗಮರಾಗಿದ್ದ ಪೂಜ್ಯರು, ಸಮಾಜಕ್ಕೆ ಅಪಾರವಾದ ಕೊಡುಗೆ ನೀಡಿ ಯುವಪೀಳಿಗೆಗೆ ಆದರ್ಶಪ್ರಾಯರಾಗಿದ್ದರು. ಧರ್ಮ, ತತ್ವ, ಇತಿಹಾಸ, ಸಾಹಿತ್ಯ, ಕನ್ನಡಪ್ರಜ್ಞೆ ಹೀಗೆ... ವಿವಿಧ ನೆಲೆಗಟ್ಟಿನಲ್ಲಿ 51ಕ್ಕೂ ಹೆಚ್ಚು ಮೌಲಿಕ ಗ್ರಂಥಗಳನ್ನು ಪ್ರಕಟಿಸಿರುವುದು ಅವರ ಪುಸ್ತಕ ಪ್ರೀತಿಗೆ ಸಾಕ್ಷಿ. ಕೆಎಲ್ಇ ಸಂಸ್ಥೆಯೊಂದಿಗೆ ಭಾವನಾತ್ಮಕವಾದ ಒಡನಾಟ ಹೊಂದಿದ್ದ ಶ್ರೀಗಳ ನಿಧನದಿಂದ ನಾಡಿಗೆ ತುಂಬಲಾರದ ಹಾನಿಯಾಗಿದೆ.-ಪ್ರಭಾಕರ ಕೋರೆ, ಕಾರ್ಯಾಧ್ಯಕ್ಷ, ಕೆಎಲ್ಇ ಸಂಸ್ಥೆ
‘ಕನ್ನಡದ ಸ್ವಾಮೀಜಿ’ ಎಂದೇ ಖ್ಯಾತರಾಗಿದ್ದ ಅಲ್ಲಮಪ್ರಭು ಸ್ವಾಮೀಜಿ ಲಿಂಗೈಕ್ಯರಾದ ಸುದ್ದಿ ತಿಳಿದು ಅತೀವ ದುಃಖವಾಗಿದೆ. ಗಡಿಯಲ್ಲಿ ಹಲವು ದಶಕಗಳಿಂದ ಕನ್ನಡಪರ ಕಾರ್ಯಕ್ರಮಗಳನ್ನು ಆಯೋಜಿಸಿ, ಜನರ ಮನಗೆದ್ದಿದ್ದರುಅಣ್ಣಾಸಾಹೇಬ ಜೊಲ್ಲೆ, ಸಂಸದ
ಅಲ್ಲಮಪ್ರಭು ಸ್ವಾಮೀಜಿ ಗಡಿನಾಡಿನಲ್ಲಿ ಕನ್ನಡ ಕಟ್ಟುವ ಕೆಲಸವನ್ನು ಪರಿಣಾಮಕಾರಿಯಾಗಿ ಮಾಡಿದ್ದರು. ಸದಾ ಕ್ರಿಯಾಶೀಲ ಮತ್ತು ಅಧ್ಯಯನಶೀಲರಾಗಿದ್ದರು. ಭೇಟಿಯಾದಾಗಲೆಲ್ಲ ನನಗೆ ಪುಸ್ತಕ ನೀಡಿ, ಓದಲು ಪ್ರೇರೇಪಿಸುತ್ತಿದ್ದರು. ಅವರ ಅಗಲಿಕೆ ದುಃಖ ತರಿಸಿದೆ-ಮಹಾಂತೇಶ ಕವಟಗಿಮಠ, ನಿರ್ದೇಶಕ, ಕೆಎಲ್‌ಇ ಸಂಸ್ಥೆ
ಚಿಂಚಣಿಯ ಮಠದ ಅಲ್ಲಮಪ್ರಭು ಸ್ವಾಮೀಜಿ ಬಸವ ತತ್ವಗಳನ್ನು ಪ್ರಚುರಪಡಿಸುತ್ತಲೇ, ನಾಡು–ನುಡಿ ರಕ್ಷಣೆಗಾಗಿ ಹಲವು ರಚನಾತ್ಮಕ ಕಾರ್ಯಕ್ರಮ ನಡೆಸಿಕೊಂಡು ಬಂದಿದ್ದರು. ಜನರಲ್ಲಿ ಕನ್ನಡ ಪ್ರಜ್ಞೆ ಮೂಡಿಸುವಲ್ಲಿ ಸಫಲವಾಗಿದ್ದರು-ಶಶಿಕಲಾ ಜೊಲ್ಲೆ, ಶಾಸಕಿ, ನಿಪ್ಪಾಣಿ
ಗಡಿಭಾಗದಲ್ಲಿ ಕನ್ನಡ ಉಳಿಸಿ, ಬೆಳೆಸುವಲ್ಲಿ ಅಲ್ಲಮಪ್ರಭು ಸ್ವಾಮೀಜಿ ಮಹತ್ವದ ಪಾತ್ರ ವಹಿಸುತ್ತಿದ್ದರು. ಅಲ್ಲದೆ, ಕನ್ನಡ–ಮರಾಠಿ ಬಾಂಧವ್ಯಕ್ಕೆ ಅವರ ಕೊಡುಗೆ ಅಪಾರವಾಗಿತ್ತು. ಶ್ರೀಗಳ ಅಗಲಿಕೆ ಗಡಿ ಕನ್ನಡಿಗರಿಗೆ ತುಂಬಲಾರದ ನಷ್ಟವಾಗಿದೆ –ಅಶೋಕ ಚಂದರಗಿ, ಅಧ್ಯಕ್ಷ, ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.