ಸೋಮವಾರ, 11 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿ ಪಂಚಾಯಿತಿಗೆ ಟ್ಯಾಂಕರ್ ಖರೀದಿ ಕಡ್ಡಾಯ: ಸಚಿವ ಸತೀಶ್ ಜಾರಕಿಹೊಳಿ

Published 17 ನವೆಂಬರ್ 2023, 14:51 IST
Last Updated 17 ನವೆಂಬರ್ 2023, 14:51 IST
ಅಕ್ಷರ ಗಾತ್ರ

ಬೆಳಗಾವಿ: ‘ಮುಂಬರುವ ದಿನಗಳಲ್ಲಿ ಹಳ್ಳಿಗಳಲ್ಲಿ ಕುಡಿಯುವ ನೀರನ ಸಮಸ್ಯೆ ತೀವ್ರವಾಗಬಹುದು. ಇದಕ್ಕಾಗಿ ಈಗಲೇ ಸಿದ್ಧತೆ ಮಾಡಿಕೊಳ್ಳಬೇಕು. ಎಲ್ಲಿ ಅಗತ್ಯವಿದೆಯೋ ಅಲ್ಲಿ ಟ್ಯಾಂಕರ್‌ ಮೂಲಕ ನೀರು ಪೂರೈಕೆಗೆ ವಾಹನಗಳನ್ನು ಖರೀದಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಸೂಚನೆ ನೀಡಿದರು.

ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಶುಕ್ರವಾರ ನಡೆದ ಬರ ನಿರ್ವಹಣೆ ಕುರಿತ ಸಭೆಯಲ್ಲಿ ಮಾತನಾಡಿದ ಅವರು, ‘ಪ್ರತಿ ಗ್ರಾಮ ಪಂಚಾಯಿತಿ ಕಡ್ಡಾಯವಾಗಿ ಟ್ಯಾಂಕರ್ ಖರೀದಿಸಿ ತಮಗೆ ಪಟ್ಟಿ ಒದಗಿಸಬೇಕು. ಒಂದು ವೇಳೆ ಟ್ಯಾಂಕರ್ ಖರೀದಿ ಮಾಡದಿದ್ದರೆ ಸಂಬಂಧಿಸಿದ ಗ್ರಾಮ ಪಂಚಾಯಿತಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ’ಎಂದು ನಿರ್ದೇಶನ ನೀಡಿದರು.

‘ಮುಂಗಾರು ಹಾಗೂ ಹಿಂಗಾರು ಹಂಗಾಮಿನಲ್ಲಿ ಮಳೆ ಕೊರತೆ ಆಗಿರುವುದರಿಂದ ರೈತರು ಸಂಕಷ್ಟದಲ್ಲಿದ್ದಾರೆ. ಪರಿಹಾರ ಹಾಗೂ ಮೇವು ಪೂರೈಕೆಗೆ ಕ್ರಮ ವಹಿಸಬೇಕು. ನರೇಗಾ ಅಡಿ ಸಮರ್ಪಕ ಬರ ನಿರ್ವಹಣೆಗೆ ಅನುಕೂಲ ಆಗುವಂತಹ ಮತ್ತು ಶಾಶ್ವತ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು’ ಎಂದು ತಿಳಿಸಿದರು.

ಜೆಜೆಎಂ: ‘ಬಹುತೇಕ ಕಡೆ ಜಲಜೀವನ ಮಿಷನ್ ಯೋಜನೆಯ ಕಾಮಗಾರಿಗಳು ಅಪೂರ್ಣವಾಗಿವೆ, ಕಳಪೆಯಾಗಿವೆ ಎಂದು ಸಾರ್ವಜನಿಕರಿಂದ ದೂರುಗಳು ಬರುತ್ತಿವೆ. ಆದ್ದರಿಂದ ಕುಡಿಯುವ ನೀರಿನ ಯೋಜನೆಗಳನ್ನು ನಿಗದಿತ ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು’ ಎಂದು ಸಚಿವ ಸೂಚನೆ ನೀಡಿದರು.

‘ಬರ ನಿರ್ವಹಣೆಗೆ ರಾಜ್ಯ ಸರ್ಕಾರ ಈಗಾಗಲೇ ಜಿಲ್ಲೆಗೆ ₹22.50 ಕೋಟಿ ಬಿಡುಗಡೆ ಮಾಡಿದ್ದು, ಒಟ್ಟಾರೆ ₹32 ಕೋಟಿ ಲಭ್ಯವಿದೆ. ಹಣಕಾಸಿನ ತೊಂದರೆ ಇಲ್ಲ’ ಎಂದರು.

‘ಕೆರೆಗಳ ನೀರನ್ನು ಕುಡಿಯುವ ನೀರಿಗಾಗಿ ಮೀಸಲಿಡಲು ಉಪ ವಿಭಾಗಾಧಿಕಾರಿಗಳು ತಮ್ಮ ವ್ಯಾಪ್ತಿಯ ಕೆರೆಗಳ ನೀರು ಸಮರ್ಪಕ ನಿರ್ವಹಣೆಗೆ ಕ್ರಮ ಕೈಗೊಳ್ಳಬೇಕು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಭೋಯರ್ ನಿರ್ದೇಶನ ನೀಡಿದರು.

‘ಬೇಸಿಗೆ ಸಂದರ್ಭದಲ್ಲಿ ಮಹಾರಾಷ್ಟ್ರದಿಂದ ಎರಡು ಬಾರಿ ಕುಡಿಯುವ ನೀರು ಬಿಡುಗಡೆ ಮಾಡಲಾಗುತ್ತದೆ. ಈ ಬಾರಿ ತೀವ್ರ ಸಮಸ್ಯೆ ಎದುರಾಗುವ ಸಾಧ್ಯತೆ ಇರುವುದರಿಂದ ಈ ಬಗ್ಗೆ ಅಧಿಕಾರಿಗಳ ಮಟ್ಟದಲ್ಲಿ ಮುಂಚಿತವಾಗಿಯೇ ಚರ್ಚೆ ನಡೆಸಬೇಕು’ ಎಂದು ತಿಳಿಸಿದರು.

ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ‘ಭೂಸ್ವಾಧೀನ ಮಾಡಿಕೊಂಡೂ ಬಳಕೆ ಮಾಡದಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ದಾಖಲಾತಿಗಳು ದೊರಕದಿರುವುದರಿಂದ ರೈತರು ಸಮಸ್ಯೆ ಎದುರಿಸುತ್ತಿದ್ದಾರೆ‌. ಆದ್ದರಿಂದ ಕಂದಾಯ, ವಿಶೇಷ ಭೂಸ್ವಾಧೀನ ಅಧಿಕಾರಿಗಳು, ನೀರಾವರಿ ಇಲಾಖೆಯ ಅಧಿಕಾರಿಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ ಪರಿಹಾರ ಕಂಡುಕೊಳ್ಳಬೇಕು’ ಎಂದು ಹೇಳಿದರು.

ಶಾಸಕರಾದ ಮಹೇಂದ್ರ ತಮ್ಮಣ್ಣವರ, ವಿಶ್ವಾಸ ವೈದ್ಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ, ಹೆಚ್ಚುವರಿ ಜಿಲ್ಲಾಧಿಕಾರಿ ವಿಜಯಕುಮಾರ್ ಹೊನಕೇರಿ, ಉಪ ವಿಭಾಗಾಧಿಕಾರಿಗಳು, ತಹಶೀಲ್ದಾರರು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಇದ್ದರು.

ಪಶುವೈದ್ಯಕೀಯ ಇಲಾಖೆಯಿಂದ ರೈತರಿಗೆ ಮೇವಿನ ಕಿಟ್‌ಗಳನ್ನು ವಿತರಣೆ ಮಾಡಲಾಯಿತು.

Highlights - null

Quote - ಕುಡಿಯುವ ನೀರು ಸಮಸ್ಯೆ ನಿರ್ವಹಣೆಗೆ ಯೋಜನೆ ರೂಪಿಸಲಾಗಿದೆ. ಟ್ಯಾಂಕರ್ ನೀರು ಪೂರೈಕೆ ಕೊಳವೆಬಾವಿ ದುರಸ್ತಿ ಮತ್ತಿತರ ಕೆಲಸಗಳಿಗೆ ₹35 ಕೋಟಿ ವೆಚ್ಚದ ಪ್ರಸ್ತಾವ ಸಲ್ಲಿಸಲಾಗಿದೆ ಹರ್ಷಲ್ ಭೋಯರ್ ಜಿ.ಪಂ. ಸಿಇಒ

Quote - ಏಪ್ರಿಲ್ ವೇಳೆಗೆ ಬರಗಾಲದ ತೀವ್ರ ಸಮಸ್ಯೆಗಳು ಕಂಡುಬರಲಿವೆ. ಆದ್ದರಿಂದ ಕುಡಿಯುವ ನೀರು ವಿದ್ಯುತ್ ಜಾನುವಾರುಗಳಿಗೆ ಮೇವು ಮತ್ತಿತರ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಈರಣ್ಣ ಕಡಾಡಿ ರಾಜ್ಯಸಭಾ ಸದಸ್ಯ

Cut-off box - ‘ಬೀಜ– ಗೊಬ್ಬರ ಕೊರತೆ ಇಲ್ಲ’ ‘ಮುಂಗಾರು ಮಳೆ ಕೊರತೆ ಎಲ್ಲ ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಹಿಂಗಾರು ಹಂಗಾಮಿನ ಬೆಳೆಗಳಿಗೆ ತೇವಾಂಶ ಕೊರತೆಯಾಗಿದೆ. ಪರ್ಯಾಯ ಬೆಳೆಗೆ ಅಗತ್ಯವಿರುವ ಬಿತ್ತನೆ ಬೀಜ ದಾಸ್ತಾನು ಇದೆ. ಗೊಬ್ಬರ ಕೊರತೆ ಇಲ್ಲ’ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು. ‘3.53 ಲಕ್ಷ ಹೆಕ್ಟೇರ್ ಕೃಷಿ ಬೆಳೆ ಹಾಗೂ 11814 ಹೆಕ್ಟೇರ್‌ ಸೇರಿ ಜಿಲ್ಲೆಯಲ್ಲಿ ಒಟ್ಟಾರೆ 3.65 ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿದೆ. ರಾಜ್ಯ ಸರ್ಕಾರ ₹22.50 ಕೋಟಿ ಬಿಡುಗಡೆ ಮಾಡಿದ್ದು ಒಟ್ಟಾರೆ ₹31 ಕೋಟಿ ಜಿಲ್ಲಾಡಳಿತದ ಬಳಿ ಇದೆ. ಬರ ನಿರ್ವಹಣೆಗೆ ಹಣದ ಕೊರತೆ ಇಲ್ಲ. ಎನ್.ಡಿ.ಆರ್.ಎಫ್ ನಿಯಮಾವಳಿ ಪ್ರಕಾರ ₹422 ಕೋಟಿ ಪರಿಹಾರ ಕೇಂದ್ರ ಸರ್ಕಾರದಿಂದ ಬಿಡುಗಡೆ ಆಗಬೇಕಿದೆ’ ಎಂದರು.

Cut-off box - ‘ರೈತರ ಮನೆಯಲ್ಲಿ ವಾಸ ಸಾಧ್ಯವಲ್ಲ’ ‘ಸುವರ್ಣ ವಿಧಾನಸೌಧದಲ್ಲಿ ನಡೆಯಲಿರುವ ರಾಜ್ಯ ವಿಧಾನಮಂಡಲದ ಚಳಿಗಾಲದ ಅಧಿವೇಶನಕ್ಕೆ ಸಿದ್ಧತೆ ಆರಂಭವಾಗಿದೆ. ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಭೇಟಿ ನೀಡಿ ಸಿದ್ಧತೆಗಳನ್ನು ಪರಿಶೀಲಿಸಿದ್ದಾರೆ’ ಎಂದು ಸಚಿವ ಜಾರಕಿಹೊಳಿ ತಿಳಿಸಿದರು. ‘ಮುಖ್ಯಮಂತ್ರಿ ಅವರ ಸಂಪುಟದ ಸಹೋದ್ಯೋಗಿಗಳು ಮತ್ತು ಅಧಿಕಾರಿಗಳು ತಮ್ಮ ನಿವಾಸಗಳಲ್ಲಿ ವಾಸಿಸಬೇಕು ಎಂಬುದು ರೈತರ ಬೇಡಿಕೆ. ಇದು ಪ್ರಾಯೋಗಿಕವಾಗಿ ಕಾರ್ಯಸಾಧ್ಯವಲ್ಲ. ಆದರೆ ಅವರ ಇಂಗಿತವನ್ನು ನಾವು ಸ್ವಾಗತಿಸುತ್ತೇವೆ’ ಎಂದು ಹೇಳಿದರು. ‘ಸದ್ಯಕ್ಕೆ ಇಲ್ಲಿ ಶಾಸಕರ ಭವನ ನಿರ್ಮಿಸುವ ಪ್ರಸ್ತಾವ ಇಲ್ಲ. ಇದು ಕಾರ್ಯಸಾಧುವಲ್ಲ ಎಂಬ ಕಾರಣಕ್ಕೆ ರಾಜ್ಯ ಮಟ್ಟದ ಅಧಿಕಾರಿಗಳನ್ನೂ ಇಲ್ಲಿಗೆ ಸ್ಥಳಾಂತರಿಸುವಂತಿಲ್ಲ’ ಎಂದೂ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT