ಶನಿವಾರ, ಜೂನ್ 12, 2021
23 °C

ರೆಮ್‌ಡಿಸಿವಿರ್, ಆಮ್ಲಜನಕ ಕೊರತೆ ನೀಗಿಸಿ: ಸತೀಶ ಜಾರಕಿಹೊಳಿ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ನೇತೃತ್ವದಲ್ಲಿ ಕಾಂಗ್ರೆಸ್ ಶಾಸಕರಾದ ಲಕ್ಷ್ಮಿ ಹೆಬ್ಬಾಳಕರ, ಡಾ.ಅಂಜಲಿ ನಿಂಬಾಳ್ಕರ್, ಮಹಾಂತೇಶ ಕೌಜಲಗಿ ಅವರು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರನ್ನು ಸೋಮವಾರ ಭೇಟಿಯಾಗಿ, ಜಿಲ್ಲೆಯಲ್ಲಿನ ಕೋವಿಡ್ ಸ್ಥಿತಿಗತಿ ಬಗ್ಗೆ ಚರ್ಚಿಸಿದರು. ಜನರ ಸಂಕಷ್ಟಗಳ ಪರಿಹಾರಕ್ಕೆ ತ್ವರಿತವಾಗಿ ಸ್ಪಂದಿಸುವಂತೆ ಆಗ್ರಹಿಸಿದರು.

‘ರೆಮ್‌ಡಿಸಿವಿರ್ ಚುಚ್ಚುಮದ್ದು ಹಾಗೂ ಆಮ್ಲಜನಕ ಕೊರತೆ ಇದೆ. ಸಾರ್ವಜನಿಕರಿಂದ ಬಹಳ ದೂರುಗಳು ಬರುತ್ತಿವೆ. ಅವುಗಳ ಕೊರತೆ ಆಗದಂತೆ ಕ್ರಮ ಕೈಗೊಳ್ಳಬೇಕು. ಆಮ್ಲಜನಕ ಅಲಭ್ಯವಾಗಿ ಕೋವಿಡ್ ಸೋಂಕಿತರಿಗೆ ತೊಂದರೆ ಆಗುತ್ತಿದೆ. ಕೂಡಲೇ ಅದನ್ನು ಸರಿಪಡಿಸಬೇಕು’ ಎಂದು ಸತೀಶ  ಒತ್ತಾಯಿಸಿದರು.

‘ಕೋವಿಡ್‌ನಿಂದ ಮೃತಪಡುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ನಿತ್ಯ ಕೊರೊನಾ ಸೋಂಕಿತರ ಸಂಖ್ಯೆ ಸಾವಿರದ ಗಡಿಯತ್ತ ಸಾಗುತ್ತಿದೆ. ಸರ್ಕಾರ ಕೊಡುವುದು ಒಂದು ಲೆಕ್ಕ, ನಮ್ಮ ಬಳಿ ಬರುವುದು ಇನ್ನೊಂದು ಲೆಕ್ಕವಾಗಿದೆ. ಬಿಮ್ಸ್‌ನಲ್ಲಿ 350 ಆಮ್ಲಜನ ಹಾಸಿಗೆ ಇದೆ. 200 ಹೆಚ್ಚುವರಿಯಾಗಿ ನೀಡುವುದಾಗಿ ಸರ್ಕಾರ ಹೇಳಿತ್ತು. ಆದರೆ, ಕೊಡದೆ ತಾರತಮ್ಯ ಮಾಡುತ್ತಿದೆ. ಇದನ್ನು ನಾವು ಸಹಿಸುವುದಿಲ್ಲ’ ಎಂದು ಲಕ್ಷ್ಮಿ ಹೇಳಿದರು.

ಸಹಿಸಲಾಗುವುದಿಲ್ಲ

‘ಕೋವ್ಯಾಕ್ಸಿನ್ ಲಸಿಕೆ ಯಾವಾಗ ಕೊಡುತ್ತೀರಿ, ಯಾವ ತಾಲ್ಲೂಕಿಗೆ ಎಷ್ಟು ಸಂಖ್ಯೆಯಲ್ಲಿ ಕೊಟ್ಟಿದ್ದೀರಿ, ಎಷ್ಟು ಬರುತ್ತಿದೆ ಎಂದು ಮಾಹಿತಿಯನ್ನು ಜಿಲ್ಲಾಡಳಿತ ಒದಗಿಸಬೇಕು. ಆನ್‌ಲೈನ್‌ನಲ್ಲಿ ನೋಂದಾಯಿಸಲು ಗ್ರಾಮೀಣ ಜನರಿಗೆ ಸಾಧ್ಯವಾಗುವುದಿಲ್ಲ. ಹೀಗಾಗಿ, ಇದಕ್ಕೆ ಬೇರೆ ವ್ಯವಸ್ಥೆ ಕಲ್ಪಿಸಬೇಕು. ಜಿಲ್ಲೆಯಲ್ಲಿ ವೈದ್ಯರ ಮೇಲೆ ಹಲ್ಲೆ ಪ್ರಕರಣಗಳು ವರದಿಯಾಗುತ್ತಿವೆ. ಅವರಿಗೆ ಸೂಕ್ತ ರಕ್ಷಣೆ ಒದಗಿಸಬೇಕು’ ಎಂದು ಒತ್ತಾಯಿಸಿದರು.

ಜಿಲ್ಲಾಧಿಕಾರಿ ಮಾತನಾಡಿ, ‘ಬಿಮ್ಸ್‌ನಲ್ಲಿ 800 ಹಾಸಿಗೆಗಳಿವೆ. ಸಮಸ್ಯೆಗೆ ಅನುಗುಣವಾಗಿ ನಾವು ವ್ಯವಸ್ಥೆ ಮಾಡುತ್ತೇವೆ. ತಾಲ್ಲೂಕು ಆಸ್ಪತ್ರೆಯಲ್ಲಿ 30 ಹಾಸಿಗೆಗಳಿವೆ. ಸೋಂಕಿತರು ಬೆಳಗಾವಿಗೆ ಬರದಂತೆ ನೋಡಿಕೊಳ್ಳಬೇಕು. ಅಗತ್ಯವಿದ್ದರೆ ಮಾತ್ರ ಅವರು ಪತ್ರ ತೆಗೆದುಕೊಂಡು ಬಂದರೆ ಬಿಮ್ಸ್‌ನ ಚಿಕಿತ್ಸೆ ಕೊಡುವ ವ್ಯವಸ್ಥೆ ಇದೆ. ಜಿಲ್ಲೆಗೆ ಅನುಗುಣವಾಗಿ ರೆಮ್‌ಡಿಸಿವಿರ್ ಹಾಗೂ ಆಮ್ಲಜನಕ ವ್ಯವಸ್ಥೆಯನ್ನು ಸರ್ಕಾರ ಮಾಡುತ್ತಿದೆ. ಸಾರ್ವಜನಿಕರು ಭಯ ಪಡುವ ಅಗತ್ಯವಿಲ್ಲ’ ಎಂದು ತಿಳಿಸಿದರು.

‘ತಾಲ್ಲೂಕು ಆಸ್ಪತ್ರೆಗಳಲ್ಲಿ ಸಿಬ್ಬಂದಿ ಕೊರತೆ ನೀಗಿಸಬೇಕು’ ಎಂದು ಮಹಾಂತೇಶ ಒತ್ತಾಯಿಸಿದರು.

ಅಂಜಲಿ ಮಾತನಾಡಿ, ‘ಜಿಲ್ಲೆಯಲ್ಲಿ ಮತ್ತೊಂದು ಆಮ್ಲಜನಕ ಘಟಕ ಸ್ಥಾಪಿಸಿದರೆ ಸಮಸ್ಯೆ ಬಗೆಹರಿಯುತ್ತದೆ’ ಎಂದು ಸಲಹೆ ನೀಡಿದರು.

ಎಐಸಿಸಿ ಗೋವಾ ವೀಕ್ಷಕ ಸುನೀಲ ಹನುಮಣ್ಣವರ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು