ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಕನ್ನಡ ಮಾಧ್ಯಮ ಪ್ರೌಢಶಾಲೆಯೇ ಇಲ್ಲ!

ಮರಾಠಿ ಮಾಧ್ಯಮದತ್ತ ಮುಖಮಾಡುತ್ತಿರುವ ಅಸಹಾಯಕ ವಿದ್ಯಾರ್ಥಿಗಳು
Last Updated 2 ಜನವರಿ 2022, 20:30 IST
ಅಕ್ಷರ ಗಾತ್ರ

ಬೆಳಗಾವಿ: ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವ ಬೆಳಗಾವಿ ತಾಲ್ಲೂಕಿನ ಪಶ್ಚಿಮಭಾಗದ ಹಳ್ಳಿಗಳಲ್ಲಿ ಕನ್ನಡ ಪ್ರೌಢಶಾಲೆಗಳೇ ಇಲ್ಲ! ಇಲ್ಲಿನ ಕನ್ನಡಿಗರು ತಮ್ಮ ಮಕ್ಕಳನ್ನು ಕನ್ನಡ ಮಾಧ್ಯಮದಲ್ಲಿ ಓದಿಸುವ ಇಚ್ಛೆ ಹೊಂದಿದ್ದರೂ, ಶಾಲೆಗಳೇ ಇಲ್ಲದ ಕಾರಣ ಅನ್ಯ ಮಾಧ್ಯಮಗಳಿಗೆ ಸೇರಿಸುವ ಅನಿವಾರ್ಯ ಇದೆ. ಕನ್ನಡ ಪ್ರೌಢಶಾಲೆ ತೆರೆಯಲು ನಿಯಮಗಳು ತೊಡಕಾಗಿವೆ.

ಬೆಳಗಾವಿಗೆ ಅಲೆದಾಟ: ತಾಲ್ಲೂಕಿನ ಉಚಗಾವಿ, ಬೆಕ್ಕಿನಕೆರೆ, ಗೋಜಗಾ, ಕುದ್ರೇಮನಿ, ಮಣ್ಣೂರ, ಹಿಂಡಲಗಾ ಮತ್ತಿತರ ಗ್ರಾಮಗಳಲ್ಲಿ ಸರ್ಕಾರಿ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆಗಳಿವೆ. ಆದರೆ, ಕನ್ನಡ ಮಾಧ್ಯಮದ ಪ್ರೌಢಶಾಲೆಗಳಿಲ್ಲದ ಕಾರಣ ವಿದ್ಯಾರ್ಥಿಗಳು ಮುಂದಿನ ಹಂತದ ಕಲಿಕೆಗಾಗಿ 10–20 ಕಿ.ಮೀ ದೂರದ ಬೆಳಗಾವಿಗೆ ಬರುವಂತಾಗಿದೆ. ಅದರಲ್ಲೂ ರಾಜ್ಯದ ಕಡೇ ಗ್ರಾಮ ಕುದ್ರೇಮನಿಯ ವಿದ್ಯಾರ್ಥಿಗಳು ನಿತ್ಯವೂ ಮಹಾರಾಷ್ಟ್ರದ ಹಳ್ಳಿಗಳನ್ನು ದಾಟಿ, ಬೆಳಗಾವಿಗೆ ಬರಬೇಕಿದೆ.

ಮರಾಠಿ ಮಾಧ್ಯಮದಲ್ಲೇ ಶಿಕ್ಷಣ: ‘ನಮ್ಮಲ್ಲಿ ಬಸ್‌ ಸೌಲಭ್ಯ ಉತ್ತಮವಾಗಿಲ್ಲ. ಆದರೂ, ಕನ್ನಡ ಮಾಧ್ಯಮದಲ್ಲೇ ಮಗಳನ್ನು ಓದಿಸಬೇಕೆನ್ನುವ ಆಸೆಯಿಂದ ಬೆಳಗಾವಿ ಪ್ರೌಢಶಾಲೆಗೆ ಕಳುಹಿಸುತ್ತಿದ್ದೇನೆ. ಆರ್ಥಿಕವಾಗಿ ಹಿಂದುಳಿದವರುಅನಿವಾರ್ಯವಾಗಿ ತಮ್ಮ ಮಕ್ಕಳನ್ನು ಇಲ್ಲಿನ ಮರಾಠಿ ಮಾಧ್ಯಮ ಪ್ರೌಢಶಾಲೆಯಲ್ಲೇ ಓದಿಸುತ್ತಿದ್ದಾರೆ’ ಎನ್ನುತ್ತಾರೆ ಕುದ್ರೇಮನಿಯ ರಸೂಲ್ ಮುಲ್ಲಾ.

ಮರಾಠಿ ಪ್ರೌಢಶಾಲೆಗಳಿವೆ: ‘ಈ ಭಾಗದಲ್ಲಿ ಮರಾಠಿ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿವೆ. ಆದರೆ, ಕನ್ನಡದಲ್ಲಿ ಪ್ರೌಢ
ಶಿಕ್ಷಣ ಪಡೆಯಲು ಅವಕಾಶವಿಲ್ಲದ್ದರಿಂದ ತೊಂದರೆಯಾಗಿದೆ. ಹಾಗಾಗಿ ಹಿಂಡಲಗಾ, ಉಚಗಾವಿ ಅಥವಾ ಕುದ್ರೇಮನಿಯಲ್ಲಿ ಕನ್ನಡ ಪ್ರೌಢಶಾಲೆ ಆರಂಭಿಸಲು ಕ್ರಮ ಕೈಗೊಳ್ಳಬೇಕು. ಇದರಿಂದ ವಿದ್ಯಾರ್ಥಿಗಳಿಗೆ ಪ್ರಯೋಜನವಾಗಲಿದೆ’ ಎಂದು ಗ್ರಾಮಸ್ಥರು ಹೇಳುತ್ತಾರೆ.

ಎಷ್ಟು ವಿದ್ಯಾರ್ಥಿಗಳು?: ‘ಪ್ರಸ್ತುತ ಹಿಂಡಲಗಾ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಯಲ್ಲಿ 180, ಮಣ್ಣೂರಿನಲ್ಲಿ 110, ಬೆಕ್ಕಿನಕೆರೆಯಲ್ಲಿ 122, ಉಚಗಾವಿಯಲ್ಲಿ 112, ಕುದ್ರೇಮನಿಯಲ್ಲಿ 63 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರೌಢಶಾಲೆ ಶೀಘ್ರ ಆರಂಭ: ಭರವಸೆ

‘ಯಾವುದೇ ಗ್ರಾಮದಲ್ಲಿ ಸರ್ಕಾರಿ ಪ್ರೌಢಶಾಲೆ ಆರಂಭಕ್ಕೆ 70 ವಿದ್ಯಾರ್ಥಿಗಳಿರಬೇಕು. ಸುತ್ತಲಿನ 5 ಕಿ.ಮೀ ವ್ಯಾಪ್ತಿಯಲ್ಲಿ ಬೇರೆ ಪ್ರೌಢಶಾಲೆ ಇರಬಾರದೆನ್ನುವ ನಿಯಮವಿದೆ. ಆದರೆ, ಗಡಿಭಾಗ ಎನ್ನುವ ಕಾರಣಕ್ಕೆ ಈ ನಿಯಮ ಸಡಿಲಿಸಿ ಉಚಗಾವಿ ಅಥವಾ ಹಿಂಡಲಗಾದಲ್ಲಿ ಸರ್ಕಾರಿ ಕನ್ನಡ ಪ್ರೌಢಶಾಲೆ ಆರಂಭಿಸಲು ಅನುಮತಿ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಶೀಘ್ರ ಗ್ರಾಮಸ್ಥರ ಬೇಡಿಕೆ ಈಡೇರುವ ವಿಶ್ವಾಸವಿದೆ’ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ರುದ್ರಗೌಡ ಜುಟ್ಟನವರ ‘ಪ್ರಜಾವಾಣಿ’ಗೆ ತಿಳಿಸಿದರು.

***

ಗಡಿಭಾಗದಲ್ಲಿ ಆದ್ಯತೆ ಮೇರೆಗೆ ಕನ್ನಡ ಮಾಧ್ಯಮ ಪ್ರೌಢಶಾಲೆ ಆರಂಭಿಸಬೇಕು. ಮರಾಠಿ ಶಾಲೆಗಳಿಗೆ ಕನ್ನಡಿಗರ ಮಕ್ಕಳು ಹೋಗುವುದನ್ನು ತಪ್ಪಿಸಬೇಕು.

– ಅಶೋಕ ಚಂದರಗಿ, ಅಧ್ಯಕ್ಷ, ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾಸಮಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT