ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್-19ನಿಂದ ಹೋಟೆಲ್‌ ಉದ್ಯಮಕ್ಕೆ ಭಾರಿ ಪೆಟ್ಟು

ತಂಗುವವರ ಪ್ರಮಾಣ ಕಡಿಮೆ; ಉದ್ಯಮಿಗಳಿಗೆ ನಷ್ಟ
Last Updated 18 ಮಾರ್ಚ್ 2020, 19:30 IST
ಅಕ್ಷರ ಗಾತ್ರ

ಬೆಳಗಾವಿ: ಕೊರೊನಾ ವೈರಾಣು ಸೋಂಕು ತಲ್ಲಣ ಸೃಷ್ಟಿಸಿರುವುದರಿಂದಾಗಿ ಹೋಟೆಲ್ ಉದ್ಯಮ ವ್ಯತಿರಿಕ್ತ ಪರಿಣಾಮ ಎದುರಿಸುತ್ತಿದೆ. ವಹಿವಾಟಿನ ಪ್ರಮಾಣ ಶೇ 50ರಷ್ಟು ಕುಸಿತ ಕಂಡಿರುವ ಪರಿಣಾಮ, ಉದ್ಯಮಿಗಳು ನಷ್ಟ ಅನುಭವಿಸುತ್ತಿದ್ದಾರೆ.

ವಾರದ ಸಂತೆ, ಜಾತ್ರೆಗಳನ್ನು ರದ್ದುಪಡಿಸಿ ಜಿಲ್ಲಾಡಳಿತ ಆದೇಶಿಸಿರುವುದರಿಂದ ಆ ಭಾಗದ ಖಾನಾವಳಿ, ಮೆಸ್‌ಗಳು ಹಾಗೂ ಹೋಟೆಲ್‌ಗಳವರು ಇನ್ನೂ ಹೆಚ್ಚಿನ ನಷ್ಟಕ್ಕೆ ಒಳಗಾಗುವ ಸಾಧ್ಯತೆ ಇದೆ. ಪ್ರಮುಖ ದೇವಾಲಯಗಳ ಪ್ರವೇಶಕ್ಕೂ ನಿರ್ಬಂಧ ಹೇರಿರುವುದರಿಂದ ಭಕ್ತರು ಬರಲು ಹಿಂದೇಟು ಹಾಕುತ್ತಿದ್ದಾರೆ. ಆ ದೇಗುಲಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ರವಾಸಿಗರನ್ನೇ ನಂಬಿದ್ದ ಸಣ್ಣಪುಟ್ಟ ವ್ಯಾಪಾರಿಗಳ ಗಳಿಕೆಗೂ ಕುತ್ತು ಬಂದಿದೆ. ನಿರ್ಬಂಧಗಳು ಯಾವಾಗ ತೆರವುಗೊಳ್ಳಲಿವೆ ಎನ್ನುವ ಸೂಚನೆಯೂ ಇಲ್ಲದಿರುವುದು ಅವರ ಆತಂಕವನ್ನು ಉಲ್ಬಣಗೊಳಿಸಿದೆ.

ಪ್ರವಾಸೋದ್ಯಮಕ್ಕೆ ಗರ

ಸೋಂಕು ಹರಡದಂತೆ ನೋಡಿಕೊಳ್ಳಲು ಮುಂಜಾಗ್ರತಾ ಕ್ರಮವಾಗಿ ರಾಜ್ಯ ಸರ್ಕಾರ ಹಲವು ನಿರ್ಬಂಧಗಳನ್ನು ವಿಧಿಸಿದೆ. ಶಾಲಾ– ಕಾಲೇಜುಗಳನ್ನು ಬಂದ್‌ ಮಾಡಿಸಿದೆ. ಮದುವೆಗಳಿಗೆ ಇಂತಿಷ್ಟೇ ಮಂದಿ ಸೇರಬೇಕು ಎನ್ನುವ ನಿರ್ಬಂಧ ಹಾಕಲಾಗಿದೆ. ಪ್ರವಾಸೋದ್ಯಮ ಚಟುವಟಿಕೆಗಳಿಗೂ ‘ಗರ’ ಬಡಿದಿದೆ. ಹೀಗಾಗಿ, ಹೋಟೆಲ್‌ಗಳಿಗೆ ಬಂದು ತಂಗುವವರ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ಮಹಾರಾಷ್ಟ್ರ, ಗೋವಾ ಹಾಗೂ ಕರ್ನಾಟಕಕ್ಕೆ ಸಂಪರ್ಕ ಕೊಂಡಿಯಾಗಿರುವ ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆ ಕುಸಿದಿರವುದರಿಂದ, ಕೊಠಡಿ ಬುಕ್ಕಿಂಗ್ ಪ್ರಮಾಣ ಬಹಳ ದಿನೇ ದಿನೇ ಕಡಿಮೆ ಆಗುತ್ತಿದೆ.

‌‘ಶಾಲಾ–ಕಾಲೇಜುಗಳಿಗೆ ರಜೆ ಇದ್ದರೂ ಬಹುತೇಕರು ಪ್ರವಾಸ ಕೈಗೊಳ್ಳುತ್ತಿಲ್ಲ. ತಂಗುವವರಿಗಿಂತ ಊಟ, ಉಪಾಹಾರ ಸೇವಿಸಿ ಹೊರಡುವವರೇ ಹೆಚ್ಚಿರುತ್ತಾರೆ. ಸ್ಥಳೀಯರಂತೂ ತಂಗುವುದಿಲ್ಲ. ಇಲ್ಲಿನ ದೊಡ್ಡ ಹೋಟೆಲುಗಳಲ್ಲಿ ವಿದೇಶದ ಹಾಗೂ ಹೊರ ರಾಜ್ಯಗಳ ಪ್ರವಾಸಿಗರ ಸಂಖ್ಯೆ ವಿರಳವಾಗಿದೆ’ ಎನ್ನುತ್ತಾರೆ ಹೋಟೆಲ್ ಮಾಲೀಕರು.

ಹೆದ್ದಾರಿ ಬದಿಯಲ್ಲೂ

ಸೋಂಕಿನ ಭೀತಿ ಉಲ್ಬಣಗೊಂಡಿರುವುದರಿಂದ, ಇಲ್ಲಿನ ಹೆದ್ದಾರಿ ಹಾಗೂ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳ ಸಂಖ್ಯೆಯೂ ಗಣನೀಯವಾಗಿ ಕಡಿಮೆಯಾಗಿದೆ.

‘ಇದು ಹಲವು ಕಡೆಗಳಲ್ಲಿ ಜಾತ್ರೆಗಳು, ಮದುವೆಗಳು ನಡೆಯುತ್ತಿದ್ದ ಸೀಸನ್. ಇವುಗಳಲ್ಲಿ ಪಾಲ್ಗೊಳ್ಳಲು ಹೊರ ಜಿಲ್ಲೆಗಳವರು, ಗೋವಾ, ಮಹಾರಾಷ್ಟ್ರ ಮೊದಲಾದ ಕಡೆಗಳವರು ಬರುತ್ತಿದ್ದರು. ರೂಂ ಪಡೆದು ತಂಗುತ್ತಿದ್ದರು. ಆದರೆ, ಕೊರೊನಾ ಸೋಂಕಿನ ಆತಂಕದಿಂದಾಗಿ ಜನರು ಪ್ರವಾಸಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಇದರಿಂದಾಗಿ ವಹಿವಾಟು ತಗ್ಗಿದೆ’ ಎಂದು ಮಾಹಿತಿ ನೀಡಿದರು.

‘ಕೊರೊನಾ ಭೀತಿಯು ಹೋಟೆಲ್‌ ಉದ್ಯಮದ ಮೇಲೆ ಬಹಳಷ್ಟು ಪರಿಣಾಮ ಉಂಟು ಮಾಡಿದೆ. ಹೋಟೆಲುಗಳಲ್ಲಿ ಕೆಲವು ದಿನಗಳಿಂದ ಗ್ರಾಹಕರ ಸಂಖ್ಯೆ ಸರಾಸರಿ ಶೇ 40ರಿಂದ 50ರಷ್ಟು ಕಡಿಮೆಯಾಗಿದೆ. ನಮ್ಮ ಕೈಮೀರಿದ ಹಾಗೂ ಕಷ್ಟವಾದ ಪರಿಸ್ಥಿತಿ ಇದು. ವ್ಯಾಪಾರವಿಲ್ಲವೆಂದು ಕಾರ್ಮಿಕರ ಸಂಖ್ಯೆ ಕಡಿಮೆ ಮಾಡಲಾಗುವುದಿಲ್ಲ!’ ಎಂದು ಇಲ್ಲಿನ ಹೋಟೆಲ್‌ ಮಾಲೀಕರ ಸಂಘದ ಅಧ್ಯಕ್ಷ, ತಿಲಕವಾಡಿಯ ಪಂಚಾಮೃತ ಹೋಟೆಲ್ ಮಾಲೀಕ ವಿಜಯ್ ಸಾಲಿಯಾನ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಮುಂಜಾಗ್ರತೆ ವಹಿಸುವಂತೆ ಸೂಚಿಸಲಾಗಿದೆ. ಎಂದಿನಂತೆ ಸ್ವಚ್ಛತೆಗೆ ಆದ್ಯತೆ ಕೊಡಲಾಗುತ್ತಿದೆ. ಗ್ರಾಹಕರ ಮಾಹಿತಿ ಸಂಗ್ರಹಿಸುವಂತೆಯೂ ಜಿಲ್ಲಾಡಳಿತ ತಿಳಿಸಿದ್ದು, ಅದನ್ನು ಮಾಡಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT