ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಬೀಳುತ್ತಿರುವ ಪಕ್ಷಿಗಳು, ಕಳವಳ

ಹದ್ದು, ಗೂಬೆ ಹಾಗೂ ಗಿಡುಗಗಳೆ ಜಾಸ್ತಿ
Last Updated 17 ಮಾರ್ಚ್ 2021, 16:03 IST
ಅಕ್ಷರ ಗಾತ್ರ

ಬೆಳಗಾವಿ: ನಗರದಲ್ಲಿ ಕೆಲವು ದಿನಗಳಿಂದ ದೊಡ್ಡ ಪಕ್ಷಿಗಳು ಹಾರಲು ಆಗದೆ ಆಯಾಸದಿಂದ ನೆಲಕ್ಕೆ ಬೀಳುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವುದು ಕಂಡುಬಂದಿದೆ.

ಹದ್ದು, ಗೂಬೆ ಹಾಗೂ ಗಿಡುಗಗಳು ಈ ಸಮಸ್ಯೆಗೆ ಒಳಗಾಗಿರುವುದು ಕಂಡುಬಂದಿದೆ. ವಿಶೇಷವಾಗಿ ಇಂಡಾಲ್ಕೊ ಕಾರ್ಖಾನೆ, ವ್ಯಾಕ್ಸಿನ್ ಡಿಪೊ, ಕಾಲೇಜು ರಸ್ತೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅವು ಬೀಳುತ್ತಿರುವುದು ಗೊತ್ತಾಗಿದೆ. ಪಕ್ಷಿ ಪ್ರೇಮಿಗಳು ಅಥವಾ ಸ್ಥಳೀಯರು ಈ ವಿಷಯವನ್ನು ಆರಣ್ಯ ಇಲಾಖೆಯ ಗಮನಕ್ಕೆ ತಂದಿದ್ದಾರೆ. ಪ್ರಥಮ ಚಿಕಿತ್ಸೆ ನೀಡಿ ಪಕ್ಷಿಗಳನ್ನು ಅವರಿಗೆ ಒಪ್ಪಿಸಿದ್ದಾರೆ. ಪಕ್ಷಿಗಳ ಈ ಸ್ಥಿತಿಗೆ ಕಾರಣವೇನು ಎನ್ನುವ ಪ್ರಶ್ನೆಯು ಪಕ್ಷಿ ಪ್ರೇಮಿಗಳು ಹಾಗೂ ಅರಣ್ಯ ಇಲಾಖೆಯವರನ್ನು ಕಾಡುತ್ತಿದೆ. ದಿನೇ ದಿನೇ ಬಿಸಿಲು ಹೆಚ್ಚಾಗುತ್ತಿರುವುದು ಕಾರಣ ಇರಬಹುದು ಎಂದು ಕೆಲವರು ಹೇಳುತ್ತಾರೆ. ಆದರೆ, ಈ ಬಿಸಿಲಿನ ಝಳವು ಹದ್ದು, ಗೂಬೆ ಹಾಗೂ ಗಿಡುಗಗಳಿಗೆ ಮಾತ್ರವೇ ತಟ್ಟುತ್ತಿರುವುದೇಕೆ? ಬೇರೆ ಪಕ್ಷಿಗಳಿಗೆ ಅದರಿಂದ ತೊಂದರೆ ಆಗಿಲ್ಲವೇ ಎನ್ನುವ ಪ್ರಶ್ನೆಯೂ ಮೂಡುತ್ತಿದೆ.

ಕೆಲವು ಪಕ್ಷಿಗಳು ಕೆಳಗೆ ಬಿದ್ದ ನಂತರ ಚೇತರಿಸಿಕೊಳ್ಳಲಾಗದೆ ಸಾವಿಗೀಡಾದ ಉದಾಹರಣೆಗಳೂ ಇವೆ ಎನ್ನಲಾಗುತ್ತಿದೆ.

ನಂತರ ಏನಾದವು?: ‌‘ಪಕ್ಷಿಗಳು ಹಾರುವಾಗ ಇದ್ದಕ್ಕಿಂದಂತೆ ಬೀಳುತ್ತಿರುವ ಪ್ರಕರಣಗಳು ವರದಿಯಾಗಿವೆ. ಎರಡ್ಮೂರು ತಿಂಗಳಿಂದ 50ಕ್ಕೂ ಹೆಚ್ಚು ದೊಡ್ಡ ಪಕ್ಷಿಗಳು ಆಯಾಸದಿಂದ ಬಿದ್ದಿವೆ. ಇದನ್ನು ಸ್ಥಳೀಯರು ಇಲಾಖೆಯ ಗಮನಕ್ಕೆ ತಂದಿದ್ದಾರೆ. ಕೆಲವು ಪಕ್ಷಿಗಳನ್ನು ನಾವು ಉಪಚರಿಸಿ, ಪಶುಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಮರಳಿ ಕಾಡಿಗೆ ಬಿಟ್ಟಿದ್ದೇವೆ. ನಮ್ಮ ಮುಂದೆ ಹಾರಿ ಹೋಗಿರುತ್ತವೆ. ಬಳಿಕ ಅವು ಏನಾದವು ಎನ್ನುವುದು ಗೊತ್ತಾಗುವುದಿಲ್ಲ. ಗಾಯಗೊಂಡಿದ್ದ ಕೆಲವು ಪಕ್ಷಿಗಳು ಸಾವಿಗೀಡಾದ ಉದಾಹರಣೆಗಳಿವೆ. ಇದಕ್ಕೆ ವೈಜ್ಞಾನಿಕವಾಗಿ ನಿಖರ ಕಾರಣ ತಿಳಿಯುವುದಕ್ಕಾಗಿ ಪಶುಸಂಗೋಪನಾ ಇಲಾಖೆಗೆ ಪತ್ರ ಬರೆದಿದ್ದೇವೆ’ ಎಂದು ನಗರ ವಲಯ ಅರಣ್ಯಾಧಿಕಾರಿ ಶಿವಾನಂದ ಮಗದುಮ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪಕ್ಷಿಗಳ ಈ ಸ್ಥಿತಿಗೆ ಕಾರಣವೇನು ಎನ್ನುವುದು ಗೊತ್ತಾಗುತ್ತಿಲ್ಲ. ಬಿಸಿಲಿನ ತಾಪಮಾನವೂ ಕಾರಣವಿರಬಹುದು. ಆದರೆ, ಇತರ ಪಕ್ಷಿಗಳಿಗೆ ತೊಂದರೆ ಆಗಿಲ್ಲ. ಹದ್ದು, ಗೂಬೆ ಹಾಗೂ ಗಿಡುಗಗಳೇ ಏಕೆ ತೊಂದರೆಗೆ ಒಳಗಾಗುತ್ತಿವೆ ಎನ್ನುವುದು ಕಳವಳಕ್ಕೆ ಕಾರಣವಾಗಿದೆ. ಹಕ್ಕಿ ಜ್ವರ ಏನಾದರೂ ಬಂದಿದೆಯೇ ಎನ್ನುವುದನ್ನು ಖಾತ್ರಿಪಡಿಸಿಕೊಳ್ಳುವ ಉದ್ದೇಶದಿಂದ ಪಶುಸಂಗೋಪನಾ ಇಲಾಖೆ ನೆರವು ಕೇಳಿದ್ದೇವೆ. ಹದ್ದೊಂದರ ಕಳೇಬರವನ್ನು ಕೊಟ್ಟಿದ್ದೇನೆ. ಅದನ್ನು ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಿ, ಈ ಜಾತಿಯ ಪಕ್ಷಿಗಳು ಬಲಿ ಆಗುತ್ತಿರುವುದಕ್ಕೆ ಕಾರಣವೇನು ಎನ್ನುವುದನ್ನು ತಿಳಿಸಬೇಕು ಎಂದು ಕೋರಿದ್ದೇವೆ’ ಎಂದು ಮಾಹಿತಿ ನೀಡಿದರು.

‘ಅರಣ್ಯ ಇಲಾಖೆಯಿಂದ ಆ ರೀತಿಯ ಪತ್ರ ಬಂದಿಲ್ಲ’ ಎಂದು ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ.ಅಶೋಕ ಕೊಳ್ಳ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT