ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಳ್ಳು ಹೇಳುವ ಮೋದಿಗೆ ಮಾನ–ಮರ್ಯಾದೆಯೇ ಇಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ ತರಾಟೆ

Published 28 ಏಪ್ರಿಲ್ 2024, 11:42 IST
Last Updated 28 ಏಪ್ರಿಲ್ 2024, 11:42 IST
ಅಕ್ಷರ ಗಾತ್ರ

ಉಗಾರ ಖುರ್ದ (ಬೆಳಗಾವಿ ಜಿಲ್ಲೆ): ‘ಬರೀ ಸುಳ್ಳುಗಳನ್ನು ಹೇಳುವ ನರೇಂದ್ರ ಮೋದಿ ಅವರಿಗೆ ನಾಚಿಕೆಯೇ ಆಗುವುದಿಲ್ಲ. ಬಾಯಿ ಬಿಟ್ಟರೆ ಹಸಿ ಸುಳ್ಳುಗಳೇ ಹೊರಬರುತ್ತವೆ. ಇವರಿಗೆ ಮಾನ– ಮರ್ಯಾದೆಯೇ ಇಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿ ಕಾರಿದರು.

ಕಾಗವಾಡ ತಾಲ್ಲೂಕಿನ ಉಗಾರ ಖುರ್ದ ಗ್ರಾಮದಲ್ಲಿ ಭಾನುವಾರ ಪ್ರಿಯಾಂಕಾ ಜಾರಕಿಹೊಳಿ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಅವರು, ‘ರಾಣಿ ಚನ್ನಮ್ಮ, ಛತ್ರಪತಿ ಶಿವಾಜಿಗೆ ಕಾಂಗ್ರೆಸ್ಸಿಗರು ಅವಮಾನ ಮಾಡಿದ್ದಾರೆ ಎಂದು ಮೋದಿ ಬೆಳಗಾವಿಯಲ್ಲಿ ಹೇಳಿದ್ದಾರೆ. ಇದು ಅತ್ಯಂತ ಕೆಟ್ಟ ಸುಳ್ಳು. ನಾವು ಯಾವತ್ತೂ ಅವಮಾನ ಮಾಡಿಲ್ಲ. ಈ ದೇಶದ ಪ್ರಧಾನಿಯಾಗಿ ಇಂಥ ಸುಳ್ಳು ಹೇಳಬಹುದಾ ಇವರು’ ಎಂದೂ ಪ್ರಶ್ನಿಸಿದರು.

‘ಸತ್ಯವೇನೆಂದರೆ ರಾಣಿ ಚನ್ನಮ್ಮ ಜಯಂತಿ ಆಚರಣೆ ಆರಂಭಿಸಿದ್ದೇ ಸಿದ್ದರಾಮಯ್ಯ ಸರ್ಕಾರ. ಯಡಿಯೂರಪ್ಪ, ಬೊಮ್ಮಾಯಿ ಯಾರೂ ಮಾಡಿಲ್ಲ’ ಎಂದರು.

‘ಹಿಂದುಳಿದವರ ಮೀಸಲಾತಿ ಕಿತ್ತುಕೊಂಡು ಮುಸ್ಲಿಮರಿಗೆ ಕೊಡುತ್ತೇವೆ ಎಂದೂ ಮೋದಿ ಹೇಳಿದ್ದಾರೆ. ಯಪ್ಪ... ಯಪ್ಪ... ಇದೆಂಥ ಸುಳ್ಳು. ಈ ಮನುಷ್ಯನಿಗೆ ನಾಚಿಕೆನೇ ಇಲ್ಲ. ಸುಳ್ಳಿನ ಮಾರುಕಟ್ಟೆ ನಿರ್ಮಾಣ ಮಾಡಿಬಿಟ್ಟಿದ್ದಾರೆ’ ಎಂದೂ ಪದೇಪದೇ ಕಿಡಿ ಕಾರಿದರು.

‘1994ರಲ್ಲಿ ದೇವೇಗೌಡ ಅವರು ಮುಖ್ಯಮಂತ್ರಿ, ನಾನು ಹಣಕಾಸು ಸಚಿವ ಇದ್ದೆ. ಆಗ ಮುಸಲ್ಮಾನರಿಗೆ ಶೇ 4ರಷ್ಟು ಮೀಸಲಾತಿ ತರಲಾಗಿದೆ. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದಾಗ ಅದನ್ನು ಕಿತ್ತುಕೊಂಡು ಲಿಂಗಾಯತರು, ಒಕ್ಕಲಿಗರಿಗೆ ಹಂಚಿದರು. ಮುಸ್ಲಿಂ ನಾಯಕರು ಇದನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿದರು. ಕೋರ್ಟ್‌ ಛೀಮಾರಿ ಹಾಕಿದ ಮೇಲೆ ಇದೇ ಬೊಮ್ಮಾಯಿ ಅವರು ‘ಯಥಾವತ್‌ ಮುಂದುವರಿಸುತ್ತೇವೆ’ ಎಂದು ಮುಚ್ಚಳಿಕೆ ಬರೆದುಕೊಟ್ಟಿದ್ದಾರೆ. ಆದರೆ, ಮೋದಿ ಇಂದು ಸುಳ್ಳು ಹೇಳುತ್ತ ಸಾಗಿದ್ದಾರೆ’ ಎಂದೂ ದೂರಿದರು.

‘ನೀವು 10 ವರ್ಷಗಳಲ್ಲಿ ಏನು ಸಾಧನೆ ಮಾಡಿದ್ದೀರಿ ಎಂದು ದೇಶದ ಜನರ ಮುಂದೆ ಇಡಬೇಕು. ಅದನ್ನು ಬಿಟ್ಟು ತಾಳಿ, ಬಳೆ, ಮುಸಲ್ಮಾನ ಧರ್ಮದ ವಿಚಾರ ಪ್ರಸ್ತಾಪ ಮಾಡುತ್ತೀರಲ್ಲ ನಿಮಗೆ ನಾಚಿಕೆ ಆಗಬೇಕು. ಈ ದೇಶದ 140 ಕೋಟಿ ಜನರೆಲ್ಲ ಸಮಾನರು, ಸಮಾನ ಹಕ್ಕು ಹೊಂದಿದ್ದಾರೆ ಎಂದು ಅಂಬೇಡ್ಕರ್‌ ಅವರು ಸಂವಿಧಾನದಲ್ಲೇ ಹೇಳಿದ್ದಾರೆ. ಆದರೆ, ಈಗಲೂ ನೀವು ಧರ್ಮ, ಮತದ ವಿಚಾರ ಮಾತನಾಡುತ್ತಿದ್ದಾರೆ.

‘ಮಂಡಲ್‌ ಕಮಿಷನ್‌ ವರದಿ ಜಾರಿಯಾದಾಗ ಶಾಲಾ ಮಕ್ಕಳನ್ನು ಎತ್ತಿಕಟ್ಟಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರೇರೇಪಿಸಿದ್ದು ಇದೇ ಬಿಜೆಪಿ. ಹಿಂದುಳಿದವರ, ಮಹಿಳೆಯರ ಮೀಸಲಾತಿ ವಿರೋಧಿಸಿದ್ದು ಇದೇ ಬಿಜೆಪಿಯವರು. ರೈತರಿಗೆ, ಜನರಿಗೆ ಸುಳ್ಳು ಭರವಸೆ ಕೊಟ್ಟು ಮೋಸ ಮಾಡಿದವರು ಇದೇ ಮೋದಿ’ ಎಂದೂ ಟೀಕಿಸಿದರು.

ಉಪ‍ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ವಿವಿಧ ಖಾತೆಗಳ ಸಚಿವರು, ಶಾಸಕರು, ಮುಖಂಡರು ವೇದಿಕೆ ಮೇಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT