ಬುಧವಾರ, ಸೆಪ್ಟೆಂಬರ್ 29, 2021
21 °C
ಅತ್ಯಾಧುನಿಕ ಸೌಲಭ್ಯ ಸಮರ್ಪಕ ಬಳಕೆಗೆ ಡಿಸಿ ಹಿರೇಮಠ ಸೂಚನೆ

ಬೆಳಗಾವಿ: ಪ್ರತಿ ಮನೆಯಿಂದಲೂ ಕಸ ಸಂಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ನಗರದಲ್ಲಿ 1,12,669 ಮನೆ ಅಥವಾ ಆಸ್ತಿಗಳಿಗೆ ಆರ್.ಎಫ್.ಐ.ಡಿ. ಟ್ಯಾಗ್‌ಗಳನ್ನು ಅಳವಡಿಸಲಾಗಿದೆ. ಕಸ ಸಂಗ್ರಹಕ್ಕೆ ಹೋಗುವವರು ಕಡ್ಡಾಯವಾಗಿ ಟ್ಯಾಗ್ ರೀಡರ್ ಬಳಸಬೇಕು. ಇದರಿಂದ ನಿಖರ ಮಾಹಿತಿ ಲಭ್ಯವಾಗಲಿದೆ’ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದರು.

ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ವಿಶ್ವೇಶ್ವರಯ್ಯ ನಗರದಲ್ಲಿ ಸ್ಥಾಪಿಸಿರುವ ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ ಇಂಟಿಗ್ರೇಟೆಡ್ ಕಮಾಂಡ್‌ ಆ್ಯಂಡ್ ಕಂಟ್ರೋಲ್ ಸೆಂಟರ್‌ನಲ್ಲಿ ಮಂಗಳವಾರ ನಡೆದ ಸಮನ್ವಯ ಸಭೆಯಲ್ಲಿ ಅವರು ಮಾತನಾಡಿದರು.

‘ನಗರದ ಪ್ರತಿ ಮನೆಯಿಂದ ಕಸ ಸಂಗ್ರಹವಾಗಬೇಕು ಹಾಗೂ ವಿಂಗಡಣೆಯನ್ನೂ ಕಟ್ಟುನಿಟ್ಟಾಗಿ ನಿರ್ವಹಿಸಬೇಕು. ಇದಕ್ಕಾಗಿ ಆರ್.ಎಫ್.ಐ.ಡಿ. ಟ್ಯಾಗ್ ಸ್ಕ್ಯಾನ್ ಮಾಡಲು 300ಕ್ಕೂ ಹೆಚ್ಚು ರೀಡರ್‌ಗಳನ್ನು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಪಾಲಿಕೆಗೆ ವಿತರಿಸಲಾಗಿದೆ. ಇವುಗಳನ್ನು ಬಳಸಲು ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ಸೂಚಿಸಿದರು.

ತ್ವರಿತ ಪ್ರತಿಕ್ರಿಯೆ ಸಿಗಲಿ: ‘ಸಿಟಿಜನ್ ಮೊಬೈಲ್ ಆ್ಯಪ್ ಸೇರಿದಂತೆ ಸ್ಮಾರ್ಟ್ ಸಿಟಿ ‌ಕಮಾಂಡ್ ಆ್ಯಂಡ್ ಕಂಟ್ರೋಲ್ ಸೆಂಟರ್ ಕಾರ್ಯನಿರ್ವಹಣೆ ಹಾಗೂ ಇದರಿಂದ ನಾಗರಿಕರಿಗೆ ಲಭ್ಯವಿರುವ ಸೇವೆಗಳ ಕುರಿತು ಹೆಚ್ಚಿನ ಪ್ರಚಾರ ಮಾಡಬೇಕು. ವಿವಿಧ ಇಲಾಖೆಗೆ ಸಂಬಂಧಿಸಿದ ಕುಂದುಕೊರತೆಗಳನ್ನು ದಾಖಲಿಸುವುದು ಮತ್ತು ನಿವಾರಣೆಗೆ ಆ್ಯಪ್‌ನಿಂದ ತ್ವರಿತ ಪ್ರತಿಕ್ರಿಯೆ ದೊರೆತರೆ ಸಾರ್ವಜನಿಕರು ಹೆಚ್ಚಾಗಿ ‘ಮೈ ಬೆಳಗಾವಿ ಸಿಟಿಜನ್ ಆ್ಯಪ್’ ಡೌನ್‌ಲೋಡ್ ಮಾಡಿಕೊಂಡು ಬಳಸುತ್ತಾರೆ. ಆದ್ದರಿಂದ ಈ ಬಗ್ಗೆ ಎಲ್ಲ ಇಲಾಖೆಗಳು ಗಮನಹರಿಸಬೇಕು’ ಎಂದು ನಿರ್ದೆಶನ ನೀಡಿದರು.

‘ಪೊಲೀಸ್, ಸಾರಿಗೆ, ಆರೋಗ್ಯ, ಅಗ್ನಿಶಾಮಕ ಇಲಾಖೆಗಳು ಮತ್ತು ಪಾಲಿಕೆಯವರು ಕಮಾಂಡ್ ಸೆಂಟರ್‌ನಲ್ಲಿ ಇರುವ ಅತ್ಯಾಧುನಿಕ ಸೌಲಭ್ಯಗಳನ್ನು ಬಳಸಿಕೊಂಡು ನಾಗರಿಕರಿಗೆ ಉತ್ತಮ ಸೇವೆ ಒದಗಿಸಬೇಕು’ ಎಂದು ತಿಳಿಸಿದರು.

ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಡಾ.ಪ್ರವೀಣ ಬಾಗೇವಾಡಿ, ‘ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಅಭಿವೃದ್ಧಿಪಡಿಸಿದ ಉದ್ಯಾನ, ಕೆರೆ, ಆಸ್ಪತ್ರೆ ಕಟ್ಟಡಗಳು, ಡಿಜಿಟಲ್ ಫಲಕಗಳು ಸೇರಿದಂತೆ ಬಹುತೇಕ ಸೌಲಭ್ಯಗಳನ್ನು ಪಾಲಿಕೆ ಅಥವಾ ಸಂಬಂಧಿಸಿದ ಇಲಾಖೆಗಳಿಗೆ ಹಸ್ತಾಂತರಿಸಲಾಗಿದೆ’ ಎಂದು ವಿವರಿಸಿದರು.

ಉತ್ತಮ ಸೇವೆಗೆ ಅವಕಾಶ: ‘ಇಂಟಿಗ್ರೇಟೆಡ್ ಕಮಾಂಡ್ ಆ್ಯಂಡ್ ಕಂಟ್ರೋಲ್ ಸೆಂಟರ್‌ನಲ್ಲಿ ಲಭ್ಯವಿರುವ ಅತ್ಯಾಧುನಿಕ ಸೌಲಭ್ಯಗಳನ್ನು ಬಳಸಿಕೊಂಡು ಪೊಲೀಸ್, ಸಾರಿಗೆ, ಮಹಾನಗರ ಪಾಲಿಕೆ, ಆರೋಗ್ಯ ಮತ್ತಿತರ‌ ಇಲಾಖೆಗಳು ಸಾರ್ವಜನಿಕರಿಗೆ ಉತ್ತಮ‌ ಸೇವೆ ಒದಗಿಸಲು ಅವಕಾಶ ಕಲ್ಪಿಸಲಾಗಿದೆ’ ಎಂದು ತಿಳಿಸಿದರು.

ಡಿಸಿಪಿ ವಿಕ್ರಂ ಅಮಟೆ ಮಾತನಾಡಿ, ‘ಸಂಚಾರ ನಿಯಮ ಉಲ್ಲಂಘನೆ, ಸಂಚಾರ ಸಮಸ್ಯೆ ನಿವಾರಣೆಗಾಗಿ ಕಮಾಂಡ್ ಸೆಂಟರ್‌ನ ಕೆಲವು ಸೇವೆಗಳನ್ನು ಪೊಲೀಸ್ ಇಲಾಖೆಗೆ ಅನುಕೂಲ ಆಗುವಂತೆ ಮಾರ್ಪಾಡು ಮಾಡಿಕೊಡಬೇಕು. ವಾಹನಗಳ ಮೇಲೆ ನಿಗಾ ಇರಿಸಲು ಸಾಧ್ಯವಾಗುವಂತೆ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಆರ್.ಟಿ.ಒ. ಹಾಗೂ ಪೊಲೀಸ್ ಇಲಾಖೆಯ ಪ್ರಸ್ತುತ ನಿಗಾ ವ್ಯವಸ್ಥೆಯ ಜೊತೆ ಜೋಡಿಸುವ ಅಗತ್ಯವಿದೆ’ ಎಂದರು.

‘ತುರ್ತು ಪೊಲೀಸ್ ಸೇವೆ ಪಡೆಯಲು ಅನುಕೂಲ ಆಗುವಂತೆ 112 (ಇ.ಆರ್.ಎಸ್.) ಪ್ರತ್ಯೇಕ ನಿಯಂತ್ರಣ ಕೊಠಡಿ ಕಾರ್ಯನಿರ್ವಹಿಸುತ್ತಿದೆ. ಈ ಸೇವೆ ಇನ್ನಷ್ಟು ತ್ವರಿತವಾಗಿ ನೀಡಲು ಎರಡೂ ಕೇಂದ್ರಗಳ ನಡುವೆ ಸಮನ್ವಯತೆ ಸಾಧಿಸುವ ನಿಟ್ಟಿನಲ್ಲಿ ತಂತ್ರಜ್ಞರು ಕೆಲಸ ಮಾಡಬೇಕು’ ಎಂದು ಹೇಳಿದರು.

ಸಂಚಾರ ವಿಭಾಗದ ಎಸಿಪಿ ಶರಣಪ್ಪ, ವಾರ್ತಾ‌ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರಭಾರ ಉಪ ನಿರ್ದೇಶಕ ಗುರುನಾಥ ಕಡಬೂರ, ಸಾರಿಗೆ, ಆರೋಗ್ಯ, ಮಹಾನಗರ ಪಾಲಿಕೆಯ ಅಧಿಕಾರಿಗಳು ಉಪಸ್ಥಿತರಿದ್ದರು.

‘ಕೆಲ ಮಾರ್ಪಾಡು ಅಗತ್ಯ’
ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಪಿ.ವಿ. ಸ್ನೇಹಾ, ‘ಸಂಚಾರ ನಿಯಂತ್ರಣ ಮತ್ತು ಅಪರಾಧ ಪತ್ತೆಗೆ ಸಂಬಂಧಿಸಿದಂತೆ ಈಗಾಗಲೇ ಇರುವ ಕೆಲವು ವ್ಯವಸ್ಥೆಗಳ ಜತೆಗೆ ಕಮಾಂಡ್ ಸೆಂಟರ್‌ನಲ್ಲಿರುವ ಸೌಲಭ್ಯಗಳನ್ನು ಬಳಕೆ ಮಾಡಿಕೊಳ್ಳಲಾಗುವುದು. ಮೊಬೈಲ್ ಆ್ಯಪ್ ನಾಗರಿಕ ಸ್ನೇಹಿಯಾಗಿಸುವ ನಿಟ್ಟಿನಲ್ಲಿ ಕೆಲ ಮಾರ್ಪಾಡು ಮಾಡಬೇಕು’ ಎಂದು ಸಲಹೆ ನೀಡದರು.

‘ಮಹಾನಗರ ಪಾಲಿಕೆಗೆ ಹಸ್ತಾಂತರಿಸಲಾಗಿರುವ ವ್ಯವಸ್ಥೆಯನ್ನು ಸಮರ್ಪಕ ಮತ್ತು ಪರಿಣಾಮಕಾರಿಯಾಗಿ ಬಳಕೆಗೆ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಮಹಾನಗರಪಾಲಿಕೆ ಆಯುಕ್ತ ರುದ್ರೇಶ ಘಾಳಿ ತಿಳಿಸಿದರು.

ಪ್ರಯೋಜನ ಪಡೆಯಬೇಕು
ಸ್ಮಾರ್ಟ್ ಸಿಟಿ ಯೋಜನೆಯ ಎಲ್ಲ ಕಾಮಗಾರಿಗಳು ಪೂರ್ಣಗೊಂಡ ಬಳಿಕ ಸಂಬಂಧಿಸಿದ ಇಲಾಖೆಗಳಿಗೆ ಹಸ್ತಾಂತರಿಸಲಾಗುತ್ತದೆ. ಆದ್ದರಿಂದ ಪರಸ್ಪರ ಸಮನ್ವಯದೊಂದಿಗೆ ಕಮಾಂಡ್ ಸೆಂಟರ್‌ನ ಪ್ರಯೋಜನ ಪಡೆದುಕೊಳ್ಳಬೇಕು.
-ಎಂ.ಜಿ. ಹಿರೇಮಠ, ಜಿಲ್ಲಾಧಿಕಾರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು