ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ರಚಿಸುವ ಕಾನೂನುಗಳಿಗೆ ಕಾಂಗ್ರೆಸ್ ಸಾಥ್‌: ಒವೈಸಿ ಆರೋಪ

Last Updated 30 ಆಗಸ್ಟ್ 2021, 15:41 IST
ಅಕ್ಷರ ಗಾತ್ರ

ಬೆಳಗಾವಿ: ‘ಬಿಜೆಪಿ ರಚಿಸುತ್ತಿರುವ ಪ್ರತಿ ಕಾನೂನಿಗೂ ಕಾಂಗ್ರೆಸ್ ಪರೋಕ್ಷವಾಗಿ ಸಾಥ್ ಕೊಡುತ್ತಿದೆ’ ಎಂದು ಎಐಎಂಐಎಂ ಅಧ್ಯಕ್ಷ ಮತ್ತು ಸಂಸದ ಅಸಾದುದ್ದೀನ್ ಒವೈಸಿ ಆರೋಪಿಸಿದರು.

ಇಲ್ಲಿ ಪತ್ರಕರ್ತರೊಂದಿಗೆ ಸೋಮವಾರ ಮಾತನಾಡಿದ ಅವರು, ‘ಕಾಂಗ್ರೆಸ್‌ನವರಿಗೆ ಮುಸ್ಲಿಂ ನಾಯಕರು ಬೆಳೆಯುವುದು ಬೇಡವಾಗಿದೆ. ಮುಸ್ಲಿಮರು ಕಾಂಗ್ರೆಸನ ಗುಲಾಮಗಿರಿ ಮಾಡಬೇಕು ಎಂದು ಬಯಸುತ್ತದೆ’ ಎಂದು ಕಿಡಿಕಾರಿದರು.

‘ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗಳು ಗೆಲ್ಲಲು ರಣತಂತ್ರ ರೂಪಿಸಿದ್ದೇವೆ. ಜನರ ವಿಶ್ವಾಸ ಗಳಿಸುವುದು, ಅವರ ಹೃದಯದಲ್ಲಿ ಪ್ರೀತಿ ಗಳಿಸುವ ನಿಟ್ಟಿನಲ್ಲಿ ತಳಮಟ್ಟದಿಂದ ಪಕ್ಷ ಗಟ್ಟಿಗೊಳಿಸುವುದು ನಮ್ಮ ಕಾರ್ಯಸೂಚಿಯಾಗಿದೆ’ ಎಂದರು.

‘ಜೆಡಿಎಸ್‌ ಜೊತೆಗೆ ವಿಧಾನಸಭೆ ಚುನಾವಣೆಯಲ್ಲಿ ಹೊಂದಾಣಿಕೆ ಮಾಡಿಕೊಂಡಿದ್ದೆವು. ಹೀಗಾಗಿ, ನಾವು ಅಭ್ಯರ್ಥಿಗಳನ್ನು ಹಾಕಿರಲಿಲ್ಲ. ಬಳಿಕ ಜೆಡಿಎಸ್‌ ಪಕ್ಷವು ಕಾಂಗ್ರೆಸ್ ಜೊತೆ ಕೈಜೋಡಿಸಿ ತಪ್ಪು ಮಾಡಿತು. ಪ್ರಮಾಣವಚನಕ್ಕೆ ಬರುವಂತೆ ಎಚ್‌.ಡಿ. ಕುಮಾರಸ್ವಾಮಿ ಕರೆ ಮಾಡಿದ್ದರು. ನೀವು ಬಹಳ ದೊಡ್ದ ತಪ್ಪು ಮಾಡಿದ್ದೀರಿ; ಇದರಿಂದ ನಿಮ್ಮ ಪಕ್ಷಕ್ಕೂ ಹಾನಿ ಆಗುತ್ತದೆ; ನಿಮಗೆ ಮತ ಹಾಕಿದವರಿಗೆ ನಿರಾಸೆ ಆಗುತ್ತದೆ ಎಂದು ಅವರಿಗೆ ತಿಳಿಸಿದ್ದೆ. ಈ ಕಾರಣಕ್ಕಾಗಿಯೇ ನಾವು ನಗರಪಾಲಿಕೆ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಅಫ್ಗಾನಿಸ್ತಾನದ ಬೆಳವಣಿಗೆ ಬಗ್ಗೆ ನಾನೇನು ಹೇಳಲಿ? ನನಗೇನು ಸಂಬಂಧವಿದೆ? ಅದು ನನ್ನ ತವರು ಮನೆಯೂ ಅಲ್ಲ; ನಮ್ಮವರು ಯಾರೂ ಅಲ್ಲಿಗೆ ಹೋಗಿಲ್ಲ. ಅಲ್ಲಿ ಏನಾಗುತ್ತಿದೆ ಎನ್ನುವುದನ್ನು ಪ್ರಧಾನಿ ನರೇಂದ್ರ ಮೋದಿ ಅವರನ್ನೇ ಕೇಳಿ. 20 ವರ್ಷದಲ್ಲಿ ಮೂರು ಬಿಲಿಯನ್ ಹಣ ಖರ್ಚು ಮಾಡಿದ್ದಾರೆ. ಅಲ್ಲಿನ ವಿದ್ಯಾರ್ಥಿಗಳನ್ನು ಕರೆಸಿ ಶಿಕ್ಷಣ ಕೊಟ್ಟಿದ್ದಾರೆ. ಮಿಲಿಟರಿ ಅಕಾಡೆಮಿಯಲ್ಲಿ ತರಬೇತಿ ನೀಡಿದ್ದಾರೆ. ಈ ರೀತಿ 17ಸಾವಿರ ಜನರಿಗೆ ತರಬೇತಿ ನೀಡಿದ್ದಾರೆ’ ಎಂದು ಹೇಳಿದರು.

‘ಬೆಲೆ ಏರಿಕೆ ಬಗ್ಗೆ ಪ್ರಧಾನಿಯನ್ನು ಪ್ರಶ್ನಿಸಿದರೆ, ಕಾದು ನೋಡಿ ಎನ್ನುತ್ತಾರೆ’ ಎಂದು ಟೀಕಿಸಿದರು.

‘ಮುಸ್ಲಿಮರು ರಾಜಕೀಯ ಹಕ್ಕು ಪಡೆದಾಗ ದೇಶ ಶಕ್ತಿಶಾಲಿಯಾಗುತ್ತದೆ. ಇಲ್ಲಿ ಮುಸ್ಲಿಂ ನಾಯಕರು ಯಾರಿದ್ದಾರೆ? ನಾನಂತೂ ಗಲ್ಲಿ ನಾಯಕ. ನನ್ನ ಬಿಟ್ಟು ಬೇರಾರಿದ್ದಾರೆ ಹೇಳಲಿ. ಮುಸ್ಲಿಮರನ್ನು ಹೊರತುಪಡಿಸಿದರೆ ಎಲ್ಲ ಜಾತಿಯ ನಾಯಕರೂ ಇದ್ದಾರೆ. ಕುರುಬ ಸಮಾಜಕ್ಕೆ ಸಿದ್ದರಾಮಯ್ಯ, ಲಿಂಗಾಯತರಿಗೆ ಬಿ.ಎಸ್. ಯಡಿಯೂರಪ್ಪ, ಒಕ್ಕಲಿಗರಿಗೆ ಡಿ.ಕೆ. ಶಿವಕುಮಾರ್ ಹೀಗೆ... ಒಂದೊಂದು ಸಮಾಜಕ್ಕೊಬ್ಬ ನಾಯಕ ಇದ್ದಾರೆ. ಮುಸ್ಲಿಂ ನಾಯಕರು ಯಾಕಿಲ್ಲ?’ ಎಂದು ಕೇಳಿದರು.

‘ದೇಶದಲ್ಲಿ ಮುಸ್ಲಿಮರ ಪರಿಸ್ಥಿತಿಯು ಬ್ಯಾಂಡ್‌ ಬಾರಿಸುವವರ ರೀತಿಯಾಗಿದೆ. ಮದುವೆಯಲ್ಲಿ ಮದು ಮಗ ಇರುವರೆಗೆ ಬ್ಯಾಂಡ್ ಬಾರಿಸುವವರು ಇರುತ್ತಾರೆ. ಮದು ಮಗ ಒಳಗೆ ಹೋದರೆ ಬ್ಯಾಂಡ್‌ನವರು ಹೊರಗೆ ಸೈಡಲ್ಲಿ ಉಳಿದುಬಿಡುತ್ತಾರೆ’ ಎಂದು ಹೇಳಿದರು.

ಇದಕ್ಕೂ ಮುನ್ನ, ಮಹಾನಗರಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಮುಖಂಡರೊಂದಿಗೆ ಚರ್ಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT