ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್.ಎನ್. ನಾಯಕ ನನಗೆ ತೆರಿಗೆ ಕಟ್ಟಿಲ್ಲ, ಅದಕ್ಕೆ ಕೊಂದೆ ಎಂದಿದ್ದ ಬನ್ನಂಜೆ!

ತೀವ್ರ ಕುತೂಹಲ ಮೂಡಿಸಿದ್ದ ಪ್ರಕರಣ
Last Updated 30 ಮಾರ್ಚ್ 2022, 13:27 IST
ಅಕ್ಷರ ಗಾತ್ರ

ಬೆಳಗಾವಿ: ಉತ್ತರಕನ್ನಡ ಜಿಲ್ಲೆ ಅಂಕೋಲಾದ ಉದ್ಯಮಿ ದಿವಂಗತ ಆರ್.ಎನ್. ನಾಯಕ ಅವರಿಗೆ ಭೂಗತಪಾತಕಿ ಬನ್ನಂಜೆ ರಾಜಾ ₹ 3 ಕೋಟಿ ಹಫ್ತಾ ನೀಡುವಂತೆ 2009ರಲ್ಲೂ ಬೆದರಿಕೆ ಹಾಕಿದ್ದ ಎನ್ನುವುದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.

ತೀವ್ರ ಕುತೂಹಲ ಕೆರಳಿಸಿದ್ದ ಈ ಪ್ರಕರಣದ ಮುಖ್ಯಾಂಶಗಳು ಇಲ್ಲಿವೆ.

ಬನ್ನಂಜೆ ಇಂಟರ್‌ನೆಟ್‌ ಕಾಲ್ ಮಾಡಿ ನಾಯಕ ಅವರ ಬಳಿ ಹಣ ಕೇಳಿದ್ದ. 2012ರಲ್ಲೂ ಬೆದರಿಕೆ ಹಾಕಿದ ನಂತರ ನಾಯಕ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದರಿಂದಾಗಿ ಬನ್ನಂಜೆ, ನಾಯಕ ಕೊಲೆಗೆ ಸಂಚು ರೂಪಿಸಿದ್ದ. ಸಂಘಟಿತವಾಗಿ ಈ ಕೃತ್ಯವನ್ನು ಎಸಗಲು ತಂಡವನ್ನು ಸಿದ್ಧಪಡಿಸಿದ್ದ. ಈ ತಂಡ 6 ತಿಂಗಳಿಂದ ಸಿದ್ಧತೆ ನಡೆಸಿ ಅನುಷ್ಠಾನಕ್ಕೆ ತಂದಿದೆ ಎನ್ನುವ ಅಂಶವನ್ನು ಪೊಲೀಸರು ತನಿಖೆಯಿಂದ ಪತ್ತೆ ಹಚ್ಚಿದ್ದಾರೆ.

ಇದೆಲ್ಲ ಅಂಶಗಳನ್ನೂ ಗಮನಿಸಿ ಸರ್ಕಾರದ ಪರವಾಗಿ ವಾದ ಮಂಡಿಸಿದ ವಿಶೇಷ ಅಭಿಯೋಜಕರಾದ ಕೆ.ಜಿ. ಪುರಾಣಿಕಮಠ ಹಾಗೂ ಕೆ.ಶಿವಪ್ರಸಾದ್ ಆಳ್ವಾ ಅವರು ದೋಷಿಗಳಿಗೆ ಮರಣದಂಡನೆ ವಿಧಿಸುವಂತೆ ನ್ಯಾಯಾಲಯವನ್ನು ಕೋರಿದ್ದಾರೆ. ‘ದೋಷಿಗಳೆಲ್ಲರೂ ಅಪರಾಧ ಚಟುವಟಿಕೆಯ ಹಿನ್ನಲೆ ಉಳ್ಳವರೇ ಆಗಿದ್ದಾರೆ’ ಎಂದು ವಿಶೇಷ ಅಭಿಯೋಜಕರು ತಿಳಿಸಿದರು.

ಘಟನೆಯ ವಿವರ:

ದ್ವಾರಕಾ ಸಹಕಾರ ಸೊಸೈಟಿ ಅಧ್ಯಕ್ಷರಾಗಿದ್ದ ನಾಯಕ ಅವರು ಅಂಕೋಲಾದ ಕೆ.ಸಿ. ರಸ್ತೆಯಲ್ಲಿ ಸೊಸೈಟಿಯಿಂದ ಬಂದು ಕಾರ್‌ನಲ್ಲಿ ಕುಳಿತಾಗ ಗುಂಡಿನ ದಾಳಿ ನಡೆದಿತ್ತು. ಕಾರಿನ ಗಾಜಿನಲ್ಲಿ ಹೋಲ್ ಮಾಡಿಕೊಂಡು ಬಂದ ಮೊದಲ ಗುಂಡು ಸೀಟಿಗೆ ತಗುಲಿತ್ತು. ಅದೇ ಹೋಲ್‌ನಲ್ಲಿ ಬಂದ ಇನ್ನೊಂದು ಗುಂಡು ನಾಯಕ ಅವರ ಭುಜಕ್ಕೆ ನಾಟಿತ್ತು. ಮೊದಲ ನಾಲ್ವರು ಆರೋಪಿಗಳು ಸುತ್ತಲೂ ರಿವಾಲ್ವಾರ್‌ ಹಿಡಿದು ನಿಂತಿದ್ದರು. ನಾಯಕಗೆ ಗುಂಡು ಹಾರಿಸಿದ ವಿವೇಕ್‌ ಉ‍ಪಾಧ್ಯಾಯ ಎನ್ನುವವರನ್ನು ಗನ್‌ಮ್ಯಾನ್‌ ರಮೇಶ್ ಎನ್ನುವವರು ಬೆನ್ನಟ್ಟಿ ಹೋಗಿದ್ದರು. ಈ ವೇಳೆ ಇಬ್ಬರ ಕಡೆಯಿಂದಲೂ ಗುಂಡಿನ ದಾಳಿ ನಡೆದಿತ್ತು. ಈ ವೇಳೆ ವಿವೇಕ್‌ಗೆ ಬಸ್‌ನಿಲ್ದಾಣದ ಬಳಿ ಗುಂಡು ತಗುಲಿತ್ತು.

ಸ್ಥಳದಲ್ಲಿ ಸಿಕ್ಕಿದ್ದ ಓಮ್ನಿ ಕಾರ್‌ನಲ್ಲಿ ಕೆಲವು ದಾಖಲೆಗಳು ದೊರೆತಿದ್ದವು. ಅದನ್ನು ಬೆನ್ನತ್ತಿದ ಪೊಲೀಸರು ಅಂಭಾಜಿ ಬಂಡುಗಾರ ಹಾಗೂ ಮಂಜುನಾಥ ಭಟ್‌ ಎನ್ನುವವರನ್ನು ಶಿವಮೊಗ್ಗದಲ್ಲಿ ಬಂಧಿಸಿದ್ದರು. ಆ ಕೃತ್ಯಕ್ಕೆ ಬಳಸಿದ್ದ ಕಾರನ್ನು ಮೈಸೂರಿನಲ್ಲಿ ಖರೀದಿಸಿದ್ದಕ್ಕೆ ಸಾಕ್ಷಿಗಳು ಸಿಕ್ಕಿದ್ದವು. ಮಂಜುನಾಥ, ಲಕ್ಷ್ಮಣ ಭಜಂತ್ರಿ ಎನ್ನುವವರ ಚಾಲನಾ ಪರವಾನಗಿ ತನ್ನ ಫೋಟೊ ಅಂಟಿಸಿಕೊಂಡಿದ್ದ. ರೂಂ ಬುಕ್ಕಿಂಗ್ ಮೊದಲಾದ ವೇಳೆ ಅದನ್ನೆ ದಾಖಲೆಯಾಗಿ ನೀಡುತ್ತಿದ್ದ! ಯಾರಿಂದಲೂ ಹಾಕಿಸಿಕೊಂಡ ಹಣವನ್ನು ಬಿಡಿಸಿಕೊಟ್ಟ ವ್ಯಕ್ತಿಗೆ ಮತ್ತು ಎಟಿಎಂ ಸೆಕ್ಯುರಿಟಿಗೆ ಟಿಪ್ಸ್‌ ಅನ್ನೂ ಕೊಟ್ಟಿದ್ದ ಎನ್ನುವುದು ತನಿಖೆಯಿಂದ ತಿಳಿದುಬಂದಿದೆ.

ಜೈಲಿನಲ್ಲಿದ್ದುಕೊಂಡೇ ಜಾಮೀನು ಕೊಡಿಸಿದ್ದರು!:

7ನೇ ಆರೋಪಿ ಅಚ್ಚಂಗಿ ಮಹೇಶ್ ಮತ್ತು 8ನೇ ಆರೋಪಿ ಸುಳ್ಯ ಸಂತೋಷ್ ಅವರು ಮೈಸೂರು‌ ಕಾರಾಗೃಹದಲ್ಲಿದ್ದುಕೊಂಡೆ ಕೊಲೆ ಸಂಚಿನಲ್ಲಿ ಭಾಗಿಯಾಗಿದ್ದರು. ದೇಶದಲ್ಲಿ ಬನ್ನಂಜೆಯ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದ ಎಂದು ಗೊತ್ತಾಗಿದೆ. ಮಹೇಶ್‌, ಪ್ರಕರಣವೊಂದರಲ್ಲಿ ಬಂಧಿತರಾಗಿದ್ದ ವಿವೇಕ್ ಮತ್ತು ಅಂಭಾಜಿಯನ್ನು ಜಾಮೀನಿನ ಮೇಲೆ ಬಿಡಿಸಿ ಈ ಟಾಸ್ಕ್ ನೀಡಿದ್ದ ಎನ್ನುವುದು ತಿಳಿದುಬಂದಿದೆ.

ನಾಯಕ ಮೊಬೈಲ್‌ ಫೋನ್‌ನಲ್ಲಿ ರೆಕಾರ್ಡ್‌ ಆಗಿದ್ದ ಬನ್ನಂಜೆ ರಾಜಾ ಅವರ ಧ್ವನಿಯ ಮುದ್ರಣವನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಅದು ಹೊಂದಾಣಿಕೆಯಾಗಿತ್ತು.

ರಾಜ್ಯದಲ್ಲಿ ಕೋಕಾ ಕಾಯ್ದೆ 2000ದಲ್ಲಿ ಜಾರಿಗೆ ಬಂದಿದೆ. 2014ರಲ್ಲಿ ಈ ಕಾಯ್ದೆಯಡಿ ಮೊದಲ ಪ್ರಕರಣ ದಾಖಲಾಗಿದೆ.

ಹೋಗಿದ್ದು ಪಿಸ್ತೂಲ್ ಬಚ್ಚಿಡಲು!:

ಮತ್ತೊಬ್ಬ ಆರೋಪಿ ಜಗದೀಶ್‌ ಪಟೇಲ್‌ ಎಂಬಾತ ಅಕ್ಷತಾ ಕ್ರೀಂ ಪಾರ್ಲರ್‌ ಎನ್ನುವ ಅಂಗಡಿಗೆ ಹೋಗಿದ್ದ. ಬಸ್ ನಿಲ್ದಾಣದ ಬಳಿ ಜನರು ಗುಂಪು ಸೇರಿದ್ದನ್ನು ನೋಡಿಕೊಂಡು ಅಂಗಡಿಗೆ ವಾಪಸಾದ ಮಾಲೀಕನಿಗೆ ಅಂಗಡಿಯಲ್ಲಿದ್ದ ಜಗದೀಶ್ ಎದುರಾಗಿದ್ದ. ನೀರು ಕೊಡುವಂತೆ ಆರೋಪಿ ಕೇಳಿದ್ದ. ಮಾಲೀಕ ನೀರು ತರುವುದರೊಳಗೆ ಆರೋಪಿ ಅಲ್ಲಿರಲಿಲ್ಲ. ಆತ ಬಂದಿದ್ದು ಪಿಸ್ತೂಲನ್ನು ಆ ಅಂಗಡಿಯಲ್ಲಿ ಬಚ್ಚಿಡಲು ಎನ್ನುವುದು ತನಿಖೆಯ ನಂತರ ಕೆಲವು ದಿನಗಳ ಬಳಿಕ ತಿಳಿದುಬಂದಿತ್ತು!. ಅದನ್ನು ಪೊಲೀಸರು ಜಪ್ತಿ ಮಾಡಿದ್ದರು.

ಪುತ್ರನಿಗೂ ಬೆದರಿಕೆ:

ನಾಯಕ ಕೊಲೆ ನಡೆದ 2 ದಿನಗಳ ನಂತರ ಕೆಲವು ಸುದ್ದಿವಾಹಿನಿಗಳಿಗೆ ಹೇಳಿಕೆ ನೀಡಿದ್ದ ಬನ್ನಂಜೆ, ‘ಆತ ಸರ್ಕಾರಕ್ಕೂ ತೆರಿಗೆ ಕಟ್ಟಿಲ್ಲ; ನನಗೂ ಕಟ್ಟಿಲ್ಲ. ಹೀಗಾಗಿ, ನಮ್ಮವರೇ ಕೊಲೆ ಮಾಡಿದ್ದಾರೆ’ ಎಂದು ಹೇಳಿದ್ದ. ಅದನ್ನು ವಿಚಾರಣೆ ವೇಳೆ ಪರಿಗಣಿಸಲಾಗಿದೆ’ ಎಂದು ವಕೀಲರು ತಿಳಿಸಿದರು.

2014ರ ಜ.7ರಂದು, ಕೊಲೆಯಾದ ನಾಯಕ ಅವರ ಪುತ್ರ ಮಯೂಕ್‌ ನಾಯಕಗೆ ಕರೆ ಮಾಡಿ ಸೆಟ್ಲ್ ಮಾಡಿಕೊಳ್ಳುವಂತೆ ಬೆದರಿಕೆ ಒಡಿದ್ದು ತನಿಖೆಯಿಂದ ತಿಳಿದುಬಂದಿದೆ. ಪ್ರಕರಣದಲ್ಲಿ 2014ರಲ್ಲಿ ಸಲ್ಲಿಕೆಯಾಗಿದ್ದ ಮೊದಲ ದೋಷಾರೋಪ ಪಟ್ಟಿಯಲ್ಲಿ 12 ಮಂದಿಯ ಮೇಲೆ ಪ್ರಕರಣ ದಾಖಲಾಗಿತ್ತು. ಬಳಿಕ ಇತರರನ್ನು ಸೇರ್ಪಡೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT