ಸೋಮವಾರ, ಏಪ್ರಿಲ್ 6, 2020
19 °C
ಮುಂದಿನ ತಿಂಗಳು ಆಯೋಜನೆ: ಪೂರ್ವ ಸಿದ್ಧತೆ

ರಾಮದುರ್ಗದಲ್ಲಿ ಚುಟುಕು ಸಾಹಿತ್ಯ ಸಮ್ಮೇಳನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ‘ಜಿಲ್ಲಾ ಮಟ್ಟದ 3ನೇ ಚುಟುಕು ಸಾಹಿತ್ಯ ಸಮ್ಮೇಳನವನ್ನು ಏ. 11 ಮತ್ತು 12ರಂದು ರಾಮದುರ್ಗದಲ್ಲಿ ಹಮ್ಮಿಕೊಳ್ಳಲಾಗಿದ್ದು, ಸರ್ವಾಧ್ಯಕ್ಷರನ್ನಾಗಿ ಹಿರಿಯ ಸಾಹಿತಿ ಎಲ್.ಎಸ್. ಶಾಸ್ತ್ರಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ’ ಎಂದು ಚುಟುಕು ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ ಮಳಗಲಿ ತಿಳಿಸಿದರು.

ಇಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಹಿಂದೆ ಖ್ಯಾತ ಚುಟುಕು ಕವಿ ಎಚ್.ಡುಂಡಿರಾಜ ಮತ್ತು ಹಿರಿಯ ಕವಿ ಜಿನದತ್ತ ದೇಸಾಯಿ ಅಧ್ಯಕ್ಷತೆಯಲ್ಲಿ ಸಮ್ಮೇಳನಗಳು ಬೆಳಗಾವಿಯಲ್ಲಿ ನಡೆದಿದ್ದವು. ಈ ಬಾರಿ ರಾಮದುರ್ಗ ತಾಲ್ಲೂಕು ಘಟಕ ಸಂಘಟನೆಯ ಜವಾಬ್ದಾರಿ ಹೊತ್ತಿದೆ. ಅಲ್ಲಿನ ಶಾಸಕ ಮಹಾದೇವಪ್ಪ ಯಾದವಾಡ ಅಧ್ಯಕ್ಷತೆಯಲ್ಲಿ ವಿವಿಧ ಕ್ಷೇತ್ರಗಳ ಗಣ್ಯರನ್ನು ಒಳಗೊಂಡ ಸ್ವಾಗತ ಸಮಿತಿ ಮತ್ತು ಉಪ ಸಮಿತಿಗಳನ್ನು ರಚಿಸಿ ಪೂರ್ವ ಸಿದ್ಧತೆ ನಡೆಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

‘ಸರ್ವಾಧ್ಯಕ್ಷರ ಮೆರವಣಿಗೆ, ಉದ್ಘಾಟನಾ ಸಮಾರಂಭ, ವಿಚಾರ ಗೋಷ್ಠಿಗಳು, ಚುಟುಕು ಕಾವ್ಯವಾಚನ ಗೋಷ್ಠಿ, ವಿಶೇಷ ಉಪನ್ಯಾಸಗಳು, ಸಾಧಕರಿಗೆ ಸನ್ಮಾನ, ಚುಟುಕು ಪುಸ್ತಕಗಳ ಬಿಡುಗಡೆ, ಹಾಸ್ಯಸಂಜೆ, ಸಾಂಸ್ಕೃತಿಕ ಕಾರ್ಯಕ್ರಮ, ಸಮಾರೋಪ ಸಮಾರಂಭ ನಡೆಯಲಿವೆ. ಜಿಲ್ಲೆಯ ಸಾಹಿತ್ಯ, ಕಲೆ, ಸಂಸ್ಕೃತಿ ಪ್ರತಿಬಿಂಬಿಸುವ ರೀತಿಯಲ್ಲಿ ಸಮ್ಮೇಳನದ ಕಾರ್ಯಕ್ರಮಗಳನ್ನು ಸಿದ್ಧಪಡಿಸಲಾಗಿದೆ. ಪುಸ್ತಕ ಪ್ರದರ್ಶನ, ಕಲಾಪ್ರದರ್ಶನಗಳಕ್ಕೆ ಮಳಿಗೆಗಳು ಇರಲಿವೆ. ಸ್ಮರಣ ಸಂಚಿಕೆ ಹೊರ ತರಲಾಗುವುದು’ ಎಂದು ತಿಳಿಸಿದರು.

‘77 ವರ್ಷ ವಯಸ್ಸಿನ ಶಾಸ್ತ್ರಿ ಆರು ದಶಕಗಳಿಂದ ಪತ್ರಕರ್ತರಾಗಿ, ಸಾಹಿತಿಯಾಗಿ ಸಾಮಾಜಿಕ ಕ್ಷೇತ್ರದಲ್ಲಿದ್ದಾರೆ. ಜಿಲ್ಲೆಯಲ್ಲಿ ಚುಟುಕು ಸಾಹಿತ್ಯ ಪರಿಷತ್ತು ಸ್ಥಾಪಿಸಿ ಎರಡು ದಶಕಗಳಲ್ಲಿ ಹತ್ತು ತಾಲ್ಲೂಕುಗಳಲ್ಲೂ ನಿರಂತರ ಚಟುವಟಿಕೆಗಳನ್ನು ನಡೆಸಿದ್ದಾರೆ. ನೂರಾರು ಬರಹಗಾರರಿಗೆ ವೇದಿಕೆ ಒದಗಿಸಿದ್ದಾರೆ. ರಾಜ್ಯ ಮಟ್ಟದ ಎರಡು ಚುಟುಕು ಸಮ್ಮೇಳನಗಳನ್ನು ಬೆಳಗಾವಿಯಲ್ಲಿ ಸಂಘಟಿಸಿದ್ದಾರೆ. ಪತ್ರಿಕಾ ಅಕಾಡೆಮಿ ಪ್ರಶಸ್ತಿ ಸಹಿತ 15ಕ್ಕೂ ಹೆಚ್ಚು ಪ್ರಶಸ್ತಿಗಳು ಮತ್ತು ನೂರಾರು ಸನ್ಮಾನಗಳಿಗೆ ಭಾಜನವಾಗಿದ್ದಾರೆ. 110 ಪುಸ್ತಕಗಳನ್ನು ಹೊರತಂದಿದ್ದಾರೆ. 40ಸಾವಿರಕ್ಕೂ ಹೆಚ್ಚು ಬಿಡಿಬರಹಗಳನ್ನು ಬರೆದಿದ್ದಾರೆ’ ಎಂದು ವಿವರಿಸಿದರು.

ಜಿಲ್ಲಾ ಘಟಕದ ಕಾರ್ಯಾಧ್ಯಕ್ಷೆ ದೀಪಿಕಾ ಚಾಟೆ, ಗೌರವಾಧ್ಯಕ್ಷರಾದ ಪಿ.ಬಿ. ಸ್ವಾಮಿ, ಉಪಾಧ್ಯಕ್ಷರಾದ ಗುಂಡೇನಟ್ಟಿ ಮಧುಕರ, ಎಂ.ಎ. ಪಾಟೀಲ, ಬಸವರಾಜ ಸುಣಗಾರ, ಸಮ್ಮೇಳನದ ಕಾರ್ಯಾಧ್ಯಕ್ಷ ಪಿ.ಜಿ ಹಾಜಿ, ಪ್ರಧಾನ ಕಾರ್ಯದರ್ಶಿ ಡಾ.ಎಚ್.ಆರ್. ಜಗದಾರ, ಉಪಾಧ್ಯಕ್ಷ ನಿ.ರಾ. ಗೋಣ ಹಾಗೂ ಸಮ್ಮೇಳನದ ಸ್ಥಾನಿಕ ಸಂಯೋಜಕ ಸೋಮಶೇಶರ ವಿ. ಸೊಗಲದ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು