ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಜಾಗೃತಿ ಮೂಡಿಸಿದರೂ ಆಗದ ನಿಯಂತ್ರಣ, ಐದೇ ತಿಂಗಳಲ್ಲಿ 12 ಬಾಲ್ಯ ವಿವಾಹ!

Published 15 ಸೆಪ್ಟೆಂಬರ್ 2023, 23:30 IST
Last Updated 15 ಸೆಪ್ಟೆಂಬರ್ 2023, 23:30 IST
ಅಕ್ಷರ ಗಾತ್ರ

ಬೆಳಗಾವಿ: ಬಾಲ್ಯ ವಿವಾಹ ತಡೆಗೆ ನಿರಂತರ ಜಾಗೃತಿ ಅಭಿಯಾನ ಕೈಗೊಂಡರೂ ಜಿಲ್ಲೆಯಲ್ಲಿ ಬಾಲ್ಯ ವಿವಾಹ ಪ್ರಕರಣಗಳು ನಿಯಂತ್ರಣಕ್ಕೆ ಬಂದಿಲ್ಲ. 5 ತಿಂಗಳ ಅವಧಿಯಲ್ಲಿ 12 ಬಾಲ್ಯ ವಿವಾಹಗಳು ನಡೆದಿವೆ.

2022ರ ಏಪ್ರಿಲ್‌ನಿಂದ 2023ರ ಮಾರ್ಚ್‌ವರೆಗೆ ಇಲ್ಲಿ ಒಟ್ಟು 16 ಬಾಲ್ಯ ವಿವಾಹ ನೆರವೇರಿದ್ದವು. ಈ ವರ್ಷ 2023ರ ಏಪ್ರಿಲ್‌ 1ರಿಂದ ಆಗಸ್ಟ್‌ 31ರವರೆಗಿನ 5 ತಿಂಗಳಲ್ಲೇ 12 ಬಾಲಕಿಯರ ವಿವಾಹವಾಗಿದೆ. ಸವದತ್ತಿ ತಾಲ್ಲೂಕಿನಲ್ಲಿ 9 ಬಾಲಕಿಯರು ಸಪ್ತಪದಿ ತುಳಿದಿದ್ದಾರೆ.

‘ಬಾಲ್ಯ ವಿವಾಹ ನಿಯಂತ್ರಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಬಾಲಕಿಯರು ಗರ್ಭಿಣಿಯಾಗಿದ್ದು ಗೊತ್ತಿದ್ದರೂ ಗ್ರಾಮಸ್ಥರಿಗೆ ಹೆದರಿ ಸರ್ಕಾರಕ್ಕೆ ಮಾಹಿತಿ ನೀಡಲು ಅಂಗನವಾಡಿ ಕೇಂದ್ರಗಳ ಕಾರ್ಯಕರ್ತೆಯರು ಹಿಂಜರಿಯುತ್ತಾರೆ. ನಮಗೂ ತಪ್ಪು ಮಾಹಿತಿ ನೀಡಿ, ಪೋಷಕರು ಮಕ್ಕಳ ಭವಿಷ್ಯ ಹಾಳು ಮಾಡುತ್ತಾರೆ. ಬಾಲ್ಯ ವಿವಾಹ ನಿಯಂತ್ರಣಕ್ಕೆ  ಸಹಕಾರ ಸಿಗುತ್ತಿಲ್ಲ’ ಎಂದು ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಸಿಸ್ಟರ್‌ ಲೂರ್ದ್‌ ಮೇರಿ ‘ಪ್ರಜಾವಾಣಿ’ಗೆ ತಿಳಿಸಿದರು.

ಸಿಗದ ಸಹಕಾರ: ಬಾಲ್ಯ ವಿವಾಹ ತಡೆಯುವ ಜವಾಬ್ದಾರಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಅಲ್ಲದೇ ವಿವಿಧ ಇಲಾಖೆಗಳ ಅಧಿಕಾರಿಗಳಿಗೂ ವಹಿಸಲಾಗಿದೆ. ವಿವಾಹವಾದ ಮಕ್ಕಳ ಮತ್ತು ಅವರ ಪೋಷಕರ ವಿರುದ್ಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗುತ್ತದೆ. ಆದರೆ, ಬಹುತೇಕ ಸಂದರ್ಭಗಳಲ್ಲಿ ಬೇರೆ ಬೇರೆ ಕಾರಣಗಳಿಂದ ಅವರಿಗೆ ಶಿಕ್ಷೆಯಾಗುವುದಿಲ್ಲ’ ಎಂದು ಭಾರತೀಯ ಸಂಸ್ಕೃತಿ ಫೌಂಡೇಷನ್‌ ಅಧ್ಯಕ್ಷೆ ಪ್ರಮೋದಾ ಹಜಾರೆ ತಿಳಿಸಿದರು.

‘ಬಾಲ್ಯ ವಿವಾಹದ ಬಗ್ಗೆ ಖಚಿತ ಮಾಹಿತಿ ಇದ್ದರೂ ಅಧಿಕಾರಿಗಳು ದಾಳಿ ನಡೆಸಲ್ಲ. ಕಾಟಾಚಾರಕ್ಕೆ ಜಾಗೃತಿ ಕಾರ್ಯಕ್ರಮ ನಡೆಯುತ್ತವೆ. ವಿವಾಹವಾದ ಮಕ್ಕಳ ಪೋಷಕರು ನ್ಯಾಯಾಲಯದಲ್ಲಿ ತಪ್ಪು ಮಾಹಿತಿ ನೀಡುತ್ತಾರೆ. ವಾಸ್ತವಾಂಶ ಮರೆಮಾಚುತ್ತಾರೆ. ಸಾಕ್ಷಿಗಳ ಕೊರತೆಯಿಂದ ತಪ್ಪಿತಸ್ಥರಿಗೆ ಶಿಕ್ಷೆಯಾಗುವುದಿಲ್ಲ’ ಎಂದರು.

ನಮಗೂ ಕಷ್ಟ: ‘ಬಾಲ್ಯ ವಿವಾಹ ತಡೆಗೆ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಜಾಗೃತಿ ಮೂಡಿಸುತ್ತೇವೆ. ಆದರೆ, ಎರಡೂ ಕಡೆಯ ಕುಟುಂಬದವರು ಮದುವೆಯ ಆಮಂತ್ರಣ ಪತ್ರಿಕೆ ಮುದ್ರಿಸುವುದಿಲ್ಲ. ಯಾರಿಗೂ ಸುಳಿವು ಸಿಗದ ರೀತಿ ನಿರ್ಜನ ಪ್ರದೇಶದ ದೇವಸ್ಥಾನ, ಸಭಾಗೃಹಗಳಲ್ಲಿ ಮದುವೆ ಮಾಡಿಸುತ್ತಾರೆ. ಛಾಯಾಚಿತ್ರಗಳನ್ನು ಕ್ಲಿಕ್ಕಿಸಲ್ಲ. ವಿಡಿಯೊ ಚಿತ್ರೀಕರಣವೂ ಆಗಲ್ಲ. ಸುಳಿವು ಆಧರಿಸಿ ಕಾರ್ಯಾಚರಣೆ ನಡೆಸುವಷ್ಟೊತ್ತಿಗೆ ವಿಳಂಬವಾಗಿರುತ್ತದೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಜಿಲ್ಲೆಯಲ್ಲಿ ಕಳೆದ 17 ತಿಂಗಳಲ್ಲಿ 150 ಬಾಲ್ಯ ವಿವಾಹ ತಡೆಯಲಾಗಿದೆ. 2022-23ನೇ ಸಾಲಿನಲ್ಲಿ 118 ಮತ್ತು 2023ರ ಏಪ್ರಿಲ್‌ 1ರಿಂದ ಜುಲೈ 30ರವರೆಗೆ 32 ಬಾಲ್ಯ ವಿವಾಹಗಳಿಗೆ ಕಡಿವಾಣ ಹಾಕಲಾಗಿದೆ’ ಎಂದರು.

ನ್ಯಾಯಾಧೀಶರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ಶೀಘ್ರ ಸಭೆ ನಡೆಸಿ, ಬಾಲ್ಯವಿವಾಹಗಳ ನಿಯಂತ್ರಣಕ್ಕೆ ಕಠಿಣ ಕ್ರಮ ಜರುಗಿಸಲಾಗುವುದು.
-ನಿತೇಶ್‌ ಪಾಟೀಲ, ಜಿಲ್ಲಾಧಿಕಾರಿ
ಬಾಲ್ಯವಿವಾಹ ತಡೆಯಲು ಪ್ರಯತ್ನ ನಡೆದಿದೆ. ಆದರೂ, ಕೆಲವರು ನಮ್ಮ ಕಣ್ತಪ್ಪಿಸಿ ಮದುವೆ ಮಾಡಿಸುತ್ತಾರೆ. ಅವುಗಳಿಗೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳಲಾಗುವುದು.
-ಜೆ.ಟಿ.ಲೋಕೇಶ, ಮಕ್ಕಳ ರಕ್ಷಣಾಧಿಕಾರಿ, ಬೆಳಗಾವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT