ಶನಿವಾರ, ಸೆಪ್ಟೆಂಬರ್ 26, 2020
27 °C

ಆಸ್ತಿ ಹಕ್ಕು ನೀಡಲು ‘ಸ್ವಾಮಿತ್ವ’: ಗಡಿ, ವಿಸ್ತೀರ್ಣ, ಇತರ ದಾಖಲೆ ತಯಾರಿಗೆ ಯೋಜನೆ

ಎಂ.ಮಹೇಶ Updated:

ಅಕ್ಷರ ಗಾತ್ರ : | |

ಬೆಳಗಾವಿ: ಕೇಂದ್ರ ಸರ್ಕಾರದ ‘ಸ್ವಾಮಿತ್ವ’ (ಸುಧಾರಿತ ತಂತ್ರಜ್ಞಾನ ಬಳಕೆ ಮೂಲಕ ಗ್ರಾಮಗಳ ಸಮೀಕ್ಷೆ ಹಾಗೂ ಮ್ಯಾಪಿಂಗ್) ಯೋಜನೆಗೆ ಜಿಲ್ಲೆಯನ್ನು ಆಯ್ಕೆ ಮಾಡಲಾಗಿದ್ದು, ಅನುಷ್ಠಾನಕ್ಕೆ ಚಾಲನೆ ದೊರೆತಿದೆ.

ಈ ತಿಂಗಳಲ್ಲಿ ಎಲ್ಲ 14 ತಾಲ್ಲೂಕುಗಳಲ್ಲೂ ತಲಾ 8ರಂತೆ 112 ಗ್ರಾಮ ಪಂಚಾಯಿತಿಗಳ 216 ಗ್ರಾಮಗಳಲ್ಲಿ ಯೋಜನೆ ನಡೆಯಲಿದೆ. ಇವುಗಳಲ್ಲಿ ಪೂರ್ಣಗೊಂಡ ನಂತರ ಇತರ ಪಂಚಾಯಿತಿಗಳ ಮಟ್ಟದಲ್ಲಿ ಆಸ್ತಿಗಳ ಮಾರ್ಕಿಂಗ್‌ ಆರಂಭವಾಗಲಿದೆ.

88 ಮಂದಿ ಸರ್ಕಾರಿ ಸರ್ವೇಯರ್‌ಗಳನ್ನು ನಿಯೋಜಿಸಲಾಗಿದೆ. ಮಾರ್ಕಿಂಗ್‌ ಬಳಿಕ ಡ್ರೋನ್‌ ಆಧಾರಿತ ಸರ್ವೇ ನಡೆಸಿ, ನಿಖರವಾದ ಸ್ಥಳ ಗುರುತಿಸಿ ಆಸ್ತಿಗೆ ಸಂಬಂಧಿಸಿದ ಹಕ್ಕುಪತ್ರ ವಿತರಿಸುವುದು ಯೋಜನೆಯ ಉದ್ದೇಶವಾಗಿದೆ.

ಸಹಯೋಗದಲ್ಲಿ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ, ಕಂದಾಯ ಇಲಾಖೆ ಸಹಯೋಗದಲ್ಲಿ ಪಿಡಿಒಗಳು, ಭೂ ದಾಖಲೆಗಳ ಸಹಾಯಕ ನಿರ್ದೇಶಕರು,  ಸರ್ವೇಯರ್‌ಗಳು ಮತ್ತು ಭಾರತೀಯ ಸರ್ವೇಕ್ಷಣಾಲಯದ ಅಧಿಕಾರಿಗಳು ಸಹಯೋಗ ನೀಡಲಿದ್ದಾರೆ. ಆಯ್ಕೆಯಾದ ಹಳ್ಳಿಗಳಲ್ಲಿ ಜಾಗೃತಿ ಸಭೆಗಳನ್ನು ನಡೆಸಲಾಗುತ್ತಿದೆ. ಆಸ್ತಿ ಹಕ್ಕುಗಳನ್ನು ನೀಡಲು ಸರ್ಕಾರವು ಯೋಜನೆ ಜಾರಿಗೊಳಿಸಿದೆ ಎಂದು ತಿಳಿಸಲಾಗುತ್ತಿದೆ.

‘ಪ್ರತಿ ಆಸ್ತಿಯ ನಿಖರ ಹಕ್ಕು ದಾಖಲೆ ಅಂತಿಮಗೊಳಿಸಲು ಯೋಜನೆ ಸಹಕಾರಿಯಾಗಿದೆ’ ಎಂದು ಭೂ ದಾಖಲೆಗಳ ಇಲಾಖೆ ಉಪ ನಿರ್ದೇಶಕ ಮೋಹನ ಶಿವನ್ನವರ ‘ಪ್ರಜಾವಾಣಿ’ಗೆ ತಿಳಿಸಿದರು.

ಅತ್ಯಾಧುನಿಕ ಡ್ರೋನ್ ಬಳಕೆ: ‘ನಮ್ಮ ಸರ್ವೇಯರ್‌ಗಳು ಪ್ರತಿ ಆಸ್ತಿ ಹಾಗೂ ಮನೆಗಳ ಮೇಲೆ ಮಾಲೀಕರು ಮತ್ತು ಗ್ರಾಮಸ್ಥರ ಸಮ್ಮುಖದಲ್ಲೇ ಬಿಳಿ ಬಣ್ಣ ಅಥವಾ ಸುಣ್ಣದಲ್ಲಿ ಗುರುತು ಮಾಡುತ್ತಾರೆ. ಗುರುತಿಸಿದ ಗಡಿ ಬಗ್ಗೆ ಪಂಚಾಯಿತಿ ಸಭೆಯಲ್ಲಿ ಠರಾವು ಮಾಡಲಾಗುತ್ತದೆ. ಬಳಿಕ ಅತ್ಯಾಧುನಿಕ ತಂತ್ರಜ್ಞಾನದ ಡ್ರೋನ್‌ ಆಧಾರಿತ ಸರ್ವೇ ನಡೆಸಿ, ಸ್ವತ್ತುಗಳ ಫೋಟೊಗಳನ್ನು (ಹೈ ರೆಸ್ಯೂಲ್ಯೂಷನ್‌ ಇಮೇಜ್‌ ಕ್ಯಾಪ್ಚರ್) ಸೆರೆ ಹಿಡಿಯಲಾಗುತ್ತದೆ. ಚಿತ್ರಗಳನ್ನು ಸಂಸ್ಕರಿಸಿ (ಸೂಪರ್‌ ಇಂಪೋಸ್‌), ಗುರುತಿಸಲಾದ ಆಸ್ತಿಗಳ ಮ್ಯಾಪ್ (ನಕ್ಷೆ) ತಯಾರಿಸಲಾಗುತ್ತದೆ. ದಾಖಲಾತಿ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಸಂಬಂಧಿಸಿದವರಿಗೆ ಹಕ್ಕುಪತ್ರವನ್ನು ಉಚಿತವಾಗಿ ವಿತರಿಸಲಾಗುತ್ತದೆ’ ಎಂದು ಮಾಹಿತಿ ನೀಡಿದರು.

ಸಮಸ್ಯೆಗಳಿಗೆ ಪರಿಹಾರ: ‘ಪ್ರಸ್ತುತ ಗ್ರಾಮ ಪಂಚಾಯಿತಿ ರಿಜಿಸ್ಟರ್‌ ಮೂಲಕ ದಾಖಲೆ ಒದಗಿಸಲಾಗುತ್ತಿದೆ. ಇದರಲ್ಲಿ ನಿಖರ ಅಳತೆ ಇರುವುದಿಲ್ಲ. ‘ಸ್ವಾಮಿತ್ವ’ದಿಂದ ನಿಖರತೆ ಸಿಗಲಿದೆ. ಹಳ್ಳಿಗಳ ಬಹುತೇಕರ ಬಳಿ ಅವರ ಆಸ್ತಿಯ ಒಟ್ಟು ವಿಸ್ತೀರ್ಣ ಮತ್ತು ಮೌಲ್ಯ, ಹದ್ದುಬಸ್ತಿನ ಬಗ್ಗೆ ದಾಖಲೆಗಳು ಇರುವುದಿಲ್ಲ. ಹೀಗಾಗಿ, ನಿಗದಿತ ಜಾಗದ ಮೇಲೆ ಸಾಲ ಪಡೆಯಲು ಅಥವಾ ಮಾರಾಟ ಮಾಡಲಾಗುತ್ತಿಲ್ಲ. ‘ಸ್ವಾಮಿತ್ವ’ದಿಂದ ಈ ಸಮಸ್ಯೆಗಳು ಬಗೆಹರಿಯುತ್ತವೆ. ಈ ಸಮರ್ಪಕ ದಾಖಲೆಗಳಿಂದ ಸಾಲ ಪಡೆಯಲು ಮತ್ತು ಮಾರಾಟಕ್ಕೆ ಅನುಕೂಲವಾಗಲಿದೆ’ ಎನ್ನುತ್ತಾರೆ ಮೋಹನ.

‘ಆಸ್ತಿ ತೆರಿಗೆ ನಿರ್ಧರಿಸಲು ಹಾಗೂ ಸಂಗ್ರಹಿಸಲು ಸಹ ಅನುಕೂಲವಾಗಿದೆ. ಅತಿಕ್ರಮಣ ಆಗಿದ್ದರೂ ಬೆಳಕಿಗೆ ಬರಲಿದೆ. ನಕ್ಷೆಯನ್ನು ನೀರು, ಚರಂಡಿ, ಒಳಚರಂಡಿ, ರಸ್ತೆ ಯೋಜನೆಗಳಿಗೂ ಬಳಸಿಕೊಳ್ಳಬಹುದು. ಅಥಣಿ ತಾಲ್ಲೂಕಿನ ಆಯ್ದ 6 ಗ್ರಾಮಗಳಲ್ಲಿ ಹೋದ ತಿಂಗಳು ಡ್ರೋನ್ ಬಳಸಿ ಸರ್ವೇ ನಡೆದಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು