ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗೊಳ್ಳಿರಾಯಣ್ಣ ಸೊಸೈಟಿ ವಂಚನೆ ಪ್ರಕರಣ: ದೋಷಾರೋಪಣಾ ಪಟ್ಟಿ ಸಲ್ಲಿಕೆ

Last Updated 19 ಆಗಸ್ಟ್ 2020, 15:44 IST
ಅಕ್ಷರ ಗಾತ್ರ

ಬೆಳಗಾವಿ: ಚಲನಚಿತ್ರ ನಿರ್ಮಾಪಕ ಆನಂದ ಅಪ್ಪುಗೋಳ ನೇತೃತ್ವದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅರ್ಬನ್ ಕೋಆಪರೇಟಿವ್ ಸೊಸೈಟಿಯ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು 2,063 ಪುಟಗಳ ದೋಷಾರೋಪಣಾ ಪಟ್ಟಿಯನ್ನು ಇಲ್ಲಿನ ಪ್ರಧಾನ ಜಿಲ್ಲಾ ಹಾಗೂ ಸೆಷನ್ಸ್‌ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

ಸಿಐಡಿ ಡಿವೈಎಸ್ಪಿ ಕೆ.ಪುರುಷೋತ್ತಮ ನೇತೃತ್ವದ ತಂಡ ಪ್ರಕರಣ ಕುರಿತು ತನಿಖೆ ನಡೆಸಿ ದೋಷಾರೋಪಣಾ ಪಟ್ಟಿ ಸಿದ್ಧಪಡಿಸಿದೆ.

ಈ ಕುರಿತು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಸರ್ಕಾರಿ ಅಭಿಯೋಜಕ ಮುರಳೀಧರ ಕುಲಕರ್ಣಿ, ‘ಈ ಸೊಸೈಟಿಯು ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಯಲ್ಲಿ ಇದು 35 ಶಾಖೆ ಹೊಂದಿದೆ. ಆಕರ್ಷಕ ಹಾಗೂ ಹೆಚ್ಚಿನ ಬಡ್ಡಿ ನೀಡುವುದಾಗಿ, 26ಸಾವಿರಕ್ಕೂ ಹೆಚ್ಚಿನ ಗ್ರಾಹಕರಿಂದ ಒಟ್ಟು ₹ 281.14 ಕೋಟಿ ಠೇವಣಿ ಇರಿಸಿಕೊಂಡಿದ್ದಾರೆ. ಆದರೆ, ಅವರಿಗೆ ಬಡ್ಡಿ ಅಥವಾ ಅಸಲು ಮೊತ್ತವನ್ನಾಗಲಿ ಹಿಂತಿರುಗಿಸದೆ, ಸ್ವಂತಕ್ಕಾಗಿ ಬಳಸಿಕೊಂಡು ಠೇವಣಿದಾರರಿಗೆ ವಂಚಿಸಿದ ಬಗ್ಗೆ ಇಲ್ಲಿನ ಸಹಕಾರಿ ಸಂಘಗಳ ಉಪನಿಬಂಧಕರು 2017ರ ಸೆ.1ರಂದು ಖಡೇಬಜಾರ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು’ ಎಂದು ತಿಳಿಸಿದರು.

‘ಉಪನಿಬಂಧಕರು ನಡೆಸಿದ ಲೆಕ್ಕಪತ್ರಗಳ ತನಿಖೆ ಕಾಲಕ್ಕೆ, ಸೊಸೈಟಿ ಅಧ್ಯಕ್ಷರು ಹಾಗೂ ನಿರ್ದೇಶಕರು ಉಪವಿಧಿಗಳ ಪ್ರಕಾರ ಉಪಯೋಗಿಸದೆ 62 ಖೊಟ್ಟಿ ಖಾತೆಗಳನ್ನು ತೆಗೆದು ಆ ಖಾತೆಗಳಿಂದ ₹ 275 ಕೋಟಿ ಸಾಲ ನೀಡಿದಂತೆ ತೋರಿಸಿ ಆ ಹಣವನ್ನು ದುರ್ಬಳಕೆ ಮಾಡಿಕೊಂಡು ತಮ್ಮ ತಮ್ಮ ಹೆಸರಿನಲ್ಲಿ ಆಸ್ತಿ ಖರೀದಿಸಿರುವುದು ಕಂಡುಬಂದಿದೆ. ಈ ಬಗ್ಗೆ ಸಿಐಡಿ ತಂಡ ತನಿಖೆ ನಡೆಸಿದೆ. ತನಿಖೆ ಮುಂದುವರಿಸಿರುವುದಾಗಿ ನ್ಯಾಯಾಲಯಕ್ಕೆ ತಿಳಿಸಿದೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT