ಮಂಗಳವಾರ, ಅಕ್ಟೋಬರ್ 27, 2020
20 °C

ಬೆಳಗಾವಿ| ಕೋವಿಡ್ ಅನುದಾನ ದುರ್ಬಳಕೆ: ತಹಶೀಲ್ದಾರ್‌ ವಿಚಾರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಕೋವಿಡ್–19 ನಿರ್ವಹಣೆಗೆ ಬಿಡುಗಡೆಯಾದ ಅನುದಾನ ದುರ್ಬಳಕೆ ಮಾಡಿಕೊಂಡಿರುವ ಕುರಿತು ಜಿಲ್ಲೆಯ ರಾಯಬಾಗ ತಹಶೀಲ್ದಾರ್‌ ಚಂದ್ರಕಾಂತ ಭಜಂತ್ರಿ ಅವರ ವಿರುದ್ಧ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ, ವಿಚಾರಣೆ ಆರಂಭವಾಗಿದೆ.

‘₹ 1.49 ಕೋಟಿ ಅನುದಾನವನ್ನು ತಹಶೀಲ್ದಾರ್ ಸ್ವಂತ ಖಾತೆಗೆ ವರ್ಗಾಯಿಸಿಕೊಂಡು ದುರ್ಬಳಕೆ ಮಾಡಿದ್ದಾರೆ’ ಎಂದು ರಾಯಬಾಗ ತಾಲ್ಲೂಕಿನ ಕುಡಚಿ ಕ್ಷೇತ್ರದ ಬಿಜೆಪಿ ಶಾಸಕ ಪಿ. ರಾಜೀವ್ ವಿಧಾನಮಂಡಲ ಅಧಿವೇಶನದಲ್ಲಿ ಪ್ರಸ್ತಾಪಿಸಿ ಆರೋಪಿಸಿದ್ದರು. ಕೆಲವು ಸಂಘಟನೆಗಳಿಂದಲೂ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಕೆಯಾಗಿದ್ದವು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರು ಚಿಕ್ಕೋಡಿ ಉಪ ವಿಭಾಗಾಧಿಕಾರಿ ನೇತೃತ್ವದಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ, ಬುಡಾ ಆಯುಕ್ತ, ಎಡಿಎಚ್‌ಒ ಒಳಗೊಂಡ ತಂಡ ರಚಿಸಿದ್ದಾರೆ. ಈ ತಂಡ ಈಚೆಗೆ ವಿಚಾರಣೆ ಆರಂಭಿಸಿದೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ‘ಇದೊಂದು ಆಡಳಿತಾತ್ಮಕ ಹಾಗೂ ಆಂತರಿಕ ವಿಚಾರಣೆಯಾಗಿದೆ. ಶಾಸಕರಿಂದ ದೂರು ಬಂದಿದ್ದಿರಿಂದ ವಿಚಾರಣೆ ನಡೆಸಲಾಗುತ್ತಿದೆ’ ಎಂದು ತಿಳಿಸಿದರು. ಹೆಚ್ಚಿನ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.

‘ಕೋವಿಡ್–19 ಸೃಷ್ಟಿಸಿರುವ ತುರ್ತು ಪರಿಸ್ಥಿತಿಯಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿದ್ದೇನೆ. ಸಂಕಷ್ಟಕ್ಕೆ ಒಳಗಾಗಿದ್ದ ಸಾರ್ವಜನಿಕರಿಗೆ ಅಗತ್ಯ  ವಸ್ತುಗಳನ್ನು ಖರೀದಿಸಬೇಕಿತ್ತು. ಅದನ್ನು ಮಾಡಿದ್ದೇನೆ. ಇದರಲ್ಲಿ ಅನುದಾನ ದುರ್ಬಳಕೆ ಹಾಗೂ ಲೋಪದೋಷ ಎಸಗಿಲ್ಲ. ಹಣ ದುರುಪಯೋಗ ಮಾಡಿಕೊಂಡಿಲ್ಲ. ಖರ್ಚು– ವೆಚ್ಚಕ್ಕೆ ಸಂಬಂಧಿಸಿದ ಲೆಕ್ಕಪತ್ರ ಹಾಗೂ ದಾಖಲೆಗಳಿವೆ. ಈ ವಿಷಯದಲ್ಲಿ ನಡೆಸಿರುವ ಸಭೆಗಳ ವಿಡಿಯೊಗಳಿವೆ. ಎಲ್ಲವನ್ನೂ ವಿಚಾರಣಾ ಸಮಿತಿಗೆ ನೀಡುತ್ತೇನೆ. ಈಗಾಗಲೇ ಕೆಲವನ್ನು ಕೊಟ್ಟಿದ್ದೇನೆ’ ಎಂದು ತಹಶೀಲ್ದಾರ್‌ ಭಜಂತ್ರಿ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.