ಮಂಗಳವಾರ, ಮೇ 11, 2021
27 °C
ಉಪ ಚುನಾವಣೆಗೆ ಅಧಿಸೂಚನೆ ಪ್ರಕಟ ಇಂದು

ಬೆಳಗಾವಿ ಲೋಕಸಭಾ ಕ್ಷೇತ್ರ: ಅಭ್ಯರ್ಥಿ ಘೋಷಣೆ ಕಗ್ಗಂಟು, ರಂಗೇರದ ಕಣ

ಎಂ. ಮಹೇಶ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ದಿನಾಂಕ ಘೋಷಣೆಯಾಗಿ (ಮಾರ್ಚ್‌ 16ರಂದು) ವಾರವೇ ಕಳೆದಿದೆ. ಮಂಗಳವಾರ (ಮಾರ್ಚ್‌ 23ರಂದು) ಅಧಿಸೂಚನೆ ಕೂಡ ಹೊರಬೀಳಲಿದ್ದು, ನಾಮಪತ್ರ ಸಲ್ಲಿಸಲು ಅಂದಿನಿಂದಲೇ ಅವಕಾಶವಿದೆ. ಆದರೆ, ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್‌ನಿಂದ ಅಭ್ಯರ್ಥಿಗಳ ಆಯ್ಕೆ ಕಸರತ್ತು ಇನ್ನೂ ಪೂರ್ಣಗೊಂಡಿಲ್ಲ.

ನಾಮಪತ್ರ ಸಲ್ಲಿಕೆಗೆ ಮಾರ್ಚ್‌ 30 ಕೊನೆಯ ದಿನವಾಗಿದ್ದು, ಏ.17ರಂದು ಮತದಾನ ನಡೆಯಲಿದೆ. ಅಭ್ಯರ್ಥಿಗಳ ಘೋಷಣೆ ಆಗದೆ ಇರುವುದರಿಂದ ಕ್ಷೇತ್ರದಲ್ಲಿ ಚುನಾವಣಾ ಕಾವು ಇನ್ನೂ ಆರಂಭವಾಗಿಲ್ಲ. ಉಭಯ ಪಕ್ಷಗಳ ಕಾರ್ಯಕರ್ತರಲ್ಲೂ ಹುಮ್ಮಸ್ಸು ಕಂಡುಬರುತ್ತಿಲ್ಲ.

ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿರುವುದು ಬಿಜೆಪಿಗೆ ಗೊಂದಲ ಉಂಟು ಮಾಡಿದ್ದರೆ, ಪ್ರಬಲ ಅಭ್ಯರ್ಥಿಗಳೇ ಇಲ್ಲದಿರುವುದು ಕಾಂಗ್ರೆಸ್‌ ಪಕ್ಷಕ್ಕೆ ತಲೆನೋವಾಗಿ ಪರಿಣಮಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ಸುರೇಶ ಅಂಗಡಿ ಅಕಾಲಿಕ ನಿಧನದಿಂದ ಎದುರಾಗಿರುವ ಈ ಚುನಾವಣೆಯಲ್ಲಿ ಅವರ ಕುಟುಂಬದವರಿಗೆ ಟಿಕೆಟ್‌ ನೀಡಬೇಕು ಎಂಬ ಒತ್ತಾಯ ಆ ಪಕ್ಷದಲ್ಲಿದೆ. ಅಂಗಡಿ ಪುತ್ರಿಯೂ ಆಗಿರುವ ಮತ್ತು ಸಚಿವ ಜಗದೀಶ ಶೆಟ್ಟರ್‌ ಸೊಸೆ ಶ್ರದ್ಧಾ ಶೆಟ್ಟರ್‌ ಹೆಸರನ್ನು ರಾಜ್ಯ ಘಟಕದಿಂದ ಅಂತಿಮಗೊಳಿಸಿ ಶಿಫಾರಸು ಮಾಡಲಾಗಿದೆ ಎಂದು ತಿಳಿದುಬಂದಿದೆ. ಇನ್ನೊಂದೆಡೆ, ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ, ವಿಧಾನಪರಿಷತ್ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ಅವರ ಹೆಸರುಗಳೂ ಕೇಳಿಬಂದಿವೆ. ಆದರೆ, ಅಭ್ಯರ್ಥಿ ಘೋಷಣೆಯಲ್ಲಿ ವಿಳಂಬ ಆಗುತ್ತಿರುವುದರ ಹಿಂದಿನ ಲೆಕ್ಕಾಚಾರ ಕುತೂಹಲಕ್ಕೆ ಕಾರಣವಾಗಿದೆ. ಆ ಪಕ್ಷದಿಂದ ಅಚ್ಚರಿಯ ಪ್ರಯೋಗಕ್ಕೂ ಯೋಜಿಸಲಾಗುತ್ತಿದೆ ಎನ್ನಲಾಗುತ್ತಿದೆ.

‘ಚುನಾವಣೆಗೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದೇವೆ. ದಿನಾಂಕ ಘೋಷಣೆ ಆಗುತ್ತಿದ್ದಂತೆಯೇ ಅಭ್ಯರ್ಥಿಯ ಹೆಸರು ಪ್ರಕಟಿಸಲಾಗುವುದು’ ಎಂದು ಎರಡೂ ಪಕ್ಷಗಳ ವರಿಷ್ಠರು, ಘೋಷಣೆಗೂ ಮುನ್ನವೇ ತಿಳಿಸಿದ್ದರು. ಆದರೆ, ಯಾರಿಗೆ ಟಿಕೆಟ್ ನೀಡಬೇಕು ಎನ್ನುವುದನ್ನು ನಿರ್ಧರಿಸಲು ಆ ಪಕ್ಷಗಳ ಹೈಕಮಾಂಡ್‌ಗಳಿಗೆ ಈವರೆಗೂ ಸಾಧ್ಯವಾಗಿಲ್ಲ. ಅಭ್ಯರ್ಥಿಗಳ ಆಯ್ಕೆ ಕಗ್ಗಂಟಾಗಿ ಪರಿಣಮಿಸಿರುವುದು ವಿಳಂಬಕ್ಕೆ ಕಾರಣವಾಗಿದೆ.

ಆಡಳಿತ ಪಕ್ಷದಿಂದ ಅಭ್ಯರ್ಥಿ ಘೋಷಣೆ ಬಳಿಕ ತನ್ನ ಕಾರ್ಯತಂತ್ರ ಹೆಣೆಯಲು ಕಾಂಗ್ರೆಸ್‌ ಯೋಜಿಸಿದೆ. ಹೀಗಾಗಿಯೇ ಕಾದು ನೋಡುವ ತಂತ್ರ ಅನುಸರಿಸುತ್ತಿದೆ ಎನ್ನಲಾಗುತ್ತಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೆಸರು ಬಲವಾಗಿ ಕೇಳಿಬಂದಿದೆ. ಆದರೆ, ಅವರು ನವದೆಹಲಿಗೆ ತೆರಳಿ ಹೈಕಮಾಂಡ್‌ ಜೊತೆ ಚರ್ಚಿಸಿದ ನಂತರ ಅಭಿಪ್ರಾಯ ತಿಳಿಸುವುದಾಗಿ ಹೇಳಿದ್ದಾರೆ. ಇದೆಲ್ಲವನ್ನೂ ಗಮನಿಸಿದರೆ, ಕಾಂಗ್ರೆಸ್ ಅಭ್ಯರ್ಥಿ ಘೋಷಣೆಗೆ ಇನ್ನೂ ಕೆಲವು ದಿನಗಳು ಬೇಕಾಗಬಹುದು ಎನ್ನಲಾಗುತ್ತಿದೆ.

ಅಭ್ಯರ್ಥಿ ಜೊತೆ ಇಬ್ಬರಿಗಷ್ಟ ಅವಕಾಶ

ಬೆಳಗಾವಿ: ‘ನಾಮಪತ್ರ ಸಲ್ಲಿಕೆ ವೇಳೆ ಅಭ್ಯರ್ಥಿಯೊಂದಿಗೆ ಐವರು ಚುನಾವಣಾಧಿಕಾರಿ ಕಚೇರಿ ಪ್ರವೇಶಿಸಲು ಹಿಂದೆ ಅವಕಾಶವಿತ್ತು. ಈ ಬಾರಿ ಕೋವಿಡ್–19 ಕಾರಣದಿಂದಾಗಿ ಅಭ್ಯರ್ಥಿಯೊಂದಿಗೆ ಇಬ್ಬರಿಗಷ್ಟೇ ಅವಕಾಶ ಇರುತ್ತದೆ. ನಾಮಪತ್ರ ಸಲ್ಲಿಸಲು ನಡೆಯುವ ಮೆರವಣಿಗೆಯಲ್ಲಿ ಹಾಗೂ ಸಮಾವೇಶಗಳಲ್ಲಿ ಎಷ್ಟು ಮಂದಿ ಪಾಲ್ಗೊಳ್ಳಬೇಕು ಎಂಬಿತ್ಯಾದಿ ಅಂಶಗಳ ಕುರಿತು ಚುನಾವಣಾ ಆಯೋಗದ ನಿರ್ದೇಶನದಂತೆ ಪರಿಷ್ಕೃತ ಮಾರ್ಗಸೂಚಿ ಪ್ರಕಟಿಸಲಾಗುವುದು’ ಎಂದು ಜಿಲ್ಲಾ ಚುನಾವಣಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದರು.

***

ಟಿಕೆಟ್‌ ಹಂಚಿಕೆ ವಿಚಾರದಲ್ಲಿ ಈಗಾಗಲೇ ಸಮಾಲೋಚನೆ ನಡೆದಿದೆ. ಶೀಘ್ರವೇ ಘೋಷಣೆಯಾಗುವ ಸಾಧ್ಯತೆ ಇದೆ. ಬಳಿಕ ಪ್ರಚಾರ ಕಾರ್ಯ ಚುರುಕು ಪಡೆಯಲಿದೆ.

- ಎಂ.ಜಿ. ಝಿರಲಿ, ವಕ್ತಾರರು, ಬಿಜೆಪಿ ರಾಜ್ಯ ಘಟಕ

ಉಪ ಚುನಾವಣೆಗೆ ಬೇಕಾದ ಸಿದ್ಧತೆ ಮಾಡಿಕೊಂಡಿದ್ದೇವೆ. ಮಾರ್ಚ್‌ 25 ಅಥವಾ 26ರಂದು ಅಭ್ಯರ್ಥಿ ಹೆಸರು ಘೋಷಣೆಯಾಗಲಿದೆ ಪ್ರಚಾರಕ್ಕೆ ಸಾಕಷ್ಟು ಸಮಯ ಸಿಗಲಿದೆ.

- ಸತೀಶ ಜಾರಕಿಹೊಳಿ, ಕಾರ್ಯಾಧ್ಯಕ್ಷರು, ಕೆಪಿಸಿಸಿ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು