ಶುಕ್ರವಾರ, ಸೆಪ್ಟೆಂಬರ್ 17, 2021
24 °C

ನೂತನ ಶಿಕ್ಷಣ ನೀತಿ ಗೊಂದಲಮಯ: ಬರಗೂರು ರಾಮಚಂದ್ರಪ್ಪ ವಿಶ್ಲೇಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಹೊಸ ಶಿಕ್ಷಣ ನೀತಿಯು ಭಾಷೆಯ ವಿಷಯದಲ್ಲಿ ಗೊಂದಲಮಯವಾಗಿದೆ’ ಎಂದು ಚಿಂತಕ, ಬಂಡಾಯ ಸಾಹಿತಿ ಡಾ.ಬರಗೂರು ರಾಮಚಂದ್ರಪ್ಪ ಹೇಳಿದರು.

ಇಲ್ಲಿನ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಂಗೊಳ್ಳಿ ರಾಯಣ್ಣ ಘಟಕ ಮಹಾವಿದ್ಯಾಲಯದ ಕನ್ನಡ ವಿಭಾಗ ಮತ್ತು ಐಕ್ಯೂಎಸಿ ಸಹಯೋಗದಲ್ಲಿ ಆಯೋಜಿಸಿದ್ದ ‘ಪದವಿ ವ್ಯಾಸಂಗದಲ್ಲಿ ಸಾಹಿತ್ಯದ ಮಹತ್ವ’ ಎಂಬ ವೆಬಿನಾರ್‌ನಲ್ಲಿ ಅವರು ಮಾತನಾಡಿದರು.

‘ಶಾಸ್ತ್ರೀಯ ಮತ್ತು ಪ್ರಾದೇಶಿಕ ಭಾಷೆಗಳಿಗೆ ಪ್ರಾಶಸ್ತ್ಯ ಕೊಡಬೇಕು ಎಂದು ನೀತಿಯಲ್ಲಿ ಒಂದೆಡೆ ಹೇಳಿದರೆ, ಇನ್ನೊಂದೆಡೆ ಈಗಾಗಲೇ ಪದವಿ ತರಗತಿಗಳಲ್ಲಿ ಮೂರು ವರ್ಷಗಳಿಗಿದ್ದ ಭಾಷಾ ತರಗತಿಗಳನ್ನು ಒಂದು ವರ್ಷಕ್ಕೆ ಕಡಿತಗೊಳಿಸಿದೆ. ಇದು ಹೊಸ ಶಿಕ್ಷಣ ನೀತಿಯ ದ್ವಂದ್ವ ನಿಲುವಾಗಿದೆ’ ಎಂದು ವಿಶ್ಲೇಷಿಸಿದರು.

ಪ್ರಾದೇಶಿಕ ಭಾಷೆಗೆ ಒತ್ತು ಕೊಡಬೇಕು: ‘ಕನ್ನಡ ಸಾಹಿತ್ಯದ ಮಹತ್ವದ ಕುರಿತಾದ ಚರ್ಚೆ ಈಗ ಅತ್ಯಂತ ಅಗತ್ಯವಾಗಿದೆ. ಬಹುತ್ವವೇ ಭಾರತದ ಮೂಲ ಅಡಿಪಾಯ. ಹೀಗಾಗಿ, ನೂತನವಾದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅನುಷ್ಠಾನ ಮಾಡುವಾಗ ಪ್ರಾದೇಶಿಕ ಭಾಷೆಗೆ ಒತ್ತು ಕೊಡಬೇಕು’ ಎಂದು ಒತ್ತಾಯಿಸಿದರು.

‘ಮನುಷ್ಯನ ಅಂತರ್ ದೃಷ್ಟಿಯನ್ನು ತೆರೆಯುವ ಸಾಮರ್ಥ್ಯ ಸಾಹಿತ್ಯಕ್ಕಿದೆ. ಇದರ ಓದು ಸಾಮಾನ್ಯನನ್ನು ಒಂದು ವಿಭಿನ್ನ ದೃಷ್ಟಿಕೋನದ ಕಡೆಗೆ ಒಯ್ಯುತ್ತದೆ. ರಾಜಕಾರಣಿಗಳಿಗೆ ಸಾಹಿತ್ಯದ ಜ್ಞಾನವಿದ್ದರೆ ಅವರು ಸಮಾಜವನ್ನು ನೋಡುವ ದೃಷ್ಟಿಕೋನವೇ ಬೇರೆಯಾಗಿರುತ್ತಿತ್ತು’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

‘ನಾವು ದೇವರಿಗೆ ದಾಸರು; ಅರಸರಿಗೆ ದಾಸರಲ್ಲ ಎನ್ನುವುದನ್ನು ತಮ್ಮ ಸಾಹಿತ್ಯದ ಮೂಲಕ ದಾಸರು ಜಗತ್ತಿಗೆ ತಿಳಿಸಿದರು. ಅದನ್ನು ನಾವು ಅರ್ಥ ಮಾಡಿಕೊಂಡು ಪ್ರಭುತ್ವದ ದಾಸರಾಗುವುದನ್ನು ಇಂದು ಬಿಡಬೇಕು. ಸಾಹಿತ್ಯ ಸಮುದಾಯದ ಪ್ರತಿಬಿಂಬ. ಅದನ್ನು ಓದುವುದರಿಂದ ಸುಂದರ ಸಮಾಜ ಸೃಷ್ಟಿಸಲು ಸಾಧ್ಯ. ಚಲನಶೀಲ, ಚಿಂತನಶೀಲ ಪಠ್ಯಗಳಿಂದ ಪ್ರಬುದ್ಧ ಸಮಾಜ ನಿರ್ಮಾಣವಾಗಲಿದೆ’ ಎಂದರು.

ಸುಧಾರಣೆ ಆಗಲೆಂದು: ಕುಲಪತಿ ಪ್ರೊ.ಎಂ. ರಾಮಚಂದ್ರಗೌಡ ಮಾತನಾಡಿ, ‘ಹಳಗನ್ನಡ-ನಡುಗನ್ನಡ-ಹೊಸಗನ್ನಡ ಸಾಹಿತ್ಯಗಳ ಬೋಧನಾ ಕ್ರಮವು ಇನ್ನಷ್ಟು ಸುಧಾರಣೆಯಾಗಲಿ ಎಂಬ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಸಿದ್ಧಪಡಿಸಲಾಗಿದೆ. ಪದವಿ ತರಗತಿಗಳ ಅಧ್ಯಾಪಕರ ಬೋಧನೆ ಇನ್ನಷ್ಟು ಪರಿಣಾಮಕಾರಿಯಾಗಿ ವಿದ್ಯಾರ್ಥಿಗಳಿಗೆ ತಲುಪಲಿ ಎನ್ನುವ ಆಶಯ ನಮ್ಮದು’ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ.ಎಂ. ಜಯಪ್ಪ ಮಾತನಾಡಿ, ‘ಸಾಹಿತ್ಯ ಮನುಷ್ಯನ ಬದುಕಿನ ಅಂಗ. ಅದು ನಮ್ಮನ್ನು ವಿಕಸಿಸುತ್ತದೆ. ನಾವು ಆರ್ಥಿಕ, ವೈಜ್ಞಾನಿಕವಾಗಿ ಎಷ್ಟೇ ಪ್ರಗತಿ ಹೊಂದಿರಬಹುದು. ಇವೆಲ್ಲ ಹೊಟ್ಟೆ ತುಂಬಿಸಬಹುದಲ್ಲದೇ ಮನಸ್ಸಿಗೆ ನೆಮ್ಮದಿ ನೀಡಲು ಸಾಧ್ಯವಿಲ್ಲ. ಮನಸ್ಸಿನ ನೆಮ್ಮದಿ ಸಾಹಿತ್ಯದಿಂದ ಮಾತ್ರ ಸಾಧ್ಯ. ಇದು ನಾವು ಕಲಿಸುವ ಎಲ್ಲ ವಿಷಯಗಳಲ್ಲಿ ಅತಿ ಹೆಚ್ಚು ಮಾನವೀಯ ಮೌಲ್ಯಗಳನ್ನು ಹೇಳುತ್ತದೆ. ಬಹುತೇಕ ಚಳವಳಿಗಳ ಹಿಂದೆ ಪ್ರಮುಖ ಪಾತ್ರ ವಹಿಸಿದೆ’ ಎಂದು ಹೇಳಿದರು.

ಮೌಲ್ಯಮಾಪನ ಕುಲಸಚಿವ ಪ್ರೊ.ಎಸ್.ಎಂ. ಹುರಕಡ್ಲಿ, ಹಣಕಾಸು ಅಧಿಕಾರಿ ಪ್ರೊ.ಡಿ.ಎನ್. ಪಾಟೀಲ ಇದ್ದರು.

ಡಾ.ಶೋಭಾ ನಾಯಕ ನಿರೂಪಿಸಿದರು. ಡಾ.ಹನುಮಂತಪ್ಪ ಸಂಜೀವಣ್ಣನವರ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು