ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಸಾಂಬ್ರಾವರೆಗೂ ಹಿಗ್ಗಲಿದೆ ಬುಡಾ ವ್ಯಾಪ್ತಿ

28 ಹಳ್ಳಿಗಳನ್ನು ಸೇರಿಸಲು ಪ್ರಾಧಿಕಾರದಿಂದ ಪ್ರಸ್ತಾವ
Last Updated 16 ಸೆಪ್ಟೆಂಬರ್ 2020, 19:30 IST
ಅಕ್ಷರ ಗಾತ್ರ

ಬೆಳಗಾವಿ: ನಗರದ ಸುತ್ತಮುತ್ತಲಿರುವ ವಿವಿಧ 28 ಹಳ್ಳಿಗಳನ್ನು ವ್ಯಾಪ್ತಿಗೆ ಸೇರಿಸುವಂತೆ ಇಲ್ಲಿನ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ(ಬುಡಾ)ದಿಂದ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಇದಕ್ಕೆ ಅನುಮೋದನೆ ದೊರೆತಲ್ಲಿ ಪ್ರಾಧಿಕಾರದ ವ್ಯಾಪ್ತಿ ಹಿಗ್ಗಲಿದೆ.

ಒಂದೆಡೆ ಸಾಂಬ್ರಾವರೆಗೆ, ಇನ್ನೊಂದೆಡೆ ಯಳ್ಳೂರು, ನಾವಗೆ, ಕಲ್ಲೇಹೊಳ ಹಾಗೂ ಕಡೋಲಿಯವರೆಗೆ ಪ್ರಾಧಿಕಾರದ ವ್ಯಾಪ್ತಿಯು ವಿಸ್ತರಣೆಗೊಳ್ಳಲಿದೆ. ಈ ಮೂಲಕ ಹೆಚ್ಚು ಹೆಚ್ಚು ಬಡಾವಣೆಗಳನ್ನು ಅಭಿವೃದ್ಧಿಪಡಿಸುವುದಕ್ಕೆ ಯೋಜಿಸಲಾಗಿದೆ.

ಪ್ರಸ್ತುತ ಪ್ರಾಧಿಕಾರವು ಕಾಕತಿ ಭಾಗಶಃ, ಕಂಗ್ರಾಳಿ ಬಿ.ಕೆ. ಮತ್ತು ಕಂಗ್ರಾಳಿ ಕೆ.ಎಚ್‌., ಸಾಂವಗಾಂವ, ಮಂಡೋಳ್ಳಿ ಹಾಗೂ ಪೀರನವಾಡಿವರೆಗೆ ಅಂದರೆ 192 ಚದರ ಕಿ.ಮೀ. ವ್ಯಾಪ್ತಿ ಒಳಗೊಂಡಿದೆ.

‘ಹೊಸದಾಗಿ ಹಳ್ಳಿಗಳ ವ್ಯಾಪ್ತಿಯನ್ನು ಸೇರಿಸುವಂತೆ ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವ ಸಲ್ಲಿಸಲಾಗಿದೆ. ಅನುಮೋದನೆ ದೊರೆತ ನಂತರ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು’ ಎಂದು ಪ್ರಾಧಿಕಾರದ ಆಯುಕ್ತ ಪ್ರೀತಂ ನಸಲಾಪೂರೆ ‘ಪ್ರಜಾವಾಣಿ’ಗೆ ತಿಳಿಸಿದರು.

ಸಿಡಿಪಿ ಪರಿಷ್ಕರಣೆ:‘ನಗರವು ಬೆಳೆಯುತ್ತಿರುವುದರಿಂದಾಗಿ ಸಮಗ್ರ ಅಭಿವೃದ್ಧಿ ಯೋಜನೆ (ಸಿಡಿಪಿ)ಯನ್ನೂ ಪರಿಷ್ಕರಿಸಲು ಸರ್ಕಾರದ ಮಟ್ಟದಲ್ಲಿಯೇ ಕ್ರಮ ಕೈಗೊಳ್ಳಲಾಗಿದೆ. 2014ರಲ್ಲಿ ಮಾಡಿದ್ದ ಸಿಡಿಪಿ ಹಳೆಯದಾಗಿದೆ. ಹೊಸದಾಗಿ ಸಿದ್ಧಪಡಿಸಲು ದೆಹಲಿ ಮೂಲದ ಖಾಸಗಿ ಕಂಪನಿಯೊಂದಕ್ಕೆ ಸರ್ಕಾರ ಗುತ್ತಿಗೆ ನೀಡಿದೆ ಹಾಗೂ ಕಾರ್ಯಾದೇಶವನ್ನೂ ಕೊಡಲಾಗಿದೆ. 2021ರ ಮಾರ್ಚ್‌ ವೇಳೆಗೆ ಸಲ್ಲಿಸುವಂತೆ ಗಡುವು ವಿಧಿಸಲಾಗಿದೆ. ಆ ಕಂಪನಿಗೆ ಬೇಕಾದ ಕಚೇರಿ ಮೊದಲಾದ ಮೂಲಸೌಲಭ್ಯವನ್ನು ಪ್ರಾಧಿಕಾರದಿಂದ ಒದಗಿಸಲಾಗುವುದು. ಪ್ರಾಧಿಕಾರದಲ್ಲೇ ಕಚೇರಿ ಕೊಡಲಾಗುವುದು’ ಎಂದು ಮಾಹಿತಿ ನೀಡಿದರು.

‘ಕೇಂದ್ರದ ಅಮೃತ್‌ (ಅಟಲ್‌ ಮಿಷನ್‌ ಫಾರ್‌ ರಿಜುವಿನೇಷನ್‌ ಅಂಡ್ ಅರ್ಬನ್‌ ಟ್ರಾನ್ಸ್‌ಫರ್ಮೇಷನ್‌) ಯೋಜನೆಯಲ್ಲಿ ಜಿಐಎಸ್‌ (ಜಿಯೊಗ್ರಾಫಿಕ್‌ ಇನ್ಫರ್ಮೇಷನ್‌ ಸಿಸ್ಟಂ) ಆಧಾರದ ಮೇಲೆ ಮ್ಯಾಪಿಂಗ್‌ ನಡೆಯಲಿದೆ. ಮುಂದಿನ 15ರಿಂದ 20 ವರ್ಷಗಳಲ್ಲಿ ನಗರ ಬೆಳೆಯಬಹುದಾದುದನ್ನು ಗಮನದಲ್ಲಿಟ್ಟುಕೊಂಡು ಆಗಿನ ಜನಸಂಖ್ಯೆ ಹಾಗೂ ಬೇಕಾಗುವ ಮೂಲಸೌಲಭ್ಯಗಳೇನು ಎನ್ನುವುದಕ್ಕೆ ಪೂರಕವಾಗಿ ಸಿಡಿಪಿ ಇರಲಿದೆ’ ಎಂದು ವಿವರಿಸುತ್ತಾರೆ ಅವರು.

ನಿಖರ ನಕ್ಷೆಗಳು:‘ಸುಧಾರಿತ ತಂತ್ರಜ್ಞಾನದ ಜಿಐಎಸ್‌ ಆಧರಿಸಿ ಮಾಡುವುದರಿಂದ ನಿಖರ ನಕ್ಷೆಗಳು ದೊರೆಯಲಿವೆ. ಇದರಿಂದ ಮುಂದಿನ ಅಭಿವೃದ್ಧಿ ಯೋಜನೆಗಳಿಗೆ ಅನುಕೂಲವಾಗಲಿದೆ. ಸ್ಪಷ್ಟತೆಯೂ ಸಿಗಲಿದೆ. ಎಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಬೇಕು, ವರ್ತುಲ ರಸ್ತೆ ಬೇಕಾದರೆ ಎಲ್ಲಿ ನಿರ್ಮಿಸಬೇಕು ಎನ್ನುವುದನ್ನು ಸಿಡಿಪಿಯಲ್ಲಿ ಸೇರಿಸಲಾಗುವುದು. ನಗರವು ಮುಂದಿನ ದಿನಗಳಲ್ಲಿ ಯಾವ ದಿಕ್ಕಿನಲ್ಲಿ ಬೆಳೆಯಬೇಕು ಎನ್ನುವ ಅಭಿವೃದ್ಧಿ ಯೋಜನೆಗಳನ್ನು ತಯಾರಿಸುವುದಕ್ಕೆ ಇದು ಸಹಕಾರಿಯಾಗಲಿದೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT