ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಿಧಾನದಿಂದ ದೇಶದ ಪ್ರಜಾಪ್ರಭುತ್ವ ಬಲಿಷ್ಠ: ಶರದ್ ‍ಪವಾರ್‌ ಅಭಿಮತ

Last Updated 11 ಮೇ 2022, 9:03 IST
ಅಕ್ಷರ ಗಾತ್ರ

ಬೆಳಗಾವಿ: ‘ಡಾ.ಬಿ.ಆರ್‌. ಅಂಬೇಡ್ಕರ್‌ ಅವರು ರಚಿಸಿದ ಸಂವಿಧಾನದಿಂದಾಗಿ ಭಾರತದ ಪ್ರಜಾಪ್ರಭುತ್ವ ಇಂದಿಗೂ ಬಲಿಷ್ಠವಾಗಿದೆ. ನೆರೆಯ ರಾಷ್ಟ್ರಗಳಲ್ಲಿನ ಪರಿಸ್ಥಿತಿ ನಮ್ಮಲ್ಲಿಲ್ಲ’ ಎಂದು ಎನ್‌ಸಿಪಿ ಅಧ್ಯಕ್ಷರೂ ಆಗಿರುವ ರಾಜ್ಯಸಭೆ ಸದಸ್ಯ ಶರದ್‌ ಪವಾರ್‌ ಹೇಳಿದರು.

ನಗರದ ಜ್ಯೋತಿ ಕಾಲೇಜು ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ದಕ್ಷಿಣ ಮಹಾರಾಷ್ಟ್ರ ಶಿಕ್ಷಣ ಮಂಡಳದ ಸುವರ್ಣ ಮಹೋತ್ಸವದ ಸಮಾರೋಪ ಸಮಾರಂಭ ಹಾಗೂ ಛತ್ರಪತಿ ಶಾಹು ಪ್ರಕಾಶನ ಮಂಡಳದ ‘ರಾಷ್ಟ್ರವೀರ’ ಸಾಪ್ತಾಹಿಕದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಶ್ರೀಲಂಕಾ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಲ್ಲಿ ಅರಾಜಕತೆ, ರಾಜಕೀಯ ಅಸ್ಥಿರತೆ ಉಂಟಾಗಿದೆ. ಆದರೆ, ಭಾರತದಲ್ಲಿನ ಪರಿಸ್ಥಿತಿ ಇಂದಿಗೂ ಸ್ಥಿರವಾಗಿದೆ’ ಎಂದರು.

ಇತರ ಕೊಡುಗೆಗಳನ್ನು ತಿಳಿಸಬೇಕು:‘ಅಂಬೇಡ್ಕರ್ ಜಲಸಂಪನ್ಮೂಲ ಸಚಿವರಾಗಿದ್ದಾಗ ದೇಶದಲ್ಲಿ ಹಲವು ಆಣೆಕಟ್ಟುಗಳನ್ನು ನಿರ್ಮಿಸುವ ಮತ್ತು ಜಲವಿದ್ಯುತ್‌ ಯೋಜನೆಗಳನ್ನು ಆರಂಭಿಸುವ ನಿರ್ಧಾರ ಕೈಗೊಂಡರು. ಪವರ್‌ಗ್ರಿಡ್‌ ಕಾರ್ಪೋರೇಷನ್‌ ಆಫ್‌ ಇಂಡಿಯಾ ಸ್ಥಾಪಿಸಿದರು. ಸಂವಿಧಾನ ರಚನೆ ಜೊತೆಗೆ ಇತರ ಕ್ಷೇತ್ರಗಳಿಗೆ ಅಂಬೇಡ್ಕರ್‌ ನೀಡಿದ ಕೊಡುಗೆಯನ್ನು ಜನರಿಗೆ ತಿಳಿಸಬೇಕಾಗಿದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

‘ಛತ್ರಪತಿ ಶಾಹು ಮಹಾರಾಜರು ಸಮಾಜದಲ್ಲಿ ಸಮಾನತೆ ತರಲು ನಿರಂತರ ಶ್ರಮಿಸಿದರು. ಜ್ಯೋತಿಬಾ ಫುಲೆ ಮತ್ತು ಸಾವಿತ್ರಿಬಾಯಿ ಫುಲೆ ಎಲ್ಲರಿಗೂ ಶಿಕ್ಷಣ ನೀಡಲು ಪ್ರಯತ್ನಿಸಿದರು. ಸಮಾಜಕ್ಕೆ ಅವರು ನೀಡಿದ ಕೊಡುಗೆಗಳನ್ನು ಇಂದಿಗೂ ಜನರು ಸ್ಮರಿಸುತ್ತಾರೆ’ ಎಂದರು.

‘ಮಹಾರಾಷ್ಟ್ರದ ವೈದ್ಯಕೀಯ ಕಾಲೇಜುಗಳಲ್ಲಿ ಗಡಿ ಭಾಗದ ವಿದ್ಯಾರ್ಥಿಗಳಿಗೆ ಪ್ರಸ್ತುತ ನೀಡಲಾಗುತ್ತಿರುವ ಸೀಟುಗಳ ಸಂಖ್ಯೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರದ ಮೇಲೆ ಒತ್ತಡ ತರಲಾಗುವುದು’ ಎಂದು ಭರವಸೆ ನೀಡಿದರು.

ಅನುದಾನಕ್ಕೆ ಮನವಿ: ಮಂಡಳದ ಅಧ್ಯಕ್ಷೆ ಸರೋಜಾ ಪಾಟೀಲ, ‘ಈ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ನಮ್ಮ ಸಂಸ್ಥೆಗೆ 2000ರವರೆಗೆ ಮಹಾರಾಷ್ಟ್ರ ಸರ್ಕಾರ ಅನುದಾನ ನೀಡುತ್ತಿತ್ತು. ನಂತರ ಯಾವುದೇ ಅನುದಾನ ಬಾರದ್ದರಿಂದ ಸಂಸ್ಥೆ ಆರ್ಥಿಕ ಸಂಕಷ್ಟದಲ್ಲಿದೆ. ಹಾಗಾಗಿ ಕರ್ನಾಟಕ ಮತ್ತು ಮಹಾರಾಷ್ಟ್ರ ಸರ್ಕಾರಗಳು ನೆರವಿಗೆ ಬರಬೇಕು’ ಎಂದು ಕೋರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪವಾರ್‌, ‘ನಿಮ್ಮ ಸಂಸ್ಥೆಗೆ ಅನುದಾನ ಕೊಡಿಸಲು ಪ್ರಯತ್ನಿಸುತ್ತೇನೆ. ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಈ ವಿಷಯವನ್ನು ಕರ್ನಾಟಕ ಸರ್ಕಾರದ ಗಮನಕ್ಕೆ ತರುತ್ತಾರೆ’ ಎಂದು ವೇದಿಕೆಯಲ್ಲಿದ್ದ ಕೋರೆ ಅವರತ್ತ ನೋಡುತ್ತಾ ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಉಪಾಧ್ಯಕ್ಷ ರಾಜಭಾವು ಪಾಟೀಲ, ‘ಇಲ್ಲಿನ ಮರಾಠಿ ಭಾಷಿಗರು ಮಹಾರಾಷ್ಟ್ರದ ಭಾಗವಾಗಲು ಕಾಯುತ್ತಿದ್ದಾರೆ’ ಎಂದರು.

ಕಾರ್ಯದರ್ಶಿ ಪ್ರೊ.ವಿಕ್ರಮ ಪಾಟೀಲ ಸ್ವಾಗತಿಸಿದರು. ಪ್ರೊ.ಸುರೇಶ ಪಾಟೀಲ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT