ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಳಗಾವಿ | 219 ದೇಶಗಳಿಗೆ ವಾಣಿಜ್ಯ ವಸ್ತುಗಳು ರಫ್ತು

ಬೆಳಗಾವಿಯ ಪ್ರಧಾನ ಅಂಚೆ ಕಚೇರಿಯಿಂದ ದೇಶದ ಗಡಿಯಾಚೆಗೂ ಸೇವೆ ವಿಸ್ತರಣೆ, ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ
Published 30 ನವೆಂಬರ್ 2023, 5:15 IST
Last Updated 30 ನವೆಂಬರ್ 2023, 5:15 IST
ಅಕ್ಷರ ಗಾತ್ರ

ಬೆಳಗಾವಿ: ಸ್ಥಳೀಯವಾಗಿಯೇ ಜನರಿಗೆ ವಿವಿಧ ಪತ್ರಗಳು, ದಾಖಲೆಗಳು ಹಾಗೂ ವಿವಿಧ ಫಲಾನುಭವಿಗಳಿಗೆ ಪಿಂಚಣಿ ತಲುಪಿಸುತ್ತಿದ್ದ ಅಂಚೆ ಕಚೇರಿಗಳು ಈಗ ವಿದೇಶಗಳಿಗೆ ವಾಣಿಜ್ಯ ವಸ್ತುಗಳನ್ನು ರಫ್ತುಗೊಳಿಸುತ್ತಿವೆ. ಇಲ್ಲಿನ ಪ್ರಧಾನ ಅಂಚೆ ಕಚೇರಿಯಲ್ಲಿ ತೆರೆದಿರುವ ‘ಅಂಚೆ ರಫ್ತು ಕೇಂದ್ರ’ ಕಳೆದ ಎಂಟು ತಿಂಗಳಲ್ಲಿ 1,500ಕ್ಕೂ ಅಧಿಕ ಪಾರ್ಸಲ್‌ಗಳನ್ನು ವಿವಿಧ ದೇಶಗಳಿಗೆ ಕಳುಹಿಸಿ, ₹15 ಲಕ್ಷಕ್ಕೂ ಅಧಿಕ ಆದಾಯ ಗಳಿಸಿದೆ.

ಖಾಸಗಿ ಸಂಸ್ಥೆಗಳು ಇಂಥ ಸೇವೆ ಒದಗಿಸುವುದು ಸಾಮಾನ್ಯವಾಗಿತ್ತು. ಆದರೆ, ದರ ದುಬಾರಿಯಾಗಿತ್ತು. ಈಗ ಅಂಚೆ ಇಲಾಖೆಯೇ ರಫ್ತು ಕೇಂದ್ರದ ಮೂಲಕ ಅಮೆರಿಕ, ಯುನೈಟೆಡ್‌ ಕಿಂಗ್‌ಡಮ್‌, ನ್ಯೂಜಿಲೆಂಡ್‌, ಇಂಗ್ಲೆಂಡ್‌, ಸಿಂಗಾಪುರ, ಫ್ರಾನ್ಸ್, ಆಸ್ಟ್ರೇಲಿಯಾ ಸೇರಿದಂತೆ 219 ದೇಶಗಳಿಗೆ ವಾಣಿಜ್ಯ ವಸ್ತುಗಳನ್ನು ಕಳುಹಿಸುತ್ತಿದೆ. ಗ್ರಾಹಕರಿಗೆ ಕೈಗೆಟುಕುವ ದರವಿದೆ.

‘ನಾನು ವಾಟರ್‌ ಕಲರ್‌ ಪೇಂಟ್‌, ಬ್ರಷ್‌ ಮತ್ತಿತರ ವಸ್ತುಗಳನ್ನು ಕೆನಡಾ, ಅಮೆರಿಕಕ್ಕೆ ಕಳುಹಿಸುತ್ತಿದ್ದೇನೆ. 15 ದಿನಗಳಲ್ಲಿ ಅವು ಗ್ರಾಹಕರನ್ನು ತಲುಪುತ್ತಿವೆ. ಇನ್ನೂ ಬೇಗ ತಲುಪಿದರೆ, ಉದ್ಯಮದ ಬೆಳವಣಿಗೆಗೂ ಸಹಕಾರಿಯಾಗುತ್ತದೆ’ ಎಂದು ಸ್ಥಳೀಯ ಉದ್ಯಮಿ ಸೃಷ್ಟಿ ಕಾರ್ಜಿನ್ನಿ ‘ಪ‍್ರಜಾವಾಣಿ’ಗೆ ತಿಳಿಸಿದರು.

ಏನೇನು ರಫ್ತು?:

‘ಹೋಮಿಯೋಪಥಿಕ್‌ ಮತ್ತು ಆಯುರ್ವೇದಿಕ್‌ ಔಷಧಗಳು, ವಾಟರ್‌ ಕಲರ್‌ ಪೇಂಟ್‌, ಆಹಾರ ಧಾನ್ಯಗಳು, ತಿಂಡಿ ತಿನಿಸುಗಳನ್ನು ರಫ್ತು ಮಾಡುತ್ತಿದ್ದೇವೆ. ವಿವಿಧ ವಸ್ತುಗಳನ್ನು ಗರಿಷ್ಠ 35 ಕೆ.ಜಿಯವರೆಗೆ ಕಳುಹಿಸುತ್ತಿದ್ದೇವೆ. ಅಮೆರಿಕ, ಕೆನಡಾಗೆ ಹೆಚ್ಚಾಗಿ ರಫ್ತಾಗುತ್ತಿವೆ. ದಿನೇದಿನೆ ಗ್ರಾಹಕರ ಸಂಖ್ಯೆ ಹೆಚ್ಚುತ್ತಿದೆ’ ಎಂದು ಪ್ರಧಾನ ಅಂಚೆ ಕಚೇರಿಯ ಅಧಿಕಾರಿಗಳು ತಿಳಿಸಿದರು.

‘ದೇಶದಲ್ಲಿ 800ಕ್ಕೂ ಅಧಿಕ ಅಂಚೆ ಕಚೇರಿಗಳಲ್ಲಿ ರಫ್ತು ಕೇಂದ್ರ ಆರಂಭಗೊಂಡಿವೆ. ಬೆಳಗಾವಿಯಲ್ಲಿ ಟಿಳಕವಾಡಿ ಮತ್ತು ಶಿವಾಜಿ ನಗರ ಅಂಚೆ ಕಚೇರಿಗಳಲ್ಲೂ ಈ ವ್ಯವಸ್ಥೆಯಿದೆ. ಆರಂಭಿಕ ಹಂತದಲ್ಲಿ ವಿವಿಧ ವಸ್ತುಗಳು ವಿದೇಶದಲ್ಲಿರುವ ಜನರಿಗೆ ತಲುಪಲು ತಡವಾಗುತ್ತಿದ್ದದ್ದು ನಿಜ. ಆದರೆ, ಕಸ್ಟಮ್‌ ಕ್ಲಿಯರೆನ್ಸ್‌ ವ್ಯವಸ್ಥೆ ಡಿಜಿಟಲೀಕರಣಗೊಂಡ ನಂತರ ಈ ಅವಧಿ ಕಡಿಮೆಯಾಗಿದೆ. ದೇಶದ ಗಡಿಯಾಚೆ ಇರುವವರಿಗೆ ನಾನಾ ವಸ್ತುಗಳನ್ನು ತಲುಪಿಸಲು ಉದ್ಯಮಿಗಳು, ಸಂಬಂಧಿಕರು ಮತ್ತು ಸ್ನೇಹಿತರಿಗೆ ಅನುಕೂಲವಾಗಿದೆ’ ಎಂದು ಹೇಳಿದರು.

ನಮ್ಮ ಅಂಚೆ ಕಚೇರಿಯಿಂದ 219 ದೇಶಗಳಿಗೆ ವಾಣಿಜ್ಯ ವಸ್ತುಗಳನ್ನು ತಲುಪಿಸುತ್ತಿರುವುದಕ್ಕೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮುಂದಿನ ದಿನಗಳಲ್ಲಿ ಈ ಸೇವೆಯನ್ನು ಹೆಚ್ಚಿನ ಜನರು ಬಳಸಿಕೊಳ್ಳುವಂತೆ ಜಾಗೃತಿ ಮೂಡಿಸುತ್ತಿದ್ದೇವೆಇಲಾಖೆ
–ವಿಜಯ ವಾದೋನಿ ಅಧೀಕ್ಷಕ ಬೆಳಗಾವಿ ವಿಭಾಗ ಅಂಚೆ
ನಾನು ಹೋಮಿಯೊಪಥಿ ಔಷಧಗಳನ್ನು ಕೆನಡಾಗೆ ಕಳುಹಿಸುತ್ತಿದ್ದೇನೆ. ಅಂಚೆ ಇಲಾಖೆ ಆರಂಭಿಸಿದ ಹೊಸ ಸೇವೆಯಿಂದ ಗ್ರಾಹಕರಿಗೆ ಅನುಕೂಲವಾಗಿದೆ. ಆದರೆ ತ್ವರಿತವಾಗಿ ವಸ್ತುಗಳು ಜನರನ್ನು ತಲುಪಬೇಕು. ನಾವು ಕಳುಹಿಸಿದ ವಸ್ತು ಈಗ ಯಾವ ಸ್ಥಳದಲ್ಲಿದೆ ಎಂದು ನಿಖರವಾಗಿ ತಿಳಿಯುವ ವ್ಯವಸ್ಥೆಯಾಗಬೇಕು
–ಜೀವನ ಪೋರವಾಲ್‌ ಸ್ಥಳೀಯ ಉದ್ಯಮಿ

ರಫ್ತುದಾರರ ಸಭೆ 30ರಂದು ಬೆಳಗಾವಿಯ ವಾಣಿಜ್ಯೋದ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ಸಭಾಂಗಣದಲ್ಲಿ ನವೆಂಬರ್‌ 30ರಂದು ರಫ್ತುದಾರರ ಸಭೆ ನಡೆಯಲಿದೆ. ಜನಪ್ರತಿನಿಧಿಗಳು ಕೈಗಾರಿಕಾದ್ಯೋಮಿಗಳು ಭಾಗವಹಿಸಲಿದ್ದಾರೆ. ಇದರಲ್ಲಿ ‘ಪೋಸ್ಟ್‌ ಆಫೀಸ್‌ ಎಕ್ಸ್‌ಪೋರ್ಟ್‌ ಸೆಂಟರ್‌’ನಲ್ಲಿ ಲಭ್ಯವಿರುವ ಸೇವೆಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಕುರಿತು ಕೈಗಾರಿಕೋದ್ಯಮಿಗಳಿಗೆ ತಿಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT