ಶುಕ್ರವಾರ, ಸೆಪ್ಟೆಂಬರ್ 24, 2021
21 °C

ಬೆಳಗಾವಿ ಮಹಾನಗರ ಪಾಲಿಕೆಗೆ ಚುನಾವಣೆ ಘೋಷಣೆ: ಸೆ.3ರಂದು ಮತದಾನ, 6ರಂದು ಫಲಿತಾಂಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಬಹುನಿರೀಕ್ಷಿತ ಹಾಗೂ ಹಲವು ತಿಂಗಳುಗಳಿಂದ ನನೆಗುದಿಗೆ ಬಿದ್ದಿದ್ದ ಇಲ್ಲಿನ ಮಹಾನಗರಪಾಲಿಕೆ ಸಾರ್ವತ್ರಿಕ ಚುನಾವಣೆಗೆ ಮುಹೂರ್ತ ನಿಗದಿಪಡಿಸಿ ರಾಜ್ಯ ಚುನಾವಣಾ ಆಯೋಗ ಬುಧವಾರ ಆದೇಶ ಹೊರಡಿಸಿದೆ. ಅದರಂತೆ, ಸೆ.3ರಂದು ಬೆಳಿಗ್ಗೆ 7ರಿಂದ ಸಂಜೆ 5ರವರೆಗೆ ಮತದಾನ ನಡೆಯಲಿದ್ದು, ಸೆ.6ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.

ಇಲ್ಲಿ 58 ವಾರ್ಡ್‌ಗಳ ಚುನಾವಣೆಗೆ ವೇಳಾಪಟ್ಟಿ ಪ್ರಕಟವಾಗಿದೆ. ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಆ.16ರಂದು ಚುನಾವಣಾ ಅಧಿಸೂಚನೆ ಹೊರಡಿಸಲಿದ್ದು, ಅಂದಿನಿಂದಲೇ ನಾಮಪತ್ರ ಸಲ್ಲಿಕೆಗೆ ಅವಕಾಶವಿದೆ.

ಪಾಲಿಕೆಯ ಚುನಾಯಿತ ಸದಸ್ಯರ ಅಧಿಕಾರದ ಅವಧಿ (ಐದು ವರ್ಷಗಳು)ಯು 2019ರ ಮಾರ್ಚ್‌ನಲ್ಲಿ ಮುಗಿದಿತ್ತು. 2014ರ ಮಾರ್ಚ್‌ 10ರಂದು ಅಸ್ತಿತ್ವಕ್ಕೆ ಬಂದಿದ್ದ ನೂತನ ಆಡಳಿತ ಮಂಡಳಿಯ ಅಧಿಕಾರಾವಧಿ 2019ರ ಮಾರ್ಚ್‌ 9ರವರೆಗೆ ಇತ್ತು. ಅಂದು ಶನಿವಾರ ಆಗಿದ್ದರಿಂದಾಗಿ, ಮುನ್ನಾ ದಿನವಾದ ಶುಕ್ರವಾರವೇ ಸದಸ್ಯರ ಅಧಿಕಾರ ಪೂರ್ಣಗೊಂಡಿತ್ತು. ಅಲ್ಲಿಂದ ಇಲ್ಲಿವರೆಗೂ ವಿವಿಧ ಕಾರಣಗಳಿಂದಾಗಿ ಚುನಾವಣೆ ನಡೆದಿರಲಿಲ್ಲ. ಕೆಲವು ದಿನಗಳವರೆಗೆ ಪ್ರಾದೇಶಿಕ ಆಯುಕ್ತರು, ನಂತರ ಜಿಲ್ಲಾಧಿಕಾರಿಯು ಆಡಳಿತಾಧಿಕಾರಿಗಿದ್ದರು. ಇದೀಗ, ಕೋವಿಡ್–19 ಸಾಂಕ್ರಾಮಿಕ ಭೀತಿಯ ನಡುವೆಯೇ ಚುನಾವಣೆ ನಿಗದಿಪಡಿಸಲಾಗಿದೆ. ನಾಗರಿಕರು ತಮ್ಮ ಹೊಸ ಜನಪ್ರತಿನಿಧಿ ಆಯ್ಕೆ ಮಾಡಿಕೊಳ್ಳಲು ಅವಕಾಶ ಬಂದಿದೆ.

ಆ.16ರಿಂದ ನೀತಿಸಂಹಿತೆ ಜಾರಿ:

ಮಾದರಿ ನೀತಿಸಂಹಿತೆಯು ಆ.16ರಿಂದ ಸೆ.6ರವರೆಗೆ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಜಾರಿಯಲ್ಲಿರಲಿದೆ.

‘ಹಾಲಿ ಚಾಲ್ತಿಯಲ್ಲಿರುವ ವಿಧಾನಸಭಾ ಮತದಾರರ ಪಟ್ಟಿಯನ್ನು ಅಳವಡಿಸಿಕೊಂಡು ತಯಾರಿಸಲಾಗುವ ಮತದಾರರ ‍ಪಟ್ಟಿಯಂತೆ ಚುನಾವಣೆ ನಡೆಸಬೇಕು. ಚುನಾವಣಾ ಕಾರ್ಯಕ್ಕೆ ನಿಯೋಜಿತವಾದ ಚುನಾವಣಾಧಿಕಾರಿ ಮತ್ತು ಸಹಾಯಕ ಚುನಾವಣಾಧಿಕಾರಿಗೆ ತರಬೇತಿ ನೀಡಬೇಕು’ ಎಂದು ಆಯೋಗ ಸೂಚಿಸಿದೆ.

‘ಮತದಾರರು ಅಭ್ಯರ್ಥಿಯ ಪೂರ್ವಾಪರವನ್ನು ತಿಳಿದುಕೊಳ್ಳಲು ಅನುವಾಗುವಂತೆ, ಸ್ಪರ್ಧಿಸುವ ಪ್ರತಿಯೊಬ್ಬರೂ ನಾಮಪತ್ರದೊಂದಿಗೆ ತಮ್ಮ ಹಿನ್ನೆಲೆ, ಚರಾಸ್ತಿ ಮತ್ತು ಸ್ಥಿರಾಸ್ತಿ ವಿವರಗಳು, ಸ್ವವಿವರ, ವಿದ್ಯಾರ್ಹತೆ, ಆದಾಯದ ಮೂಲಗಳ ಮಾಹಿತಿಯನ್ನು ಪರಿಷ್ಕೃತ ನಮೂನೆಯಲ್ಲಿ ಘೋಷಣಾಪತ್ರ/ಪ್ರಮಾಣಪತ್ರವನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕು’ ಎಂದು ತಿಳಿಸಲಾಗಿದೆ.

‘ನೋಟಾ (ಮೇಲಿನ ಯಾರೊಬ್ಬರಿಗೂ ಇಲ್ಲ) ಮತ ಚಲಾಯಿಸಲು ಅವಕಾಶವಿದೆ. ಮತಪತ್ರದಲ್ಲಿ ಎಲ್ಲ ಅಭ್ಯರ್ಥಿಗಳ ಹೆಸರಿನ ಮುಂದೆ ಅವರ ಇತ್ತೀಚಿನ ಭಾವಚಿತ್ರ ಮುದ್ರಿಸಬೇಕು. ಮಾದರಿ ನೀತಿಸಂಹಿತೆಯು ಯಾವುದೇ ರೀತಿಯಲ್ಲೂ ಉಲ್ಲಂಘನೆ ಆಗದಂತೆ ಜಿಲ್ಲಾಧಿಕಾರಿ ನೋಡಿಕೊಳ್ಳಬೇಕು. ನೀತಿಸಂಹಿತೆ ಉಲ್ಲಂಘನೆ ಪ್ರಕರಣಗಳು ಕಂಡುಬಂದಲ್ಲಿ ಕ್ರಮ ಜರುಗಿಸಬೇಕು’ ಎಂದು ರಾಜ್ಯ ಚುನಾವಣಾ ಆಯೋಗದ ಅಧೀನ ಕಾರ್ಯದರ್ಶಿ ನಾಗರಾಜು ಎನ್.ಆರ್. ಆದೇಶದಲ್ಲಿ ತಿಳಿಸಿದ್ದಾರೆ.

ರಾಜಕೀಯ ಚಟುವಟಿಕೆ ಬಿರುಸು:

58 ಸದಸ್ಯ ಬಲದ ಸಂಸ್ಥೆಗೆ 2014ರಲ್ಲಿ ಚುನಾವಣೆ ನಡೆದಿತ್ತು. ಇಲ್ಲಿ ರಾಜಕೀಯ ಪಕ್ಷಗಳ ಅಧಿಕೃತ ಅಭ್ಯರ್ಥಿಗಳಾಗಿ ಯಾರೂ ಸ್ಪರ್ಧಿಸಿರಲಿಲ್ಲ. ಎಲ್ಲರೂ ಬೆಂಬಲಿತರೇ ಇದ್ದರು. 32 ಎಂಇಎಸ್‌ (ಮಹಾರಾಷ್ಟ್ರ ಏಕೀಕರಣ ಸಮಿತಿ) ಬೆಂಬಲಿತ ಸದಸ್ಯರು ಹಾಗೂ ಇತರ (ಕನ್ನಡ ಮತ್ತು ಉರ್ದು ಭಾಷಿಕರು) 26 ಸದಸ್ಯರು ಆಯ್ಕೆಯಾಗಿದ್ದರು. ಮೊದಲ ನಾಲ್ಕು ಅವಧಿಗಳಿಗೆ ಎಂಇಎಸ್ ಬೆಂಬಲಿತರೇ ಮೇಯರ್‌ ಹಾಗೂ ಉಪ ಮೇಯರ್‌ ಆಗಿದ್ದರು. ಕೊನೆ ಅವಧಿಯಲ್ಲಿ ಮೀಸಲಾತಿ ಬಲದಿಂದಾಗಿ ಕನ್ನಡ ಭಾಷಿಕ ಸದಸ್ಯ ಬಸಪ್ಪ ಚಿಕ್ಕಲದಿನ್ನಿ ಅವರಿಗೆ ಮೇಯರ್‌ ಗಾದಿ ಒಲಿದಿತ್ತು. ಈ ಹುದ್ದೆ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದು ಈ ಮಹಾನಗರಪಾಲಿಕೆಯ ಇತಿಹಾಸಲ್ಲಿಯೇ ಮೊದಲಾಗಿತ್ತು. ಎಂಇಎಸ್‌ ಬೆಂಬಲಿತ ಸದಸ್ಯೆ ಮಧುಶ್ರೀ ಪೂಜಾರಿ ಉಪ ಮೇಯರ್ ಆಗಿದ್ದರು.

ವಾರ್ಡ್‌ಗಳ ವ್ಯಾಪ್ತಿ ಪುನರ್‌ವಿಂಗಡಣೆ ಮತ್ತು ಮೀಸಲಾತಿ ವಿಷಯದಲ್ಲಿ ಕೆಲವರು ಹೈಕೋರ್ಟ್‌ ಮೊರೆ ಹೋಗಿದ್ದರು. ಹೀಗಾಗಿ, ಚುನಾವಣೆ ಪ್ರಕ್ರಿಯೆ ನಡೆಸಲು ಸಾಧ್ಯವಾಗಿರಲಿಲ್ಲ ಎನ್ನಲಾಗುತ್ತಿದೆ. ಕೊನೆಗೂ ಚುನಾವಣೆ ಘೋಷಣೆಯಾಗಿದ್ದು, ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆಗಳು ಬಿರುಸುಗೊಳ್ಳಲಿವೆ. ಈಗಾಗಲೇ ಮಾಜಿ ಆಗಿರುವವರು ಹಾಗೂ ಹೊಸ ಆಕಾಂಕ್ಷಿಗಳು ಚುನಾವಣೆಗಾಗಿ ಕಾಯುತ್ತಿದ್ದರು. ಸ್ಥಳೀಯವಾಗಿ ‘ಸಿದ್ಧತೆ’ಯಲ್ಲಿ ತೊಡಗಿದ್ದರು. ಮೀಸಲಾತಿ ಆಧರಿಸಿ ಅವರು ಕಣಕ್ಕಿಳಿಯುವ ಸಾಧ್ಯತೆ ಇದೆ.

ವೇಳಾಪಟ್ಟಿ

* ಜಿಲ್ಲಾಧಿಕಾರಿಯು ಚುನಾವಣಾ ಅಧಿಸೂಚನೆ ಹೊರಡಿಸುವ ದಿನಾಂಕ: ಆ.16

* ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕ: ಆ.23

* ನಾಮಪತ್ರಗಳನ್ನು ಪರಿಶೀಲಿಸುವ ದಿನಾಂಕ:ಆ.23

* ಉಮೇದುವಾರಿಕೆಗಳನ್ನು ಹಿಂಪಡೆಯಲು ಕೊನೆಯ ದಿನಾಂಕ: ಆ.26

* ಮತದಾನ (ಬೆಳಿಗ್ಗೆ 7ರಿಂದ ಸಂಜೆ 5): ಸೆ.3

* ಮರುಮತದಾನ ಅವಶ್ಯವಿದ್ದಲ್ಲಿ (ಬೆಳಿಗ್ಗೆ 7ರಿಂದ ಸಂಜೆ 5): ಸೆ.5

* ಮತ ಎಣಿಕೆ (ಬೆಳಿಗ್ಗೆ 8ರಿಂದ): ಸೆ.6

ಮುಖ್ಯಾಂಶಗಳು

ಕೋವಿಡ್ ಭೀತಿಯ ನಡುವೆಯೇ ಚುನಾವಣೆ

ಕೆಲವೇ ದಿನಗಳಲ್ಲಿ ಮುಗಿಯಲಿದೆ ಪ್ರಕ್ರಿಯೆ

ನೀತಿಸಂಹಿತೆ ಪಾಲಿಕೆ ವ್ಯಾಪ್ತಿಗೆ ಅನ್ವಯ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು