ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡಿ ವಿವಾದ | ಕರ್ನಾಟಕದತ್ತ ವಾಲುತ್ತಿದೆ ಕೇಂದ್ರ ಸರ್ಕಾರ: ಉದ್ಧವ್ ಠಾಕ್ರೆ ಟೀಕೆ

Last Updated 3 ಫೆಬ್ರುವರಿ 2020, 10:12 IST
ಅಕ್ಷರ ಗಾತ್ರ

ಮುಂಬೈ: ಕರ್ನಾಟಕ–ಮಹಾರಾಷ್ಟ್ರ ಗಡಿ ವಿವಾದದಲ್ಲಿ ಕೇಂದ್ರ ಸರ್ಕಾರವು ಕರ್ನಾಟಕದತ್ತ ಹೆಚ್ಚು ಒಲವು ತೋರುತ್ತಿದೆಎಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ. ಈ ಹೇಳಿಕೆಯು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗುವ ಲಕ್ಷಣಗಳು ಕಂಡುಬರುತ್ತಿವೆ.

‘ಕೇಂದ್ರ ಸರ್ಕಾರವು ಎಲ್ಲ ರಾಜ್ಯಗಳ ರಕ್ಷಕನಾಗಿ ಕೆಲಸ ಮಾಡಬೇಕು. ಪ್ರಸ್ತುತ ಈ ವಿಚಾರವು (ಮಹಾರಾಷ್ಟ್ರ–ಕರ್ನಾಟಕ ಗಡಿ ವಿವಾದ) ಸುಪ್ರೀಂ ಕೋರ್ಟ್‌ ಅಂಗಳದಲ್ಲಿರುವುದರಿಂದ ಕೇಂದ್ರ ಸರ್ಕಾರವು ಎರಡೂ ರಾಜ್ಯಗಳ ವಿಚಾರವನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಬೇಕು’ ಎಂದು ಶಿವಸೇನೆ ಅಧ್ಯಕ್ಷರೂ ಆಗಿರುವ ಉದ್ಧವ್ ಠಾಕ್ರೆ ಶಿವಸೇನೆಯ ಮುಖವಾಣಿ ‘ಸಾಮ್ನಾ’ಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.

‘ಯಾವುದೇ ಒಂದು ಪಕ್ಷದ(ರಾಜ್ಯ) ವಾದಗಳಲ್ಲಿ ಲೋಪವಿದ್ದರೆ ಕೇಂದ್ರ ಸರ್ಕಾರ ಅದನ್ನು ನ್ಯಾಯಾಲಯದ ಗಮನಕ್ಕೆ ತರಬೇಕು. ಆದರೆ ಕಳೆದ ಐದು ವರ್ಷಗಳಲ್ಲಿ ಕೇಂದ್ರ ಸರ್ಕಾರ ಕೇವಲ ಕರ್ನಾಟಕದ ವಿಚಾರಗಳನ್ನು ಮಾತ್ರ ನ್ಯಾಯಾಲಯದ ಮುಂದೆ ಇಡುತ್ತಿದೆ’ ಎಂದು ಉದ್ಧವ್ ಅಭಿಪ್ರಾಯಪಟ್ಟಿದ್ದಾರೆ.

‘ಇದು ಆಘಾತಕಾರಿ ಬೆಳವಣಿಗೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಏನಾದರೂ ಮಾಡಬೇಕಿದೆ. ಅದಕ್ಕಾಗಿ ವಿಶೇಷ ಸಭೆಯೊಂದನ್ನು ಕರೆದು,ಸಚಿವರಾದ ಏಕನಾಥ್ ಶಿಂದೆ (ಶಿವಸೇನೆ)ಮತ್ತು ಛಗನ್ ಭುಜಬಲ್ (ಎನ್‌ಸಿಪಿ) ಅವರೊಂದಿಗೆ ಚರ್ಚಿಸುತ್ತೇನೆ’ ಎಂದು ಹೇಳಿದ್ದಾರೆ.

ಮಹಾರಾಷ್ಟ್ರ ಗಡಿಯಲ್ಲಿರುವ ಬೆಳಗಾವಿ, ಕಾರವಾರ, ನಿಪ್ಪಾಣಿ ಮತ್ತು ಇತರ ಪ್ರದೇಶಗಳಲ್ಲಿ ಕರ್ನಾಟಕ ಸರ್ಕಾರ ಮರಾಠಿ ಭಾಷಿಕರ ಮೇಲೆ ದೌರ್ಜನ್ಯ ನಡೆಸುತ್ತಿದೆ ಎಂದು ಟೀಕಿಸಿದ್ದಾರೆ.‘ಸಾಮ್ನಾ’ದ ಕಾರ್ಯನಿರ್ವಾಹಕ ಸಂಪಾದಕ ಮತ್ತು ಶಿವಸೇನಾ ವಕ್ತಾರ ಸಂಜಯ್ ರಾವುತ್‌ ಈ ಸಂದರ್ಶನ ನಿರ್ವಹಿಸಿದ್ದಾರೆ.

ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಉದ್ಧವ್ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಹಲವರೊಂದಿಗೆ ಮಾತುಕತೆ ನಡೆಸಿದ್ದಾರೆ. ಹಿರಿಯ ವಕೀಲ ಹರೀಶ್ ಸಾಳ್ವೆ ಅವರ ಸಲಹೆಯನ್ನೂ ಪಡೆದುಕೊಂಡಿದ್ದಾರೆ.

ಕರ್ನಾಟಕದಲ್ಲಿರುವ ಮರಾಠಿ ಭಾಷಿಕರಿಗೆ ನ್ಯಾಯ ಒದಗಿಸಲು ಪಕ್ಷಾತೀತ ಹೋರಾಟ ನಡೆಸಬೇಕು. ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಮಹಾರಾಷ್ಟ್ರದ ಎಲ್ಲ ಸಂಸದರೂ ಈ ಕುರಿತು ಜೋರಾಗಿದನಿಯೆತ್ತಬೇಕು ಎಂದು ಉದ್ಧವ್ ಈ ಹಿಂದೆ ಕರೆ ನೀಡಿದ್ದರು.

‘ಕರ್ನಾಟಕ ಆಕ್ರಮಿತ ಮಹಾರಾಷ್ಟ್ರ’ ಎಂದು ಹೇಳುವ ಮೂಲಕ ಈ ಹಿಂದೆ ಉದ್ಧವ್ ವಿವಾದ ಹುಟ್ಟುಹಾಕಿದ್ದರು. ಇದಕ್ಕೆ ಪ್ರತಿಯಾಗಿ ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ‘ಕರ್ನಾಟಕದ ಒಂದು ಇಂಚು ಜಾಗವನ್ನೂ ಬೇರೆ ರಾಜ್ಯಗಳಿಗೆ ನೀಡುವ ಪ್ರಶ್ನೆಯಿಲ್ಲ’ ಎಂದು ಹೇಳಿದ್ದರು. 1950ರ ದಶಕದಿಂದಲೂ ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವೆ ಗಡಿವಿವಾದ ಚಾಲ್ತಿಯಲ್ಲಿದೆ.

ಕೆಲ ದಿನಗಳ ಹಿಂದಷ್ಟೇ ಬೆಳಗಾವಿಗೆ ಭೇಟಿ ನೀಡಿದ್ದ ಸಂಜಯ್ ರಾವುತ್, ‘ಗಡಿ ವಿವಾದ 14 ವರ್ಷಗಳಿಂದ ಸುಪ್ರೀಂ ಕೋರ್ಟ್‌ನಲ್ಲಿದೆ. ಎರಡೂ ರಾಜ್ಯಗಳು ಸುಪ್ರೀಂ ಕೋರ್ಟ್ ನೀಡುವ ತೀರ್ಪನ್ನು ಗೌರವಿಸಬೇಕು’ ಎಂದು ಹೇಳಿದ್ದರು. ‘ಎನ್‌ಸಿಪಿ ನಾಯಕ ಶರದ್ ಪವಾರ್ ಸಮಕ್ಷಮ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳು ಸಭೆ ಸೇರಿ ವಿವಾದ ಪರಿಹರಿಸಿಕೊಳ್ಳಬೇಕು’ ಎಂದು ಸಲಹೆ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT