ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗಕ್ಕೆ ಸೀಮಿತವಾಗಿರುವ ಮುಖ್ಯಮಂತ್ರಿ: ಕತ್ತಿ ಕಿಡಿ

Last Updated 17 ಸೆಪ್ಟೆಂಬರ್ 2020, 15:59 IST
ಅಕ್ಷರ ಗಾತ್ರ

ಬೆಳಗಾವಿ: ‘ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಅಖಂಡ ಕರ್ನಾಟಕದ ಬಗ್ಗೆ ಚಿಂತಿಸುತ್ತಿಲ್ಲ. ಕೇವಲ ಶಿವಮೊಗ್ಗ ಜಿಲ್ಲೆಗಷ್ಟೇ ಸೀಮಿತವಾಗಿದ್ದಾರೆ. ಉತ್ತರ ಕರ್ನಾಟಕದ ಅಭಿವೃದ್ಧಿ ಯೋಜನೆಗಳ ಬಗ್ಗೆ ಗಮನಕೊಡುತ್ತಿಲ್ಲ’ ಎಂದು ಹುಕ್ಕೇರಿ ಬಿಜೆಪಿ ಶಾಸಕ ಉಮೇಶ ಕತ್ತಿ ಕಿಡಿಕಾರಿದರು.

ಗುರುವಾರ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ‘ಮುಖ್ಯಮಂತ್ರಿ ರಾಜ್ಯದ ಸಮಗ್ರ ಅಭಿವೃದ್ಧಿ ಬಗ್ಗೆ ಚಿಂತಿಸುತ್ತಿಲ್ಲ. ಇದರಿಂದ ಬಹಳ ನೋವಾಗಿದೆ. ಉತ್ತರ ಕರ್ನಾಟಕದ ಅಭಿವೃದ್ಧಿ ನನಗೆ ಮುಖ್ಯ. ಇದೆಲ್ಲವನ್ನೂ ಕೇಳಬೇಕೋ, ಬೇಡವೋ? ಕೂಗಾಟ ಮಾಡಬೇಕೋ, ಬೇಡವೋ?’ ಎಂದು ಕೇಳಿದರು.

‘ಈ ಭಾಗಕ್ಕೆ ಅನುಕೂಲ ಮಾಡಿಕೊಡಬಹುದು ಎಂದು ಒಂದು ವರ್ಷದಿಂದಲೂ ಕಾದಿದ್ದೆ. ಆದರೆ ಅದ್ಯಾವುದೂ ನಡೆಯಲಿಲ್ಲ. ಹೀಗಾಗಿ, ನಾನು ದನಿ ಎತ್ತುತ್ತಿದ್ದೇನೆ. ಇಲ್ಲಿನ ಪ್ರಮುಖ ನೀರಾವರಿ ಯೋಜನೆಗಳ ಬಗ್ಗೆಯೂ ನಿರ್ಲಕ್ಷ್ಯ ವಹಿಸಿದ್ದಾರೆ. ಶಿವಮೊಗ್ಗಕ್ಕೆ ಭರಪೂರ ಅನುದಾನ ಒದಗಿಸಿದ್ದಾರೆ. ಇಲ್ಲಿನ ಜನಪ್ರತಿನಿಧಿಯಾಗಿ ಸಹಜವಾಗಿಯೇ ನನಗೆ ನೋವಾಗಿದೆ’ ಎಂದು ತಿಳಿಸಿದರು.

‘ಕೊರೊನಾ, ಮಾದಕ ವಸ್ತುಗಳ ದಂಧೆ ನೆಪದಲ್ಲಿ ಅಭಿವೃದ್ಧಿಯನ್ನು ಸರ್ಕಾರ ಕಡೆಗಣಿಸಿದೆ’ ಎಂದು ದೂರಿದರು.

‘ನನಗೆ ಮಂತ್ರಿ ಸ್ಥಾನ ಸಿಗುವುದೋ ಇಲ್ಲವೋ ಎನ್ನುವುದು ಮುಖ್ಯವಲ್ಲ. ಮುಂದೆ ಯಾವ ಪಕ್ಷದಿಂದ ಸ್ಪರ್ಧಿಸಬೇಕು ಎನ್ನುವುದನ್ನು ಚುನಾವಣೆ ಬಂದಾಗ ನೋಡಿಕೊಳ್ಳುತ್ತೇನೆ. ಅಲ್ಲಿವರೆಗೆ ಏನು ಬೇಕಾದರೂ ಆಗಬಹುದು. ಅಲ್ಲಿವರೆಗೆ ಉತ್ತರ ಕರ್ನಾಟಕದ ಅಭಿವೃದ್ಧಿ ಬಗ್ಗೆ ದನಿ ಎತ್ತುತ್ತಲೇ ಇರುತ್ತೇನೆ. ಮುಖ್ಯಮಂತ್ರಿ ಹಾಗೂ ಪಕ್ಷದ ವರಿಷ್ಠರು ಏನೆಂದುಕೊಳ್ಳುತ್ತಾರೆ ಎಂಬ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ’ ಎಂದರು.

‘2008ರಲ್ಲಿ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಇವರಲ್ಲ’ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT