ಬೆಳಗಾವಿ: ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ಸಾಲಹಳ್ಳಿಯಿಂದ ಚನ್ನಮ್ಮನ ಕಿತ್ತೂರುವರೆಗಿನ ಮಾರ್ಗದಲ್ಲಿ ಭಾನುವಾರ ಬೆಳಿಗ್ಗೆ ಜನರ ದಂಡೇ ನೆರೆದಿತ್ತು. ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಪ್ರಯುಕ್ತ ಅವರು ಉತ್ಸಾಹದಿಂದ ಮಾನವ ಸರಪಳಿ ನಿರ್ಮಿಸಿ, ಪ್ರಜಾಪ್ರಭುತ್ವದ ಆಶಯಗಳಿಗೆ ಕೈಜೋಡಿಸಿದರು.
ಭಾನುವಾರ ರಜೆ. ಆದರೆ, ಎಲ್ಲ ಶಾಲೆ ಮಕ್ಕಳು, ಕಾಲೇಜು ವಿದ್ಯಾರ್ಥಿಗಳು, ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿ ನಸುಕಿನಲ್ಲೇ ಎದ್ದು ಲಗುಬಗೆಯಿಂದ ಸಿದ್ಧಗೊಂಡರು. ಮಹಿಳೆಯರು ಗಡಿಬಿಡಿಯಲ್ಲೇ ದೈನಂದಿನ ಕೆಲಸಗಳನ್ನೆಲ್ಲ ಬದಿಗಿಟ್ಟು ಬಂದರು. ನೌಕರರು, ಕಾರ್ಮಿಕರು, ರೈತರು, ಯುವಜನರು ರಾಜ್ಯ ಹೆದ್ದಾರಿ ಮತ್ತು ರಾಷ್ಟ್ರೀಯ ಹೆದ್ದಾರಿಗಳ ಬದಿಗೆ ಸಾಲುಗಟ್ಟಿ ನಿಂತರು. ಒಂದಲ್ಲ, ಎರಡಲ್ಲ ಬರೋಬ್ಬರಿ 145 ಕಿ.ಮೀ. ದೂರದವರೆಗೂ, ಕೈಕೈ ಜೋಡಿಸಿ ನಿಂತು ಒಗ್ಗಟ್ಟು ಪ್ರದರ್ಶಿಸಿದರು.
ಪ್ರಜೆಗಳಿಂದ ಪ್ರಜೆಗಳಿಗಾಗಿ ಇರುವ ಪ್ರಜಾಪ್ರಭುತ್ವದ ಮಹತ್ವ ಸಾರಲು ಪ್ರಜೆಗಳೇ ಮುಂದಾದರು. ಈ ಮಾರ್ಗದಲ್ಲಿ ಹಾಡು, ಕುಣಿತ, ಜೈಕಾರಗಳ ಹೊಳೆಯೇ ಹರಿಯಿತು. ಭಾರತದ ಪ್ರಜಾಪ್ರಭುತ್ವ, ಅದಕ್ಕೆ ಬೇರು ಆಗಿರುವ ಸಂವಿಧಾನದ ಶ್ರೇಷ್ಠತೆ ಮತ್ತು ಅದನ್ನು ಕಾಪಾಡಲು ಇರಬೇಕಾದ ಒಗ್ಗಟ್ಟನ್ನು ವಿಶ್ವಕ್ಕೆ ತೋರಿದರು.
ಜಾತಿ ಭೇದ ಮರೆತು, ಸಹೋದರತ್ವ ಭಾವದಿಂದ ಪಾಲ್ಗೊಂಡ 1 ಲಕ್ಷಕ್ಕೂ ಅಧಿಕ ಜನರು, ‘ಒಳಿತು, ಕೆಡಕು ಏನೇ ಬಂದರೂ, ನಾವೆಲ್ಲ ಸಮಾನವಾಗಿ ಸ್ವೀಕರಿಸುತ್ತೇವೆ. ಒಂದಾಗಿ ಇರುತ್ತೇವೆ’ ಎನ್ನುವ ಸಂದೇಶ ಸಾರಿದರು.
ಸಾಲಹಳ್ಳಿಯಿಂದ ಯರಗಟ್ಟಿ, ಹಲಕಿ ಕ್ರಾಸ್, ನೇಸರಗಿ, ಸಾಂಬ್ರಾ, ಬೆಳಗಾವಿ, ಹಲಗಾ, ಹಿರೇಬಾಗೇವಾಡಿ, ಎಂ.ಕೆ.ಹುಬ್ಬಳ್ಳಿ ಮಾರ್ಗವಾಗಿ ಚನ್ನಮ್ಮನ ಕಿತ್ತೂರುವರೆಗೆ ನಿರ್ಮಿಸಿದ ಮಾನವ ಸರಪಳಿ, ಸರ್ವರಲ್ಲೂ ಏಕತಾ ಭಾವ ಮೂಡಿಸಿತು. ಜಿಲ್ಲೆಯಲ್ಲಿ ಇದೇ ಮೊದಲ ಸಲ ಇಷ್ಟೊಂದು ದೂರದವರೆಗೆ ಕೈಕೈ ಹಿಡಿದ ಜನರು, ಹೊಸ ದಾಖಲೆ ಬರೆದರು. ಕೆಲವು ಸಣ್ಣ–ಪುಟ್ಟ ಗೊಂದಲ ಹೊರತುಪಡಿಸಿದರೆ, ಮಾನವ ಸರಪಳಿ ಕಾರ್ಯಕ್ರಮ ಯಶಸ್ವಿಯಾಯಿತು. ಇದರಲ್ಲಿ ಭಾಗಿಯಾದ ಸಂತೃಪ್ತಭಾವ ಜನರಲ್ಲಿ ಕಂಡುಬಂತು. ಮಾನವ ಸರಪಳಿಯ ಮಾರ್ಗುದುದ್ದಕ್ಕೂ ಅಧಿಕಾರಿಗಳನ್ನು ನಿಯೋಜಿಸಲಾಗಿತ್ತು. ಜಾನಪದ ಕಲಾತಂಡಗಳ ಪ್ರದರ್ಶನ ಕಾರ್ಯಕ್ರಮಕ್ಕೆ ಮೆರುಗು ತಂದುಕೊಟ್ಟಿತು.
ಮಾನವ ಬಂಧುತ್ವ ಗಟ್ಟಿಗೊಳಿಸಿ: ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸತೀಶ ಜಾರಕಿಹೊಳಿ, ‘ಪ್ರಬಲ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿದ ಮತ್ತು ವಿವಿಧತೆಯಲ್ಲಿ ಏಕತೆ ಹೊಂದಿದ ದೇಶ ನಮ್ಮದು. ಇಲ್ಲಿನ ಪ್ರಜಾಪ್ರಭುತ್ವ ವ್ಯವಸ್ಥೆಗೆ ಸಂವಿಧಾನ ಭದ್ರ ಅಡಿಪಾಯ ಹಾಕಿದೆ. ನಮ್ಮ ಮೂಲಭೂತ ಹಕ್ಕುಗಳನ್ನು ರಕ್ಷಿಸುವುದೇ ಪ್ರಜಾಪ್ರಭುತ್ವ’ ಎಂದರು.
‘ಪ್ರತಿಯೊಬ್ಬರೂ ಪ್ರಜಾಪ್ರಭುತ್ವದ ಆಶಯಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಈ ಮಾನವ ಸರಪಳಿ ಮೂಲಕ ಮಾನವ ಬಂಧುತ್ವವನ್ನೂ ಗಟ್ಟಿಗೊಳಿಸಿ’ ಎಂದು ಕರೆಕೊಟ್ಟರು.
ಶಾಸಕರಾದ ಆಸೀಫ್ ಸೇಠ್, ವಿಠ್ಠಲ ಹಲಗೇಕರ, ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ನಗರ ಪೋಲಿಸ್ ಕಮಿಷನರ್ ಯಡಾ ಮಾರ್ಟಿನ ಮಾರ್ಬನ್ಯಾಂಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ, ಪ್ರೊಬೇಷನರಿ ಐಎಎಸ್ ಅಧಿಕಾರಿ ದಿನೇಶಕುಮಾರ ಮೀನಾ, ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ, ನಗರ ಪೊಲೀಸ್ ಉಪ ಆಯುಕ್ತ ರೋಹನ್ ಜಗದೀಶ ಇತರರಿದ್ದರು. ಸಮಾಜ ಕಲ್ಯಾಣ ಇಲಾಖೆ ಜಂಟಿನಿರ್ದೆಶಕ ರಾಮನಗೌಡ ಕನ್ನೋಳಿ ಸ್ವಾಗತಿಸಿದರು. ಸುನೀತಾ ದೇಸಾಯಿ ನಿರೂಪಿಸಿದರು. ಸ್ವಾತಿ ಸಂವಿಧಾನ ಪೀಠಿಕೆ ಬೋಧಿಸಿದರು.
ಸಂವಿಧಾನವೇ ನಮ್ಮ ಧರ್ಮ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ‘ನಿಜವಾಗಿಯೂ ಪ್ರಜಾಪ್ರಭುತ್ವ ಎಂದರೇನು ಎಂಬುದನ್ನು ಪ್ರತಿಯೊಬ್ಬರೂ ಅರ್ಥೈಸಿಕೊಳ್ಳಬೇಕು. ಸಂವಿಧಾನವನ್ನು ಮನಃಪೂರ್ವಕವಾಗಿ ಒಪ್ಪಿಕೊಂಡು ಮುನ್ನಡೆಯಬೇಕು. ಸಂವಿಧಾನವೇ ನಮ್ಮ ನಿಜವಾದ ಧರ್ಮ’ ಎಂದರು. ‘ಜನರಲ್ಲಿ ಮಾನವೀಯ ಮೌಲ್ಯ ಬಿತ್ತುವ ಎಲ್ಲ ಮನಸ್ಸುಗಳನ್ನು ಒಂದುಗೂಡಿಸುವ ಈ ಕಾರ್ಯ ವಿಶಿಷ್ಟವಾದದ್ದು. ಸರ್ವಧರ್ಮೀಯರು ಮಾನವ ಸರಪಳಿ ನಿರ್ಮಿಸಿ ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿದಿರುವುದು ಅಭಿಮಾನದ ಸಂಗತಿ. ಸಂವಿಧಾನದ ಮೌಲ್ಯಗಳು ಮತ್ತು ಪ್ರಜಾಪ್ರಭುತ್ವದ ಆಶಯಗಳನ್ನು ಪ್ರತಿಯೊಬ್ಬರೂ ತಮ್ಮ ಬದುಕಿನಲ್ಲಿ ಅನುಸರಿಸಬೇಕು’ ಎಂದು ಕರೆಕೊಟ್ಟರು. ‘ಬೀದರ್‌ನಿಂದ ಚಾಮರಾಜನಗರದವರೆಗೆ ಆಯೋಜಿಸಿದ್ದ ಮಾನವ ಸರಪಳಿ ಕಾರ್ಯಕ್ರಮ ಯಶಸ್ವಿಯಾಗಿದೆ. ಮಾನವೀಯ ಮೌಲ್ಯ ಸಾಕಾರಗೊಳಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ 1.5 ಲಕ್ಷಕ್ಕೂ ಹೆಚ್ಚು ನೌಕರರು ಭಾಗವಹಿಸಿರುವುದು ಹೆಮ್ಮೆಯ ವಿಚಾರ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.