ಬಿಜೆಪಿ ಬರ ಅಧ್ಯಯನ ಯಾವ ಪುರುಷಾರ್ಥಕ್ಕೆ?: ಎನ್‌.ಎಚ್‌. ಕೋನರಡ್ಡಿ

7

ಬಿಜೆಪಿ ಬರ ಅಧ್ಯಯನ ಯಾವ ಪುರುಷಾರ್ಥಕ್ಕೆ?: ಎನ್‌.ಎಚ್‌. ಕೋನರಡ್ಡಿ

Published:
Updated:

ಬೆಳಗಾವಿ: ಕೇಂದ್ರದಲ್ಲಿ ತಮ್ಮದೇ ಸರ್ಕಾರ ಇದ್ದಾಗಲೂ ರಾಜ್ಯಕ್ಕೆ ನಯಾಪೈಸೆ ಅನುದಾನ ತರದ ಬಿಜೆಪಿ ನಾಯಕರು, ಬರ ಅಧ್ಯಯನ ಹೆಸರಿನಲ್ಲಿ ರಾಜ್ಯ ಸುತ್ತುತ್ತಿರುವುದು ಯಾವ ಪುರುಷಾರ್ಥಕ್ಕೆ ಎಂದು ಜೆಡಿಎಸ್ ರಾಜ್ಯ ಹಿರಿಯ ಉಪಾಧ್ಯಕ್ಷ ಎನ್.ಎಚ್. ಕೋನರಡ್ಡಿ ಪ್ರಶ್ನಿಸಿದರು.

ನಗರದಲ್ಲಿ ಗುರುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಜ್ಯ ಸುತ್ತುವ ಬದಲು ಬಿಜೆಪಿ ನಾಯಕರು ದೆಹಲಿಗೆ ಹೋಗಿ, ರಾಜ್ಯಕ್ಕೆ ಅನುದಾನ ತರಲಿ ಎಂದು ಸವಾಲು ಹಾಕಿದರು.

ಪ್ರಧಾನಿ ನರೇಂದ್ರ ಮೋದಿ ಆರಂಭಿಸಿರುವ ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆಯು ಹಗರಣದ ಕೂಪವಾಗಿದೆ. ರೈತರಿಗಿಂತ ಹೆಚ್ಚು ವಿಮಾ ಕಂಪನಿಗಳಿಗೆ ಲಾಭ ಮಾಡುವ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿದೆ. ಸುಪ್ರೀಂ ಕೋರ್ಟ್ ಉನ್ನತ ಸಮಿತಿ ಮೂಲಕ ತನಿಖೆ ನಡೆಸಿದರೆ ಸತ್ಯಾಂಶ ಹೊರಬೀಳಲಿದೆ ಎಂದರು.

ಬಿಜೆಪಿ ಮುಖಂಡರ ಮಾಲೀಕತ್ವದ ಕಾರ್ಖಾನೆಗಳು ಬಾಕಿ ಉಳಿಸಿಕೊಂಡಿರುವ ಕಬ್ಬು ಬೆಳೆಗಾರರ ಹಣವನ್ನು ತಕ್ಷಣ ಪಾವತಿಸುವಂತೆ ಆ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಸೂಚಿಸಲಿ ಎಂದು ಸವಾಲು ಹಾಕಿದರು.

ವಿಧಾನಮಂಡಲ ಚಳಿಗಾಲದ ಅಧಿವೇಶನದ ವೇಳೆ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಹೊರಟಿರುವ ಬಿಜೆಪಿ ನಾಯಕರು, ರಾಜ್ಯಕ್ಕೆ ಹೆಚ್ಚಿನ ಅನುದಾನ ನೀಡುವಂತೆ ಪ್ರಧಾನಿ ಅವರ ಮೇಲೆ ಒತ್ತಡ ಹೇರಲಿ ಎಂದು ಒತ್ತಾಯಿಸಿದರು.

ಮಹದಾಯಿ ನ್ಯಾಯಮಂಡಳಿ ತೀರ್ಪು ನೀಡಿ ಹಲವು ತಿಂಗಳು ಕಳೆದರೂ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿಲ್ಲ. ಗೋವಾದತ್ತ ಒಲವು ಹೊಂದಿದ್ದೆ ಇದಕ್ಕೆ ಕಾರಣ. ಹೀಗಾಗಿ, ರಾಜ್ಯಕ್ಕೆ ಬರಬೇಕಾದ ಮಹದಾಯಿ ನೀರು ಇನ್ನೂ ಬಂದಿಲ್ಲ ಎಂದರು. 

ಜಿಲ್ಲಾ ಜೆಡಿಎಸ್ ಅಧ್ಯಕ್ಷ ಶಂಕರ ಮಾಡಲಗಿ, ಶಿವನಗೌಡ ಪಾಟೀಲ, ಮಾಡೆವಳ್ಳಿ, ಗಿರೀಶ ಗೋಕಾಕ, ಪ್ರಕಾಶ ಹುಣಾಳಕರ, ಸತೀಶ ಒಂಟಗೂಡಿ, ಪಠಾಣ, ಜಿ.ಎಲ್. ಹುರಳಿ, ಸಂತೋಷ ಉಪಾಧ್ಯ, ವೀರಣ್ಣ ರೇವಡಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !