ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಳಗಾವಿ: ಹನುಮ ಧ್ವಜ ತೆರವು ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆ

Published 29 ಜನವರಿ 2024, 13:12 IST
Last Updated 29 ಜನವರಿ 2024, 13:12 IST
ಅಕ್ಷರ ಗಾತ್ರ

ಬೆಳಗಾವಿ: ಮಂಡ್ಯ ಜಿಲ್ಲೆಯ ಕೆರಗೋಡಿನಲ್ಲಿ ಅಳವಡಿಸಿದ್ದ ಹನುಮ ಧ್ವಜ ಮತ್ತು ಚನ್ನಮ್ಮನ ಕಿತ್ತೂರು ತಾಲ್ಲೂಕಿನ ಎಂ.ಕೆ.ಹುಬ್ಬಳ್ಳಿಯಲ್ಲಿನ ಕೇಸರಿ ಧ್ವಜ ತೆರವುಗೊಳಿಸಿರುವುದನ್ನು ಖಂಡಿಸಿ ನಗರದಲ್ಲಿ ಬಿಜೆಪಿ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.

ಇಲ್ಲಿನ ರಾಣಿ ಚನ್ನಮ್ಮನ ವೃತ್ತದಲ್ಲಿ ಸಮಾವೇಶಗೊಂಡ ಕಾರ್ಯಕರ್ತರು, ಜಿಲ್ಲಾಧಿಕಾರಿ ಕಚೇರಿಯವರೆಗೆ ಮೆರವಣಿಗೆ ಕೈಗೊಂಡರು. ‘ಕಾಂಗ್ರೆಸ್‌ ಸರ್ಕಾರ ಒಂದು ವರ್ಗದ ಜನರ ಓಲೈಕೆಗಾಗಿ ಈ ಧ್ವಜಗಳನ್ನು ತೆರವುಗೊಳಿಸಿದೆ. ಹಿಂದೂ ವಿರೋಧಿಯಾಗಿ ಕೆಲಸ ಮಾಡುತ್ತಿದೆ’ ಎಂದು ದೂರಿದರು.

‘ರಾಜ್ಯದಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ತರುತ್ತಿರುವ ಕಾಂಗ್ರೆಸ್‌ ತನ್ನ ನಿಲುವು ಬದಲಿಸಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಇಂಥ ಕೃತ್ಯ ಕೈಗೊಳ್ಳದಂತೆ ನಿರ್ದೇಶನ ಕೊಡಬೇಕು. ಇಲ್ಲದಿದ್ದರೆ ರಾಜ್ಯ ಸರ್ಕಾರವನ್ನೇ ವಜಾಗೊಳಿಸಬೇಕು’ ಎಂದು ಆಗ್ರಹಿಸಿ ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ ಮುಖಾಂತರ ರಾಜ್ಯಪಾಲರಿಗೆ ಮನವಿ ರವಾನಿಸಿದರು.

ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ, ‘ಅಯೋಧ್ಯೆಯಲ್ಲಿ ರಾಮನ ಮೂರ್ತಿ ಪ್ರತಿಷ್ಠಾಪಿಸಿದ ಅಂಗವಾಗಿ ಹಿಂದೂಗಳು ಕೆರಗೋಡಿನಲ್ಲಿ ಹನುಮ ಧ್ವಜ ಮತ್ತು ಎಂ.ಕೆ.ಹುಬ್ಬಳ್ಳಿಯಲ್ಲಿ ಕೇಸರಿ ಧ್ವಜ ಹಾರಿಸಿದ್ದರು. ರಾಜಕೀಯ ಭೇದವಿಲ್ಲದೆ ಎಲ್ಲ ಸಮುದಾಯಗಳ ಜನರೂ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂಭ್ರಮಿಸಿದ್ದರು. ಆದರೆ, ಕಾಂಗ್ರೆಸ್ ಸರ್ಕಾರದ ಸೂಚನೆಯಂತೆ ನಡೆದುಕೊಂಡ ಪೊಲೀಸರು ಕೆರಗೋಡಿನಲ್ಲಿ ಹಾರಿಸಿದ್ದ ಹನುಮ ಧ್ವಜ ತೆರವುಗೊಳಿಸಿ ಅವಮಾನಿಸಿದ್ದಾರೆ’ ಎಂದು ಆರೋ‍ಪಿಸಿದರು.

‘ರಾಷ್ಟ್ರಧ್ವಜ ಹಾರಿಸಲು ನಿಯಮಗಳಿವೆ. ಯಾವುದೇ ಸಮಯದಲ್ಲಿ ಅದನ್ನು ಎಲ್ಲಿಯಾದರೂ ಹಾರಿಸಲು ಅವಕಾಶವಿಲ್ಲ. ಸ್ವಾತಂತ್ರ್ಯೋತ್ಸವ ಹಾಗೂ ಗಣರಾಜ್ಯೋತ್ಸವ ಸಂದರ್ಭ ಸಾರ್ವಜನಿಕ ಸ್ಥಳಗಳು ಮತ್ತು ಸರ್ಕಾರಿ ಕಚೇರಿಗಳಲ್ಲಿ ರಾಷ್ಟ್ರಧ್ವಜ ಹಾರಿಸಬೇಕು. ಆದರೆ, ಹನುಮ ಧ್ವಜ ತೆರವುಗೊಳಿಸಿ, ಅದೇ ಧ್ವಜಸ್ತಂಭದ ಮೇಲೆ ರಾಷ್ಟ್ರಧ್ವಜ ಹಾರಿಸಿ ಧ್ವಜ ಸಂಹಿತೆಯನ್ನು ಉಲ್ಲಂಘಿಸಲಾಗಿದೆ. ಒಂದು ವರ್ಗದ ಓಲೈಕೆಗಾಗಿ ರಾಜ್ಯ ಸರ್ಕಾರ ಹಿಂದೂಗಳಿಗೆ ಅನ್ಯಾಯ ಮಾಡುತ್ತಿದೆ’ ಎಂದು ದೂರಿದರು.

ಸಂಸದೆ ಮಂಗಲಾ ಅಂಗಡಿ, ಪಕ್ಷದ ರಾಜ್ಯ ಘಟಕದ ಉಪಾಧ್ಯಕ್ಷ ಅನಿಲ ಬೆನಕೆ, ರಾಜ್ಯ ವಕ್ತಾರ ಎಂ.ಬಿ.ಝಿರಲಿ, ಮಾಜಿ ಶಾಸಕ ಸಂಜಯ ಪಾಟೀಲ, ರಾಜ್ಯ ಕಾರ್ಯಕಾರಿ ಸದಸ್ಯೆ ಉಜ್ವಲಾ ಬಡವನ್ನಾಚೆ, ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ಸುಭಾಷ ಪಾಟೀಲ, ಮಹಾನಗರ ಘಟಕದ ಅಧ್ಯಕ್ಷೆ ಗೀತಾ ಸುತಾರ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT