ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ–ದೆಹಲಿ ನೇರ ವಿಮಾನ ಹಾರಾ‌ಟ ಆರಂಭ

Last Updated 13 ಆಗಸ್ಟ್ 2021, 16:02 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿಂದ ದೆಹಲಿಗೆ ನೇರ ವಿಮಾನ ಹಾರಾ‌ಟ ಕಾರ್ಯಾಚರಣೆ ಶುಕ್ರವಾರ ಆರಂಭವಾಯಿತು.

ಸ್ಪೈಸ್ ಜೆಟ್ ಕಂಪನಿಯ ವಿಮಾನವು ಕಾರ್ಯಾಚರಣೆ ನಡೆಸಲಿದೆ. 149 ಸೀಟುಗಳ ಈ ವಿಮಾನ ಆರಂಭದಲ್ಲಿ ವಾರದಲ್ಲಿ 2 ದಿನ ಅಂದರೆ ಸೋಮವಾರ ಮತ್ತು ಶುಕ್ರವಾರ ಕಾರ್ಯಾಚರಿಸಲಿದೆ. ಸಂಜೆ 4.35ಕ್ಕೆ ಸಾಂಬ್ರಾಕ್ಕೆ ಬಂದು ಸಂಜೆ 5.05ಕ್ಕೆ ದೆಹಲಿಗೆ ತೆರಳುತ್ತದೆ. ಇದರೊಂದಿಗೆ ಈ ನಿಲ್ದಾಣವು ಸದ್ಯ 13 ದೊಡ್ಡ ನಗರಗಳೊಂದಿಗೆ ನೇರ ವಿಮಾನಯಾನ ಸಂಪರ್ಕ ಹೊಂದಿದಂತಾಗಿದೆ.

ಚಾಲನೆ ನೀಡಿದ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ‘ಈ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿದ್ದ ಬೆಳಗಾವಿ-ದೆಹಲಿ ನೇರ ವಿಮಾನಯಾನ ಸಂಚಾರ ಪ್ರಾರಂಭವಾಗಿದೆ. ದೆಹಲಿಗೆ ನೇರ ವಿಮಾನ ಸಂಪರ್ಕ ಹೊಂದಿದ ಉತ್ತರ ಕರ್ನಾಟಕದ ಮೊದಲ ವಿಮಾನನಿಲ್ದಾಣ ಎನ್ನುವ ಕೀರ್ತಿ ಇಲ್ಲಿಗೆ ಸಿಕ್ಕಿದೆ. ಆ ಭಾಗದಿಂದ ಶಿಕ್ಷಣಕ್ಕಾಗಿ ಇಲ್ಲಿಗೆ ಬರುವವರು ಮತ್ತು ಉತ್ತರ ಭಾರತಕ್ಕೆ ಇಲ್ಲಿಂದ ಹೋಗುವ ವಿದ್ಯಾರ್ಥಿಗಳಿಗೂ ಅನುಕೂಲವಾಗಿದೆ’ ಎಂದರು.

‘ಆ. 20ರಿಂದ ನಿತ್ಯ ಬೆಳಗಾವಿ-ಬೆಂಗಳೂರು ತಡೆರಹಿತ ವಿಮಾನ ಸೇವೆ ಪ್ರಾರಂಭವಾಗಲಿದೆ. ಬೆಳಿಗ್ಗೆ 8ಕ್ಕೆ ಬೆಳಗಾವಿಯಿಂದ ಹೊರಟು ಬೆಳಿಗ್ಗೆ 9.25ಕ್ಕೆ ಬೆಂಗಳೂರು ತಲುಪಲಿದೆ. ಇದನ್ನು ಸ್ಪೈಸ್ ಜೆಟ್ ಕಂಪನಿ ಪ್ರಾರಂಭಿಸುತ್ತಿದೆ’ ಎಂದು ಹೇಳಿದರು.

ಪ್ರಯಾಣಿಕರನ್ನು ಆಪ್‌ಟೆಕ್‌ ಏವಿಯೇಷನ್ ಅಕಾಡೆಮಿ ವಿದ್ಯಾರ್ಥಿಗಳು ಆತ್ಮೀಯವಾಗಿ ಬರಮಾಡಿಕೊಂಡರು. ವಿಷನ್‌ ಫ್ಲೈ ವಿದ್ಯಾರ್ಥಿಗಳು ನೃತ್ಯ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮ ಪ್ರಸ್ತುತಪಡಿಸಿದರು. ದೆಹಲಿಯಿಂದ ಬಂದ ವಿಮಾನದಲ್ಲಿ 135 ಪ್ರಯಾಣಿಕರು ಬಂದಿಳಿದರು. ಬೆಳಗಾವಿಯಿಂದ 147 ಮಂದಿ ಪ್ರಯಾಣಿಸಿದರು.

ಸಂಸದೆ ಮಂಗಲಾ ಅಂಗಡಿ, ಉತ್ತರ ಕ್ಷೇತ್ರದ ಶಾಸಕ ಅನಿಲ ಬೆನಕೆ, ವಿಮಾನನಿಲ್ದಾಣ ನಿರ್ದೇಶಕ ರಾಜೇಶಕುಮಾರ ಮೌರ್ಯ, ಪ್ರತಾಪ್ ದೇಸಾಯಿ, ಸ್ಪೈಸ್ ಜೆಟ್ ವಿಮಾನ ಸೇವಾ ಸಂಸ್ಥೆಯ ವ್ಯವಸ್ಥಾಪಕ ನಿಯಾಜ್ ಶಿರಟ್ಟಿ, ಡಾ.ವಿವೇಕ ಸಾವಜಿ, ರಾಕೇಶ ಮುಧೋಳ, ಸಿಪಿಐ ಈರಪ್ಪ ವಾಲಿ, ಆರ್.ಎಸ್. ಮುತಾಲಿಕ, ತಮ್ಮಣ್ಣ ದೇವರ, ಶ್ರೀಕಾಂತ ಕೌಜಲಗಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT