ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಳಗಾವಿ ಅಧಿವೇಶನ | ಮುಂದುವರಿದ ನಾನಾ ಸಂಘಟನೆಗಳ ಪ್ರತಿಭಟನೆ

Published 14 ಡಿಸೆಂಬರ್ 2023, 12:36 IST
Last Updated 14 ಡಿಸೆಂಬರ್ 2023, 12:36 IST
ಅಕ್ಷರ ಗಾತ್ರ

ಬೆಳಗಾವಿ: ವಿಧಾನಮಂಡಲ ಚಳಿಗಾಲ ಅಧಿವೇಶನದ 9ನೇ ದಿನವಾದ ಗುರುವಾರವೂ ತಾಲ್ಲೂಕಿನ ಹಲಗಾದ ಸುವರ್ಣ ಗಾರ್ಡನ್‌ ಬಳಿ ಇರುವ ವೇದಿಕೆ ಹಾಗೂ ಕೊಂಡಸಕೊಪ್ಪ ಗುಡ್ಡದಲ್ಲಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ನಡೆದವು.

ಬಾಕಿ ಬಿಲ್‌ ಪಾವತಿಸಿ

‘ಸರ್ಕಾರದ ವಿವಿಧ ಇಲಾಖೆಗಳ ವ್ಯಾಪ್ತಿಯಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಕೈಗೊಂಡಿರುವ ಕಾಮಗಾರಿಗಳ ಬಿಲ್‌ ಹಲವು ವರ್ಷಗಳಿಂದ ಬಾಕಿ ಉಳಿದಿರುವುದರಿಂದ ಗುತ್ತಿಗೆದಾರರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಾಗಾಗಿ ಕಾಮಗಾರಿ ಪೂರ್ಣಗೊಳಿಸಿದವರ ಬಿಲ್‌ ಶೀಘ್ರವಾಗಿ ಪಾವತಿಸಬೇಕು’ ಎಂದು ಆಗ್ರಹಿಸಿ ಜಿಲ್ಲಾ ಕಾರ್ಯನಿರತ ಗುತ್ತಿಗೆದಾರರ ಸಂಘದವರು ಪ್ರತಿಭಟಿಸಿದರು.

‘ಅನಗತ್ಯವಾಗಿ ಮಾನದಂಡ ಮತ್ತು ನಿಯಮ ಹೇರಿ ಸ್ಥಳೀಯ ಗುತ್ತಿಗೆದಾರರನ್ನು ಅನರ್ಹಗೊಳಿಸಲಾಗುತ್ತಿದೆ. ಬೇರೆ ರಾಜ್ಯದ ಗುತ್ತಿಗೆದಾರರಿಗೆ ಅನುಕೂಲವಾಗುವಂತೆ ಪ್ಯಾಕೇಜ್‌ ವ್ಯವಸ್ಥೆಯಡಿ ಟೆಂಡರ್‌ ಕರೆಯಲಾಗುತ್ತಿದೆ. ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರವು ವಿವಿಧ ಕಾಮಗಾರಿ ಒಗ್ಗೂಡಿಸಿ, ₹100 ಕೋಟಿ ಪ್ಯಾಕೇಜ್‌ನ ಕಾಮಗಾರಿಗೆ ಟೆಂಡರ್‌ ಆಹ್ವಾನಿಸಿದೆ. ಇದನ್ನು ಹಿಂದಕ್ಕೆ ಪಡೆದು, ಸಣ್ಣ ಮೊತ್ತದ ಕಾಮಗಾರಿಗಳನ್ನಾಗಿಸಿ ಮರುಟೆಂಡರ್‌ ಕರೆಯಬೇಕು. ಸ್ಥಳೀಯ ಗುತ್ತಿಗೆದಾರರಿಗೆ ಅನುಕೂಲ ಕಲ್ಪಿಸಲು ಪ್ಯಾಕೇಜ್‌ ಟೆಂಡರ್‌ ಪದ್ಧತಿ ರದ್ದುಗೊಳಿಸಬೇಕು’ ಎಂದು ಆಗ್ರಹಿಸಿದರು.

ಕೃಷ್ಣಾಭಾಗ್ಯ ಜಲನಿಗಮ ಮತ್ತು ಕರ್ನಾಟಕ ನೀರಾವರಿ ನಿಗಮದ ಕಾಮಗಾರಿ ಉತ್ತರ ಕರ್ನಾಟಕ ವ್ಯಾಪ್ತಿಯಲ್ಲಿ ನಡೆಯುತ್ತವೆ. ಹಾಗಾಗಿ ಆಡಳಿತಾತ್ಮಕ ದೃಷ್ಟಿಯಿಂದ ಈ ನಿಗಮಗಳ ವ್ಯವಸ್ಥಾಪಕರ ಕಚೇರಿಗಳನ್ನು ಆಲಮಟ್ಟಿ ಮತ್ತು ಬೆಳಗಾವಿಗೆ ಸ್ಥಳಾಂತರಿಸಬೇಕು. ಕಾಮಗಾರಿಗೆ ವಿಧಿಸಲಾಗುವ ಜಿಎಸ್‌ಟಿಯನ್ನು ಶೇ12ರಿಂದ 18ಕ್ಕೆ ಹೆಚ್ಚಿಸಲಾಗಿದೆ. ಹೆಚ್ಚುವರಿಯಾದ ಶೇ 6ರಷ್ಟು ಜಿಎಸ್‌ಟಿಯನ್ನು ಸರ್ಕಾರವೇ ಭರಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಮಂಡಿಸಿದರು.

ಸಚಿವರಾದ ಸತೀಶ ಜಾರಕಿಹೊಳಿ, ಸಂತೋಷ ಲಾಡ್‌ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ, ಗುತ್ತಿಗೆದಾರರ ಸಮಸ್ಯೆ ಆಲಿಸಿದರು.

‘ನಿಮ್ಮ ಬೇಡಿಕೆಯನ್ನು ಸರ್ಕಾರದ ಗಮನಕ್ಕೆ ತರುತ್ತೇವೆ’ ಎಂದು ಭರವಸೆ ನೀಡಿದರು.

ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ, ಜಿಲ್ಲಾ ಘಟಕದ ಅಧ್ಯಕ್ಷ ಆರ್‌.ಡಿ.ಪದ್ಮನ್ನವರ, ಎಸ್‌.ಆರ್‌.ಘೂಳಪ್ಪನವರ, ಪ್ರಧಾನ ಕಾರ್ಯದರ್ಶಿ ಸಿ.ಎಂ.ಜೋನಿ, ಖಜಾಂಚಿ ಎಸ್‌.ಸಿ.ಗುಡಸ, ಯು.ಎಂ.ರಾಚಣ್ಣವರ, ಎಂ.ಆರ್‌.ತುಪ್ಪದ, ಎಸ್‌.ಡಿ.ಹಮ್ಮಿಣಿ, ಎಸ್‌.ಎಸ್‌.ಕಾಗತಿಕರ ಇತರರಿದ್ದರು.

ಹೊರಗುತ್ತಿಗೆ ಪದ್ಧತಿ ಕೈಬಿಡಿ

ಹೊರಗುತ್ತಿಗೆ ಪದ್ಧತಿ ಕೈಬಿಡಬೇಕು. ಸರ್ಕಾರದಿಂದಲೇ ನೇರವಾಗಿ ವೇತನ ಪಾವತಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಸರ್ಕಾರಿ ಹಾಸ್ಟೆಲ್‌ ಮತ್ತು ವಸತಿ ಶಾಲೆಗಳ ಹೊರಗುತ್ತಿಗೆ ನೌಕರರ ಸಂಘದ ರಾಜ್ಯ ಸಮಿತಿಯವರು ಪ್ರತಿಭಟಿಸಿದರು.

‘ಸಮಾಜಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ, ಕಸ್ತೂರಬಾ ವಸತಿ ಶಾಲೆಗಳಡಿ ಹಲವು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದೇವೆ. ನಮಗೆ ಕಾನೂನುಬದ್ಧವಾಗಿ ಯಾವುದೇ ಸೌಲಭ್ಯ ಸಿಕ್ಕಿಲ್ಲ’ ಎಂದು ದೂರಿದರು.

‘ನಮಗೆ ಸೇವಾಭದ್ರತೆ ಒದಗಿಸಬೇಕು. ಸಮಾಜಕಲ್ಯಾಣ ಇಲಾಖೆಯಲ್ಲಿ ಸಿಬ್ಬಂದಿ ಕಡಿತಗೊಳಿಸಿದ ಆದೇಶ ಹಿಂಪಡೆಯಬೇಕು. ಹಾಸ್ಟೆಲ್‌ಗಳಲ್ಲಿ ಕಡ್ಡಾಯವಾಗಿ ರಾತ್ರಿ ಕಾವಲುಗಾರರನ್ನು ನೇಮಿಸಬೇಕು’ ಎಂದು ಒತ್ತಾಯಿಸಿದರು.

ಅಧ್ಯಕ್ಷ ಭೀಮಶೆಟ್ಟಿ ಯಂಪಳ್ಳಿ, ಕೆ.ಹನುಮೇಗೌಡ, ಎಂ.ಜಂಬಯ್ಯ ನಾಯಕ, ಕೆ.ಮುನಿಯಪ್ಪ, ಹುಲುಗಪ್ಪ ಚಲವಾದಿ, ಪ್ರದೀಪ ದಳವಾಯಿ, ಗ್ಯಾನೇಜ ಕಡಗದ, ಪರಶುರಾಮ ಅದಳಗಿ, ಅಣ್ಣಬಸಪ್ಪ ದೇವೇಂದ್ರಪ್ಪ ಇತರರಿದ್ದರು.

ಮರುನೇಮಕ ಮಾಡಿಕೊಳ್ಳಿ

2021ರ ಮುಷ್ಕರದ ವೇಳೆ ವಜಾಗೊಂಡಿರುವ(ಎಫ್‌ಐಆರ್‌ ಬಾಕಿ ಇರುವ) ನೌಕರರನ್ನು ಯಾವುದೇ ಷರತ್ತು ವಿಧಿಸದೆ ಮರುನೇಮಕ ಮಾಡಿಕೊಳ್ಳಬೇಕು. ನೌಕರರು ಮತ್ತು ಅವರ ಕುಟುಂಬಸ್ಥರ ವಿರುದ್ಧ ಪೊಲೀಸ್‌ ಠಾಣೆಗಳಲ್ಲಿ ದಾಖಲಾದ ಪ್ರಕರಣಗಳನ್ನು ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಸಂಘದವರು ಧರಣಿ ನಡೆಸಿದರು.

ಅಧ್ಯಕ್ಷ ಎಚ್‌.ಆರ್‌.ಜಗದೀಶ, ಪ್ರಧಾನ ಕಾರ್ಯದರ್ಶಿ ರಾಮು ಡಿ., ಖಜಾಂಚಿ, ಎಚ್‌.ಕೆ.ಯೋಗೇಶ, ಎನ್‌.ಸುಧಾಕರ ರೆಡ್ಡಿ, ಎಚ್‌.ಡಿ.ನಾಗೇಂದ್ರ, ಪಿ.ಉಮಾ ಇತರರಿದ್ದರು.

ಕನ್ನಡ ಶಾಲೆ ತೆರೆಯಲು ಆಗ್ರಹ

ಗಡಿಭಾಗದಲ್ಲಿ ಕನ್ನಡ ಮಾಧ್ಯಮ ಶಾಲೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ತೆರೆಯಬೇಕು. ರಾಜ್ಯದ ಎಲ್ಲ ಗ್ರಾಮಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಸ್ಮಶಾನಭೂಮಿ ಒದಗಿಸಬೇಕು. ಬೆಳಗಾವಿ ರೈಲ್ವೆ ನಿಲ್ದಾಣಕ್ಕೆ ಸಂಗೊಳ್ಳಿ ರಾಯಣ್ಣನ ಹೆಸರು ನಾಮಕರಣ ಮಾಡಬೇಕೆಂದು ಆಗ್ರಹಿಸಿ ಕರ್ನಾಟಕ ಪರಿಶಿಷ್ಟ ಪಂಗಡ ವಾಲ್ಮೀಕಿ ರಾಜ್ಯ ಯುವ ಘಟಕದವರು ಪ್ರತಿಭಟಿಸಿದರು. ಅಧ್ಯಕ್ಷ ಮಹೇಶ ಶೀಗಿಹಳ್ಳಿ ನೇತೃತ್ವ ವಹಿಸಿದ್ದರು.

ಹಲಗಾದ ಸುವರ್ಣ ಗಾರ್ಡನ್‌ ಬಳಿಯಿರುವ ವೇದಿಕೆಯಲ್ಲಿ ರಾಜ್ಯ ಸರ್ಕಾರಿ ಹಾಸ್ಟೆಲ್‌ ಮತ್ತು ವಸತಿ ಶಾಲೆಗಳ ಹೊರಗುತ್ತಿಗೆ ನೌಕರರ ಸಂಘದ ರಾಜ್ಯ ಸಮಿತಿಯವರು ಗುರುವಾರ ಪ್ರತಿಭಟನೆ ನಡೆಸಿದರು.

ಹಲಗಾದ ಸುವರ್ಣ ಗಾರ್ಡನ್‌ ಬಳಿಯಿರುವ ವೇದಿಕೆಯಲ್ಲಿ ರಾಜ್ಯ ಸರ್ಕಾರಿ ಹಾಸ್ಟೆಲ್‌ ಮತ್ತು ವಸತಿ ಶಾಲೆಗಳ ಹೊರಗುತ್ತಿಗೆ ನೌಕರರ ಸಂಘದ ರಾಜ್ಯ ಸಮಿತಿಯವರು ಗುರುವಾರ ಪ್ರತಿಭಟನೆ ನಡೆಸಿದರು.

ಪ್ರಜಾವಾಣಿ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT