ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರದಿಂದ ಬಂದ ವಲಸಿಗರಿಂದ ಬೆಳಗಾವಿಯಲ್ಲಿ ಸೋಂಕು ಹೆಚ್ಚಳ: ಸಿಎಂಗೆ ಮಾಹಿತಿ

ಕೋವಿಡ್ ಕರ್ತವ್ಯನಿರತ ಬೆಳಗಾವಿಯ ವೈದ್ಯರೊಂದಿಗೆ ಸಮಾಲೋಚನೆ ನಡೆಸಿದ ಬಿ.ಎಸ್‌ ಯಡಿಯೂರಪ್ಪ
Last Updated 15 ಮೇ 2021, 12:41 IST
ಅಕ್ಷರ ಗಾತ್ರ

ಬೆಳಗಾವಿ: ಕೋವಿಡ್-19 ನಿಯಂತ್ರಣ ಹಾಗೂ ಚಿಕಿತ್ಸೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕೋವಿಡ್ ಚಿಕಿತ್ಸೆಯಲ್ಲಿ ನಿರತರಾಗಿರುವ ವೈದ್ಯರೊಂದಿಗೆ ಶನಿವಾರ ವರ್ಚುವಲ್ ಸಭೆ ಮೂಲಕ ಸಮಾಲೋಚನೆ ನಡೆಸಿದರು.

ಗೋಕಾಕ ತಾಲ್ಲೂಕು ಆಸ್ಪತ್ರೆಯ ಅರಿವಳಿಕೆ ತಜ್ಞ ಡಾ.ಮಹಾಂತೇಶ ಶೆಟ್ಟೆಪ್ಪನವರ ಅವರೊಂದಿಗೆ ಮಾತನಾಡಿದರು. ‘ಗ್ರಾಮೀಣ ಪ್ರದೇಶಗಳಲ್ಲಿ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ನಿಯಂತ್ರಣ ಹಾಗೂ ಚಿಕಿತ್ಸೆಗೆ ಯಾವ ರೀತಿ ಕ್ರಮ ಕೈಗೊಳ್ಳಲಾಗಿದೆ’ ಎಂದು ಕೇಳಿದರು.

ಉತ್ತರಿಸಿದ ಮಹಾಂತೇಶ, ‘ನೆರೆಯ ಮಹಾರಾಷ್ಟ್ರದಲ್ಲಿ ಸೋಂಕು ಜಾಸ್ತಿ ಇದೆ. ಅಲ್ಲಿಂದ ವಲಸಿಗರು ಹಾಗೂ ಸೋಂಕಿತರು ಬಂದಿರುವುದರಿಂದ ಗ್ರಾಮೀಣ ಪ್ರದೇಶದಲ್ಲೂ ಸೋಂಕು‌ ಕಂಡುಬಂದಿದೆ. ಆರೋಗ್ಯ ಕಾರ್ಯಕರ್ತರ ಮೂಲಕ ಸೋಂಕಿತರು ಹಾಗೂ ಸಂಪರ್ಕಿತರನ್ನು ಗುರುತಿಸಿ ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ವಿವರಿಸಿದರು.

‘ಆಯುಷ್ ವೈದ್ಯರು, ಆಶಾ ಕಾರ್ಯಕರ್ತೆಯರಿಗೆ ತರಬೇತಿ ನೀಡಿ ಜನರ ಆರೋಗ್ಯ ಪರೀಕ್ಷೆ ನಡೆಸಲಾಗುತ್ತಿದೆ. ಟೆಲಿಮೆಡಿಸಿನ್ ಮೂಲಕ ಚಿಕಿತ್ಸೆ ಕೊಡಲಾಗುತ್ತಿದೆ. ಲಕ್ಷಣರಹಿತ ಸೋಂಕಿತರು ಕಂಡುಬಂದಾಗ ಮನೆಗೆ ತೆರಳಿ ಔಷಧೋಪಚಾರ ಮಾಡಲಾಗುತ್ತಿದೆ’ ಎಂದರು.

‘ಬೆಳಗಾವಿ ದೊಡ್ಡ ಜಿಲ್ಲೆಯಾಗಿದ್ದು, ಕೋವಿಡ್ ನಿರ್ವಹಣೆ ವೇಳೆ ತಾಲ್ಲೂಕು‌–ಜಿಲ್ಲಾಸ್ಪತ್ರೆ‌ ನಡುವೆ ಯಾವ ರೀತಿ ಸಮನ್ವಯ ಸಾಧಿಸಲಾಗುತ್ತಿದೆ’ ಎಂಬ ಸಿ.ಎಂ ಪ್ರಶ್ನೆಗೆ, ‘ಮಾರ್ಗಸೂಚಿ ಪ್ರಕಾರವೇ ಸೋಂಕಿತರ ಪತ್ತೆ ಹಾಗೂ ಚಿಕಿತ್ಸೆ ನಡೆಯುತ್ತಿದೆ. ಸಮನ್ವಯ ಕೊರತೆ‌ ಕಂಡುಬಂದಿಲ್ಲ. ಡಿಎಚ್‌ಒ, ಸರ್ವೇಕ್ಷಣಾಧಿಕಾರಿ, ಆರ್.ಸಿ.ಎಚ್. ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ನಿರಂತರ ಸಂಪರ್ಕದಲ್ಲಿದ್ದಾರೆ. ಕೆಲವೊಮ್ಮೆ ಔಷಧಿ ಪೂರೈಕೆ ವಿಳಂಬವಾಗಿದ್ದರೂ ತೊಂದರೆ ಆಗಿಲ್ಲ’ ಎಂದು ತಿಳಿಸಿದರು.

ಕೋವಿಡ್‌ನಿಂದ ಚೇತರಿಸಿಕೊಂಡು ಕರ್ತವ್ಯಕ್ಕೆ ಮರಳಿರುವ ಶೆಟ್ಟೆಪ್ಪನವರ ಅವರ ಆರೋಗ್ಯವನ್ನು ಮುಖ್ಯಮಂತ್ರಿ ವಿಚಾರಿಸಿದರು.

‘ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಅಪಾಯವನ್ನು ಲೆಕ್ಕಿಸದೆ ದುಡಿಯುತ್ತಿರುವ ವೈದ್ಯಕೀಯ ಸಿಬ್ಬಂದಿ ರಕ್ಷಣೆಗೆ ಸರ್ಕಾರ ಬದ್ಧವಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT