ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಿಕ್ಷೆ ರೂಪದಲ್ಲಿ ಪರಿಹಾರ ನೀಡಿದ ಸರ್ಕಾರ: ಬಿ.ವೈ. ವಿಜಯೇಂದ್ರ ಕಿಡಿ

Published 5 ಮೇ 2024, 6:36 IST
Last Updated 5 ಮೇ 2024, 6:36 IST
ಅಕ್ಷರ ಗಾತ್ರ

ಬೆಳಗಾವಿ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾಂಗ್ರೆಸ್ ಸರ್ಕಾರ ಬರದಿಂದ ತತ್ತರಿಸಿದ ರೈತರ ನೆರವಿಗೆ ಬಂದಿಲ್ಲ. ಬೆಳೆಹಾನಿಗೆ ಸೂಕ್ತ ಪರಿಹಾರ ನೀಡುವ ಬದಲಿಗೆ, ಭಿಕ್ಷೆ ರೂಪದಲ್ಲಿ ಪ್ರತಿ ಹೆಕ್ಟೇರ್‌ಗೆ ₹2,000 ನೀಡಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದರು.

ತಾಲ್ಲೂಕಿನ ಬಾಳೇಕುಂದ್ರಿ ಕೆ.ಎಚ್ ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್‌ ಪರ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

‘ಬರಗಾಲದಲ್ಲಿ ಸಿದ್ದರಾಮಯ್ಯ ರೈತರ ನೆರವಿಗೆ ಬರುವ ಬದಲಿಗೆ, ಕೇಂದ್ರದವರು ಪರಿಹಾರ ಬಿಡುಗಡೆಗೊಳಿಸಿಲ್ಲ ಎಂದು ಆರೋಪಿಸುತ್ತಿದ್ದಾರೆ. ಈ ಹಿಂದೆ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅತಿವೃಷ್ಟಿಯಿಂದ ಆಗಿದ್ದ ಬೆಳೆ ಹಾನಿಗೆ ಪ್ರತಿ ಹೆಕ್ಟೇರ್‌ಗೆ ₹24 ಸಾವಿರ ಪರಿಹಾರ ನೀಡಿದ್ದರು’ ಎಂದರು.

‍‘ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಹುಬ್ಬಳ್ಳಿ ಕಾಲೇಜಿನಲ್ಲಿ ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆಯಾಯಿತು. ಸುವರ್ಣ ವಿಧಾನಸೌಧದಲ್ಲಿ ವಿಧಾನಮಂಡಲ ಚಳಿಗಾಲದ ಅಧಿವೇಶನ ನಡೆದ ಸಂದರ್ಭ, ಬೆಳಗಾವಿ ತಾಲ್ಲೂಕಿನಲ್ಲಿ ಮಹಿಳೆಯೊಬ್ಬರನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡಲಾಯಿತು. ಆದರೆ, ಯಾವೊಬ್ಬ ಸಚಿವ ಸಂತ್ರಸ್ತೆ ಭೇಟಿಯಾಗಿ ಆತ್ಮವಿಶ್ವಾಸ ತುಂಬಲಿಲ್ಲ. ರಾಜ್ಯದಲ್ಲಿ ಮಹಿಳೆಯರ ಸುರಕ್ಷತೆ ಅಪಾಯದ ಹಂತದಲ್ಲಿದೆ’ ಎಂದು ದೂರಿದರು.

‘ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು. ರಾಜ್ಯದಲ್ಲಿ ಬಿಜೆಪಿಯ 28 ಸಂಸದರು ಅಭ್ಯರ್ಥಿಗಳು ಗೆಲ್ಲಬೇಕೆಂದು ಸಂಕಲ್ಪ ಮಾಡಿ, ರಾಜ್ಯದಲ್ಲಿ ಪ್ರವಾಸ ಮಾಡುತ್ತಿದ್ದೇನೆ. ಕಳೆದೊಂದು ದಶಕದಿಂದ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರದಲ್ಲಿ ಯಾವುದೇ ಭ್ರಷ್ಟಾಚಾರದ ಆರೋಪವಿಲ್ಲ. ದೇಶದ ಜನರು ಮೋದಿ ಅವರ ಮೇಲೆ ಭರವಸೆ ಇಟ್ಟು, ಬಿಜೆಪಿಗೆ ಮತ ಹಾಕುತ್ತಾರೆ’ ಎಂದರು.

‘2014ಕ್ಕೂ ಮುನ್ನ, ದೇಶಕ್ಕೆ ಭವಿಷ್ಯವಿಲ್ಲ ಎಂದು ಜನರು ಹೇಳುತ್ತಿದ್ದರು. ಆದರೆ, ಈಗ ಭಾರತವು ಜಗತ್ತಿನ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ. ಒಂದೇ ದಿನವೂ ರಜೆ ತೆಗೆದುಕೊಳ್ಳದೆ, ಪ್ರಧಾನಿ ದೇಶದ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದ್ದಾರೆ. ಸಂವಿಧಾನದ ವಿಧಿ 370 ಅನ್ನು ತೆಗೆದು ಹಾಕಿ ದಿಟ್ಟತನ ಮೆರೆದಿದ್ದಾರೆ’ ಎಂದು ಹೇಳಿದರು.

ಮಾಜಿ ಶಾಸಕ ಸಂಜಯ ಪಾಟೀಲ, ಪಕ್ಷದ ಬೆಳಗಾವಿ ಗ್ರಾಮೀಣ ಮಂಡಲ ಅಧ್ಯಕ್ಷ ಧನಂಜಯ ಜಾಧವ ಮಾತನಾಡಿದರು. ಸಂಸದೆ ಮಂಗಲಾ ಅಂಗಡಿ, ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಅನಿಲ ಬೆನಕೆ, ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಪಾಟೀಲ ಇತರರಿದ್ದರು.

ಎಷ್ಟು ಹಣ ನೀಡಿ ಮತ ಪಡೆಯಬೇಕೆಂದು ಕಾಂಗ್ರೆಸ್ಸಿಗರು ಲೆಕ್ಕ ಹಾಕುತ್ತಿದ್ದಾರೆ. ಅವರ ಕಡೆ ಹಣ ಪಡೆಯಿರಿ. ಆದರೆ ಅಭಿವೃದ್ಧಿಗಾಗಿ ಬಿಜೆಪಿಗೆ ಮತ ಹಾಕಿ
ಸಂಜಯ ಪಾಟೀಲ ಚುನಾವಣಾ ಉಸ್ತುವಾರಿ ಬೆಳಗಾವಿ ಕ್ಷೇತ್ರ
ಈ ಚುನಾವಣೆ ಫಲಿತಾಂಶ ಪ್ರಕಟವಾದ ನಂತರ ವಿಜಯೋತ್ಸವದಲ್ಲಿ ಭಾರತದಲ್ಲಿ ನಡೆಯಬೇಕೇ ಹೊರತು ಪಾಕಿಸ್ತಾನದಲ್ಲಿ ಅಲ್ಲ ಹಾಗಾಗಿ ಬಿಜೆಪಿಗೆ ಮತ ಕೊಡಿ
ಧನಂಜಯ ಜಾಧವ ಅಧ್ಯಕ್ಷ ಬಿಜೆಪಿ ಬೆಳಗಾವಿ ಗ್ರಾಮೀಣ ಮಂಡಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT