ಬೆಳಗಾವಿ: ಕರ್ನಾಟಕ ಹಾಗೂ ಮಹಾರಾಷ್ಟ್ರದ ವಿವಿಧೆಡೆ ಬೈಕ್ ಕಳವು ಮಾಡಿದ ಇಬ್ಬರು ಆರೋಪಿಗಳನ್ನು ಗುರುವಾರ ಬಂಧಿಸಿದ ಪೊಲೀಸರು, ಅವರಿಂದ ₹8.25 ಲಕ್ಷ ಮೌಲ್ಯದ ಬೈಕುಗಳನ್ನು ವಶಕ್ಕೆ ಪಡೆದಿದ್ದಾರೆ.
ಮಹಾರಾಷ್ಟ್ರದ ಕೊಲ್ಹಾಪುರ ತಾಲ್ಲೂಕಿನ ಕಳಂಭದ ನಿವಾಸಿ ಸಂತೋಷ ರಾಮಚಂದ್ರ ನಿಶಾನೆ (30) ಹಾಗೂ ಗೋಕಾಕ ತಾಲ್ಲೂಕಿನ ತೆಳಗಿನಹಟ್ಟಿಯ ಭರಮಪ್ಪ ಯಲ್ಲಪ್ಪ ಕೊಪ್ಪದ (21) ಬಂಧಿತರು. ಇವರಿಂದ ವಿವಿಧ ಕಂಪನಿಗಳ 23 ಬೈಕುಗಳನ್ನು ವಶಕ್ಕೆ ಪಡೆಯಲಾಗಿದೆ.
ಗೋಕಾಕ ನಗರ, ಗ್ರಾಮೀಣ ಪ್ರದೇಶದಲ್ಲಿ ಇತ್ತೀಚೆಗೆ ದ್ವಿಚಕ್ರ ವಾಹನಗಳ ಕಳವು ಪ್ರಕರಣ ಹೆಚ್ಚಾಗಿದ್ದವು. ಬುಧವಾರ (ಆ.23) ಕುಂದರಗಿ ಗ್ರಾಮದ ಲಕ್ಷ್ಮೀ ದೇವಸ್ಥಾನದ ಎದುರಿಗೆ ನಿಲ್ಲಿಸಿದ್ದ ಬೈಕ್ ಕೂಡ ಕಳ್ಳತನವಾಗಿತ್ತು. ಈ ಬಗ್ಗೆ ಬೈಕ್ ಮಾಲೀಕರು ಅಂಕಲಗಿ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಈ ಪ್ರಕರಣದ ಜಾಡು ಹಿಡಿದು ತನಿಖೆ ಕೈಗೊಂಡ ಪೊಲೀಸರಿಗೆ ಇಬ್ಬರು ಅಂತರರಾಜ್ಯ ಕಳ್ಳತನ ಆರೋಪಿಗಳು ಸಿಕ್ಕಿಬಿದ್ದರು. ಇವರ ಬಂಧನದ ಮೂಲಕ ಮತ್ತಷ್ಟು ಪ್ರಕರಣಗಳು ಬೆಳಕಿಗೆ ಬಂದವು.
ಮಹಾರಾಷ್ಟ್ರದ ಕೊಲ್ಹಾಪುರ, ಕರವೀರ, ಇಂಚಲಕರಂಜಿ, ಹಾಥ್ ಕಣಗಲಾ ಹಾಗೂ ಕರ್ನಾಟಕದ ಬೆಳಗಾವಿ, ಗೋಕಾಕ, ಅಂಕಲಗಿ, ನಿಪ್ಪಾಣಿ, ಹುಕ್ಕೇರಿ, ಸಂಕೇಶ್ವರ ಸೇರಿದಂತೆ ಇನ್ನೂ ಹಲವು ಕಡೆ ಇವರು ಕಳ್ಳತನ ಮಾಡಿದ್ದಾರೆ ಎಂದು ಜಿಲ್ಲ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ ತಿಳಿಸಿದ್ದಾರೆ.
ಪ್ರಕರಣ ಭೇದಿಸಿದ ಹೆಚ್ಚುವರಿ ಎಂ.ವೇಣುಗೋಪಾಲ, ಗೋಕಾಕ ಸಿಪಿಐ ಗೋಪಾಲ ಆರ್. ರಾಠೋಡ, ಎಎಸ್‌ಪಿ ಡಿ.ಎಚ್.ಮುಲ್ಲಾ, ಅಂಕಲಗಿ ಪಿಎಸ್‌ಐ ಎಚ್.ಡಿ.ಯರಝರ್ವಿ, ಗೋಕಾಕ ಪಿಎಸ್‌ಐ ಎಂ.ಡಿ.ಘೋರಿ, ಗೋಕಾಕ ಗ್ರಾಮೀಣ ಪಿಎಸ್‌ಐ ಕಿರಣ ಮೋಹಿತ, ಕಾನ್‌ಸ್ಟೆಬಲ್‌ಗಳಾದ ಬಿ.ವಿ.ನೇರ್ಲಿ, ವಿಠ್ಠಲ ನಾಯಕ, ಡಿ.ಜಿ.ಕೊಣ್ಣೂರ, ಎಸ್.ವಿ.ಕಸ್ತೂರಿ, ಎಂ.ಬಿ.ತಳವಾರ, ಎಸ್.ಎಚ್.ದೇವರ, ಎಸ್.ಬಿ.ಚಿಪ್ಪಲಕಟ್ಟಿ, ಎಸ್.ಬಿ.ಯಲ್ಲಪ್ಪಗೌಡರ, ಪಿ.ಕೆ.ಹೆಬ್ಬಾಳ, ಎಂ.ಎಂ.ಹಾಲೊಳ್ಳಿ, ಎ.ಆರ್.ಮಾಳಗಿ ಅವರ ತಂಡವನ್ನು ಎಸ್ಪಿ ಅಭಿನಂದಿಸಿದ್ದಾರೆ.