ಬೆಳಗಾವಿ: ಬೆಳಗಾವಿ ಟೆಕ್ನಾಲಜಿ ಕಂಪನಿಗಳ ಸಂಘ (BeTCA) ವತಿಯಿಂದ ನಗರದಲ್ಲಿ ಭಾನುವಾರ ಆಯೋಜಿಸಿದ್ದ ‘ಬೆಳಗಾವಿ ಟೆಕ್ ಮೀಟ್–2024’ ಯಶಸ್ವಿಯಾಯಿತು.
ವಿವಿಧ ಭಾಗಗಳಿಂದ ಬಂದಿದ್ದ ಉದ್ಯಮಿಗಳು, ತಾಂತ್ರಿಕ ತಜ್ಞರು ಸಮಾವೇಶದಲ್ಲಿ ಪಾಲ್ಗೊಂಡರು. ನವೀನ ತಂತ್ರಜ್ಞಾನಗಳ ಪರಿಚಯ, ವಿನಯಮ ಹಾಗೂ ಸ್ಟಾರ್ಟಪ್‌ಗಳ ಪ್ರತಿನಿಧಿಗಳು ಪಾಲ್ಗೊಂಡರು. ಬೆಳಗಾವಿಯಲ್ಲಿ ತಂತ್ರಜ್ಞಾನ ಅಭಿವೃದ್ಧಿಗೆ ಪೂರಕವಾದ ಚರ್ಚೆಗಳನ್ನು ನಡೆಸುವಲ್ಲಿ ಈ ಸಮಾವೇಶ ಯಶಸ್ವಿಯಾಯಿತು.
‘ಸ್ಟಾರ್ಟಪ್’ ಕುರಿತಾಗಿ ನಡೆದ ಗೋಷ್ಠಿಯಲ್ಲಿ ಸ್ಟಾರ್ಟಪ್‌ಗಳ ಆರಂಭಿಸುವುದು ಹೇಗೆ, ಆರ್ಥಿಕ ಚಟುವಟಿಕೆ ಕೈಗೊಳ್ಳುವುದು ಹೇಗೆ, ಸ್ಥಳೀಯ ಸಂಪನ್ಮೂಲ ಬಳಸಿಕೊಂಡು ನವೀನ ತಂತ್ರಜ್ಞಾನದ ಮೂಲಕ ಬೆಳವಣಿಕೆ ಕಾಣುವುದು ಹೇಗೆ ಎಂಬ ವಿಷಯಗಳ ಚರ್ಚೆ ನಡೆಯಿತು.
‘ಬೆಳಗಾವಿ ಟೆಕ್‌ಮೀಟ್ ನಮ್ಮ ನಿರೀಕ್ಷೆಗಳನ್ನು ಮೀರಿ ಯಶಸ್ವಿಯಾಗಿದೆ. ಭಾಗವಹಿಸಿದವರ ಉತ್ಸಾಹ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಾತಿ ಕಂಡುಬಂದಿದ್ದು ವಿಶೇಷ. ನಮ್ಮ ಸ್ಥಳೀಯ ತಂತ್ರಜ್ಞಾನ ಸಮುದಾಯದ ಆಸಕ್ತಿ ಏನು ಎಂಬುದು ಇದರಿಂದ ಗೊತ್ತಾಗಿದೆ. ಈ ಸಮಾವೇಶವು ಬೆಳಗಾವಿಯನ್ನು ತಂತ್ರಜ್ಞಾನ ನಾವೀನ್ಯತೆಯ ಕೇಂದ್ರವಾಗಿ ಬಿಂಬಿಸುವ ಹೆಜ್ಜೆಯಾಗಲಿದೆ’ ಎಂದು ‘ಬೆಟ್ಕಾ’ ಅಧ್ಯಕ್ಷ ಆರ್.ಕೆ. ಪಾಟೀಲ ಅಭಿಪ್ರಾಯಪಟ್ಟರು.
ಅಡ್ಡಿಗಳನ್ನು ಮೀರಿ ಉದ್ಯಮ ಬೆಳೆಸುವುದು ಹೇಗೆ ಎಂಬ ವಿಚಾರವಾಗಿ ನಡೆದ ಗೋಷ್ಠಿಯಲ್ಲಿ ಆದಿಲ್ ಬಂದೂಕ್‌ವಾಲಾ, ಸುರೇಶ ಪಾಟೀಲ, ಆರ್.ಕೆ.ರಾಜ್ಯಶ್ರೀ, ಧ್ರುವಿನ್ ಮೆಹತಾ ಮತ್ತು ಮುಜಾಫರ್ ಅಲಿ ಶೇಖ್‌ಜಿ ಅವರು ಭಾಗವಹಿಸಿದರು.
ಬೆಟ್ಕಾ ಸದಸ್ಯರಾದ ಹಿತೇಶ್ ಧರ್ಮದಾಸನಿ, ಕೆ.ಉದಯ ಇತರರು ಪಾಲ್ಗೊಂಡರು.