ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಂದಿನಿ ಹಾಲಿನಲ್ಲಿ ಕ್ರಿಮಿನಾಶಕದ ವಾಸನೆ

ಮನ್‌ಮುಲ್‌ನಿಂದ ಕೆಂಗೇರಿ, ಬಸವೇಶ್ವರನಗರಕ್ಕೆ ಪೂರೈಕೆಯಾಗಿದ್ದ ಹಾಲು
Last Updated 28 ಜನವರಿ 2018, 19:49 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಕೆಂಗೇರಿ ಹಾಗೂ ಬಸವೇಶ್ವರನಗರ ಭಾಗದಲ್ಲಿ ಭಾನುವಾರ ಬೆಳಿಗ್ಗೆ ಪೂರೈಕೆಯಾಗಿದ್ದ ನಂದಿನಿ ಹಾಲಿನಲ್ಲಿ ಕ್ರಿಮಿನಾಶಕದ ವಾಸನೆ ಕಂಡುಬಂದಿದೆ ಎಂದು ಸ್ಥಳೀಯರು ದೂರಿದ್ದಾರೆ.

ಕೆಂಗೇರಿಯ ವಿಷ್ಣುವರ್ಧನ್‌ ರಸ್ತೆಯ ಡ್ರೀಮ್‌ ಡಿಲೈಟ್‌ ಅಪಾರ್ಟ್‌ಮೆಂಟ್‌ ಸಮುಚ್ಚಯದ ನಿವಾಸಿ ಎಚ್‌.ಎಸ್‌.ಅನಿಲ್‌ ಕುಮಾರ್‌ ಹಾಗೂ ಅವರ ನಾಲ್ಕು ವರ್ಷದ ಮಗಳು ಹಾಲು ಸೇವಿಸಿದ ಬಳಿಕ ವಾಂತಿ ಮಾಡಿದ್ದಾರೆ.

ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಗೆಜ್ಜಲಗೆರೆಯಲ್ಲಿರುವ ಮಂಡ್ಯ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದಿಂದ (ಮನ್‌ಮುಲ್‌) ಈ ಪ್ರದೇಶಗಳಿಗೆ ಹಾಲು ಪೂರೈಕೆಯಾಗಿತ್ತು. ಈ ಕುರಿತು ಕೆಂಗೇರಿ, ಬಸವೇಶ್ವರನಗರ ಭಾಗಗಳಿಂದ ಐದು ದೂರುಗಳು ಮನ್‌ಮುಲ್‌ಗೆ ಸಲ್ಲಿಕೆಯಾಗಿವೆ.

‘ಉತ್ತರಹಳ್ಳಿ ಮುಖ್ಯರಸ್ತೆಯ ಶ್ರೀನಿವಾಸಪುರದ ನಂದಿನಿ ಮಿಲ್ಕ್‌ ಪಾರ್ಲರ್‌ನವರು ನೀಲಿ ಬಣ್ಣದ 1 ಲೀಟರ್‌ ಹಾಗೂ ಅರ್ಧ ಲೀಟರ್‌ ಟೋನ್ಡ್‌ ಹಾಲಿನ ಪ್ಯಾಕೆಟ್‌ಗಳನ್ನು ಮನೆಗೆ ಹಾಕಿದ್ದರು. ಹಾಲನ್ನು ಕಾಯಿಸಿ ಮಗಳಿಗೆ ನೀಡಿದೆವು. ಅದನ್ನು ಕುಡಿಯಲು ಮಗಳು ಹಿಂದೇಟು ಹಾಕಿದಳು. ಏನಾಗಿದೆ ಎಂದು ಪರಿಶೀಲಿಸುವ ಉದ್ದೇಶದಿಂದ ನಾನೂ ಕುಡಿದೆ. ಹಾಲು ಕ್ರಿಮಿನಾಶಕದ ವಾಸನೆಯಿಂದ ಕೂಡಿತ್ತು’ ಎಂದು ಅನಿಲ್‌ ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಅಕ್ಕಪಕ್ಕದ ಮನೆಗಳಿಗೆ ಪೂರೈಕೆ ಮಾಡಿದ್ದ ಹಾಲಿನ ಗುಣಮಟ್ಟದ ಬಗ್ಗೆಯೂ ವಿಚಾರಿಸಿದೆ. ಆದರೆ, ಅವರು ಕೆಂಪು ಹಾಗೂ ಹಸಿರು ಬಣ್ಣದ ಹಾಲಿನ ಪ್ಯಾಕೆಟ್‌ಗಳನ್ನು ಪಡೆದಿದ್ದು, ಅದರಲ್ಲಿ ಯಾವುದೇ ವಾಸನೆ ಬರುತ್ತಿರಲಿಲ್ಲ. ಪ್ಯಾಕೆಟ್‌ನಲ್ಲಿದ್ದ ಮಾಹಿತಿ ನೋಡಿ ಈ ಬಗ್ಗೆ ಮನ್‌ಮುಲ್‌ಗೆ ಕರೆ ಮಾಡಿ ವಿಚಾರಿಸಿದೆ. ಯಂತ್ರದ ದೋಷದಿಂದಾಗಿ ಸಮಸ್ಯೆ ಆಗಿದೆ ಎಂದು ಅವರು  ಮಾಹಿತಿ ನೀಡಿದರು’ ಎಂದು ಅನಿಲ್‌ ತಿಳಿಸಿದರು.

‘ದೋಷಪೂರಿತ ಹಾಲನ್ನು ನಂದಿನಿ ಮಿಲ್ಕ್‌ ಪಾರ್ಲರ್‌ನವರಿಗೆ ಕೊಡಿ. ಅವರು ಬದಲಿ ಪ್ಯಾಕೆಟ್‌ಗಳನ್ನು ನೀಡುತ್ತಾರೆ ಎಂದು ಮನ್‌ಮುಲ್‌ನವರು ತಿಳಿಸಿದರು. ನಂದಿನಿ ಮಿಲ್ಕ್‌ ಪಾರ್ಲರ್‌ಗೆ ಹೋಗಿ ಈ ಬಗ್ಗೆ ತಿಳಿಸಿ, ಬೇರೆ ಹಾಲಿನ ಪ್ಯಾಕೆಟ್‌ ನೀಡುವಂತೆ ಕೋರಿದೆ. ಮೊದಲು ಅವರು ಒಪ್ಪಲಿಲ್ಲ.

ಈ ಬಗ್ಗೆ ಮನ್‌ಮುಲ್‌ಗೆ ದೂರಿದ ಬಳಿಕ ನೀಲಿ ಬಣ್ಣದ ಹೊಸ ಪ್ಯಾಕೆಟ್‌ಗಳನ್ನು ನೀಡಲು ಮುಂದಾದರು. ಈ ಹಾಲಿನಲ್ಲೂ ಕ್ರಿಮಿನಾಶಕದ ವಾಸನೆಯೇ ಇರಬಹುದು ಎಂಬ ಸಂದೇಹವಿದ್ದುದರಿಂದ ಅದನ್ನು ಪಡೆಯಲಿಲ್ಲ’ ಎಂದು ಅವರು ತಿಳಿಸಿದರು.

‘ನಾನು ಮೂರು ವರ್ಷಗಳಿಂದ ನಂದಿನಿ ಹಾಲನ್ನು ತರಿಸುತ್ತಿದ್ದೇನೆ. ಆದರೆ, 2 ತಿಂಗಳಿಂದ ಹಾಲಿನ ಗುಣಮಟ್ಟದಲ್ಲಿ ಬದಲಾವಣೆ ಕಂಡುಬಂದಿದೆ. ಸರಿಯಾಗಿ ಕೆನೆ ಬರುವುದಿಲ್ಲ’ ಎಂದು ಅವರು ದೂರಿದರು.
***
‘ನಂದಿನಿ ಹಾಲಿನಿಂದ ಕೆಟ್ಟ ರೀತಿಯ ವಾಸನೆ ಬರುತ್ತಿರುವ ಬಗ್ಗೆ ದೂರುಗಳು ಬಂದಿವೆ. ಬಸವೇಶ್ವರನಗರ ಹಾಗೂ ಕೆಂಗೇರಿ ಭಾಗದಲ್ಲಿ ಈ ಸಮಸ್ಯೆ ಕಂಡುಬಂದಿದ್ದು, ದೋಷಪೂರಿತ ಹಾಲಿನ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬಂದ ಬಳಿಕ ಕ್ರಮ ಕೈಗೊಳ್ಳುತ್ತೇವೆ’ ಎಂದು ಮನ್‌ಮುಲ್‌ನ ವ್ಯವಸ್ಥಾಪಕ (ಮಾರುಕಟ್ಟೆ) ರಾಜ್‌ಕುಮಾರ್‌ ತಿಳಿಸಿದರು.
**
‘ದೋಷವಿದ್ದರೆ ತಿಳಿಸಿ’

ಮನ್‌ಮುಲ್‌ನಿಂದ ಬೆಂಗಳೂರಿನ ಕೆಲ ಭಾಗಗಳಿಗೆ ಹಾಲು ಪೂರೈಸಲಾಗುತ್ತಿದೆ. ದೋಷವಿದ್ದರೆ ದೂರು ನೀಡಬಹುದು. ಕ್ಷೇತ್ರಾಧಿಕಾರಿಗಳು ಸ್ಥಳಕ್ಕೆ ತೆರಳಿ ಹಾಲಿನ ಮಾದರಿಯನ್ನು ಸಂಗ್ರಹಿಸಿ, ಪ್ರಯೋಗಾಲಯಕ್ಕೆ ಕಳುಹಿಸುತ್ತಾರೆ. ಗ್ರಾಹಕರಿಗೆ ಹಾಲಿನ ಬಗ್ಗೆ ಸಂಶಯವಿದ್ದರೆ ಕುಂಬಳಗೋಡಿನಲ್ಲಿರುವ ಯುಎಚ್‌ಟಿ ಘಟಕಕ್ಕೆ ಕರೆದೊಯ್ದು ಗುಣಮಟ್ಟದ ಬಗ್ಗೆ ತೋರಿಸಿಕೊಡಲಾಗುತ್ತದೆ ಎಂದು ಮನ್‌ಮುಲ್‌ನ ವ್ಯವಸ್ಥಾಪಕ ರಾಜಶೇಖರ್‌ ತಿಳಿಸಿದರು.

ಗಂಟೆಗೆ 20 ಸಾವಿರ ಲೀಟರ್‌ ಹಾಲನ್ನು ಸಂಸ್ಕರಣೆ ಮಾಡಲಾಗುತ್ತದೆ. ದೋಷವಿದ್ದರೆ ಅಷ್ಟೂ ಹಾಲು ಕೆಡಬೇಕು. ಕೆಟ್ಟ ಹಾಲಿನಿಂದ ಯಾವುದೇ ಪದಾರ್ಥ ತಯಾರಿಸಲು ಸಾಧ್ಯವಾಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
**
ಅಂಕಿ–ಅಂಶ
2 ಲಕ್ಷ ಲೀಟರ್‌

ಮನ್‌ಮುಲ್‌ನಿಂದ ಬೆಂಗಳೂರಿಗೆ ಪ್ರತಿದಿನ ಪೂರೈಕೆಯಾಗುವ ಹಾಲು

20,000 ಲೀಟರ್‌
ಮನ್‌ಮುಲ್‌ನಿಂದ ಬೆಂಗಳೂರಿಗೆ ಪೂರೈಕೆಯಾಗುತ್ತಿರುವ ಮೊಸರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT