ಬೆಳಗಾವಿ: ಫ್ರೀಡಂ ಆರೋಗ್ಯಯುತ ಅಡುಗೆ ಎಣ್ಣೆ ಪ್ರಸ್ತುತಿ ಮತ್ತು ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ ಹೆರಾಲ್ಡ್’ ಪತ್ರಿಕಾ ಬಳಗದ ಸಹಯೋಗದೊಂದಿಗೆ ‘ಭೂಮಿಕಾ ಕ್ಲಬ್’ ಮಹಿಳೆಯರ ವಿಶೇಷ ಕಾರ್ಯಕ್ರಮ ನಗರದಲ್ಲಿ ಶನಿವಾರ ಅದ್ಧೂರಿಯಾಗಿ ಜರುಗಿತು. ಕಿಕ್ಕಿರಿದು ಸೇರಿದ್ದ ‘ಭೂಮಿಕೆಯರು’ ಹಾಡು, ಕುಣಿತ, ಆಟ, ನಗು–ನಲಿವಿನ ಜತೆಗೇ ಆರೋಗ್ಯ ಅರಿವಿಗೂ ಕಿವಿಗೊಟ್ಟರು.

ಇಲ್ಲಿನ ಕೆಎಲ್ಇ ಶತಮಾನೋತ್ಸವ ಭವನದ ಡಾ.ಬಿ.ಎಸ್.ಕೋಡ್ಕಿಣಿ ಸಭಾಂಗಣದಲ್ಲಿ ಅಪಾರ ಸಂಖ್ಯೆಯಲ್ಲಿ ಸೇರಿದ ಯುವತಿಯರು, ಮಹಿಳೆಯರು ಮನಸೋ ಇಚ್ಚೆ ಸಂಭ್ರಮಿಸಿದರು. ಹಾಸ್ಯ ಚಟಾಕಿಗಳಿಗೆ ಮನ ಬಿಚ್ಚಿ ನಕ್ಕರು. ಇದರೊಂದಿಗೇ ಆರೋಗ್ಯ ಸಂಬಂಧ ವೈದ್ಯರು ಹೇಳಿದ ಮಾತುಗಳನ್ನು ಮನಸಿಟ್ಟು ಆಲಿಸಿದರು.

ಬೆಳಗಾವಿ ನಗರ ಹಾಗೂ ಜಿಲ್ಲೆಯ ವಿವಿಧೆಡೆಯಿಂದ ವನಿತೆಯರು ಸೇರಿದರು. ‘ಚಂದನವನ ನೆಚ್ಚಿನ ನಟಿ’ಯ ವೇಷಭೂಷಣ ಸ್ಪರ್ಧೆಗಾಗಿ ಹಲವರು ವಿಶಿಷ್ಟ ವೇಷ ಧರಿಸಿಕೊಂಡು ಬಂದರು. ಗೃಹಿಣಿಯರು, ವಿವಿಧ ಶಾಲೆ–ಕಾಲೇಜು ಶಿಕ್ಷಕಿಯರು, ವೈದ್ಯರು, ನೃತ್ಯಗಾರ್ತಿಯರು, ಮಹಿಳಾ ಸಂಘಟನೆಗಳು, ವನಿತಾ ಮಂಡಳಗಳು, ಕಾಲೇಜು ವಿದ್ಯಾರ್ಥಿನಿಯರು, ಸ್ತ್ರೀಶಕ್ತಿ ಸಂಘಗಳು, ಆಶಾ ಕಾರ್ಯಕರ್ತೆಯರು ಸೇರಿದಂತೆ ಎಲ್ಲ ಸ್ತರದ ಮಹಿಳೆಯರೂ ಕಾರ್ಯಕ್ರಮಕ್ಕೆ ಶೋಭೆ ತಂದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಡಾ.ಹೆಬ್ಬಾಳಕರ್ಸ್ ಕ್ಲಿನಿಕ್ನ ಚರ್ಮರೋಗ ತಜ್ಞೆ ಡಾ.ಹಿತಾ ಮೃಣಾಲ್ ಹೆಬ್ಬಾಳಕರ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಒಂದಾದ ಮೇಲೊಂದು ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ಕನ್ನಡದ ಅಂಕಿಗಳನ್ನು ‘ಉಲ್ಟಾ’ ಹೇಳುವ ಮೋಜಿನಾಟ ಸಭಿಕರನ್ನು ನಗೆಗಡಲಲ್ಲಿ ತೇಲಿಸಿತು.

ಸ್ಪಂದನಾ ಇವೆಂಟ್ಸ್ನ ಕಲಾವಿದೆಯರ ಸಂಗೀತ ಹಾಗೂ ಭರತನಾಟ್ಯ ಕಾರ್ಯಕ್ರಮಗಳು ಪ್ರೇಕ್ಷಕರನ್ನು ಸಾಂಸ್ಕೃತಿಕ ಲೋಕಕ್ಕೆ ಸೆಳೆದವು. ಅದರಲ್ಲೂ ಕಲಾವಿದೆ ಶಾಂತಾ ಆಚಾರ್ಯ ಅವರು ಪ್ರದರ್ಶಿಸಿದ ‘ಕಾಂತಾರ’ ಚಿತ್ರದ ‘ವರಾಹ ರೂಪಂ’ ಯಕ್ಷಗಾನ ಪ್ರದರ್ಶನ ಮಂತ್ರಮುಗ್ಧಗೊಳಿಸಿತು.

ಬಳಿಕ, ವೇದಿಕೆಗೆ ಬಂದ ಲಿಂಗಾಯತ ಮಹಿಳಾ ಸಮಾಜ ಸಂಘಟನೆಯ ವನಿತೆಯರು ಇಡೀ ಸಮಾರಂಭಕ್ಕೆ ಹೊಸ ಹುಮ್ಮಸ್ಸು ತಂದರು. ಗೃಹಿಣಿಯರೇ ಸೇರಿ ಕಟ್ಟಕೊಂಡ ನೃತ್ಯ ತಂಡ ಕನ್ನಡ ಚಲನಚಿತ್ರ ಗೀತೆಗಳಿಗೆ ಇನ್ನಿಲ್ಲದಂತೆ ಕುಣಿಯಿತು. ಅವರನ್ನು ಕಂಡು ಪ್ರೇಕ್ಷಕ ವಲಯದಿಂದ ಹರ್ಷದ ಹೊನಲು ಹರಿಯಿತು. ಮೇಲೆ ಗೃಹಿಣಿಯರು ಹಾಡಿಗೆ ತಕ್ಕಂತೆ ಹೆಜ್ಜೆ ಹಾಕುತ್ತಿದ್ದರೆ ವೇದಿಕೆ ಕೆಳಗಿದ್ದ ವನಿತೆಯರೂ ಮೈ ಮರೆತು ಕುಣಿಯಲಾರಂಭಿಸಿದರು. ಉಳಿದವರೆಲ್ಲ ತಮ್ಮ ಮೊಬೈಲ್ಗಳನ್ನು ತೆರೆದು ಸಂಭ್ರಮ ದಕ್ಷಣಗಳನ್ನು ವಿಡಿಯೊ, ಫೋಟೊ ಕ್ಲಿಕ್ಕಿಸಿದರು.

ಪಾಕ ಪ್ರವೀಣ ಸಂಜೀವ ಇನಾಮದಾರ ಅವರು ‘ಆಚಾರಿ ಪನೀರ್’ ಎಂಬ ಪನೀರ್ನ ವಿಶೇಷ ಖಾದ್ಯವನ್ನು ಸ್ಥಳದಲ್ಲೇ ಸಿದ್ಧಪಡಿಸಿದರು. ಮನೆಗೆ ಏಕಾಏಕಿ ಅತಿಥಿಗಳು ಬಂದಾಗ ಹತ್ತೇ ನಿಮಿಷದಲ್ಲಿ ಸಿದ್ಧಪಡಿಸಬಹುದಾದ ಈ ಖಾದ್ಯ ಮಹಿಳೆಯರ ಮನ ಗೆದ್ದಿತು. ಸತ್ವಯುತವೂ, ಆರೋಗ್ಯ ಯುತವೂ ಆದ ಖಾದ್ಯವನ್ನು ವೇದಿಕೆ ಮುಂದಿದ್ದ ಕೆಲವರು ನಾಲಿಗೆ ಚಪ್ಪರಿಸಿ ಸವಿದರು.

ಇಡೀ ಕಾರ್ಯಕ್ರಮವನ್ನು ಸೂಜಿಗಲ್ಲಿನಂತೆ ಹಿಡಿದುಟ್ಟುಕೊಂಡಿದ್ದು ನಿರೂಪಕಿ ಸ್ನೇಹಾ ನೀಲಪ್ಪ ಗೌಡ ಅವರು. ಅರಳುಹಿಡಿದಂತೆ ಮಾತನಾಡಿ, ಮಾತಿನ ಮೋಡಿಯಲ್ಲೇ ಅವರು ಸಭಿಕರನ್ನು ರಂಜಿಸಿದರು. ಪ್ರತಿಯೊಂದು ಚಟುವಟಿಕೆಯಲ್ಲೂ ಎಲ್ಲರೂ ಭಾಗವಹಿಸುವಂತೆ ಮಾಡಿದರು. ಮೇಲಿಂದ ಮೇಲೆ ಬರುತ್ತಿದ್ದ ಚಪ್ಪಾಳೆಗಳ ಸುರಿಮಳೆ ಕಾರ್ಯಕ್ರಮಕ್ಕೆ ಇನ್ನಷ್ಟು ಹುರುಪು ನೀಡಿತು.

ಬರೋಬ್ಬರಿ ನಾಲ್ಕು ತಾಸುಗಳವರೆಗೆ ನಡೆದ ಕಾರ್ಯಕ್ರಮದಲ್ಲಿ ಸಂಭ್ರಮ, ಸಂತೋಷ ಇಮ್ಮಡಿಸಿತು. ಮಹಿಳೆಯರು ಅಲ್ಪೋಪಹಾರದ ಜತೆಗೆ ಆನಂದದ ಕ್ಷಣಗಳನ್ನೂ ಹೊತ್ತು ಸಾಗಿದರು.

‘ಶಕ್ತಿಯ ಇನ್ನೊಂದು ರೂಪವೇ ನಾರಿ’

‘ಶಕ್ತಿಗೆ ಇರುವ ಇನ್ನೊಂದು ಹೆಸರೇ ಮಹಿಳೆ. ಅದಕ್ಕಾಗಿಯೇ ಮಹಿಳೆಯನ್ನು ಶಕ್ತಿಸ್ವರೂಪಿಣಿ ಎನ್ನುತ್ತಾರೆ. ತಾನು ಅಬಲೆಯಲ್ಲ ಸಬಲೆ ಎಂಬುದು ಯಾರೂ ಕೊಟ್ಟ ಬಿರುದಲ್ಲ. ಅದನ್ನು ಹೆಣ್ಣುಮಕ್ಕಳೇ ತಮ್ಮ ಸಾಮರ್ಥ್ಯದ ಸಾಬೀತು ಮಾಡಿದ್ದಾರೆ’ ಎಂದು ಹೆಬ್ಬಾಳಕರ್ಸ್ ಕ್ಲಿನಿಕ್ನ ಚರ್ಮರೋಗ ತಜ್ಞೆ ಡಾ.ಹಿತಾ ಮೃಣಾಲ್ ಹೆಬ್ಬಾಳಕರ ಅಭಿಪ್ರಾಯಪಟ್ಟರು.

‘ಭೂಮಿಕಾ ಕ್ಲಬ್ ಸಂಭ್ರಮ’ ಉದ್ಘಾಟಿಸಿ ಮಾತನಾಡಿದ ಅವರು, ‘ಎಲ್ಲ ದೇವರುಗಳು ಸಂಹಾರ ಮಾಡಲು ಆಗದ ಮಹಿಷಾಸುರನನ್ನು ಕೊನೆಗಾಣಿಸಲು ಶಕ್ತಿಮಾತೆಯೇ ಅವತರಿಸಬೇಕಾಯಿತು. ರಾಕ್ಷಸ ಸಂಹಾರ ಮಾಡಿ ಲೋಕ ಕಾಪಾಡಿದ್ದನ್ನು ನಾವು ಪುರಾಣದಲ್ಲಿ ಕೇಳಲಿದ್ದೇವೆ. ಕಲಿಯುಗದಲ್ಲೂ ನಾರಿ ಅದೇ ಪಾತ್ರ ನಿರ್ವಹಿಸುತ್ತಿದ್ದಾಳೆ. ದುಷ್ಟ ಶಕ್ತಿಗಳಿಂದ ಸಮಾಜವನ್ನು, ಕುಟುಂಬವನ್ನು ರಕ್ಷಣೆ ಮಾಡುತ್ತಿದ್ದಾಳೆ. ನಾವು ಅದನ್ನು ಗುರುತಿಸಬೇಕು ಅಷ್ಟೇ’ ಎಂದರು.

‘ಬಾಲ್ಯದಲ್ಲಿ ತಂದೆ, ತಾರುಣ್ಯದಲ್ಲಿ ಪತಿ, ವಯಸ್ಸಾದ ಮೇಲೆ ಮಕ್ಕಳು; ಹೀಗೆ ಮಹಿಳೆ ಇನ್ನೊಬ್ಬರ ಅಂಕಿತದಲ್ಲೇ ಇರಬೇಕಾದ ಕಾಲವಿತ್ತು. ಆದರೆ, ಆಧುನಿಕ ಮಹಿಳೆ ಬದಲಾಗಿದ್ದಾಳೆ. ಸಮಾನತೆ ಸಾಧಿಸುವಲ್ಲಿ ದಾಪುಗಾಲು ಇಡುತ್ತಿದ್ದಾಳೆ. ಇಂದಿರಾ ಗಾಂಧಿ, ಸುಧಾ ಮೂರ್ತಿ ಅವರಂಥ ಹಿರಿಯರ ಉದಾಹರಣೆಗಳನ್ನು ನಾವು ಕೊಡುತ್ತಿದ್ದೆವು. ಈಗ ಪುರುಷರನ್ನೂ ಮೀರಿಸಿ ಸಾಧನೆ ಮಾಡಿದವರು ಕೋಟ್ಯಂತರ ಮಹಿಳೆಯರು ಸಿಗುತ್ತಾರೆ’ ಎಂದರು.

‘ಹೆಣ್ಣುಮಕ್ಕಳು ಇಡೀ ಕುಟುಂಬವನ್ನು ಪೊರೆದು ಆರೋಗ್ಯವಾಗಿ ಇಟ್ಟುಕೊಳ್ಳುತ್ತಾರೆ. ಆದರೆ, ತಮ್ಮ ಆರೋಗ್ಯವನ್ನೇ ನಿರ್ಲಕ್ಷ್ಯ ಮಾಡುತ್ತಾರೆ. ನೀವು ಆರೋಗ್ಯವಾಗಿದ್ದರೆ ಮಾತ್ರ ಕುಟುಂಬ ಆರೋಗ್ಯವಾಗಿ ಇರಲು ಸಾಧ್ಯ. ನೀವು ಕಲಿತರೆ ಮಾತ್ರ ಇಡೀ ಕುಟುಂಬ ಶಿಕ್ಷಣ ಕಲಿಯಲು ಸಾಧ್ಯ. ನಿಮ್ಮ ಆರೋಗ್ಯ ನಿರ್ಲಕ್ಷ್ಯ ಮಾಡಬೇಡಿ’ ಎಂದೂ ಅವರು ಕಿವಿಮಾತು ಹೇಳಿದರು.

‘ಅರುಣಿಮಾ ಸಿನ್ಹಾ ಎಂಬ ಮಹಿಳೆ ಮೇಲೆ ದರೋಡೆಕೋರರು ದಾಳಿ ಮಾಡಿ ಕಾಲು ಕತ್ತರಿಸುತ್ತಾರೆ. ಕೆಲವೇ ವರ್ಷಗಳಲ್ಲಿ ಸವಾಲು ಗೆದ್ದು ಬಂದ ಆ ಮಹಿಳೆ ಕಾಲು ಇಲ್ಲದಿದ್ದರೂ ಮೌಂಟ್ ಎವರೆಸ್ಟ್ ಏರುತ್ತಾರೆ. ಜಗತ್ತಿನ ದೊಡ್ಡ ಹಿಮಶಿಖರ ಮೌಂಟ್ ಎವರೆಸ್ಟ್ ಏರಿದ ಮೊದಲ ಮಹಿಳೆ ಎಂಬ ಕೀರ್ತಿ ಪಡೆಯುತ್ತಾರೆ. ಹೆಣ್ಣು ಛಲ ಹಿಡಿದರೆ ಏನೆಲ್ಲ ಸಾಧಿಸಬಲ್ಲಳು ಎಂಬುದಕ್ಕೆ ಇದಕ್ಕಿಂತ ಉದಾಹರಣೆ ಬೇಕಿಲ್ಲ. ಕೋಲ್ಕತ್ತಾದ ರಾಯ್ ಎಂಬ ಮಹಿಳೆ ಕೇವಲ ಬೇಕರಿ ತಿನಿಸುಗಳನ್ನು ಉತ್ಪಾದಿಸಿ ವಾರ್ಷಿಕ 85 ಕೋಟಿ ವ್ಯವಹಾರ ಮಾಡುತ್ತಿದ್ದಾರೆ. ಸರ್ಕಾರದಿಂದ ‘ಭಾರತದ ಬೇಕರಿ ರಾಣಿ’ ಎಂಬ ಬಿರುದು ಪಡದಿದ್ದಾರೆ. ಇವೆಲ್ಲ ಹೆಣ್ಣುಮಕ್ಕಳಲ್ಲಿನ ಶಕ್ತಿ, ಸಾಮರ್ಥ್ಯದ ಉದಾಹರಣೆಗಳು. ನಿಮ್ಮಲ್ಲಿಯೂ ಅಂಥ ಶಕ್ತಿ ಇದೆ. ಅದನ್ನು ನೀವೇ ಗುರುತಿಸಿದ ದಿನ ನಿಮ್ಮ ಯಶಸ್ಸಿನ ಹಾದಿಗೆ ಬೆಳಕು ಬೀಳುತ್ತದೆ’ ಎಂದೂ ಡಾ.ಹಿತಾ ಸಲಹೆ ನೀಡಿದರು.

‘ನಿಮ್ಮ ನೆಚ್ಚಿನ ನಾಯಕಿ, ನನ್ನ ತಾಯಿಯವರಾದ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರು ಆರೋಗ್ಯವಾಗಿದ್ದಾರೆ. ಯಾರೂ ಆತಂಕ ಪಡಬೇಕಾಗಿಲ್ಲ. ಕೆಲವೇ ದಿನಗಳಲ್ಲಿ ಅವರು ನಿಮ್ಮ ಮುಂದೆ ಬಂದು ನಿಂತು ಮತ್ತೆ ಸೇವೆ ಮಾಡಲು ಹಾತೊರೆಯುತ್ತಿದ್ದಾರೆ’ ಎಂದು ಡಾ.ಹಿತಾ ಹೇಳಿದರು.

‘ಕ್ಯಾನ್ಸರ್: ನಿರ್ಲಕ್ಷ್ಯ ಮಾಡಬೇಡಿ’

‘ಹೆಣ್ಣು ಮಕ್ಕಳಲ್ಲಿ ವಿವಿಧ ನಮೂನೆಯ ಕ್ಯಾನ್ಸರ್ಗಳು ಕಾಣಿಸಿಕೊಳ್ಳುತ್ತಿವೆ. ಇದಕ್ಕೆ ನಮ್ಮ ಬದುಕಿನ ಶೈಲಿ, ಅಪನಂಬಿಕೆಗಳು ಹಾಗೂ ಅರಿವು ಇಲ್ಲದೇ ಇರುವುದು ಕೂಡ ಕಾರಣವಾಗಿದೆ. ಕ್ಯಾನ್ಸರ್ ಬಗ್ಗೆ ಸರಿಯಾದ ಮಾಹಿತಿ ಪಡೆದುಕೊಂಡರೆ, ಅದು ಎಂದೂ ತಾಗದಂತೆ ಬದುಕಲು ಸಾಧ್ಯ’ ಎಂದು ಕೆಎಲ್ಇ ಡಾ.ಶಿವಣಗಿ ಕ್ಯಾನ್ಸರ್ ಆಸ್ಪತ್ರೆಯ ಸ್ತ್ರೀರೋಗ ತಜ್ಞೆ ಡಾ.ಸ್ವಾತಿ ಗೌಡರ ಕಿವಿಮಾತು ಹೇಳಿದರು.

‘ಮಹಿಳೆಯರಲ್ಲಿ ಕಂಡುಬರುವ ಕ್ಯಾನ್ಸರ್’ ರೋಗಗಳ ಕುರಿತು ತಿಳಿವಳಿಕೆ ಮೂಡಿಸಿದ ಅವರು, ‘ಗರ್ಭಾಶಯ ಕ್ಯಾನ್ಸರ್, ಗರ್ಭಗಂಠದ ಕ್ಯಾನ್ಸರ್, ಅಂಡಾಶಯ ಕ್ಯಾನ್ಸರ್, ಯೋನಿ ಕ್ಯಾನ್ಸರ್... ಹೀಗೆ ವಿವಿಧ ರೋಗಗಳು ಆಧುನಿಕ ಜೀವನಶೈಲಿ ಕಾರಣಕ್ಕೆ ಉಂಟಾಗುತ್ತಿವೆ. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, 2022ರಲ್ಲಿ ಭಾರತದಲ್ಲಿ 14 ಲಕ್ಷ ಹೊಸ ಕ್ಯಾನ್ಸರ್ ರೋಗಿಗಳು ಒಂದೇ ವರ್ಷದಲ್ಲಿ ಪತ್ತೆಯಾಗಿದ್ದಾರೆ. ಇದರಲ್ಲಿ 9 ಲಕ್ಷ ಜನ ಸಾವನ್ನಪ್ಪಿದ್ದಾರೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಕ್ಯಾನ್ಸರ್ ಪೀಡಿತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ದ್ವಿಗುಣವಾಗುತ್ತ ಸಾಗಿದೆ. ಬಹಳ ತಡವಾಗಿ ಯಾರಲ್ಲಿ ಪತ್ತೆಯಾಗುತ್ತದೆಯೋ ಅವರು ಪ್ರಾಣ ಕಳೆದುಕೊಂಡಿದ್ದಾರೆ. ಭಾರತದ ಹೆಣ್ಣುಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುವುದು ಸ್ತನ ಕ್ಯಾನ್ಸರ್. ಇದು ಬರದಂತೆ ತಡೆಯುವ ಹಾಗೂ ಬಂದರೂ ಗುಣಮುಖ ಮಾಡುವಂಥ ಸಾಕಷ್ಟು ತಂತ್ರಜ್ಞಾನಗಳು ಈಗ ಇವೆ’ ಎಂದರು.

‘ವಯಸ್ಸಿಗಿಂತ ಬೇಗ ಮದುವೆಯಾಗುವುದು, ಸಣ್ಣ ವಯಸ್ಸಲ್ಲೇ ಲೈಂಗಿಕ ಸಂಬಂಧ ಹೊಂದುವುದು, ಒಬ್ಬರಿಗಿಂತ ಹೆಚ್ಚು ಸಂಬಂಧ ಹೊಂದುವುದು, ಧೂಮಪಾನ, ರೋಗ ನಿರೋಧಕ ಶಕ್ತಿ ಇಲ್ಲದಿರುವುದು ಹೀಗೆ ವಿವಿಧ ಕಾರಣಗಳು ಇದಕ್ಕೆ ಇವೆ’ ಎಂದು ತಿಳಿಸಿದರು.

‘ಹೆಣ್ಣುಮಕ್ಕಳು ಋತುಮತಿ ಆದ ಸಂದರ್ಭ, ಮಕ್ಕಳನ್ನು ಹೆತ್ತ ಸಂದರ್ಭದಲ್ಲಿ ತಮ್ಮ ಶುಚಿತ್ವ ಸರಿಯಾಗಿ ಕಾಯ್ದುಕೊಳ್ಳಬೇಕು. ಋತುಚಕ್ರದ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಬಟ್ಟೆ ಬಳಸಬೇಡಿ. ಸ್ಯಾನಿಟರ್ ಪ್ಯಾಡ್ಗಳನ್ನೇ ಬಳಸಿ. ಅದರಲ್ಲೂ ದಿನಕ್ಕೆ 4ರಿಂದ 6 ಪ್ಯಾಡ್ಗಳನ್ನು ಬದಲಿಸುವ ರೂಢಿ ಬೆಳೆಸಿಕೊಳ್ಳಿ’ ಎಂದೂ ಅವರು ಸಲಹೆ ನೀಡಿದರು.

ಲಕ್ಕಿ ಡ್ರಾ ಬಹುಮಾನದಲ್ಲಿ ಬಿ.ಎಂ.ಅನ್ನಪೂರ್ಣ ಅವರಿಗೆ ₹25 ಸಾವಿರ ಬೆಲೆಬಾಳುವ ನೀರು ಶುದ್ಧೀಕರಣ ಯಂತ್ರ ದೊರೆಯಿತು.

‘ಮಕ್ಕಳಲ್ಲಿನ ಕ್ಯಾನ್ಸರ್: ಇರಲಿ ಎಚ್ಚರಿಕೆ’

‘ಪುಟ್ಟ ಮಕ್ಕಳಲ್ಲಿಯೂ ಈಗ ವಿವಿಧ ಕಾರಣಕ್ಕೆ ಕ್ಯಾನ್ಸರ್ ರೋಗ ಕಾಣಿಸಿಕೊಳ್ಳುತ್ತಿವೆ. ಸಮಾಧಾನದ ಸಂಗತಿ ಏನೆಂದರೆ; ಕ್ಯಾನ್ಸರ್ ಪೀಡಿತರಾದ ಶೇ 80ರಷ್ಟು ಮಕ್ಕಳನ್ನು ಸಂಪೂರ್ಣ ಗುಣಮುಖ ಮಾಡಲು ಸಾಧ್ಯವಿದೆ’ ಎಂದು ಕೆಎಲ್ಇ ಡಾ.ಶಿವಣಗಿ ಕ್ಯಾನ್ಸರ್ ಆಸ್ಪತ್ರೆಯ ಮಕ್ಕಳ ರೋಗ ತಜ್ಞೆ ಡಾ.ಅಭಿಲಾಷಾ ಹೇಳಿದರು.

‘ಮಕ್ಕಳಲ್ಲಿ ಕಂಡುಬರುವ ಕ್ಯಾನ್ಸರ್’ ಕುರಿತು ಮಾಹಿತಿ ನೀಡಿದ ಅವರು, ‘ಮಕ್ಕಳಲ್ಲಿ ಹೆಚ್ಚಾಗಿ ರಕ್ತದ ಕ್ಯಾನ್ಸರ್ ಕಂಡು ಬರುತ್ತದೆ. ಕೆಲವು ಪ್ರಕರಣ ಅನುವಂಶೀಯ ಆಗಿವೆ. ಆದರೆ, ಬಹುಪಾಲು ಮಕ್ಕಳಲ್ಲಿ ಕೆಟ್ಟ ಆಹಾರ ಹಾಗೂ ರೋಗ ನಿರೋಧಕ ಶಕ್ತಿ ಇಲ್ಲದಿರುವುದು ಕಾರಣವಾಗಿದೆ’ ಎಂದರು.

‘ಮಕ್ಕಳಲ್ಲಿನ ಆರೋಗ್ಯದ ವ್ಯತ್ಯಾಸಗಳನ್ನು ಆರಂಭದಲ್ಲೇ ಗುರುತಿಸಿರಿ. ‘ಫಸ್ಟ್ ಚಾನ್ಸ್– ಬೆಸ್ಟ್ ಚಾನ್ಸ್’ ಎನ್ನುತ್ತಾರೆ. ಅದು ಕ್ಯಾನ್ಸರ್ ಪೀಡಿತ ಮಕ್ಕಳಿಗೂ ಅನ್ವಯಿಸುತ್ತದೆ. ಆದರೆ, ಭಾರತದಲ್ಲಿ ಮಕ್ಕಳ ಕ್ಯಾನ್ಸರ್ ಮುಂಚಿತವಾಗಿಯೇ ಗುರುತಿಸುವಂಥ, ಚಿಕಿತ್ಸೆ ನೀಡುವಂಥ ಆಸ್ಪತ್ರೆಗಳ ಸಂಖ್ಯೆ ಬಹಳ ವಿರಳವಿದೆ. ಪಾಲಕರಲ್ಲೂ ಈ ರೋಗದ ಬಗ್ಗೆ ಅರಿವು ಇಲ್ಲ. ಹೀಗಾಗಿ ಶೇ 75ರಷ್ಟು ಮಕ್ಕಳಿಗೆ ಕ್ಯಾನ್ಸರ್ ಬಂದಿದೆ ಎಂಬುದು ಬಹಳ ತಡವಾಗಿ ತಿಳಿಯುತ್ತಿದೆ’ ಎಂದರು.

ಮಕ್ಕಳಲ್ಲಿನ ಕ್ಯಾನ್ಸರ್ ಹೇಗೆ ಬರುತ್ತದೆ, ಪರಿಹಾರಗಳು ಏನು, ಪಾಲಕರು ಏನು ಮಾಡಬೇಕು ಎಂಬ ಬಗ್ಗೆಯೂ ಅವರು ಸ್ಪಷ್ಟ ಮಾಹಿತಿ ನೀಡಿದರು.

ಮಾಲಾಶ್ರೀ, ಉಮಾಶ್ರೀ, ಜಯಂತಿ, ಅಮೂಲ್ಯ...

‘ಭೂಮಿಕಾ ಕ್ಲಬ್’ ಸಂಭ್ರಮದಲ್ಲಿ ಚಂದನವನದ ನಟಿಯರಾದ ಮಾಲಾಶ್ರೀ, ಉಮಾಶ್ರೀ, ಅಮೂಲ್ಯ, ಜಯಂತಿ, ತಾರಾ, ಪಂಢರಿಬಾಯಿ ಕೂಡ ಕಾಣಿಸಿಕೊಂಡರು..!

ಹೌದು. ಇಲ್ಲಿನ ನಾಗನೂರು ಶ್ರೀ ಶಿವಬಸವೇಶ್ವರ ಟ್ರಸ್ಟ್ನ ವೃದ್ಧಾಶ್ರಮದ ಹಿರಿಯ ಜೀವಗಳು ತಮ್ಮ ನೆಚ್ಚಿನ ನಟಿಯರ ವೇಷದಲ್ಲಿ ಬಂದಿದ್ದು ಹೀಗೆ. 65ರಿಂದ 90 ವರ್ಷ ವಯಸ್ಸಿನ ಅಜ್ಜಿಯರು ಅತ್ಯಂತ ಅಚ್ಚುಕಟ್ಟಾಗಿ ವೇಷ ಭೂಷಣದಲ್ಲಿ ಬಂದಾಗ ಇಡೀ ಸಭಾಂಗಣದ ಚಿತ್ತ ಕೇಂದ್ರೀಕೃತವಾಯಿತು. ವೇದಿಕೆ ಮೇಲೆ ಒಬ್ಬೊಬ್ಬರೂ ಒಂದೊಂದು ಡೈಲಾಗು, ಹಾಡು ಹೇಳಿ ರಂಜಿಸಿದರು. ಹಿರಿಯ ವಯಸ್ಸಿನಲ್ಲೂ ಉತ್ಸಾಹ, ಉಲ್ಲಾಸ ಕಂಡು ಪ್ರೇಕ್ಷಕರ ಮಂತ್ರಮುಗ್ಧರಾದರು.

‘ನಾವ್ ಪ್ರಜಾವಾಣಿ ಪೇಪರ್ ನೋಡಿ ಬಂದೇವರಿ’ ಎಂದು ಹಿರಿಯರು ಹೇಳಿದಾಗ ನಿರಂತರ ಕರತಾಡನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.