ಗೋಕಾಕ (ಬೆಳಗಾವಿ ಜಿಲ್ಲೆ): ‘ಮಳೆಯಿಂದ ಸಂಪೂರ್ಣ ಮನೆ ಹಾನಿ ಸಂಭವಿಸಿದ ಸಂತ್ರಸ್ತರಿಗೆ ತಲಾ ₹1.20 ಲಕ್ಷ, ಭಾಗಶಃ ಹಾನಿಯಾಗಿದ್ದರೆ ₹50 ಸಾವಿರ ಪರಿಹಾರ ನೀಡಲಾಗುವುದು. ಪೂರ್ಣ ಮನೆ ನಾಶವದವರಿಗೆ ಮನೆ ಕೂಡ ನಿರ್ಮಿಸಿಕೊಡಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.
ಘಟಪ್ರಭಾ ನದಿ ಪ್ರವಾಹ ಬಾಧಿತ ಪ್ರದೇಶಗಳಿಗೆ ಸೋಮವಾರ ಭೇಟಿ ನೀಡಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಪದೇ ಪದೇ ಪ್ರವಾಹಕ್ಕೆ ಸಿಲುಕುವ ಸಂತ್ರಸ್ತರು ಸ್ಥಳಾಂತರಕ್ಕೆ ಒಪ್ಪಿದರೆ, ಬೇರೆ ಕಡೆ ಮನೆ ಕಟ್ಟಿಸಿಕೊಡುತ್ತೇವೆ. ಇಲ್ಲದಿದ್ದರೆ, ಹಳೆ ಮನೆ ಬಿದ್ದ ಜಾಗದಲ್ಲೇ ವಸತಿ ಯೋಜನೆಯಡಿ ಹೊಸ ಮನೆ ಕಟ್ಟಿಸಿಕೊಡುತ್ತೇವೆ’ ಎಂದರು. ಗೋಕಾಕ, ಚಿಕ್ಕೋಡಿ, ಕಾಗವಾಡ ತಾಲ್ಲೂಕಿನ ಪ್ರವಾಹ ಪೀಡಿತ ಸ್ಥಳಗಳಿಗೂ ಭೇಟಿ ನೀಡಿದರು.
‘ಯಡಿಯೂರಪ್ಪ ತಟ್ಟೆಯಲ್ಲಿ ಕತ್ತೆ ಸತ್ತು ಬಿದ್ದಿದೆ’:
‘ಯಡಿಯೂರಪ್ಪ ನನ್ನ ತಟ್ಟೆಯಲ್ಲಿ ನೊಣ ಹುಡುಕುತ್ತಿದ್ದಾರೆ. ಅವರ ತಟ್ಟೆಯಲ್ಲಿ ಹೆಗ್ಗಣ ಅಷ್ಟೇ ಅಲ್ಲ, ಕತ್ತೆಯೇ ಸತ್ತು ಬಿದ್ದಿದೆ. ಅಂಥವರಿಗೆ ನನ್ನ ರಾಜೀನಾಮೆ ಕೇಳುವ ಹಕ್ಕು ಇದೆಯೇ’ ಎಂದು ಸಿದ್ದರಾಮಯ್ಯ
ಪ್ರಶ್ನಿಸಿದರು.
‘ಯಡಿಯೂರಪ್ಪ ಅವರೇ ಸ್ವತಃ ಪೋಕ್ಸೊ ಪ್ರಕರಣದಲ್ಲಿ ಸಿಕ್ಕಿಕೊಂಡಿದ್ದು, ಚಾರ್ಜ್‌ಶೀಟ್ ಸಲ್ಲಿಕೆ ಆಗಿದೆ. ಜಾಮೀನು ಸಿಕ್ಕಿದ್ದಕ್ಕೆ ಹೊರಗಿದ್ದಾರೆ. ಇಲ್ಲದಿದ್ದರೆ ಜೈಲಿನಲ್ಲಿ ಇರಬೇಕಿತ್ತು’ ಎಂದು ಅವರು
ಹೇಳಿದರು.
‘ರಾಜಕೀಯ ಕಾನೂನಾತ್ಮಕ ಹೋರಾಟ’: ಬೆಳಗಾವಿಯಲ್ಲಿ ಸುದ್ದಿಗಾರರ ಜೊತೆ ಸಿದ್ದರಾಮಯ್ಯ ಅವರು ಮಾತನಾಡಿ, ‘ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿಯ ಆರೋಪದ ವಿರುದ್ಧ ಕಾನೂನಾತ್ಮಕ ಮತ್ತು ರಾಜಕೀಯ ಹೋರಾಟಕ್ಕೆ ನಾವು ಸಿದ್ಧವಾಗಿದ್ದೇವೆ. ರಾಜ್ಯಪಾಲರು ಕೊಟ್ಟ ಷೋಕಾಸ್ ನೋಟಿಸ್ ಹಿಂಪಡೆದು, ಅಬ್ರಹಾಂ ಕೊಟ್ಟ ದೂರು ತಿರಸ್ಕರಿಸಲು ಹೇಳಿದ್ದೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.