ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಜಿಲ್ಲೆಯಲ್ಲಿ ಒಂದು ಸ್ಥಾನಕ್ಕೆ ಕಾಂಗ್ರೆಸ್ ಸ್ಪರ್ಧೆ- ಸತೀಶ ಜಾರಕಿಹೊಳಿ

Last Updated 11 ನವೆಂಬರ್ 2021, 12:47 IST
ಅಕ್ಷರ ಗಾತ್ರ

ಬೆಳಗಾವಿ: ‘ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‌ಗೆ ನಡೆಯುವ ಚುನಾವಣೆಗೆ ಜಿಲ್ಲೆಯಲ್ಲಿ ಒಂದು ಸ್ಥಾನಕ್ಕೆ ಮಾತ್ರ ಕಾಂಗ್ರೆಸ್ ಸ್ಪರ್ಧಿಸಲಿದೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಸ್ಪಷ್ಟಪಡಿಸಿದರು.

ಚುನಾವಣೆ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರೊಂದಿಗೆ ಬೆಂಗಳೂರಿನಲ್ಲಿ ಸಮಾಲೋಚನೆ ನಡೆಸಿ ಮರಳಿದ ಅವರು ಇಲ್ಲಿನ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಪತ್ರಕರ್ತರೊಂದಿಗೆ ಗುರುವಾರ ಮಾತನಾಡಿದರು.

‘ಎರಡೂ ಕ್ಷೇತ್ರಗಳಿಗೆ ಸ್ಪರ್ಧಿಸುವುದರಿಂದ ಬಿಜೆಪಿಗೆ ಲಾಭವಾಗಲಿದೆ. ಹೀಗಾಗಿ, ಒಂದು ಕ್ಷೇತ್ರಕ್ಕೆ ಮಾತ್ರ ಸ್ಪರ್ಧಿಸಲಿದ್ದೇವೆ. ಒಂದು ಸ್ಥಾನ ಗೆಲ್ಲಲು ಸುಮಾರು 2,200 ಮತಗಳು ಬೇಕು. ಕಾಂಗ್ರೆಸ್‌ನಿಂದ ಇದಕ್ಕಿಂತ ಹೆಚ್ಚಿನ ಸದಸ್ಯರು (ಬೆಂಬಲಿತರು ಸೇರಿ) ಆಯ್ಕೆಯಾಗಿದ್ದಾರೆ. ಹೀಗಾಗಿ, ಒಂದು ಸ್ಥಾನ ಗೆಲ್ಲಲು ನಮಗೆ ಯಾವುದೇ ಸಮಸ್ಯೆ ಇಲ್ಲ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಕಾಂಗ್ರೆಸ್ ಟಿಕೆಟ್‌ಗಾಗಿ ಇಲ್ಲಿ 8 ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಬೆಳಗಾವಿ ಲೋಕಸಭಾ ವ್ಯಾಪ್ತಿಯ ಮೂವರು ಹಾಗೂ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಐವರು ಅರ್ಜಿ ಹಾಕಿದ್ದಾರೆ. ನ.14ರಂದು ಕೆಪಿಸಿಸಿಯಿಂದ ಶಾಸಕರು ಹಾಗೂ ಮಾಜಿ ಶಾಸಕರ ಸಭೆ ಕರೆಯಲಾಗಿದೆ. ಟಿಕೆಟ್ ಆಕಾಂಕ್ಷಿಗಳು ಕೂಡ ಭಾಗವಹಿಸಲಿದ್ದಾರೆ. ಎಲ್ಲರ ಅಭಿಪ್ರಾಯ ಪಡೆದು ತೀರ್ಮಾನ ಕೈಗೊಳ್ಳಲಾಗುವುದು. ಗೆಲ್ಲುವವರಿಗೆ ಪ್ರಾಮುಖ್ಯತೆ ನೀಡಲಾಗುವುದು’ ಎಂದು ತಿಳಿಸಿದರು.

‘ಮಹಾನಗರ ಪಾಲಿಕೆಗೆ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಆದರೆ, ಅವರಿನ್ನೂ ಪ್ರಮಾಣವಚನ ಸ್ವೀಕರಿಸಿಲ್ಲ. ಅವರು ಮೇಲ್ಮನೆ ಚುನಾವಣೆಯಲ್ಲಿ ಮತ ಚಲಾಯಿಸಲು ಅವಕಾಶವಿದೆಯೋ, ಇಲ್ಲವೋ ಅಥವಾ ಯಾವ ಕ್ರಮ ಕೈಗೊಳ್ಳಬೇಕು ಎನ್ನುವುದನ್ನು ಜಿಲ್ಲಾಧಿಕಾರಿ ತಿಳಿಸಬೇಕು. ಈ ಬಗ್ಗೆ ತಾಂತ್ರಿಕವಾಗಿಯೂ ಪರಿಶೀಲಿಸಬೇಕು’ ಎಂದು ಪ್ರತಿಕ್ರಿಯಿಸಿದರು.

ಇತ್ತೀಚೆಗೆ ಬಿಡುಗಡೆ ಮಾಡಿದ್ದ ವಿಡಿಯೊ ಕುರಿತು ಮಾತನಾಡಿದ ಅವರು, ‘ಬೆಳಗಾವಿ ಲೋಕಸಭಾ ಉಪ ಚುನಾವಣೆ ಹಾಗೂ ಮಹಾನಗರ ಪಾಲಿಕೆ ಚುನಾವಣೆ ಅನುಭವಗಳನ್ನು ಹಂಚಿಕೊಳ್ಳಲು ಆ ವಿಡಿಯೊ ಮಾಡಿದ್ದೆ. ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ 37 ಸೀಟುಗಳನ್ನು ಹೇಗೆ ಗಳಿಸಿತು ಎಂದು ವಿಶ್ಲೇಷಣೆ ಮಾಡಿದ್ದೇನೆ. ಬಿಜೆಪಿಯ ಸ್ಥಳೀಯ ಮುಖಂಡರು ತಮ್ಮ ಕಸರತ್ತಿನಿಂದ ಪಾಲಿಕೆ ಚುನಾವಣೆಯಲ್ಲಿ ಜಯ ಗಳಿಸಿದಂತೆ ಬಿಂಬಿಸಿಕೊಂಡರು. ನಮ್ಮ ಮೇಲೂ ಆರೋಪ ಮಾಡಿದರು. ಅವರೇನು ಸಾಹಸ ಮಾಡಿಲ್ಲ. ಕಾಂಗ್ರೆಸ್ ಹಾಗೂ ಎಂಇಎಸ್ ಮತಗಳು ವಿಭಜನೆ ಆಗಿದ್ದರಿಂದ ಬಿಜೆಪಿ ಜಯ ಗಳಿಸಿದೆ’ ಎಂದು ವಿಶ್ಲೇಷಿಸಿದರು.

ಎಐಸಿಸಿ ಗೋವಾ ವೀಕ್ಷಕ ಸುನೀಲ ಹನುಮಣ್ಣವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT