ಶನಿವಾರ, ಅಕ್ಟೋಬರ್ 31, 2020
27 °C
ಸುರೇಶ ಅಂಗಡಿ ಅವರ ವ್ಯಕ್ತಿತ್ವ ವಿಶೇಷಗಳ ಚಿತ್ರಣವಿದು...

PV Web Exclusive: ನಮಸ್ಕರಿಸುವ ಶೈಲಿಯಿಂದಲೇ ಇಷ್ಟವಾಗುತ್ತಿದ್ದ ಅಂಗಡಿ

ಎಂ. ಮಹೇಶ Updated:

ಅಕ್ಷರ ಗಾತ್ರ : | |

Suresh angadi

ಬೆಳಗಾವಿ: ಸತತ 4 ಬಾರಿಗೆ ಇಲ್ಲಿನ ಸಂಸದರಾಗಿದ್ದ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರು ಆಪ್ತವಾಗಿ ನಮಸ್ಕರಿಸುವ ವಿಶೇಷ ಶೈಲಿಯಿಂದಲೇ ಜನರಿಗೆ ಇಷ್ಟವಾಗಿದ್ದರು.

ಎದುರಿಗೆ ಇರುವವರು, ಹೋಗುತ್ತಿರುವವರು ಅಥವಾ ಬರುತ್ತಿರುವವರು ಪರಿಚಯವಿರಲಿ, ಬಿಡಲಿ ಎರಡೂ ಕೈಗಳನ್ನು ಜೋಡಿಸಿ ಆತ್ಮೀಯವಾಗಿ ನಗುತ್ತಾ ಅವರು ನಮಸ್ಕರಿಸುತ್ತಿದ್ದರು. ಇದು, ಎದುರಿಗೆ ಇರುವವರಲ್ಲಿ ಆತ್ಮೀಯತೆ ಮೂಡಿಸುತ್ತಿತ್ತು. ಅವರ ಈ ಗುಣದಿಂದಾಗಿಯೇ ಅವರು ಸತತ 4 ಬಾರಿಗೆ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗುವುದು ಸಾಧ್ಯವಾಗಿತ್ತು. ಪ್ರಬಲ ಲಿಂಗಾಯತ ಸಮಾಜದವರಾದರೂ ಎಲ್ಲ ಸಮಾಜದವರ ಪ್ರೀತಿಯನ್ನೂ ಅವರು ಗಳಿಸಿದ್ದರು.

* ಇಡೀ ಜಗತ್ತು ಭಾರತದತ್ತ ನೋಡುತ್ತಿದೆ... ಎನ್ನದೇ ತಮ್ಮ ಭಾಷಣವನ್ನು ಮುಗಿಸುತ್ತಿರಲಿಲ್ಲ. ಕುಲಕಸುಬುಗಳನ್ನು ಬಿಡಬಾರದು; ಅದರಲ್ಲೇ ಕೌಶಲವನ್ನು ಅಳವಡಿಸಿಕೊಂಡು ಮುಂದೆ ಬರಬೇಕು. ಹೀಗೆ ಮಾಡುವುದರಿಂದ ಮುಖ್ಯ ವಾಹಿನಿಗೆ ಬರುವುದಕ್ಕೆ ಹಲವು ಅವಕಾಶಗಳಿವೆ ಎನ್ನುವ ಸಲಹೆಯನ್ನು ಯುವಜನರಿಗೆ ನೀಡುತ್ತಿದ್ದರು.


ಸುರೇಶ ಅಂಗಡಿ ಅವರು ಆರ್‌ಎಸ್‌ಎಸ್‌ ಪಥಸಂಚಲನದಲ್ಲಿ ಮುಖಂಡರೊಂದಿಗೆ ಭಾಗವಹಿಸಿದ್ದ ಚಿತ್ರ

* ಬೆಳಗಾವಿಯ ವಿಶ್ವೇಶ್ವರಯ್ಯ ನಗರದ ಸಂಪಿಗೆ ರಸ್ತೆಯಲ್ಲಿ ಅವರ ನಿವಾಸವಿದೆ. ಜನರ ಸಂಪರ್ಕಕ್ಕಾಗಿಯೇ ಅದೇ ರಸ್ತೆಯ ಆರಂಭದಲ್ಲಿ ಪ್ರತ್ಯೇಕವಾಗಿ ಮನೆಯನ್ನೇ ಕಟ್ಟಿಸಿದ್ದರು. ವಿವಿಧೆಡೆಯಿಂದ ಬರುವ ಜನರ ಆತಿಥ್ಯ ನೋಡಿಕೊಳ್ಳುವುದಕ್ಕೆಂದೇ ಸಿಬ್ಬಂದಿಯನ್ನು ನೇಮಿಸಿಕೊಂಡಿದ್ದರು. ಬಂದವರಿಗೆ ಚಹಾ, ಉಪಾಹಾರದ ವ್ಯವಸ್ಥೆ ಮಾಡುವಂತೆ ಕಟ್ಟುನಿಟ್ಟಿನ ಸೂಚನೆಯನ್ನೂ ಸಿಬ್ಬಂದಿಗೆ ನೀಡಿದ್ದರು. ಅದರಂತೆಯೇ ನಿತ್ಯ ನೂರಾರು ಮಂದಿ ತಮ್ಮ ವಿವಿಧ ಅಹವಾಲು, ಕೆಲಸಗಳಿಗಾಗಿ ಸಂಸದರ ಗೃಹ ಕಚೇರಿಗೆ ಬರುತ್ತಿದ್ದರು. ಬೆಳಗಾವಿಯಲ್ಲಿ ಇದ್ದರೆಂದರೆ ಸರಾಸರಿ ಐದಾರು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದನ್ನು ತಪ್ಪಿಸುತ್ತಿರಲಿಲ್ಲ!

* ಅಪ್ಪಟ ದೈವಭಕ್ತರಾಗಿದ್ದ ಅವರು, ಬೆಳಗಾವಿಯ ಚನ್ನಮ್ಮ ವೃತ್ತದಲ್ಲಿರುವ ಗಣೇಶ ದೇವಾಲಯ, ಕಪಿಲೇಶ್ವರ ದೇವಸ್ಥಾನಕ್ಕೆ ಪತ್ನಿ ಹಾಗೂ ಕೆಲವೊಮ್ಮೆ  ಕುಟುಂಬದ ಎಲ್ಲರೊಂದಿಗೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಿದ್ದರು. ನಗರವೂ ಸೇರಿದಂತೆ ಕ್ಷೇತ್ರದ ಎಲ್ಲೆಡೆ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಿಗೆ ತಪ್ಪಿಸಿಕೊಳ್ಳುತ್ತಿರಲಿಲ್ಲ! ಗಣೇಶ ಚತುರ್ಥಿ ಸಂದರ್ಭದಲ್ಲಿ ಮನೆಗೆ ಗಣೇಶ ಮೂರ್ತಿಯನ್ನು ತರುವ ಮೆರವಣಿಗೆಯಲ್ಲಿ ತರುವುದರಲ್ಲಿ ಕುಟುಂಬದವರೊಂದಿಗೆ ಪಾಲ್ಗೊಳ್ಳುತ್ತಿದ್ದರು. ಕೇಂದ್ರ ಸಚಿವರಾದ ನಂತರವೂ ಇದನ್ನು ಬಿಟ್ಟಿರಲಿಲ್ಲ.

* ಮಹತ್ವದ ಕಾರ್ಯಕ್ರಮಗಳಿಗೆ ಪತ್ನಿ ಮಂಗಲಾ ಅವರನ್ನು ಕರೆದುಕೊಂಡು ಹೋಗದೇ ಇರುತ್ತಿರಲಿಲ್ಲ. ಈ ಮೂಲಕ ಪತ್ನಿ ಮೇಲಿನ ಪ್ರೀತಿಯನ್ನು ಅವರು ಮೆರೆಯುತ್ತಿದ್ದರು.

* ಚುನಾವಣೆ ಸಂದರ್ಭವಿರಲಿ, ಬೇರೆ ಕಾರ್ಯಕ್ರಮಗಳಿರಲಿ ಮನೆಗೇ ಬಂದು ಊಟ ಮಾಡುವುದನ್ನು ರೂಢಿಸಿಕೊಂಡಿದ್ದರು. ಇದನ್ನು ಅವರೊಂದಿಗೆ ಒಡನಾಟವಿದ್ದ ಹಲವರು ನೆನೆಯುತ್ತಾರೆ. ‘ಯಾವುದೇ ಕಾರ್ಯಕ್ರಮಕ್ಕೆ ಬಂದರೆ ಅವರು ಹೋಟೆಲ್‌ನಲ್ಲಿ ಅಥವಾ ಹೊರಗಡೆ ಊಟ ಮಾಡುವುದಕ್ಕೆ ಬಹುತೇಕ ಸಂದರ್ಭಗಳಲ್ಲಿ ಬಯಸುತ್ತಿರಲಿಲ್ಲ. ಮನೆಗೇ ಹೋಗಿ ಕುಟುಂಬದವರೊಂದಿಗೇ ಊಟ ಮಾಡುತ್ತಿದ್ದರು. ಅಷ್ಟರ ಮಟ್ಟಿಗೆ ವೈಯಕ್ತಿಕ ಜೀವನದಲ್ಲಿ ಶಿಸ್ತು ರೂಢಿಸಿಕೊಂಡಿದ್ದರು’ ಎಂದು ನೆನೆಯುತ್ತಾರೆ ಅವರ ಆಪ್ತರು.

* ಕೋವಿಡ್–19 ಕಾಣಿಸಿಕೊಂಡ ನಂತರ ದೇಶವನ್ನು ಉದ್ದೇಶಿಸಿ ಮೊದಲಿಗೆ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಮಾಸ್ಕ್‌ ಧರಿಸಿರಲಿಲ್ಲ. ಶಾಲು ಅಥವಾ ಟವೆಲ್ ಮಾದರಿಯ ವಸ್ತ್ರವನ್ನು ಹಾಕಿಕೊಂಡಿದ್ದರು. ನಂತರ ಅದನ್ನು ಕಾಪಿ ಮಾಡಿದ್ದ ಅಂಗಡಿ ಅಂಥಾದ್ದೇ ‘ಲುಕ್’ನಲ್ಲಿ ಕಾಣಿಸಿಕೊಳ್ಳಲು  ಆರಂಭಿಸಿದ್ದರು. ಅವರು ಮಾಸ್ಕ್‌ ಧರಿಸಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು ಕಡಿಮೆಯೇ!

* ಕೋವಿಡ್–19 ವ್ಯಾಪಕವಾಗಿ ಹರಡುತ್ತಿದ್ದರೂ ಅವರು ಮನೆಯಲ್ಲಿ ಕುಳಿತಿರಲಿಲ್ಲ. ಕೊರೊನಾ ಯೋಧರಂತೆಯೇ ನಗರದಾದ್ಯಂತ ಹಾಗೂ ಕ್ಷೇತ್ರದಾದ್ಯಂತ ಓಡಾಡುತ್ತಿದ್ದರು. ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದರು. ಆಗಲೂ ಅವರು ಮಾಸ್ಕ್‌ ಹಾಕುತ್ತಿರಲಿಲ್ಲ. ಮೋದಿ ಬಳಸುತ್ತಿದ್ದ ಮಾದರಿಯ ವಸ್ತ್ರವನ್ನೇ ಮಾಸ್ಕ್‌  ರೀತಿ ಮಾಡಿಕೊಂಡಿದ್ದರು. ಸಚಿವರಾಗಿ ಜವಾಬ್ದಾರಿ ನಿಭಾಯಿಸುವ ಭರದಲ್ಲಿ ಆರೋಗ್ಯದತ್ತ ಹೆಚ್ಚಿನ ಕಾಳಜಿ ವಹಿಸಲಿಲ್ಲವೇನೋ ಎನ್ನುವ ನೋವು ಒಡನಾಡಿಗಳನ್ನು ಕಾಡುತ್ತಿದೆ. ಅವರ ಸಾವು ಆರೋಗ್ಯದ ಪಾಠವನ್ನೂ ಕಲಿಸಿದೆ ಎನ್ನುತ್ತಾರೆ ಅವರು.

* ಯಾವುದೇ ದುರಾಭ್ಯಾಸವೂ ಅವರಿಗೆ ಇರಲಿಲ್ಲ. ಕ್ರೀಡೆ, ಸಾಹಿತ್ಯ ಮೊದಲಾದ ಆಸಕ್ತಿಗಳಿಗಿಂತ ಜನಸೇವೆಯಲ್ಲೇ ಸಮಾಧಾನ ಕಾಣುತ್ತಿದ್ದರು. ‘ಬೆಳಗಾವಿ  ಬಸವಣ್ಣ’ ಎಂಬ ಅಭಿಮಾನದ ಮಾತುಗಳಿಗೆ ಪಾತ್ರವಾಗಿದ್ದರು.

* ಮನೆ ನಗರದಲ್ಲಿದ್ದರೂ ಹುಟ್ಟಿದ ಊರಿನ ನಂಟನ್ನು ಬಿಟ್ಟಿರಲಿಲ್ಲ. ವಾರದಲ್ಲಿ ಮೂವರು ದಿನ ಅಲ್ಲಿಗೆ ಹೋಗಿ ಬರುತ್ತಿದ್ದರು. ತಾಯಿ ಸೋಮವ್ವ ಅವರ ಆಶೀರ್ವಾದ ಪಡೆದು ಬರುತ್ತಿದ್ದರು.

* ‘ಹ್ಯಾಟ್ರಿಕ್’ ಜಯಭೇರಿ ಬಾರಿಸಿದ್ದರೂ ಅವರು ಹೋದ ಚುನಾವಣೆಯಲ್ಲಿ ಟಿಕೆಟ್‌ ಪಡೆಯಲು ಕಷ್ಟಪಡಬೇಕಾಯಿತು. ಪಕ್ಷದೊಳಗಿನ ಒಂದು ಬಣ ಅವರ ವಿರುದ್ಧವೇ ತಿರುಗಿಬಿದ್ದಿತ್ತು. ಬೇರೆಯವರನ್ನು ಅಭ್ಯರ್ಥಿ ಮಾಡಬೇಕು ಎಂಬ ಕೂಗು ಕೂಡ ಎದ್ದಿತ್ತು. ಇದೆಲ್ಲದರ ನಡುವೆಯೂ ಅವರು ಟಿಕೆಟ್‌ ಪಡೆದು ಗೆದ್ದಿದ್ದರು; ಪ್ರಮುಖ ಸಚಿವ ಗಾದಿ ಪಡೆಯುವಲ್ಲೂ ಯಶಸ್ವಿಯಾಗಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು