ಡಿಸಿಸಿ ಬ್ಯಾಂಕಿನ ಸವದತ್ತಿ ಕ್ಷೇತ್ರದ ನಿರ್ದೇಶಕ ಸ್ಥಾನಕ್ಕೆ ಗೆಲುವು ಬಹುತೇಕ ಖಚಿತವಾದ ಹಿನ್ನೆಲೆಯಲ್ಲಿ ಶಾಸಕ ವಿಶ್ವಾಸ ವೈದ್ಯ ಅವರಿಗೆ ಬೆಂಬಲಿಗರು ಸಿಹಿ ತಿನ್ನಿಸಿದರು
ಜಾರಕಿಹೊಳಿ ಕುಟುಂಬದವರು ಡಿಸಿಸಿ ಬ್ಯಾಂಕಿನ ನಿರ್ದೇಶಕರ ಸ್ಥಾನಕ್ಕೆ ಸ್ಪರ್ಧಿಸಿರಬಹುದು. ಆದರೆ ಲಿಂಗಾಯತ ಸಮುದಾಯದವರನ್ನೇ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗುವುದು
ಬಾಲಚಂದ್ರ ಜಾರಕಿಹೊಳಿ ಶಾಸಕ
‘ಜಾರಕಿಹೊಳಿ ಕುಟುಂಬದ ಇಬ್ಬರು ಕಣಕ್ಕೆ’
‘ನಮ್ಮ ಕುಟುಂಬದಿಂದ ಯಾರೂ ಸ್ಪರ್ಧಿಸುವುದಿಲ್ಲ’ ಎಂಬ ಬಾಲಚಂದ್ರ ಅವರ ಮಾತು ‘ಈವರೆಗೆ ಅಭ್ಯರ್ಥಿ ಅಂತಿಮಗೊಳಿಸಿಲ್ಲ’ ಎಂದು ಸತೀಶ ಜಾರಕಿಹೊಳಿ ಅವರ ಮಾತಿಗೆ ಈಗ ಕೊನೆ ಬಿದ್ದಿದೆ. ಗೋಕಾಕದಿಂದ ಅಮರನಾಥ ರಮೇಶ ಜಾರಕಿಹೊಳಿ ಬೆಳಗಾವಿಯಿಂದ ರಾಹುಲ್ ಸತೀಶ ಜಾರಕಿಹೊಳಿ ನಾಮಪತ್ರ ಸಲ್ಲಿಸಿದ್ದಾರೆ. ‘ಎಲ್ಲ ನಾಯಕರೂ ತಮ್ಮ ಮಕ್ಕಳನ್ನು ರಾಜಕೀಯಕ್ಕೆ ಕರೆತಂದಿದ್ದಾರೆ. ಇದರಲ್ಲಿ ಅಚ್ಚರಿಪಡುವ ಸಂಗತಿ ಇಲ್ಲ. ನಮ್ಮ ಕುಟುಂಬ ನಂಬಿ ಬದುಕುತ್ತಿರುವ ಜನರನ್ನು ಕೈಬಿಡಬಾರದು. ಜನಸೇವೆ ಮುಂದುವರಿಸಬೇಕು ಎಂಬ ಆಶಯದಿಂದ ನಮ್ಮ ಕುಟುಂಬದ ಇಬ್ಬರನ್ನು ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಕಣಕ್ಕಿಳಿಸಿದ್ದೇವೆಯೇ ಹೊರತು ಬೇರೇನೂ ಉದ್ದೇಶವಿಲ್ಲ’ ಎಂದು ಬಾಲಚಂದ್ರ ಜಾರಕಿಹೊಳಿ ಸುದ್ದಿಗಾರರಿಗೆ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
‘ಮತ್ತೆ ಎಂಟ್ರಿ ಕೊಟ್ಟ ಚನ್ನರಾಜ’
ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಖಾನಾಪುರ ಕ್ಷೇತ್ರದಿಂದ ಕಣಕ್ಕಿಳಿಯಲು ತಯಾರಿ ನಡೆಸಿದ್ದರು. ಇಡೀ ತಾಲ್ಲೂಕಿನಲ್ಲಿ ಪ್ರಚಾರ ಕೈಗೊಂಡಿದ್ದರು. ಬದಲಾದ ರಾಜಕೀಯ ವಿದ್ಯಮಾನದ ಹಿನ್ನೆಲೆಯಲ್ಲಿ ಕಣದಿಂದ ಹಿಂದೆ ಸರಿದಿದ್ದಾಗಿ ಘೋಷಿಸಿದ್ದರು. ಅಚ್ಚರಿ ಎಂಬಂತೆ ಶನಿವಾರ ಡಿಸಿಸಿ ಬ್ಯಾಂಕಿಗೆ ಬಂದು ಇತರೆ ಕ್ಷೇತ್ರದಿಂದ ಉಮೇದುವಾರಿಕೆ ಸಲ್ಲಿಸಿದರು. ‘ಇತರೆ ಕ್ಷೇತ್ರದಿಂದ ಸ್ಪರ್ಧಿಸಲು ಮಹಾಂತೇಶ ಕವಟಗಿಮಠ ರಾಜೇಂದ್ರ ಅಂಕಲಗಿ ಪಂಚನಗೌಡ ದ್ಯಾಮನಗೌಡರ ಗುರು ಮೆಟಗುಡ್ಡ ಸೇರಿದಂತೆ ಆರು ಮಂದಿ ಆಕಾಂಕ್ಷಿಗಳು ಉತ್ಸುಕರಾಗಿದ್ದರು. ಆದರೆ ಇತ್ತೀಚಿನ ರಾಜಕೀಯ ಬೆಳವಣಿಗೆ ಹಿನ್ನೆಲೆಯಲ್ಲಿ ನಾವು ಸತೀಶ ಜಾರಕಿಹೊಳಿ ಮತ್ತು ಲಕ್ಷ್ಮೀ ಹೆಬ್ಬಾಳಕರ ಚರ್ಚಿಸಿ ಚನ್ನರಾಜ ಅವರನ್ನು ಕಣಕ್ಕಿಳಿಸುವ ನಿರ್ಧಾರ ತೆಗೆದುಕೊಂಡೆವು. ಅನುಭವಿಗಳು ಸಹಕಾರ ಕ್ಷೇತ್ರ ಪ್ರವೇಶಿಸಬೇಕು’ ಎಂದು ಬಾಲಚಂದ್ರ ಜಾರಕಿಹೊಳಿ ಹೇಳಿದರು.