ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಸಂಕ್ರಾಂತಿ ಹಬ್ಬಕ್ಕೆ ಭರದ ಸಿದ್ಧತೆ, ಬೆಲೆ ಏರಿಕೆಯಲ್ಲಿಯೂ ಖರೀದಿ ಜೋರು

Last Updated 14 ಜನವರಿ 2020, 12:52 IST
ಅಕ್ಷರ ಗಾತ್ರ

ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಮಕರ ಸಂಕ್ರಾಂತಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಜನರುಸಿದ್ಧತೆ ಮಾಡಿಕೊಂಡಿದ್ದಾರೆ. ಹಬ್ಬದ ಮುನ್ನಾ ದಿನವಾದ ಮಂಗಳವಾರ ಹಣ್ಣು, ಹೂವು ಮೊದಲಾದ ಅಗತ್ಯ ಸಾಮಗ್ರಿಗಳ ಖರೀದಿ ಜೋರಾಗಿ ನಡೆಯಿತು.

ವರ್ಷದ ಮೊದಲನೇ ಹಬ್ಬವಾದ ಸಂಕ್ರಾಂತಿಗೆ ಸಜ್ಜಾಗಿರುವ ಜನತೆಗೆ ಬೆಲೆ ಏರಿಕೆ ಬಿಸಿ ತಟ್ಟಿದೆ. ಎಳ್ಳು, ಬೆಲ್ಲ ಹಂಚಿ ಸ್ನೇಹ ಬೆಸೆಯುವ ಹಬ್ಬ ಆಚರಣೆಯ ಸಂಭ್ರಮ ಒಂದೆಡೆ ಇದ್ದರೆ, ಇನ್ನೊಂದೆಡೆ ಅದಕ್ಕೆ ಬೇಕಾಗುವ ಎಳ್ಳು, ಶೇಂಗಾ, ಬೆಲ್ಲ ಮೊದಲಾದ ಅಗತ್ಯ ಸಾಮಗ್ರಿಗಳ ಬೆಲೆ ಏರಿಕೆಯ ಬಿಸಿ ತಟ್ಟಿದೆ.

ಅಗತ್ಯ ವಸ್ತುಗಳ ದರ ಏರಿಕೆ: ‘ಗುಣಮಟ್ಟದ ಆಧಾರದ ಮೇಲೆ ಎಳ್ಳು(1 ಪಾಕೆಟ್‌) 50 ಗ್ರಾ.ಗೆ ₹ 5ರಿಂದ ₹10., 100 ಗ್ರಾ. ₹10ರಿಂದ ₹ 15, 200 ಗ್ರಾಂಗೆ ₹ 20ರಿಂದ ₹ 25 ಇತ್ತು. ಶೇಂಗಾ ಎಳ್ಳುಂಡೆ 100 ಗ್ರಾಂ.ಗೆ ₹ 20 ಇತ್ತು.ಕ್ಯಾರೆಹಣ್ಣು (ಒಂದು ಮಾಲೆ) ₹ 15–20, ಹಸಿ ಅವರೆಕಾಳು ₹ 20ರಿಂದ ₹ 25 (1 ಪಾವ್ ಸೇರು), ಜವಾರಿ ಬಟಾಣಿ ಕೆ.ಜೆ ₹ 90ರಿಂದ ₹100, ಈರುಳ್ಳಿ ಕಟ್ಟು (1ಕ್ಕೆ) ₹ 10ರಿಂದ ₹ 15 ಇತ್ತು. ಕಬ್ಬು ₹ 10–₹15ಕ್ಕೆ (ಮೂರು ಗಿಣ್ಣುಗಳುಳ್ಳ 2ಕ್ಕೆ) ಮಾರಾಟವಾಯಿತು. ಸಂಕ್ರಾಂತಿ ಹಬ್ಬದ ಅಂಗವಾಗಿ ಕೆಲವು ಸಾಮಗ್ರಿಗಳು ಬೆಲೆ ಏರಿಕೆಯಾಗಿದೆ. ಹಬ್ಬದ ಬಳಿಕ ಇಳಿಯಲಿದೆ’ ಎಂದು ಚಿಲ್ಲರೆ ವ್ಯಾಪಾರಿಯೊಬ್ಬರು ತಿಳಿಸಿದರು.

ಹೂವಿನ ಬೆಲೆಯಲ್ಲೂ ಹೆಚ್ಚಳವಾಗಿದೆ. ಚಿಲ್ಲರೆ ವ್ಯಾಪಾರಿಗಳು ಸೇವಂತಿಗೆ ಮಾಲೆಯೊಂದಕ್ಕೆ ₹ 20ರಿಂದ ₹ 50, ಚೆಂಡು ಹೂವು ಕೆ.ಜಿ ₹ 50ರಿಂದ ₹ 60, ಮಲ್ಲಿಗೆ ಮಾಲೆ (1 ಮಾರು) ₹ 10ರಿಂದ ₹15ಕ್ಕೆ, ಗುಲಾಬಿ ಹೂವಿಗೆ (1ಕ್ಕೆ) ₹ 10ಕ್ಕೆ ಮಾರುತ್ತಿದ್ದರು. ಸಂಕ್ರಾಂತಿ ಹಬ್ಬದ ಅಂಗವಾಗಿ ಕಿರಾಣಿ ಅಂಗಡಿಗಳಲ್ಲಿ ಗುರೆಳ್ಳು ಕೆ.ಜೆ.ಗೆ ₹ 90– ₹100, ಪುಣಾಣಿ ₹ 70ರಿಂದ ₹ 80, ಶೇಂಗಾ ₹ 90ರಿಂದ ₹ 100 ಇತ್ತು. ಬೆಲ್ಲಕ್ಕೂ ಬೇಡಿಕೆ ಇತ್ತು.

‘ಬೆಲೆ ಏರಿಕೆಯಾಗಿದೆ. ಹಾಗೆಂದು ಸಂಪ್ರದಾಯ ಬಿಡಲು ಆಗುವುದಿಲ್ಲ. ಸಂಕ್ರಾಂತಿಯು ವರ್ಷದ ಮೊದಲ ಹಬ್ಬ. ಅಗತ್ಯಕ್ಕೆ ತಕ್ಕಷ್ಟೇ ಸಾಮಗ್ರಿಗಳನ್ನು ಖರೀದಿಸಿ ಆಚರಿಸುತ್ತಿದ್ದೇವೆ. ಹಸಿ ಬಟಾಣಿ, ಅವರೆಕಾಳು, ಈರುಳ್ಳಿ, ಬದನೆಕಾಯಿ, ಗಜ್ಜರಿ ಬೆಲೆ ತುಂಬಾ ಏರಿಕೆಯಾಗಿದೆ’ ಎಂದು ಖಡೇಬಜಾರ್‌ ಖರೀದಿಯಲ್ಲಿ ತೊಡಗಿದ್ದ ಗ್ರಾಹಕಅಪ್ಪಾಸಾಹೇಬ ದೇಸಾಯಿ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT