ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕೋಡಿ ಕೃಷಿ ಜಿಲ್ಲೆ: ಸಚಿವ ಬಿ.ಸಿ. ಪಾಟೀಲ ಭರವಸೆ

Last Updated 7 ಜೂನ್ 2021, 10:26 IST
ಅಕ್ಷರ ಗಾತ್ರ

ಬೆಳಗಾವಿ: ‘ಶೈಕ್ಷಣಿಕ ಜಿಲ್ಲೆಯ ಮಾದರಿಯಲ್ಲಿ ಚಿಕ್ಕೋಡಿಯನ್ನು ‘ಕೃಷಿ ಜಿಲ್ಲೆ’ಯಾಗಿ ಘೋಷಿಸುವ ಬಗ್ಗೆ ಪರಿಶೀಲಿಸಲಾಗುವುದು’ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಭರವಸೆ ನೀಡಿದರು.

ಮುಂಗಾರು ಹಂಗಾಮಿನ ಸಿದ್ಧತೆ ಬಗ್ಗೆ ಇಲ್ಲಿನ ಜಿ.ಪಂ. ಸಭಾಂಗಣದಲ್ಲಿ ಸೋಮವಾರ ನಡೆದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಬೆಳಗಾವಿ ದೊಡ್ಡ ಜಿಲ್ಲೆ ಆಗಿರುವುದರಿಂದ ಶೈಕ್ಷಣಿಕ ಜಿಲ್ಲೆ ಮಾದರಿಯಲ್ಲಿ ಚಿಕ್ಕೋಡಿಯನ್ನು ಕೃಷಿ ಜಿಲ್ಲೆಯಾಗಿ ಘೋಷಿಸಿ ಐತಿಹಾಸಿಕ ನಿರ್ಣಯ ಕೈಗೊಳ್ಳಬೇಕು’ ಎಂದು ಕುಡಚಿ ಶಾಸಕ ಪಿ‌. ರಾಜೀವ ಒತ್ತಾಯಿಸಿದರು. ಪ್ರತಿಕ್ರಿಯಿಸಿದ ಸಚಿವರು, ‘ಅಧಿಕಾರಿಗಳೊಂದಿಗೆ ಚರ್ಚಿಸಿ ಈ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು’ ಎಂದು ತಿಳಿಸಿದರು.

‘ಜಿಲ್ಲೆಯಲ್ಲಿ ಬಿತ್ತನೆ ಬೀಜ, ಗೊಬ್ಬರದ ಕೊರತೆ ಇಲ್ಲ. ಸಮರ್ಪಕ ದಾಸ್ತಾನು ಲಭ್ಯವಿದೆ. ಸಬ್ಸಿಡಿ ಗೊಬ್ಬರವನ್ನುಯಾವುದೇ ಕಾರಣಕ್ಕೂ ಕಾಳಸಂತೆಯಲ್ಲಿ ಮಾರದಂತೆ ಕಟ್ಟುನಿಟ್ಟಿನ ಕ್ರಮ‌ ಕೈಗೊಳ್ಳಬೇಕು’ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

‘ಹೊಸ ತಾಲ್ಲೂಕು ಪುನರ್‌ ವಿಂಗಡಣೆ ಬಳಿಕವೇ ಹೋಬಳಿಗಳಲ್ಲಿ ರೈತ ಸಂಪರ್ಕ ಕೇಂದ್ರಗಳನ್ನು ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು. ಹಣಕಾಸು ಇಲಾಖೆಯ ಒಪ್ಪಿಗೆ ದೊರೆತ ಬಳಿಕ ನೂತನ ತಾಲ್ಲೂಕುಗಳಿಗೆ ಕೃಷಿ ಸಹಾಯಕ ನಿರ್ದೇಶಕರ ಹುದ್ದೆ ಮಂಜೂರು ಮಾಡಲಾಗುತ್ತದೆ’ ಎಂದು ತಿಳಿಸಿದರು.

‘ಭೂಮಿ’ ತಂತ್ರಾಂಶಕ್ಕೆ ಜೋಡಣೆ:

‘ರೈತರಿಂದಲೇ ಬೆಳೆ ಸಮೀಕ್ಷೆಗೆ ಉತ್ತಮ ಪ್ರತಿಕ್ರಿಯೆ ಲಭಿಸಿದೆ. ಈ ಬಾರಿ ಭೂಮಿ ತಂತ್ರಾಂಶಕ್ಕೆ ಜೋಡಣೆ ಮಾಡುವುದರಿಂದ ಸಮೀಕ್ಷೆ ವಿವರ ನೇರವಾಗಿ ಪಹಣಿಗೆ ಸೇರ್ಪಡೆಯಾಗಲಿದೆ. ಇದರಿಂದ ಹೆಚ್ಚಿನ ಅನುಕೂಲ ಆಗಲಿದೆ. ಕೃಷಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಹಾಗೂ ಸಂಶೋಧಕರು ಕ್ಷೇತ್ರಗಳಲ್ಲಿ ರೈತರೊಂದಿಗೆ ಸಮಾಲೋಚನೆ ನಡೆಸಬೇಕು ಎಂದು ಸುತ್ತೋಲೆ ಹೊರಡಿಸಲಾಗಿದೆ’ ಎಂದರು.

‘ಪಿಎಂ‌‌ ಕಿಸಾನ್ ಯೋಜನೆ ರಾಜ್ಯ ಪ್ರಥಮ ಸ್ಥಾನದಲ್ಲಿದೆ. ರೈತರಿಂದಲೇ ಬೆಳೆ ಸಮೀಕ್ಷೆ ಯೋಜನೆ ಬಗ್ಗೆ ಕೇಂದ್ರ ಮೆಚ್ಚುಗೆ ವ್ಯಕ್ತಪಡಿಸಿದ್ದು, ರಾಷ್ಟ್ರಮಟ್ಟದಲ್ಲಿ ಜಾರಿಗೆ ಚಿಂತನೆ ನಡೆಸಿದೆ’ ಎಂದು ತಿಳಿಸಿದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ಮುಂಗಾರು ಹಂಗಾಮಿನ ಸಿದ್ಧತೆಯ ವಿವರ ನೀಡಿದರು.

ಸಂಸದರಾದ ಅಂಗಡಿ, ಅಣ್ಣಾಸಾಹೇಬ ಜೊಲ್ಲೆ, ಈರಣ್ಣ ಕಡಾಡಿ, ಶಾಸಕ ಮಹೇಶ ಕುಮಠಳ್ಳಿ, ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ಜಿ.ಪಂ. ಸಿಇಒ ಎಚ್‌.ವಿ. ದರ್ಶನ್, ಕೃಷಿ ಇಲಾಖೆ ಹೆಚ್ಚುವರಿ ನಿರ್ದೇಶಕ ಡಾ.ವಿ.ಜೆ. ಪಾಟೀಲ, ಕೃಷಿ ಇಲಾಖೆ ವಿಚಕ್ಷಣಾ ದಳದ ಜಂಟಿ ನಿರ್ದೇಶಕ ಜಿಲಾನಿ ಮೊಖಾಶಿ, ಉಪ ನಿರ್ದೇಶಕ ಡಾ.ಎಚ್.ಡಿ. ಕೋಳೆಕರ ಪಾಲ್ಗೊಂಡಿದ್ದರು.

‘ಹುದ್ದೆ ಮಂಜೂರು ಮಾಡಿ’

ಶಾಸಕ ಮಹಾಂತೇಶ ದೊಡ್ಡಗೌಡರ ಮಾತನಾಡಿ, ‘ಕಿತ್ತೂರು ತಾಲ್ಲೂಕಿಗೆ ಕೃಷಿ ಸಹಾಯಕ ನಿರ್ದೇಶಕ ಹುದ್ದೆ ಮಂಜೂರು ಮಾಡಬೇಕು. ಗೊಬ್ಬರ ವಿತರಣೆ ವ್ಯವಸ್ಥೆಯನ್ನು ಸಂಪೂರ್ಣವಾಗಿ ಒಕ್ಕೂಟದ ಮೂಲಕ ಮಾಡಲು ಕ್ರಮ ಕೈಗೊಳ್ಳಬೇಕು’ ಎಂದು ಸಲಹೆ ನೀಡಿದರು.

‘ನೆರೆಯ ಧಾರವಾಡ ಜಿಲ್ಲೆಗೆ ಹೋಲಿಸಿದರೆ ಕಿತ್ತೂರು ಹಾಗೂ ಬೈಲಹೊಂಗಲ ತಾಲ್ಲೂಕಿನ ರೈತರಿಗೆ ಬೆಳೆವಿಮೆ ಪರಿಹಾರದಲ್ಲಿ ತಾರತಮ್ಯ ಉಂಟಾಗುತ್ತಿದೆ. ಈ ಬಗ್ಗೆ ಪ್ರತಿ ಸಭೆಯಲ್ಲಿ ಚರ್ಚೆ ನಡೆಸಿದರೂ ಸಮಸ್ಯೆ ಬಗೆಹರಿಯುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಹಾಯಧನ ಬಾಕಿ ಇದೆ

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ, ‘ಕಬ್ಬು ಕಟಾವು ಯಂತ್ರಗಳ ಖರೀದಿ ಸಹಾಯಧನ ಬಾಕಿಯಿದೆ. ಯಂತ್ರಗಳಿಗೆ ಬೇಡಿಕೆ ಇರುವುದರಿಂದ ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಯಂತ್ರಗಳ ಖರೀದಿ ಗುರಿ ನಿಗದಿಪಡಿಸಬೇಕು’ ಎಂದು ಕೋರಿದರು.

ಶಾಸಕ ಪಿ. ರಾಜೀವ್, ‘ಇಸ್ರೇಲ್ ಮಾದರಿಯಲ್ಲಿ ರೈತರಲ್ಲಿ ಆತ್ಮವಿಶ್ವಾಸ ಬೆಳೆಸಬೇಕು. ಅಧಿಕಾರಿಗಳು ಕನಿಷ್ಠ ನೂರು ಎಕರೆ ಉಸ್ತುವಾರಿ ವಹಿಸಿಕೊಂಡು ರೈತರ‌ ಜೊತೆಯಲ್ಲಿ ಪ್ರಯೋಗ ಮಾಡಬೇಕು. ಹೊಸ ತಂತ್ರಜ್ಞಾನ, ಆವಿಷ್ಕಾರಗಳನ್ನು ಪರಿಚಯಿಸಬೇಕು’ ಎಂದು ಹೇಳಿದರು.

***

‘ನನ್ನ ಬೆಳೆ ನನ್ನ ಹಕ್ಕು’ ಯೋಜನೆಗೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಈ ವರ್ಷ ಕೂಡ ಹೆಚ್ಚಿನ ಪ್ರಚಾರ ನೀಡಿ ಇದನ್ನು ಮುಂದುವರಿಸಬೇಕು
ಈರಣ್ಣ ಕಡಾಡಿ
ರಾಜ್ಯಸಭಾ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT